ಶುಕ್ರವಾರ, ಸೆಪ್ಟೆಂಬರ್ 30, 2022
25 °C
ಬಿಡಿಎ: 10 ತಿಂಗಳಲ್ಲಿ 96 ಮಂದಿಗೆ ಬದಲಿ ನಿವೇಶನ *ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ

ರೀಡೂ: ಬದಲಿ ನಿವೇಶನ ಹಂಚಿಕೆ ಮುನ್ನೆಲೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಅರ್ಕಾವತಿ ಬಡಾವಣೆಯಲ್ಲಿ ರೀಡೂವಿನಿಂದ ನಿವೇಶನ ಕಳೆದುಕೊಂಡ 36 ಮಂದಿಗೆ ಬದಲಿ ನಿವೇಶನಗಳನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹಂಚಿಕೆ ಮಾಡಿರುವ ಪ್ರಕರಣವು ಮುನ್ನೆಲೆಗೆ ಬಂದಿದೆ.

ಮರು ಸ್ವಾಧೀನ ಪಡೆದಿರುವ ಅಥವಾ ಪೂರ್ಣ ಅಭಿವೃದ್ಧಿ ಹೊಂದಿದ ಬಡಾವಣೆಗಳಲ್ಲಿ ಸಾರ್ವಜನಿಕ ಹರಾಜಿನ ಮೂಲಕ ಮಾತ್ರ ನಿವೇಶನಗಳನ್ನು ಹಂಚಿಕೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್‌ 2021ರ ಅಕ್ಟೋಬರ್‌ 29ರಂದು ಆದೇಶಿಸಿತ್ತು.

ಸುಪ್ರೀಂ ಕೋರ್ಟ್‌ ಆದೇಶವನ್ನು ಉಲ್ಲಂಘಿಸಿ ರಾಜಕೀಯ ನಾಯಕರಿಗೆ ಪ್ರಾಧಿಕಾರವು ಜಿ ಕೆಟಗರಿಯ ಬದಲಿ ನಿವೇಶನಗಳನ್ನು ಹಂಚಿಕೆ ಮಾಡಿತ್ತು. ಶಿವರಾಮ ಕಾರಂತ ಬಡಾವಣೆ ಪ್ರಕರಣದ ವಿಚಾರಣೆಯನ್ನು ಆಗಸ್ಟ್‌ 24ರಂದು ನಡೆಸಿದ್ದ ಸುಪ್ರೀಂ ಕೋರ್ಟ್‌, ನಿಯಮ ಉಲ್ಲಂಘಿಸಿ ಬಹು ಜನರಿಗೆ ಬದಲಿ ನಿವೇಶನಗಳನ್ನು ಹಂಚಿಕೆ ಮಾಡಿರುವುದಕ್ಕೆ ಪ್ರಾಧಿಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಪ್ರಾಧಿಕಾರದ ಆಯುಕ್ತ ಎಂ.ಬಿ.ರಾಜೇಶ ಗೌಡ ಅವರನ್ನು ಕೂಡಲೇ ವರ್ಗಾವಣೆ ಮಾಡುವಂತೆ ನಿರ್ದೇಶನ ನೀಡಿತ್ತು. ಮರುದಿನವೇ, ರಾಜೇಶ ಗೌಡ ಅವರನ್ನು ಕರ್ನಾಟಕ ಸರ್ಕಾರ ವರ್ಗಾವಣೆ ಮಾಡಿತ್ತು.

ಆಗಸ್ಟ್‌ 19ರಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ 84 ಪುಟಗಳ ಪ್ರಮಾಣಪತ್ರದಲ್ಲಿ ರಾಜೇಶ ಗೌಡ, ‘ಕಳೆದ 10 ತಿಂಗಳಲ್ಲಿ 96 ಜನರಿಗೆ ಬದಲಿ ನಿವೇಶನಗಳನ್ನು ನೀಡಲಾಗಿದೆ’ ಎಂದು ತಿಳಿಸಿದ್ದಾರೆ. ‘2004–05ರ ಅವಧಿಯಲ್ಲಿ ಅರ್ಕಾವತಿ ಬಡಾವಣೆಯಲ್ಲಿ 36 ಮಂದಿಗೆ ನಿವೇಶನ ಹಂಚಿಕೆ ಮಾಡಲಾಗಿತ್ತು. ಇದು ಅಧಿಸೂಚನೆಗೆ ವಿರುದ್ಧ ಆಗಿತ್ತು. ಆ ಬಳಿಕ ರೀಡೂ ಪ್ರಕ್ರಿಯೆ ನಡೆದಿತ್ತು. ಅವರಿಗೆ ಅರ್ಕಾವತಿ ಬಡಾವಣೆ ಹಾಗೂ ಕೆಂಪೇಗೌಡ ಬಡಾವಣೆಯಲ್ಲಿ ಬದಲಿ ನಿವೇಶ
ನಗಳನ್ನು ನೀಡಲಾಗಿದೆ’ ಎಂದು ಅವರು ಪ್ರಮಾಣಪತ್ರದಲ್ಲಿ ಉಲ್ಲೇಖಿಸಿದ್ದಾರೆ. 

‘ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಅರ್ಕಾವತಿ ಬಡಾವಣೆ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಂಡಿದ್ದ ಜಮೀನುಗಳ ಡಿನೋಟಿಫಿಕೇಷನ್ ಪ್ರಕರಣದಲ್ಲಿ ನಡೆದಿರುವ ‘ರೀಡೂ’ ಪ್ರಕ್ರಿಯೆ ಬಗ್ಗೆ ಪರಿಶೀಲನೆ ನಡೆಸಲು ಮೂವರು ಸದಸ್ಯರ ಸಮಿತಿಯನ್ನು ಹೈಕೋರ್ಟ್‌ ನೇಮಿಸಿದೆ. ಈ ಸಮಿತಿ ಇನ್ನೂ ಪರಿಶೀಲನೆ ಪ್ರಕ್ರಿಯೆ ಪೂರ್ಣಗೊಳಿಸಿ ವರದಿ ಸಲ್ಲಿಸಿಲ್ಲ. ಅದಕ್ಕೂ ಮೊದಲೇ ಬದಲಿ ನಿವೇಶನಗಳನ್ನು ನೀಡುವ ಅಗತ್ಯ ಏನಿತ್ತು’ ಎಂದು ಕರ್ನಾಟಕ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಪ್ರಶ್ನಿಸಿದರು.

‘ರೀಡೂ ಹೆಸರಿನಲ್ಲಿ ಸಿದ್ದರಾಮಯ್ಯ ಅಧಿಕಾರದ ಅವಧಿಯಲ್ಲಿ ಅಕ್ರಮಗಳನ್ಜು ಎಸಗಲಾಗಿದೆ. ಇದರ ವಿರುದ್ಧ ಬಿಜೆಪಿ ಹಲವು ಸಲ ಧ್ವನಿ ಎತ್ತಿದೆ. ಈಗ ರೀಡೂ ಪ್ರಕರಣಗಳ ತನಿಖೆಗೂ ಸಿದ್ಧತೆ ನಡೆಸಿದೆ. ಬದಲಿ ನಿವೇಶನಗಳನ್ನು ಹಂಚಿಕೆ ಮಾಡುವ ಮೂಲಕ ಕಾಂಗ್ರೆಸ್‌ನ ತಪ್ಪನ್ನು ಸಕ್ರಮ ಮಾಡಿದಂತೆ ಆಗಿದೆ’ ಎಂದು ಬಿಜೆಪಿ ಶಾಸಕರೊಬ್ಬರು ಬೇಸರ ವ್ಯಕ್ತಪಡಿಸಿದರು. 

ಪಾರದರ್ಶಕವಾಗಿ ಹಂಚಿಕೆ: ‘ನಿವೇಶನ ಹಂಚಿಕೆಗೆ ಯಾರ ಹಸ್ತಕ್ಷೇಪಕ್ಕೂ ಅವಕಾಶ ಇಲ್ಲದ ರೀತಿ ಸಂಪೂರ್ಣ ಕಂಪ್ಯೂಟರೀಕೃತ ಆಯ್ಕೆ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳುವ ಮೂಲಕ ಪಾರದರ್ಶಕತೆ ಕಾಯ್ದುಕೊಂಡಿದ್ದೇವೆ. ಫಲಾನುಭವಿಗಳ ವಯಸ್ಸನ್ನು ಪರಿಗಣಿಸಿ, ಜ್ಯೇಷ್ಠತೆ ಆಧಾರದಲ್ಲಿ ಬದಲಿ ನಿವೇಶನ ಹಂಚಿಕೆ ಮಾಡಲಾಗಿದೆ’ ಎಂದು ಬಿಡಿಎ ಹಿರಿಯ ಅಧಿಕಾರಿಯೊಬ್ಬರು ಹೇಳಿದರು. 

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಬಿಡಿಎ ಅಧ್ಯಕ್ಷ ಎಸ್‌.ಆರ್‌.ವಿಶ್ವನಾಥ್ ಅವರಿಗೆ ಎರಡು ಸಲ ಕರೆ ಮಾಡಲಾಯಿತು. ಅವರು ಕರೆ ಸ್ವೀಕರಿಸಲಿಲ್ಲ. 

 

ಅಧಿಕಾರಿ ಕುಟುಂಬಕ್ಕೆ ₹7.5 ಕೋಟಿಯ ನಿವೇಶನ

ಡಿನೋಟಿಫಿಕೇಷನ್‌ ಕಾರಣದಿಂದ ನಿವೇಶನ ಕಳೆದುಕೊಂಡ ಮೂವರಿಗೆ ಬದಲಿ ನಿವೇಶನಗಳನ್ನು ನೀಡಲಾಗಿದೆ ಎಂದು ಎಂ.ಬಿ. ರಾಜೇಶ ಗೌಡ ಹೇಳಿದ್ದಾರೆ.

ಅದರಲ್ಲಿ ನಗರಾಭಿವೃದ್ಧಿ ಇಲಾಖೆಯ ಉಪ ಕಾರ್ಯದರ್ಶಿ ಕೆ.ಎಸ್‌.ಜಗದೀಶ ರೆಡ್ಡಿ ಸಂಬಂಧಿಗಳಾದ ಬಿ.ರಾಮ ರೆಡ್ಡಿ ಮತ್ತು ಆರ್‌.ಗೀತಾ ರೆಡ್ಡಿ ಅವರ 40x60 ಅಡಿಯ ನಿವೇಶನವೂ ಸೇರಿದೆ. ಮೊದಲು ಅವರಿಗೆ ಎಚ್‌ಎಸ್ಆರ್ ಬಡಾವಣೆಯ ಸೆಕ್ಷರ್‌ 6 ರಲ್ಲಿ ನಿವೇಶನ ನೀಡಲಾಗಿತ್ತು. ಬಳಿಕ ಅವರಿಗೆ ಆರ್‌ಎಂವಿ ಎರಡನೇ ಹಂತದಲ್ಲಿ ಅದೇ ಅಳತೆಯ ಬದಲಿ ನಿವೇಶನ ನೀಡಲಾಗಿದೆ.

2022ರ ಜನವರಿ 19ರಂದು ಕ್ರಯಪತ್ರ ಮಾಡಿಕೊಡಲಾಗಿದೆ. ಇಲ್ಲಿ ಚದರ ಅಡಿಗೆ ₹25 ಸಾವಿರ ಮಾರುಕಟ್ಟೆ ಮೌಲ್ಯ ಇದೆ. ಈ ನಿವೇಶನದ ಮಾರುಕಟ್ಟೆ ಮೌಲ್ಯ ₹7.5 ಕೋಟಿ ಎಂದು ಅಂದಾಜಿಸಲಾಗಿದೆ. ಸುಪ್ರೀಂ ಕೋರ್ಟ್‌ ಆದೇಶವನ್ನು ಗಾಳಿಗೆ ತೂರಿ ಈ ನಿವೇಶನ ಹಂಚಿಕೆ ಮಾಡಲಾಗಿದೆ. 

ಉಪ ಕಾರ್ಯದರ್ಶಿಗೆ ನೋಟಿಸ್‌ ನೀಡುವುದಾಗಿ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್‌ ತಿಳಿಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು