ಗುರುವಾರ , ಜೂನ್ 30, 2022
27 °C
ಕೊತ್ತನೂರು ಠಾಣೆಯಲ್ಲಿ ಪ್ರಕರಣ: ಬಾಲಕರ ಪತ್ತೆಗೆ ಹುಡುಕಾಟ

ಕೆರೆಯಲ್ಲಿ ಮುಳುಗಿ ಮೂವರು ನಾಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೊತ್ತನೂರು ಸಮೀಪದ ದೊಡ್ಡಗುಬ್ಬಿ ಕೆರೆಯಲ್ಲಿ ಮುಳುಗಿ ಮೂವರು ಬಾಲಕರು ನಾಪತ್ತೆಯಾಗಿದ್ದಾರೆ. ಅವರ ಪತ್ತೆಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಕೆರೆಯಲ್ಲಿ ಶೋಧ ಆರಂಭಿಸಿದ್ದಾರೆ.

‘ಸಾರಾಯಿಪಾಳ್ಯ ಫಾತಿಮಾ ಬಡಾವಣೆಯ ಇಮ್ರಾನ್ ಪಾಷಾ (17), ಮುಬಾರಕ್ (17) ಹಾಗೂ ಸಾಹಿಲ್ (15) ಅವರು ಗುರುವಾರ ಮಧ್ಯಾಹ್ನ ಕೆರೆಯಲ್ಲಿ ಈಜಾಡುತ್ತಲೇ ನಾಪತ್ತೆಯಾಗಿದ್ದಾರೆ. ಗುರುವಾರ ರಾತ್ರಿಯವರೆಗೂ ಕಾರ್ಯಾಚರಣೆ ನಡೆಸಲಾಯಿತು. ಮೂವರ ಬಗ್ಗೆ ಯಾವುದೇ ಸುಳಿವು ಸಿಗಲಿಲ್ಲ. ಕತ್ತಲಾದ ಕಾರಣ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಶುಕ್ರವಾರ ಬೆಳಿಗ್ಗೆ ಶೋಧ ಮುಂದುವರಿಸಲಾಗುವುದು’ ಎಂದೂ ತಿಳಿಸಿವೆ.

ಈಜಲಾಗದೇ ಮುಳುಗಿದರು: ‘ನಾಪತ್ತೆಯಾಗಿರುವ ಇಮ್ರಾನ್ ಪಾಷಾ, ಎಲಿಮೆಂಟ್ಸ್‌ ಮಾಲ್‌ನ ಪಿವಿಆರ್‌ನಲ್ಲಿ ಸಹಾಯಕ ಕೆಲಸ ಮಾಡುತ್ತಿದ್ದ. ಇನ್ನೊಬ್ಬ ಬಾಲಕ ಮುಬಾರಕ್, ವೆಲ್ಡಿಂಗ್ ಕೆಲಸಕ್ಕೆ ಹೋಗುತ್ತಿದ್ದ. ಸಾಹಿಲ್, ಸಾರಾಯಿಪಾಳ್ಯದ ಶಾಲೆಯೊಂದರಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದ’ ಎಂದೂ ಹೇಳಿವೆ.

‘ಕಳೆದ ವಾರ ಕೆರೆಯಲ್ಲಿ ಈಜಾಡಿದ್ದ ಸ್ನೇಹಿತನೊಬ್ಬ, ಅದರ ವಿಡಿಯೊವನ್ನು ಚಿತ್ರೀಕರಿಸಿ ಇನ್‌ಸ್ಟಾಗ್ರಾಮ್ ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಿದ್ದ. ಅದನ್ನು ಹೆಚ್ಚು ಮಂದಿ ನೋಡಿದ್ದರು. ಅದೇ ವಿಡಿಯೊವನ್ನು ಬಾಲಕರಿಗೆ ತೋರಿಸಿದ್ದ ಆತ, ಈಜಾಡಲು ಪುನಃ ಕೆರೆಗೆ ಹೋಗೋಣವೆಂದು ಹೇಳಿದ್ದ.’

‘ಮೂವರು ಬಾಲಕರು ಹಾಗೂ ಇತರರು, ಸಾರಾಯಿಪಾಳ್ಯದಿಂದ ಆಟೊದಲ್ಲಿ ದೊಡ್ಡಗುಬ್ಬಿ ಕೆರೆಗೆ ಹೋಗಿದ್ದರು. ಬಾಲಕರು ತಮ್ಮ ಮೊಬೈಲ್‌ಗಳನ್ನು ಸ್ನೇಹಿತನ ಕೈಗೆ ಕೊಟ್ಟು ಕೆರೆಗೆ ಈಜಲು ಇಳಿದಿದ್ದರು. ಮೂವರು ಕೈ ಹಿಡಿದುಕೊಂಡು ಒಂದೇ ಬಾರಿ ಕೆರೆಯ ಒಳಗೆ ಜಿಗಿದಿದ್ದರು. ಕೆಲ ನಿಮಿಷ ಈಜಾಡಿದ್ದ ಮೂವರು, ನಂತರ ಸುಸ್ತಾಗಿದ್ದರು. ಈಜಾಡಲು ಸಾಧ್ಯವಾಗದೇ ಮುಳುಗಿದ್ದರು’ ಎಂದೂ ಮೂಲಗಳು ತಿಳಿಸಿವೆ.

‘ಬಾಲಕರು ಮುಳುಗುವುದನ್ನು ನೋಡಿದ್ದ ಸ್ಥಳೀಯ ವ್ಯಕ್ತಿಯೊಬ್ಬರು, ರಕ್ಷಣೆಗಾಗಿ ಕೆರೆಗೆ ಹಾರಿದ್ದರು. ಅಷ್ಟರಲ್ಲೇ ಯುವಕರು ನಾಪತ್ತೆಯಾಗಿದ್ದಾರೆ. ಸ್ನೇಹಿತರೇ ಘಟನೆ ಬಗ್ಗೆ ಬಾಲಕರ ಪೋಷಕರಿಗೆ ವಿಷಯ ತಿಳಿಸಿದ್ದರು’ ಎಂದೂ ಮೂಲಗಳು ಹೇಳಿವೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು