ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕನ್ನಡದಲ್ಲಿ ಔಷಧ ಚೀಟಿ; ಸಾಧಕ ಬಾಧಕಗಳ ಚರ್ಚೆ: ಸಚಿವ ದಿನೇಶ್ ಗುಂಡೂರಾವ್ ಸ್ಪಂದನೆ

Published : 12 ಸೆಪ್ಟೆಂಬರ್ 2024, 15:44 IST
Last Updated : 12 ಸೆಪ್ಟೆಂಬರ್ 2024, 15:44 IST
ಫಾಲೋ ಮಾಡಿ
Comments

ಬೆಂಗಳೂರು: ‘ವೈದ್ಯರು ಕನ್ನಡದಲ್ಲಿ ಔಷಧ ಚೀಟಿ ಬರೆಯುವುದನ್ನು ಕಡ್ಡಾಯಗೊಳಿಸುವ ವಿಚಾರದಲ್ಲಿ ಸಾಕಷ್ಟು ತಾಂತ್ರಿಕ ಸಂಗತಿಗಳು ಮಿಳಿತವಾಗಿವೆ. ಕನ್ನಡದಲ್ಲಿ ವೈದ್ಯಕೀಯ ವ್ಯವಹಾರ ಅನುಷ್ಠಾನದ ಪೂರ್ವದಲ್ಲಿ ಸಾಧಕ ಬಾಧಕಗಳ ಬಗ್ಗೆ ವಿಸ್ತೃತ ಚರ್ಚೆ ಅಗತ್ಯ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. 

‘ಸರ್ಕಾರಿ ವೈದ್ಯರು ಕನ್ನಡದಲ್ಲಿಯೇ ಔಷಧ ಚೀಟಿ ಬರೆಯಲು ಶೀಘ್ರ ಆದೇಶ ಜಾರಿ ಮಾಡಿ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ದಿನೇಶ್ ಗುಂಡೂರಾವ್ ಅವರಿಗೆ ಇದೇ 9ರಂದು ಪತ್ರದ ಮೂಲಕ ಮನವಿ ಮಾಡಿದ್ದರು. ಅದಕ್ಕೆ ಸಚಿವರು ಪತ್ರದ ಮೂಲಕ ಸ್ಪಂದಿಸಿದ್ದಾರೆ. 

‘ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ವೈದ್ಯರು, ರೋಗಿಗಳು, ಶುಶ್ರೂಷಕರು, ಔಷಧ ವರ್ತಕರು ಕನ್ನಡವನ್ನು ಸರಿಯಾಗಿ ಅರ್ಥೈಸಿಕೊಳ್ಳುವುದರಲ್ಲಿ ಎಡವಿದರೆ ರೋಗಿಗಳ ಜೀವನ್ಮರಣದ ಅಪಾಯವೂ ಉದ್ಭವಿಸಬಹುದು. ಜನರ ಆರೋಗ್ಯವನ್ನು ಕಾಯುವ ವೈದ್ಯಕೀಯ ವಿಜ್ಞಾನ ಕ್ಷೇತ್ರ ಅತ್ಯಂತ ವಿಶಾಲ ಮತ್ತು ಸಂಕೀರ್ಣವಾಗಿದ್ದು, ಪ್ರಮುಖ ಬದಲಾವಣೆಗಳ ಮುನ್ನ ಎಲ್ಲ ಭಾಗೀದಾರರ ಜತೆಗೆ ಸಂವಾದ ಅಗತ್ಯ. ಇದು ಒಂದು ಆದೇಶದ ಮೂಲಕ ಮಾತ್ರ ಜಾರಿಗೆ ಬರುವ ವಿಚಾರವಲ್ಲ’ ಎಂದು ಹೇಳಿದ್ದಾರೆ. 

‘ಕನ್ನಡದ ಅಸ್ಮಿತೆ ಸಾರುವುದರಲ್ಲಿ ನಾವು ಹಿಂದಡಿ ಇಡುವುದು ಸಾಧ್ಯವೇ ಇಲ್ಲದಿದ್ದರೂ ವೈದ್ಯಕೀಯ ಕ್ಷೇತ್ರದಲ್ಲಿ ಇದು ಎಷ್ಟರ ಮಟ್ಟಿಗೆ ಕಾರ್ಯಸಾಧು ಎಂಬುದನ್ನು ಎಲ್ಲರನ್ನೂ ಒಳಗೊಳ್ಳುವ ರೀತಿಯಲ್ಲಿ ಪರಾಮರ್ಶಿಸಬೇಕಾಗುತ್ತದೆ. ಈ ದಿಸೆಯಲ್ಲಿ ಪ್ರಾಧಿಕಾರದ ಔಚಿತ್ಯಪೂರ್ಣ ಸಲಹೆಯನ್ನು ಮುಖ್ಯಮಂತ್ರಿಯವರ ಗಮನಕ್ಕೆ ತಂದು, ಆಸಕ್ತರ ಸಹಮತಿಯೊಂದಿಗೆ ಜಾರಿಗೊಳಿಸಲು ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಭರವಸೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT