ಬೆಂಗಳೂರು: ಡೀಸೆಲ್ ದರ, ಬಿಡಿ ಭಾಗಗಳ ದರ, ಸಿಬ್ಬಂದಿ ವೆಚ್ಚ ನಿರಂತರವಾಗಿ ಹೆಚ್ಚುತ್ತಿದ್ದರೂ ಅದಕ್ಕೆ ಅನುಗುಣವಾಗಿ ಬಸ್‌ಗಳ ಟಿಕೆಟ್ ದರ ಹೆಚ್ಚಿಸದೇ ಇರುವುದರಿಂದ ಸಾರಿಗೆ ನಿಗಮಗಳು ಸಂಕಷ್ಟಕ್ಕೆ ಸಿಲುಕಿವೆ ಎಂದು ಕೆಎಸ್‌ಆರ್‌ಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಆರೋಪಿಸಿದೆ.
ಬಿಎಂಟಿಸಿ, ಕೆಎಸ್‌ಆರ್‌ಟಿಸಿ ನಿಗಮಗಳಲ್ಲಿ ನಡೆಯುತ್ತಿರುವ ಕಾರ್ಮಿಕ ವಿರೋಧಿ ನೀತಿಗಳನ್ನು ವಿರೋಧಿಸಿ ಜಂಟಿ ಕ್ರಿಯಾ ಸಮಿತಿ ಗುರುವಾರ ಧರಣಿ ಸತ್ಯಾಗ್ರಹ ನಡೆಸಿತು.
ಟಿಕೆಟ್ ದರ ಏರಿಕೆಯು ಸರ್ಕಾರದ ರಾಜಕೀಯ ನಿರ್ಧಾರ ಆಗಿರುವುದರಿಂದ ಈ ಬಗ್ಗೆ ನಿಷ್ಕರ್ಷೆ ನಡೆಯುತ್ತಿಲ್ಲ. ಬಿಎಂಟಿಸಿ ಬಸ್‌ಗಳ ಟಿಕೆಟ್ ದರವನ್ನು 2012ರಲ್ಲಿ ಏರಿಸಿದ್ದು, ಆನಂತರ ಪರಿಷ್ಕರಿಸಿಲ್ಲ. ಕೆಎಸ್‌ಆರ್‌ಟಿಸಿ, ಎನ್‌ಡಬ್ಲ್ಯುಆರ್‌ಟಿಸಿ, ಕೆಕೆಆರ್‌ಟಿಸಿ ಬಸ್‌ಗಳ ದರ 2020ರ ನಂತರ ಏರಿಕೆಯಾಗಿಲ್ಲ ಎಂದು ಸಮಿತಿ ಮುಖಂಡರು ತಿಳಿಸಿದರು.
1993ರಲ್ಲಿ ಪಿ.ಜಿ.ಆರ್. ಸಿಂಧ್ಯಾ ಅಧ್ಯಕ್ಷತೆಯ ಸದನ ಸಮಿತಿ ನೀಡಿದ್ದ ವರದಿ ಮತ್ತು 2021ರಲ್ಲಿ ಎಂ.ಆರ್. ಶ್ರೀನಿವಾಸಮೂರ್ತಿ ಅಧ್ಯಕ್ಷತೆಯ ಏಕಸದಸ್ಯ ಸಮಿತಿ ನೀಡಿದ್ದ ವರದಿಯ ಶಿಫಾರಸುಗಳನ್ನು ಜಾರಿ ಮಾಡಿದ್ದರೆ ನಿಗಮಗಳ ಆರ್ಥಿಕ ಪರಿಸ್ಥಿತಿ ಇಷ್ಟು ಹದಗೆಡುತ್ತಿರಲಿಲ್ಲ ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಮತ್ತು ಇತರ ಪ್ರಯಾಣಿಕರಿಗೆ ವಿಸ್ತರಿಸಲಾದ ರಿಯಾಯಿತಿ ಪ್ರಯಾಣದ ಸೌಲಭ್ಯಗಳ ಮೊತ್ತವನ್ನು ಸರ್ಕಾರವು ನಿಗಮಗಳಿಗೆ ನೀಡಬೇಕು. ₹ 4,562 ವಿವಿಧ ಬಾಕಿ ಹಾಗೂ ಶಕ್ತಿ ಯೋಜನೆಯ ₹ 1,346 ಕೋಟಿ ಬಾಕಿಯನ್ನು ಸರ್ಕಾರ ಪಾವತಿ ಮಾಡಬೇಕು. ಇಂಧನ ಬಾಕಿಯ ₹ 998 ಕೋಟಿ ನೀಡಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.
ನಿಗಮವು ಸಿಬ್ಬಂದಿಗೆ ತುಟಿಭತ್ಯೆ, ರಜೆ ನಗದೀಕರಣ , ನಿವೃತ್ತ ನೌಕರರ ಉಪಧನ ಮತ್ತು ರಜೆ ನಗದೀಕರಣ ಮೊತ್ತ, ಭವಿಷ್ಯನಿಧಿ ಬಾಕಿ ಹಣ, ವೇತನ ಹೆಚ್ಚಳದ ಹಿಂಬಾಕಿ ನೀಡಬೇಕು ಎಂದು ಒತ್ತಾಯಿಸಿದರು.
ಕೆಎಸ್‌ಆರ್‌ಟಿಸಿ ಸ್ಟಾಫ್ ಆ್ಯಂಡ್ ವರ್ಕಸರ್ಸ್ ಫೆಡರೇಶನ್‌ನ ಎಚ್.ವಿ. ಅನಂತಸುಬ್ಬರಾವ್, ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾ ಮಂಡಳದ ಬಿ. ಜಯದೇವರಾಜೇ ಅರಸು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಫೆಡರೇಶನ್‌ನ (ಸಿಐಟಿಯು) ಎಚ್.ಡಿ. ರೇವಪ್ಪ, ಕೆಎಸ್‌ಆರ್‌ಟಿಸಿ ಎಸ್.ಸಿ ಮತ್ತು ಎಸ್.ಟಿ ಎಂಪ್ಲಾಯೀಸ್ ಯೂನಿಯನ್‌ನ ವೆಂಕಟರಮಣಪ್ಪ, ಕೆಎಸ್‌ಆರ್‌ಟಿಸಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಮೋಹನರಾಜ್, ಕೆಎಸ್‌ಆರ್‌ಟಿಸಿ ನೌಕರರ ಸಂಘದ ಜಗದೀಶ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.