ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ದೊಡ್ಡಕಲ್ಲಸಂದ್ರ ಕೆರೆಗೆ ಕಲ್ಮಶ: ದೂರು ಕೊಟ್ಟರೂ ನಿರ್ಲಕ್ಷ್ಯ

ದೊಡ್ಡಕಲ್ಲಸಂದ್ರ ಸ್ಥಳೀಯರ ಆಕ್ರೋಶ; ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ವೈಫಲ್ಯ
Last Updated 25 ಅಕ್ಟೋಬರ್ 2022, 20:45 IST
ಅಕ್ಷರ ಗಾತ್ರ

ಬೆಂಗಳೂರು: ಐದೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಮಾಡಿರುವ ದೊಡ್ಡಕಲ್ಲಸಂದ್ರ ಕೆರೆಗೆ ಕಲ್ಮಶಯುಕ್ತ ನೀರು ಆಗಾಗ್ಗೆ ಹರಿಯುತ್ತಿದೆ. ಈ ಒಳಚರಂಡಿ ನೀರು, ಕಲ್ಮಶದ ಹರಿವನ್ನು ನಿಲ್ಲಿಸಿ ಕ್ರಮ ಕೈಗೊಳ್ಳುವಲ್ಲಿ ಬಿಬಿಎಂಪಿ ಕೆರೆಗಳ ವಿಭಾಗ, ಬಿಡಬ್ಲ್ಯೂಎಸ್‌ಎಸ್‌ಬಿ ಎಂಜಿನಿಯರ್‌ಗಳು ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಅಧಿಕಾರಿಗಳು ವಿಫಲರಾಗಿದ್ದಾರೆ.

ದೊಡ್ಡಕಲ್ಲಸಂದ್ರ ಕೆರೆಗೆ ಒಳಚರಂಡಿ ನೀರು ಹಾಗೂ ಕಲ್ಮಶ ಹರಿಯುತ್ತಿದೆ ಎಂದು ಚಿತ್ರ ಸಹಿತ ಕನಕಪುರ ರಸ್ತೆಯಲ್ಲಿರುವ ವಸಂತಪುರ ನಿವಾಸಿಗಳು 2020ರಿಂದ ದೂರು ನೀಡುತ್ತಲೇ ಬಂದಿದ್ದಾರೆ. ಬಿಬಿಎಂಪಿ, ಬಿಡ್ಲ್ಯೂಎಸ್‌ಎಸ್‌ಬಿ ಎಂಜಿನಿಯರ್‌ಗಳು ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ದೂರು ನೀಡಿದ ಹತ್ತಾರು ದಿನ ನಂತರ ಸ್ಥಳಕ್ಕೆ ಬಂದು, ‘ಎಲ್ಲವೂ ಸರಿಯಾಗಿದೆ, ಏನೂ ಸಮಸ್ಯೆ ಇಲ್ಲ’ ಎಂದು ಷರಾ ಬರೆದು ಹೋಗುತ್ತಿದ್ದಾರೆ. ‘ಈ ಕಲ್ಮಶ ನಿತ್ಯವೂ ಹರಿಯುವುದಿಲ್ಲ, ಆಗಾಗ್ಗೆ ಹರಿಯುತ್ತದೆ’ ಎಂದು ಸ್ಥಳೀಯರು ಮನವರಿಕೆ ಮಾಡಲು ಪ್ರಯತ್ನಿಸಿದರೂ ಎಂಜಿನಿಯರ್‌ಗಳು, ಅಧಿಕಾರಿಗಳು ಕೇಳುತ್ತಿಲ್ಲ. ಹೀಗಾಗಿ, ಸುಂದರವಾಗಿ ಅಭಿವೃದ್ಧಿಗೊಂಡಿದ್ದ ಕೆರೆ ಮತ್ತೆ ಕಲ್ಮಶದ ತಾಣವಾಗುತ್ತಿದೆ.

ಅಭಿವೃದ್ಧಿಗೊಂಡೂ ಕಲ್ಮಶದ ತಾಣವಾಗಿರುವ ದೊಡ್ಡಕಲ್ಲಸಂದ್ರ ಕೆರೆಗೆ ಇನ್ನೂ ಒಂದು ಕೋಟಿ ವೆಚ್ಚ ಮಾಡಲು ಟೆಂಡರ್‌ ಕರೆಯಲಾಗಿದೆ. ಕಲ್ಮಶವನ್ನು ತಡೆಯದೆ ಇನ್ನಿತರೆ ಯಾವುದೇ ಅಭಿವೃದ್ಧಿ ಕೆಲಸ ಬೇಡ ಎಂಬುದು ಸ್ಥಳೀಯರ ಆಗ್ರಹ.

‘ದೊಡ್ಡಕಲ್ಲಸಂದ್ರ ಕೆರೆಗೆ ಹಲವು ಹರಿವುಗಳಿವೆ.ಮಳೆಯಾದ ಸಂದರ್ಭದಲ್ಲಿ ಕೆರೆಯ ಪಕ್ಕದಲ್ಲಿರುವ ಬಡಾವಣೆಯಿಂದ ಒಳಚರಂಡಿ ನೀರು ನೇರವಾಗಿ ಕೆರೆಗೆ ಹರಿಯುತ್ತಿದೆ. ಇದನ್ನು ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ ತಂದರೂ ಕೆರೆ ಅಭಿವೃದ್ಧಿ ಸಮಯದಲ್ಲಿ ಇದನ್ನು ಅವರು ಪರಿಗಣಿಸಲಿಲ್ಲ. ಸ್ಥಳೀಯರು ಕೆರೆ ರಕ್ಷಣೆಗೆ ಸಾಕಷ್ಟು ಪ್ರಯತ್ನಪಡುತ್ತಿದ್ದರೂ, ಕೆರೆ ಅಭಿವೃದ್ಧಿಪಡಿಸಿರುವ ಬಿಬಿಎಂಪಿ ಈ ಬಗ್ಗೆ ನಿರ್ಲಕ್ಷ್ಯ ವಹಿಸಿದೆ. ಮಾಲಿನ್ಯ ಸೇರುತ್ತಿರುವ ಬಗ್ಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ನೀಡಿದರೂ ಅಧಿಕಾರಿಗಳು ಬಂದು ಬೇಜವಾಬ್ದಾರಿಯಿಂದ ವರ್ತಿಸುತ್ತಾರೆ. ಬಿಬಿಎಂಪಿ ಹಾಗೂ ಜಲಮಂಡಳಿ ಅಧಿಕಾರಿಗಳ ನಡುವಿನ ತಿಕ್ಕಾಟದಿಂದ ಕೆರೆ ಹಾಳಾಗುತ್ತಿದೆ’ ಎಂದು ಸ್ಥಳೀಯ ನಿವಾಸಿ ಸೌಂದರ್‌ರಾಜನ್‌ ಆರೋಪಿಸಿದರು.

‘ದೊಡ್ಡಕಲ್ಲಸಂದ್ರ ಕೆರೆಗೆ ಕಲ್ಮಶ ಹರಿಯುತ್ತಿರುವ ಬಗ್ಗೆ ಸ್ಥಳೀಯರು ಆತಂಕಗೊಂಡಿದ್ದಾರೆ. ಕೆರೆಯಲ್ಲಿರುವ ನೀರಿನ ಗುಣಮಟ್ಟ ಕ್ಲಾಸ್‌–ಡಿಗಿಂತ ಕಡಿಮೆ ಇರುವಂತೆ ನೋಡಿಕೊಳ್ಳುವಲ್ಲಿ ನಿವಾಸಿಗಳು ಯಶಸ್ಸು ಸಾಧಿಸಿದ್ದಾರೆ. ಆದರೆ ಇಂತಹ ಮಾಲಿನ್ಯ, ಕಲ್ಮಶಯುಕ್ತ ನೀರು ಇಲ್ಲಿರುವ ವಸತಿ ಪ್ರದೇಶಗಳಿಂದ ಕೆರೆಗೆ ಆಗಾಗ್ಗೆ ಹರಿಯುತ್ತಿದೆ. ಇದು ಕೆರೆಯನೈರ್ಮಲ್ಯವನ್ನು ಹಾಳು ಮಾಡುತ್ತಿದೆ. ಬಿಬಿಎಂಪಿ ಹಾಗೂ ಕೆಎಸ್‌ಪಿಸಿಬಿ ಅಧಿಕಾರಿಗಳು ಈ ಮಾಲಿನ್ಯದಿಂದ ಕೆರೆಯನ್ನು ಶಾಶ್ವತವಾಗಿದೂರ ಮಾಡಬೇಕು ಎಂದು ಮನವಿ ಮಾಡಿಕೊಳ್ಳುತ್ತೇವೆ’ ಎಂದು ಆ್ಯಕ್ಷನ್ ಏಡ್‌ನ ಕಾರ್ಯಕ್ರಮ ವ್ಯವಸ್ಥಾಪಕ ರಾಘವೇಂದ್ರ ಬಿ. ಪಚ್ಚಾಪುರ್‌ ಹೇಳಿದರು.

‘ಬಿಬಿಎಂಪಿ ಸಹಾಯ 2.0ನಲ್ಲಿ ದೊಡ್ಡಕಲ್ಲಸಂದ್ರ ಕೆರೆಗೆ ಮಾಲಿನ್ಯ ಹರಿಯುತ್ತಿರುವ ಬಗ್ಗೆ
ಎರಡು ವರ್ಷದಿಂದ ದೂರು ನೀಡಲಾಗುತ್ತಿದೆ. ಆದರೆ, ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆದರೆ, ‘ಪರಿಹರಿಸಲಾಗಿದೆ’ ಎಂಬ ಷರಾ ಮಾತ್ರ ಕಾಣುತ್ತಿದೆ. ವಾಸ್ತವದಲ್ಲಿ ಯಾವ ಅಧಿಕಾರಿಯೂ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿಲ್ಲ. ಕೆರೆಯ ಕಲ್ಮಶದ ಬಗ್ಗೆ ನಾಲ್ಕಾರು ದೂರುಗಳನ್ನು ನೀಡಿದ್ದೇವೆ. ಪ್ರಯೋಜನವಾಗಿಲ್ಲ. ದೂರು ನೀಡಿದ ಎರಡು ವಾರದ ನಂತರ ಬರುವ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು, ‘ಮಾಲಿನ್ಯವೇ ಇಲ್ಲವಲ್ಲ, ಸುಮ್ಮನೆ ಹೇಳುತ್ತೀರಿ’ ಎಂದು ಹೇಳುತ್ತಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನೆರವಿಗೆ ಬಾರದ ಸಹಾಯ '2.0'

‘ನಾಗರಿಕರು ದೂರು ನೀಡಿದಾಗ ಬಿಬಿಎಂಪಿ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿತ (ಕೆಎಸ್‌ಪಿಸಿಬಿ) ಕ್ಷಿಪ್ರವಾಗಿ ಪ್ರತಿಕ್ರಿಯಿಸಬೇಕು. ಆಗ ಸಮಸ್ಯೆಯ ಪರಿಣಾಮವನ್ನು ಅರಿಯಬಹುದು. ಆದರೆ, ಕೆರೆಯ ಮಾಲಿನ್ಯಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಮತ್ತುಕೆಎಸ್‌ಪಿಸಿಬಿ ಎರಡಕ್ಕೂ ಪ್ರತ್ಯೇಕವಾಗಿ ದೂರು ನೀಡಬೇಕಾಗಿದೆ. ಇದಕ್ಕೆಲ್ಲ ಒಂದೇ ಸಹಾಯವಾಣಿಯ ಅಗತ್ಯವಿದೆ’ ಎಂದು ಆ್ಯಕ್ಷನ್ ಏಡ್‌ನ ಕಾರ್ಯಕ್ರಮ ವ್ಯವಸ್ಥಾಪಕ ರಾಘವೇಂದ್ರ ಬಿ. ಪಚ್ಚಾಪುರ್‌ ಹೇಳಿದರು.

‘ಕೆಎಸ್‌ಪಿಸಿಬಿ ಸಹಾಯ ಕೇಂದ್ರ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಬಿಬಿಎಂಪಿಯ ಸಹಾಯ ಆ್ಯಪ್‌ಗೆ ಕೆಎಸ್‌ಪಿಸಿಬಿ, ಜಲಮಂಡಳಿಯನ್ನೂ ಸೇರಿಸಿಕೊಳ್ಳಬೇಕು. ಸಹಾಯ 2.0 ಅನ್ನು ಕಳೆದ ವರ್ಷ ಅಪ್‌ಡೇಟ್‌ ಮಾಡಲಾಗಿದೆ. ಆದರೆ ಸಹಾಯ 1.0ನಲ್ಲಿ ದಾಖಲಿಸಿದ್ದ ದೂರುಗಳ ಮಾಹಿತಿ ಇದರಲ್ಲಿ ಇಲ್ಲ. ಸಹಾಯ 1.0ದಲ್ಲಿ ದೂರು ನಿರ್ವಹಣೆ ಅಥವಾ ಸಮಸ್ಯೆಗೆ ಪರಿಹಾರ ಸಿಗದಿದ್ದರೆ ಮತ್ತೆ ದೂರು ನೀಡುವ ಅವಕಾಶವಿತ್ತು. ಆದರೆ, ಸಹಾಯ 2.0ನಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶ ಇಲ್ಲ. ನಿರ್ವಹಣೆಗಾರರು ದೂರನ್ನು ‘ಪರಿಹರಿಸಲಾಗಿದೆ’ ಎಂದು ಮುಗಿಸಿಬಿಡುತ್ತಾರೆ’ ಎಂದು ದೂರಿದರು.

‘ಜಲಮಂಡಳಿ ದೂರು ನೀಡಲು ಯಾವುದೇ ರೀತಿಯ ಆ್ಯಪ್‌ ಇಲ್ಲ. ಹೀಗಾಗಿ ಬಿಬಿಎಂಪಿಯ ಸಹಾಯ 2.0 ನಲ್ಲಿ ಬಿಡಬ್ಲ್ಯೂಎಸ್‌ಎಸ್‌ಬಿ ಸಮಸ್ಯೆಗಳನ್ನೂ ಸೇರಿಸಬೇಕು. ಏಕೆಂದರೆ ಹಲವು ಸಮಸ್ಯೆಗಳು ಈ ಮೂರೂ ಇಲಾಖೆಗಳಿಗೆ ಸಂಬಂಧಿಸಿದ್ದಾಗಿರುತ್ತದೆ. ನಾಗರಿಕರಿಗೆ ಸಹಾಯವಾಗುತ್ತದೆ’ ಎಂದು ಮನವಿ ಮಾಡಿದರು.

‘ಪರಿಶೀಲನೆ, ಶಾಶ್ವತ ಕ್ರಮಕ್ಕೆ ಆದ್ಯತೆ’

‘ದೊಡ್ಡಕಲ್ಲಸಂದ್ರ ಕೆರೆಗೆ ಕಲ್ಮಶ ಹರಿಯುತ್ತಿರುವ ಬಗ್ಗೆ ದೂರು ಬಂದಾಗ
ನಮ್ಮ ಎಂಜಿನಿಯರ್‌ಗಳು ಹೋಗಿ ನೋಡಿದ್ದಾರೆ. ಅಲ್ಲಿ ಒಳಚರಂಡಿ ನೀರು ಬರುತ್ತಿರಲಿಲ್ಲ. ಇಷ್ಟಾದರೂ ಖುದ್ದಾಗಿ ಹೋಗಿ ಪರಿಶೀಲನೆ ನಡೆಸಲಾಗುವುದು. ಒಳಚರಂಡಿ ನೀರು ಹರಿಯುತ್ತಿದ್ದರೆ ಅದನ್ನು ತಡೆಯಲು ಕ್ರಮ ಕೈಗೊಳ್ಳಲಾಗುತ್ತದೆ. ಬಿಡಬ್ಲ್ಯೂಎಸ್‌ಎಸ್‌ಬಿ ಅಧಿಕಾರಿಗಳಿಗೂ ಈ ಬಗ್ಗೆ ಮಾಹಿತಿ ನೀಡಿ, ಒಳಚರಂಡಿ ನೀರು ಕೆರೆಗೆ ಹರಿಯುವುದನ್ನು ಶಾಶ್ವತವಾಗಿ ತಡೆಗಟ್ಟಲಾಗುತ್ತದೆ’ ಎಂದು ಬಿಬಿಎಂಪಿ ಕೆರೆಗಳ ವಿಭಾಗದ ಮುಖ್ಯ ಎಂಜಿನಿಯರ್‌ ಶಶಿಕುಮಾರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT