ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಯೋತ್ಪಾದನಾ ಕೃತ್ಯ ಮಟ್ಟಹಾಕಲು ಶ್ವಾನಪಡೆ

ಶ್ವಾನಗಳ ಚಟುವಟಿಕೆ ಉದ್ಯಾನ ಉದ್ಘಾಟನೆ
Last Updated 26 ಮೇ 2020, 19:22 IST
ಅಕ್ಷರ ಗಾತ್ರ

ಬೆಂಗಳೂರು: ಅಪರಾಧ ಪ್ರಕರಣಗಳ ಪತ್ತೆ ಹಾಗೂ ಭಯೋತ್ಪಾದನಾ ಕೃತ್ಯಗಳನ್ನು ಮಟ್ಟಹಾಕಲು ನಗರದ ಶ್ವಾನ ಪಡೆ ಸಜ್ಜಾಗಿದೆ. ಪಡೆಯ ಶ್ವಾನಗಳಿಗೆ ಆಧುನಿಕ ತರಬೇತಿಯನ್ನು ನೀಡಲಾಗಿದ್ದು, ಅವುಗಳ ಚಟುವಟಿಕೆಗೆಂದೇ ನಗರದ ಆಡುಗೋಡಿಯ ಸಿಎಆರ್ (ದಕ್ಷಿಣ) ಮೈದಾನದಲ್ಲಿ ಸುಸಜ್ಜಿತ ಉದ್ಯಾನ ನಿರ್ಮಿಸಲಾಗಿದೆ.

ಮೊದಲಿದ್ದ ಉದ್ಯಾನವನ್ನೇ ಉನ್ನತೀಕರಿಸಿ ಹೊಸದಾಗಿ ಈ ಉದ್ಯಾನ ನಿರ್ಮಿಸಲಾಗಿದೆ. ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರು ಮಂಗಳವಾರ ಉದ್ಯಾನ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, 'ಪೊಲೀಸ್‌ ಶ್ವಾನದಳವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ₹2.5 ಕೋಟಿ ವೆಚ್ಚದಲ್ಲಿ 50 ಶ್ವಾನಗಳನ್ನು ಹೊಸದಾಗಿ ಪಡೆಗೆ ಸೇರಿಸಿಕೊಳ್ಳಲಾಗುವುದು' ಎಂದರು.

'ಸ್ಪೋಟಕ, ಡ್ರಗ್ಸ್‌ ಪತ್ತೆಹಚ್ಚುವ ಹಾಗೂ ಅಪರಾಧ ಸ್ಥಳದಲ್ಲಿ ಅಪರಾಧಿಯನ್ನು ಪತ್ತೆ ಹಚ್ಚುವಲ್ಲಿ ಶ್ವಾನಗಳು ಮಹತ್ವದ ಪಾತ್ರ ವಹಿಸುತ್ತವೆ. ಈ ಪಡೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಅವುಗಳಿಗೆ ಅತ್ಯುತ್ತಮ ತರಬೇತಿ ನೀಡುವುದು ನಮ್ಮ ಗುರಿ. ಈ ನಿಟ್ಟಿನಲ್ಲಿ ಸಿಎಆರ್‌ (ದಕ್ಷಿಣ) ಡಿಸಿಪಿ ಯೋಗೇಶ್‌ ಹಾಗೂ ಎಸಿಪಿ ನಿಂಗಾರೆಡ್ಡಿ ಪಾಟೀಲ ನೇತೃತ್ವದಲ್ಲಿ ಶ್ವಾನ ಚಟುವಟಿಕೆಯ ಉದ್ಯಾನವನ್ನು ಉನ್ನತೀಕರಿಸಲಾಗಿದೆ' ಎಂದರು.

'ಶ್ವಾನ ಗುರು ಎಂದೇ ಪ್ರಸಿದ್ದಿಯಾಗಿರುವ ಶ್ವಾನಗಳ ಮನೋ ವೈದ್ಯ ಅಮೃತ್‌ ಹಿರಣ್ಯ ಉದ್ಯಾನ ನಿರ್ಮಾಣಕ್ಕೆ ಸಲಹೆಗಳನ್ನು ನೀಡಿದ್ದಾರೆ. ಈ ಉದ್ಯಾನವನ್ನು ಸಿಬ್ಬಂದಿಗಳೇ ನಿರ್ಮಿಸಿದ್ದಾರೆ. ಮುಂದಿನ ದಿನದಲ್ಲಿ ಮಹಿಳಾ ಕಾನ್‌ಸ್ಟೆಬಲ್‌‌ಗಳನ್ನು ಡಾಗ್‌ ಹ್ಯಾಂಡ್ಲರ್‌ಗಳಾಗಿ ನೇಮಿಸಲು ಚಿಂತನೆ ನಡೆಯುತ್ತಿದೆ' ಎಂದರು.

ಉದ್ಯಾನ ಉದ್ಘಾಟನೆ ಬಳಿಕ ಅಮೃತ್‌ ಹಿರಣ್ಯ ಅವರ ತರಬೇತಿಯಂತೆ ಶ್ವಾನಗಳ ಪರೇಡ್ ನಡೆಯಿತು. ವಾಹನಗಳ‌ ಬೆನ್ನಟ್ಟುವುದು, ಸ್ಫೋಟಕ ಹಾಗೂ ಡಗ್ರ ಪತ್ತೆ, ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ಹಾಗೂ ಹಲವು ರೀತಿಯ ಕಾರ್ಯಾಚರಣೆಯನ್ನು ಶ್ವಾನಪಡೆ ಪ್ರದರ್ಶಿಸಿತು.

ಕಾರ್ಯಕ್ರಮದಲ್ಲಿ ಸಿಸಿಬಿಯ ಜಂಟಿ ಕಮಿಷನರ್ ಸಂದೀಪ್ ಪಾಟೀಲ, ಕಮಾಂಡ್ ಸೆಂಟರ್ ಡಿಸಿಪಿ ಇಶಾ ಪಂತ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT