ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ.ಜೆ.ಹಳ್ಳಿ ಗಲಭೆ: 30 ಕಡೆ ಎನ್‌ಐಎ ದಾಳಿ; ಪ್ರಮುಖ ಆರೋಪಿ ಬಂಧನ

ಏರ್‌ಗನ್, ಹರಿತ ಆಯುಧ‌ ಜಪ್ತಿ
Last Updated 24 ಸೆಪ್ಟೆಂಬರ್ 2020, 15:22 IST
ಅಕ್ಷರ ಗಾತ್ರ

ಬೆಂಗಳೂರು: ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆ ಸಂಬಂಧ ನಗರದ 30 ಕಡೆಗಳಲ್ಲಿ ಎನ್‌ಐಎ ಅಧಿಕಾರಿಗಳು ಗುರುವಾರ ದಾಳಿ ಮಾಡಿದ್ದು, ಏರ್‌ಗನ್‌ ಹಾಗೂ ಹರಿತ ಆಯುಧಗಳು ಸೇರಿದಂತೆ ಹಲವು ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಎನ್ನಲಾದ ಸೈಯದ್ ಸಾದಿಕ್ ಅಲಿ (44) ಎಂಬಾತನನ್ನು ಬಂಧಿಸಿದ್ದಾರೆ.

ನವೀನ್ ಎಂಬಾತ ಪ್ರವಾದಿ ಮೊಹಮ್ಮದರ ಕುರಿತು ಅವಹೇಳನಕಾರಿ ಪೋಸ್ಟ್ ಹಾಕಿದ್ದನ್ನು ಖಂಡಿಸಿ, ಮುಸ್ಲಿಂ ಸಮುದಾಯದವರು ಆಗಸ್ಟ್ 11ರ ರಾತ್ರಿ ಪ್ರತಿಭಟನೆಗೆ ನಡೆಸಿದ್ದರು. ಈ ಪ್ರತಿಭಟನೆ ತೀವ್ರಗೊಂಡು ದೇವರ ಜೀವನಹಳ್ಳಿ (ಡಿ.ಜೆ.ಹಳ್ಳಿ) ಹಾಗೂ ಕಾಡುಗೊಂಡನಹಳ್ಳಿ (ಕೆ.ಜಿ.ಹಳ್ಳಿ) ಠಾಣೆ ವ್ಯಾಪ್ತಿಯಲ್ಲಿ ಗಲಭೆಗೆ ತಿರುಗಿತ್ತು. ಇದರ ತನಿಖೆಯನ್ನು ಎನ್‌ಐಎ ಚುರುಕುಗೊಳಿಸಿದೆ. ಐಜಿಪಿ ನೇತೃತ್ವದ ತಂಡ, ಆರೋಪಿಗಳ ಬಂಧನ ಹಾಗೂ ಪುರಾವೆಗಳ ಸಂಗ್ರಹ ಕೆಲಸ ಮಾಡುತ್ತಿದೆ.

‘ಕೆ.ಜಿ.ಹಳ್ಳಿ ಠಾಣೆಗೆ ನುಗ್ಗಿದ್ದ ಹಾಗೂ ವಾಹನಗಳಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದ ಸೈಯದ್‌ ಸಾದಿಕ್‌ ಅಲಿಯನ್ನು ಬಂಧಿಸಲಾಗಿದೆ. ಸ್ಥಳೀಯ ಬ್ಯಾಂಕೊಂದರಲ್ಲಿ ಸಾಲ ವಸೂಲಾತಿ ಪ್ರತಿನಿಧಿಯಾಗಿದ್ದ ಆತ, ಆಗಸ್ಟ್ 11ರಂದು ಸಂಜೆ ಗಲಭೆಯಲ್ಲಿ ಪಾಲ್ಗೊಂಡು ಹಲವರಿಗೆ ಪ್ರಚೋದನೆ ನೀಡಿದ್ದ. ಗಲಭೆ ಸೃಷ್ಟಿಯಾಗಲು ಪ್ರಮುಖ ಪಾತ್ರವನ್ನೂ ವಹಿಸಿದ್ದ’ ಎಂದು ಎನ್‌ಐಎ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಸ್‌ಡಿಪಿಐ, ಪಿಎಫ್‌ಐ ದಾಖಲೆಗಳು ಜಪ್ತಿ; ‘ಪ್ರಕರಣದ ಮಾಹಿತಿ ಕಲೆ ಹಾಕಲು ಬೆಂಗಳೂರಿನ 30 ಕಡೆಗಳಲ್ಲಿ ದಾಳಿ ಮಾಡಲಾಯಿತು. ಏರ್‌ಗನ್‌, ಅದಕ್ಕೆ ಬಳಸುವ ಗುಂಡುಗಳು, ಹರಿತ ಆಯುಧ, ಕಬ್ಬಿಣದ ರಾಡ್‌ಗಳು, ವಿದ್ಯುನ್ಮಾನ ಉಪಕರಣಗಳು ಸಿಕ್ಕಿದೆ. ಅದರ ಜೊತೆಯೇ ಸೋಷಿಯಲ್ ಡೆಮಾಕ್ರಟಿಕ್ ಫಾರ್ಟಿ ಆಫ್ ಇಂಡಿಯಾ ಹಾಗೂ ಪೀಪಲ್ ಫ್ರಂಟ್ ಆಫ್ ಇಂಡಿಯಾ ಪಕ್ಷಕ್ಕೆ ಸಂಬಂಧಪಟ್ಟ ದಾಖಲೆಗಳೂ ಪತ್ತೆಯಾಗಿವೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮುಜಾಮಿಲ್ ಪಾಷಾ ಪ್ರಚೋದನೆ: ‘ಪ್ರವಾದಿ ಬಗ್ಗೆ ಅವಹೇಳನಕಾರಿ ಪೋಸ್ಟ್‌ ಪ್ರಕಟಿಸಿದ್ದಾನೆ ಎಂದು ಆರೋಪಿಸಿದ್ದ ಎಸ್‌ಡಿಪಿಐ ಪಕ್ಷದ ರಾಜ್ಯ ಕಾರ್ಯದರ್ಶಿ ಮುಜಾಮಿಲ್ ಪಾಷಾ ಹಾಗೂ ಇತರರು, ಪೋಸ್ಟ್ ಪ್ರಕಟಿಸಿದ್ದ ಎನ್ನಲಾದ ನವೀನ್ ಹಾಗೂ ಆತನ ಸಂಬಂಧಿಯೂ ಆದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ ಎದುರು ಸೇರಿದ್ದರು. ಜೊತೆಗೆ, ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಠಾಣೆ ಎದುರು ಸೇರಿ ಗಲಭೆ ಸೃಷ್ಟಿಸಿದ್ದರು’ ಎಂದೂ ಎನ್‌ಐಎ ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT