ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಡಿ ಪ್ರಕರಣ | ಅಸಹಾಯಕ ಯುವತಿಯ ಚಾರಿತ್ರ್ಯ ಹರಣ: ದಿನೇಶ್ ಕಲ್ಲಹಳ್ಳಿ

Last Updated 7 ಮಾರ್ಚ್ 2021, 21:13 IST
ಅಕ್ಷರ ಗಾತ್ರ

ಬೆಂಗಳೂರು: ಸಿ.ಡಿ. ಪ್ರಕರಣದ ದೂರು ಹಿಂಪಡೆಯಲು ಕಬ್ಬನ್‌ಪಾರ್ಕ್ ಠಾಣೆ ಇನ್‌ಸ್ಪೆಕ್ಟರ್‌ಗೆ ಐದು ಪುಟಗಳ ಪತ್ರ ಬರೆದಿರುವ ನಾಗರಿಕ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ದಿನೇಶ್ ಕಲ್ಲಹಳ್ಳಿ, ‘ಪೊಲೀಸರ ತನಿಖೆಗೂ ಮುನ್ನವೇ ಅಸಹಾಯಕ ಯುವತಿಯ ಚಾರಿತ್ರ್ಯ ಹರಣವಾಗುತ್ತಿದೆ. ನನ್ನನ್ನೂ ಮುಗಿಸಿಬಿಡುವ ಸಿದ್ಧಾಂತದವರೂ ಹುಟ್ಟಿಕೊಂಡಿದ್ದಾರೆ’ ಎಂದಿದ್ದಾರೆ.

‘ರಮೇಶ ಜಾರಕಿಹೊಳಿ ವಿರುದ್ಧ ದೂರು ನೀಡಿದ್ದು ಸರಿಯಷ್ಟೇ. ಬಟ್ಟೆಯ ಮೇಲೆ ಮುಳ್ಳು ಬಿದ್ದರೂ, ಮುಳ್ಳಿನ ಮೇಲೆ ಬಟ್ಟೆ ಬಿದ್ದರೂ ಹರಿಯುವುದು ಬಟ್ಟೆಯೇ ಎಂಬ ಮಹಿಳೆಯರ ಕುರಿತಾದ ನಾಣ್ನುಡಿ ಇಂದಿನ ಸುಸಂಸ್ಕೃತ ನಾಗರಿಕ ಸಮಾಜದಲ್ಲೂ ನಿಜವಾಗುತ್ತಿದೆ. ಲೈಂಗಿಕ ದೌರ್ಜನ್ಯದ ಸಿ.ಡಿಯನ್ನು ಪೊಲೀಸರಿಗೆ ಒಪ್ಪಿಸಿದ್ದೆ. ಆದರೆ, ಈಗ ಇಡೀ ಸಮಾಜದಲ್ಲಿ ಯುವತಿಯ ಚಾರಿತ್ರ್ಯ ಹರಣ ನಡೆಯುತ್ತಿದೆಯೋ ಹೊರತು, ಅದನ್ನು ಹೊರತುಪಡಿಸಿ ಬೇರೆ ಏನೂ ನಡೆಯುತ್ತಿಲ್ಲ.’

‘ನನ್ನ ಹೋರಾಟದ ಬಗ್ಗೆ ತಿಳಿದಿದ್ದ ಅಪರಿಚಿತ ವ್ಯಕ್ತಿಯೊಬ್ಬರು ಸಿ.ಡಿ. ತಲುಪಿಸಿದ್ದರು. ಮಹಿಳೆಗೆ ಅನ್ಯಾಯವಾಗಿದ್ದರೆ, ನ್ಯಾಯ ದೊರಕಿಸಿ ಎಂದು ಮನವಿ ಮಾಡಿದ್ದರು. ನಾನು ಸಿ.ಡಿ.ಯನ್ನು ಎಲ್ಲಿಯೂ ಬಹಿರಂಗಪಡಿಸದೇ ನೇರವಾಗಿ ನಗರ ಪೊಲೀಸ್ ಕಮಿಷನರ್ ಕಚೇರಿಗೆ ನೀಡಿದ್ದೆ. ಅಲ್ಲಿಂದ ಕಬ್ಬನ್‌ ಪಾರ್ಕ್ ಠಾಣೆಗೆ ನೀಡಿದ್ದೇನೆ.’

‘ಅಪರಾಧದ ಮಾಹಿತಿಯನ್ನು ಪೊಲೀಸರಿಗೆ ನೀಡುವುದು ಪ್ರಜ್ಞಾವಂತ ನಾಗರಿಕರ ಕರ್ತವ್ಯವೆಂಬುದನ್ನು ಹೋರಾಟಗಾರನಾಗಿ ನಾನು ಭಾವಿಸಿದ್ದೆ. ಪೊಲೀಸರು ನನ್ನ ಮಾಹಿತಿ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದರು. ಲೈಂಗಿಕ ದೌರ್ಜನ್ಯ ನಡೆದಿದೆಯೋ ಇಲ್ಲವೋ ಎಂಬ ಬಗ್ಗೆ ತನಿಖೆಗೆ ಆಗ್ರಹಿಸಿದ್ದು ಬಿಟ್ಟರೆ, ಯಾವುದೇ ಬೇಡಿಕೆಗಳು ದೂರಿನಲ್ಲಿ ಇಲ್ಲ’ ಎಂದೂ ತಿಳಿಸಿದ್ದಾರೆ.

‘ದೂರು ನೀಡಿದವನನ್ನೇ ಈ ಸಮಾಜ ಗುರಿಯಾಗಿಸುತ್ತಿರುವುದು ಅಚ್ಚರಿ ತರಿಸಿದೆ. ಯುವತಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆಯೇ? ಅಧಿಕಾರ ದುರುಪಯೋಗಪಡಿಸಿಕೊಂಡು ಯುವತಿಯನ್ನು ದುರ್ಬಳಕೆ ಮಾಡಲಾಗಿದೆಯೇ? ಆ ಯುವತಿಯನ್ನು ಅಸಹಾಯಕ ಸ್ಥಿತಿಗೆ ದೂಡಲಾಗಿತ್ತೇ ? ಎಂಬ ಸಂಗತಿಗಳ ಬಗ್ಗೆ ಚರ್ಚೆಗಳು ನಡೆಯಬೇಕಿತ್ತು. ಆದರೆ, ಸಿ.ಡಿ.ಕೊಟ್ಟವರು ಯಾರು? ಸಿ.ಡಿ. ಮಾಡಿದ್ದು ಯಾರು? ಮಾಹಿತಿದಾರ ಯಾರನ್ನೆಲ್ಲ ಸಂಪರ್ಕಿಸಿದ್ದ ಎಂಬ ಚರ್ಚೆಗಳು ನಡೆಯುತ್ತಿರುವುದು ದುರದೃಷ್ಟಕರ.‘

‘ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಸಿ.ಡಿ.ವಿಚಾರದಲ್ಲಿ ₹ 5 ಕೋಟಿ ಡೀಲ್ ನಡೆದಿರುವುದಾಗಿ ಆಧಾರ ರಹಿತವಾಗಿ ಮಾತನಾಡಿದ್ದಾರೆ. ಈ ಹೇಳಿಕೆಯನ್ನು ನಾನು ಸ್ವಾಗತಿಸುತ್ತೇನೆ. ಬ್ಲ್ಯಾಕ್‌ಮೇಲ್ ಮಾಡುವವರನ್ನು, ಡೀಲ್ ಮಾಡುವವರನ್ನು ಬಂಧಿಸುವಂತೆ ನಾನೂ ಆಗ್ರಹಿಸುತ್ತೇನೆ. ಆದರೆ, ಕುಮಾರಸ್ವಾಮಿ ಅವರ ಈ ಹೇಳಿಕೆ ಸಂದೇಶ ವಾಹಕನನ್ನೇ ಮುಗಿಸಿಬಿಡು ಎಂಬಂತಿದೆ. ನನ್ನ ಪ್ರಾಮಾಣಿಕತೆಯನ್ನು ಪ್ರಶ್ನೆ ಮಾಡುವಂತಿದೆ. ಇಂಥ ಆಧಾರ ರಹಿತ ಹೇಳಿಕೆ, ನನ್ನ ಹೋರಾಟಕ್ಕೂ ಹಿನ್ನಡೆ ಉಂಟು ಮಾಡಲಿದೆ. ನನಗೆ ಆತಂಕವಾಗಿರುವುದು ಮಹಿಳೆಯೊಬ್ಬಳ ಬದುಕಿನ ಬಗ್ಗೆ. ಸಿ.ಡಿ.ಯಲ್ಲಿ ಇದ್ದಾರೆ ಎನ್ನಲಾಗುವ ಯುವತಿಯ ಫೋಟೊಗಳನ್ನು ಸಾಲು-ಸಾಲಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗುತ್ತಿದೆ. ಶಾಸಕ ಎಂ.ಪಿ.ರೇಣುಕಾಚಾರ್ಯ, ಇಂಥ ಮಹಿಳೆಯರು ದೇಶಕ್ಕೆ ಕಂಟಕ ಎಂಬ ಹೇಳಿಕೆ ನೀಡಿದ್ದಾರೆ’ ಎಂದೂ ದಿನೇಶ್ ಪತ್ರದಲ್ಲಿ ತಿಳಿಸಿದ್ದಾರೆ.

‘ಸಾಮಾಜಿಕ ಜಾಲತಾಣದಲ್ಲಿ ಯುವತಿಯ ಫೋಟೊಗಳನ್ನು ಅಪ್‌ಲೋಡ್ ಮಾಡಿ ನಿಂದಿಸಲಾಗುತ್ತಿದೆ. ಸಾಮಾಜಿಕ ಹೊಣೆಗಾರಿಕೆಯಿಂದಾಗಿ ಪೊಲೀಸರಿಗೆ ನೀಡಿದ ಮಾಹಿತಿಯೇ ಸಾಮಾಜಿಕ ಪೀಡೆಯಾಗಿ ಪರಿವರ್ತನೆಯಾಗಿದೆ. ಜಾತಿ ಸಂಘಟನೆಗಳು ಹಲವು ರೀತಿಯಲ್ಲಿ ವ್ಯಾಖ್ಯಾನ ನೀಡಿದವೇ ಹೊರತು, ಅಸಹಾಯಕಳ ಜತೆ ನಿಲ್ಲಲಿಲ್ಲ. ಸಿ.ಡಿ.ಯಲ್ಲಿರುವ ಮಾಹಿತಿಯನ್ನು ಕೂಲಂಕಷವಾಗಿ ವಿಚಾರಣೆ ನಡೆಸದೆ, ಪೊಲೀಸ್ ಹೇಳಿಕೆ ಇಲ್ಲದೆ ತೀರ್ಪು ನೀಡುವ ಹುನ್ನಾರಗಳು ನಡೆದವು. ಸಾಮಾಜಿಕ ಜಾಲತಾಣದಲ್ಲಿ ಯುವತಿಯೊಬ್ಬಳು ಅಪರಾಧಿಯಾದಳು. ಒಂದು ಕಡೆ ಮಾಹಿತಿದಾರರನ್ನು ಮುಗಿಸಿ ಬಿಡುವ ಸಿದ್ಧಾಂತದವರು ಹುಟ್ಟಿಕೊಂಡಿದ್ದಾರೆ. ಮತ್ತೊಂದೆಡೆ, ರಾಜಕೀಯ ಕೇಂದ್ರಿತ ಅಧಿಕಾರದಿಂದಾಗಿ ಸಂತ್ರಸ್ತೆಯೇ ಅಪರಾಧಿಯಾಗಿದ್ದಾರೆ. ಒಟ್ಟಾರೆಯಾಗಿ ದೂರು ನೀಡಿದ ಉದ್ದೇಶವೇ ಮಹಿಳೆಗೆ ಮತ್ತು ದೂರುದಾರನಾದ ನನಗೆ ತಿರುಗುಬಾಣದಂತಾಗಿದ್ದು, ಮಹಿಳೆ ಮತ್ತು ಸಾಮಾಜಿಕ ಹಿತದೃಷ್ಟಿಯಿಂದ ಪ್ರಕರಣವನ್ನು ಇಲ್ಲಿಗೆ ಮುಕ್ತಾಯಗೊಳಿಸಲು ಬಯಸಿದ್ದೇನೆ’ ಎಂದೂ ಅವರೂ ಬರೆದಿದ್ದಾರೆ.

‘ಒತ್ತಡಕ್ಕೆ ಮಣಿಯುವ ವ್ಯಕ್ತಿಯಲ್ಲ’
‘ಇದು ಕ್ರಿಮಿನಲ್ ಪ್ರಕರಣ. ಹಿಂಪಡೆಯುವ ಬಗ್ಗೆ ಪಕ್ಷಕಾರ ದಿನೇಶ್ ಅವರು ಪತ್ರ ಕೊಟ್ಟಿದ್ದರು. ಅದನ್ನು ಠಾಣೆಗೆ ಕೊಟ್ಟಿದ್ದೇನೆ. ದೂರುದಾರರನ್ನು ಠಾಣೆಗೆ ಕಳುಹಿಸುವಂತೆ ಪೊಲೀಸರು ಹೇಳಿದ್ದು, ಆ ಬಗ್ಗೆ ದಿನೇಶ್‌ಗೆ ಹೇಳುತ್ತೇನೆ’ ಎಂದು ದಿನೇಶ್‌ ಪರ ವಕೀಲ ಕುಮಾರ ಪಾಟೀಲ ಹೇಳಿದರು.

ಕಬ್ಬನ್‌ ಪಾರ್ಕ್ ಠಾಣೆ ಎದುರು ಸುದ್ದಿಗಾರರ ಜೊತೆ ಮಾತನಾಡಿದ ಕುಮಾರ, ‘ಸಾಮಾಜಿಕ ಹೋರಾಟದಲ್ಲಿ ತೊಡಗಿಸಿಕೊಂಡಿರುವ ದಿನೇಶ್, ರಾಜಕೀಯ ಒತ್ತಡಕ್ಕೆ ಮಣಿಯುವ ವ್ಯಕ್ತಿಯಲ್ಲ. ಸಂತ್ರಸ್ತೆಗೆ ನ್ಯಾಯ ಒದಗಿಸಬೇಕು ಎಂಬುದು ಅವರ ಉದ್ದೇಶವಾಗಿತ್ತು. ಆದರೆ, ಈಗ ಯುವತಿಯ ಮಾನ ಹರಾಜು ಮಾಡಲಾಗುತ್ತಿದೆ. ಇದರಿಂದ ಅವರು ಬೇಜಾರಾಗಿದ್ದಾರೆ’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT