ಶನಿವಾರ, ಜನವರಿ 28, 2023
15 °C
ಬಿಬಿಎಂಪಿ: ಡಿಸೆಂಬರ್‌ 10ರೊಳಗೆ 100 ಕ್ಲಿನಿಕ್‌ ಆರಂಭಿಸಲು ಪ್ರಯತ್ನ

ಬಿಬಿಎಂಪಿ ವ್ಯಾಪ್ತಿಯಲ್ಲಿ ಶುರುವಾಗಲಿರುವ ‘ನಮ್ಮ ಕ್ಲಿನಿಕ್’ಗೆ ವೈದ್ಯರ ನಿರಾಸಕ್ತಿ

ಆರ್. ಮಂಜುನಾಥ್‌ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಆರಂಭವಾಗುವ ‘ನಮ್ಮ ಕ್ಲಿನಿಕ್‌’ನತ್ತ ವೈದ್ಯರು ಆಸಕ್ತಿ ತೋರುತ್ತಿಲ್ಲ. ಮೂರು ತಿಂಗಳಿಂದ ನೇಮಕ ಪ್ರಕ್ರಿಯೆ ನಡೆಯುತ್ತಿದ್ದರೂ ಈವರೆಗೆ 80 ವೈದ್ಯರಷ್ಟೇ ನೇಮಕವನ್ನು ಒಪ್ಪಿಕೊಂಡಿದ್ದಾರೆ.

ಬಿಬಿಎಂಪಿಯ 243 ವಾರ್ಡ್‌ಗಳಲ್ಲೂ ‘ನಮ್ಮ ಕ್ಲಿನಿಕ್‌’ ಸ್ಥಾಪಿಸಲು ಉದ್ದೇಶಿಸಲಾಗಿದೆ. ಪ್ರಥಮ ಹಂತವಾಗಿ ಡಿ.10ರೊಳಗೆ 100 ಕ್ಲಿನಿಕ್‌ಗಳಿಗೆ ಚಾಲನೆ ನೀಡಲು ಬಿಬಿಎಂಪಿ ಆರೋಗ್ಯ ವಿಭಾಗ ಪ್ರಯತ್ನಪಡುತ್ತಿದೆ. ಕಟ್ಟಡ ಕಾಮಗಾರಿ ಅಂತಿಮ ಹಂತದಲ್ಲಿದ್ದರೂ ಅಗತ್ಯ ಇರುವಷ್ಟು ವೈದ್ಯರು ಮಾತ್ರ ಸಿಗುತ್ತಿಲ್ಲ.

ಪ್ರತಿ ‘ನಮ್ಮ ಕ್ಲಿನಿಕ್‌’ನಲ್ಲಿ ವೈದ್ಯ,ನರ್ಸಿಂಗ್‌ ಸಿಬ್ಬಂದಿ, ಲ್ಯಾಬ್‌ ಟೆಕ್ನೀಷಿಯನ್‌, ಸಹಾಯಕ ಹುದ್ದೆಗಳಿವೆ. ವೈದ್ಯ
ರನ್ನು ಹೊರತುಪಡಿಸಿ ಇನ್ನುಳಿದ ಎಲ್ಲ ಹುದ್ದೆಗಳಿಗೂ ನೇಮಕವಾಗಿದೆ. ಅವರೆಲ್ಲ ಹಾಜರಾತಿಯನ್ನು ಖಚಿತಪಡಿಸಿದ್ದಾರೆ.ಆದರೆ, ವೈದ್ಯರು ಮಾತ್ರ ‘ನಮ್ಮ ಕ್ಲಿನಿಕ್‌’ಗೆ ಆಸಕ್ತಿ ತೋರಿಲ್ಲ. ನೇಮಕಾತಿ ಆದೇಶ‍ ಪಡೆದವರಲ್ಲಿ ಎಲ್ಲರೂ ಕರ್ತವ್ಯಕ್ಕೆ ಹಾಜರಾಗುವ ಬಗ್ಗೆ ಖಾತರಿ ವ್ಯಕ್ತಪಡಿಸಿಲ್ಲ. ವೈದ್ಯರಿಗೆ ₹47 ಸಾವಿರ, ನರ್ಸಿಂಗ್‌ ಹಾಗೂ ಲ್ಯಾಬ್‌ ಟೆಕ್ನೀಷಿಯನ್‌ಗೆ ತಲಾ ₹15 ಹಾಗೂ ಸಹಾಯಕರಿಗೆ ₹10 ಸಾವಿರ ವೇತನ ನಿಗದಿ ಮಾಡಲಾಗಿದೆ. ಸರ್ಕಾರಿ ಆಸ್ಪತ್ರೆಗಳಿಗೂ ವೈದ್ಯರು ಬರುತ್ತಿಲ್ಲ. ಅದರಂತೆಯೇ ಬಿಬಿಎಂಪಿ ಹೊಸದಾಗಿ ಆರಂಭಿಸಲಿರುವ ‘ನಮ್ಮ ಕ್ಲಿನಿಕ್‌’ಗೂ ಆರಂಭದಲ್ಲೇ ವೈದ್ಯರ ಕೊರತೆ ಎದುರಾಗಿದೆ.

243 ವಾರ್ಡ್‌ಗಳಲ್ಲಿಯೂ ‘ನಮ್ಮ ಕ್ಲಿನಿಕ್‌’ಗೆ ಸ್ಥಳವನ್ನು ಗುರುತಿಸಲಾಗಿದೆ. ನಾಲ್ಕು ಜನ ಸಿಬ್ಬಂದಿ ಇರುವ ಈ ಕ್ಲಿನಿಕ್‌ನಲ್ಲಿ ಪ್ರಾಥಮಿಕ ಚಿಕಿತ್ಸೆ ಹಾಗೂ ಪ್ರಾಥಮಿಕ ತಪಾಸಣೆಯ ಸಲಕರಣೆಗಳನ್ನು ಇರಿಸಲಾಗುತ್ತಿದೆ. ಕಟ್ಟಡ ಹಾಗೂ ಒಳಾಂಗಣ ವಿನ್ಯಾಸದ ಕಾಮಗಾರಿಗಳು ನಡೆಯುತ್ತಿವೆ. ಪ್ರಥಮ ಹಂತವಾಗಿ 100 ಕ್ಲಿನಿಕ್‌ಗಳು ಮಾತ್ರ ಡಿ.10ರೊಳಗೆ ಆರಂಭವಾಗಲಿದ್ದು, ಅವುಗಳ ಸಿದ್ಧತೆ ವೇಗ ಪಡೆದುಕೊಂಡಿದೆ. ಪ್ರತಿ ವಲಯದಲ್ಲಿ 10ರಿಂದ 15 ಕ್ಲಿನಿಕ್ ಆರಂಭವಾಗಲಿವೆ. ಇನ್ನುಳಿದ ಕ್ಲಿನಿಕ್‌ಗಳನ್ನು ಡಿಸೆಂಬರ್‌ ಅಂತ್ಯದಲ್ಲಿ ಆರಂಭಿಸಲು ಬಿಬಿಎಂಪಿ ಯೋಜಿಸಿದೆ. ಆದರೆ, ವೈದ್ಯರಿಲ್ಲದೆ ಕ್ಲಿನಿಕ್‌ ಆರಂಭಿಸಲು ಸಾಧ್ಯವಿಲ್ಲ. ಹೀಗಾಗಿ, ಎರಡನೇ ಹಂತದಲ್ಲಿ ಕ್ಲಿನಿಕ್‌ಗಳ ಆರಂಭ ಮುಂದಕ್ಕೆ ಹೋಗುವ ಸಾಧ್ಯತೆ ಇದೆ.

‘ನಮ್ಮ ಕ್ಲಿನಿಕ್‌’ಗೆ ವೈದ್ಯಾಧಿಕಾರಿಗಳನ್ನು ಗುತ್ತಿಗೆ ಆಧಾರದಲ್ಲಿ ನೇರವಾಗಿ ನೇಮಿಸಿಕೊಳ್ಳಲು ನ.28ರಂದು ಬಿಬಿಎಂ‍ಪಿ ಅರ್ಜಿ ಆಹ್ವಾನಿಸಿದೆ.

‘ವೈದ್ಯರ ಕೊರತೆ ಎದುರಾಗಿರುವುದು ನಿಜ. ಎಂಬಿಬಿಎಸ್‌ ಮುಗಿಸಿದ ಬಹುತೇಕರು ಪಿಜಿಗೆ ಪ್ರಯತ್ನಪಡುತ್ತಿರುತ್ತಾರೆ. ನಾವು ಹೊಸಬರನ್ನೇ ತೆಗೆದುಕೊಳ್ಳುವುದು. ಸಂದರ್ಶನಗಳನ್ನು ನಡೆಸಿ 122 ಮಂದಿಗೆ ನೇಮಕಾತಿ ಪತ್ರ ನೀಡಿದ್ದೆವು. ಅದರಲ್ಲಿ ಎಲ್ಲರೂ ಒಪ್ಪಿಗೆ ಸೂಚಿಸಿಲ್ಲ’ ಎಂದರು.

ಪರ್ಯಾಯ ಯೋಜನೆ...

‘ವೈದ್ಯರ ನೇಮಕದ ಸಂಬಂಧ ಸಾಕಷ್ಟು ಪ್ರಕ್ರಿಯೆಗಳನ್ನು ಮುಗಿಸಿದ್ದೇವೆ. ಇನ್ನೂ ಹಲವು ರೀತಿಯ ಪ್ರಯತ್ನಗಳಾಗುತ್ತಿವೆ. ಪರ್ಯಾಯ ಯೋಜನೆಗಳತ್ತಲೂ ಯೋಚನೆ ಮಾಡುತ್ತಿದ್ದೇವೆ. ಎಲ್ಲ ವಾರ್ಡ್‌ಗಳಲ್ಲೂ ಜನರಿಗೆ ಆರೋಗ್ಯ ಸೇವೆ ಕೊಡಬೇಕು ಎಂಬುದು ನಮ್ಮ ಮೂಲ ಉದ್ದೇಶವಾಗಿದೆ’ ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಡಾ. ತ್ರಿಲೋಕ ಚಂದ್ರ ಅವರು ಹೇಳಿದರು.

ವೈದ್ಯರ ನೇಮಕ

185; ಸಂದರ್ಶನಕ್ಕೆ ಬಂದವರು

122; ನೇಮಕಾತಿ ಆದೇಶ ಪ‍ಡೆದವರು

80; ನೇಮಕಾತಿ ಆದೇಶ ಒಪ್ಪಿದವರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು