ಬುಧವಾರ, ಜನವರಿ 29, 2020
30 °C

‘ವಲಸಿಗರಿಗಾಗಿ ನೆಲೆಸಿಗರ ಭಾಷೆಗೆ ಅನ್ಯಾಯ ಮಾಡದಿರಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ವಲಸಿಗರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಇಲ್ಲಿನ ನೆಲೆಸಿಗರಿಗೆ ಅನ್ಯಾಯ ಮಾಡಬಾರದು. ಕೆಲದಿನದ ಮಟ್ಟಿಗೆ ಇಲ್ಲಿಗೆ ಬರುವವರ ಸಲುವಾಗಿ ಕನ್ನಡವನ್ನು ಕಡೆಗಣಿಸಬೇಕಾಗಿಲ್ಲ. ಇಲ್ಲಿನ ನಿವಾಸಿಗಳಿಗೆ ಎಲ್ಲವೂ ಕನ್ನಡದಲ್ಲೇ ಸಿಗುವಂತಾಗಬೇಕು’ ಎಂದು ಬರಹಗಾರ ಜಿ.ಆನಂದ ಅಭಿಪ್ರಾಯಪಟ್ಟರು.

ಬನವಾಸಿ ಬಳಗದ ವತಿಯಿಂದ ಭಾನುವಾರ ಏರ್ಪಡಿಸಿದ್ದ ‘ತಿಂಗಳ ಅಂಗಳ’ ಕಾರ್ಯಕ್ರಮದಲ್ಲಿ ಅವರು ಕನ್ನಡದ ಸಾಧ್ಯತೆಗಳ ಬಗ್ಗೆ ಬೆಳಕು ಚೆಲ್ಲಿದರು. 

‘ದೇಶದಲ್ಲಿ ಅಂತರರಾಜ್ಯ ವಲಸೆಗೆ ಮುಕ್ತ ಅವಕಾಶ ಇದೆ. ಇಲ್ಲಿಗೆ ಬಂದವರು ತಮ್ಮ ಭಾಷೆಯಲ್ಲಿ ಸೇವೆ ಪಡೆಯುವ ಹಕ್ಕು ಹೊಂದಿದ್ದಾರೆ. ಅದನ್ನು ನಿರಾಕರಿಸಲಾಗದು. ಕರ್ನಾಟಕದಲ್ಲಿ ಬರೀ ಕನ್ನಡ ಮಾತ್ರ ಇರಬೇಕು ಎನ್ನಲಾಗದು. ಇಲ್ಲಿಗೆ ಬಂದವರನ್ನು ಮುಖ್ಯವಾಹಿನಿಗೆ ಸೇರಿಸಿಕೊಂಡು ಕನ್ನಡಿಗರನ್ನಾಗಿ ರೂಪಿಸಬೇಕಾಗಿದೆ’ ಎಂದರು.

‘ನುಡಿಯನ್ನು ಬೆಳೆಸಬೇಕಾದರೆ, ಅದನ್ನು ಎಲ್ಲೆಲ್ಲಿ ಪಸರಿಸಬೇಕು ಎಂಬ ಕುರಿತು ಯೋಜನೆ ಅಗತ್ಯ. ಇವತ್ತಿನ ಸಂದರ್ಭದ ಜ್ಞಾನ– ವಿಜ್ಞಾನ ಕನ್ನಡದಲ್ಲೇ ಸಿಗಬೇಕು. ಎಲ್ಲೆಲ್ಲಿ ಕನ್ನಡ ಇಲ್ಲ, ಅಲ್ಲೆಲ್ಲ ಭಾಷೆಯನ್ನು ಬೆಳೆಸಬೇಕು. ನಮ್ಮ ಸಮೃದ್ಧ ಇತಿಹಾಸದಿಂದ ಸ್ಫೂರ್ತಿ ಪಡೆದು ಇವತ್ತಿನ ಸಂದರ್ಭಕ್ಕೆ ತಕ್ಕಂತೆ ಪದ ಸಂಪದವನ್ನು ಬೆಳೆಸುವ ಕೆಲಸ ಆಗಬೇಕು’ ಎಂದರು.

‘ನಗರದ ಎಲ್ಲ ಮಳಿಗೆಗಳ ಹೆಸರುಗಳನ್ನು ಕನ್ನಡದಲ್ಲೇ ಇರುವಂತೆ ಮಾಡುವುದು ದೊಡ್ಡದಲ್ಲ. ಆದರೆ, ಅದನ್ನು ಓದುವವರೇ ಇಲ್ಲವಾದರೆ ಈ ಪ್ರಯತ್ನ ವ್ಯರ್ಥ. ಕನ್ನಡ ಮಾಧ್ಯಮ ಶಾಲೆಗಳನ್ನು ಕಳೆದುಕೊಳ್ಳುತ್ತಿರುವ ನಾವು ಇಂತಹ ಪರಿಸ್ಥಿತಿ ತಲುಪಿದ್ದೇವೆ. ಕನ್ನಡವನ್ನು ಹೆಚ್ಚು ಹೆಚ್ಚು ಬಳಸುವ ಮೂಲಕ ಅದಕ್ಕೆ ಶಕ್ತಿತುಂಬಿ, ಭಾಷೆಯನ್ನು ಗಟ್ಟಿಗೊಳಿಸುವ ಪ್ರಯತ್ನ ನಡೆಯಬೇಕಿದೆ. ಕನ್ನಡದಲ್ಲಿ ಓದಿದರೂ ಗೆಲ್ಲುತ್ತೀವಿ ಎಂಬ ವಾತಾವರಣ ರೂಪಿಸಬೇಕಿದೆ’ ಎಂದರು. 

‘ಕನ್ನಡ ಪದ ಕಟ್ಟಲು ಕೈಜೋಡಿಸಿ’

‘ಸಮಾನ ಮನಸ್ಕರು ಸೇರಿ ಕನ್ನಡ ಪದಗಳ ಬಳಕೆ ಹೆಚ್ಚಿಸುವ ಪ್ರಯತ್ನದಲ್ಲಿ ತೊಡಗಿದ್ದೇವೆ. ಇದಕ್ಕಾಗಿ ಫೇಸ್‌ಬುಕ್‌ನಲ್ಲಿ ‘ಪದ ಪದ ಕನ್ನಡ ಪದನೇ...’ ಬಳಗವನ್ನು ರಚಿಸಿಕೊಂಡಿದ್ದೇವೆ. ಕನ್ನಡ ಮೂಲದ ಪದ ಬಳಸಿ ಸಾವಿರಕ್ಕೂ ಅಧಿಕ ಕನ್ನಡ ಪದಗಳನ್ನು ಕಟ್ಟಿದ್ದೇವೆ’ ಎಂದು ಪ್ರಿಯಾಂಕ್‌ ಕೆ.ಎಸ್. ತಿಳಿಸಿದರು.

‘ಕನ್ನಡ ಪದ ಕಟ್ಟಲು ವಿದ್ವಾಂಸರೇ ಆಗಿರಬೇಕಾಗಿಲ್ಲ. ಬೇರೆ ಬೇರೆ ಕ್ಷೇತ್ರದಲ್ಲಿರುವವರೂ ಇದಕ್ಕೆ ಕೊಡುಗೆ ನೀಡಬಹುದು. ನಾವು ಕಟ್ಟಿದ 7ಸಾವಿರ ಪದಗಳು ಬರಹ ಡಾಟ್ ಕಾಮ್‌ನಲ್ಲಿವೆ. ಇಂಗ್ಲಿಷ್‌ ಹಾಗೂ ಸಂಸ್ಕೃತ ಪದಗಳ ಬದಲಿಗೆ ಬಳಸಬಹುದಾದ ಕನ್ನಡದ ಪದಗಳನ್ನು ಪಟ್ಟಿ ಮಾಡಿದ್ದೇವೆ. ಹೊಸ ಪದ ಕಟ್ಟುವ ಬಗ್ಗೆ ಕಮ್ಮಟವನ್ನೂ ಮಾಡುತ್ತೇವೆ. ಆನ್‌ಲೈನ್‌ನಲ್ಲೂ ಈ ಪ್ರಯತ್ನ ನಡೆದಿದೆ. ಈ ಕಾಯಕದಲ್ಲಿ ಎಲ್ಲರೂ ಕೈಜೋಡಿಸಿ’ ಎಂದು ಕೋರಿದರು.

‘ಅವಕಾಶಗಳ ಗಣಿ ಡಬ್ಬಿಂಗ್‌’

‘ಡಬ್ಬಿಂಗ್‌ ಕ್ಷೇತ್ರವು ಕನ್ನಡದಲ್ಲಿ ಹೊಸ ಅವಕಾಶಗಳನ್ನು ತೆರೆದಿದೆ. ಒಂದು ಚಾನೆಲ್‌ನ ಕಾರ್ಯಕ್ರಮದ 1 ಸಾವಿರ ಕಂತುಗಳನ್ನು ಕನ್ನಡಕ್ಕೆ ಡಬ್ಬಿಂಗ್‌ ಮಾಡುವುದಕ್ಕೂ ಬಹಳಷ್ಟು ಕಲಾವಿದರು ಬೇಕು. ಇನ್ನು ನೂರಾರು ಚಾನೆಲ್‌ಗಳ ಲಕ್ಷಾಂತರ ಕಂತುಗಳನ್ನು ಕನ್ನಡಕ್ಕೆ ಬರಲಿವೆ. ಇದರಿಂದ ಎಷ್ಟು ಉದ್ಯೋಗಾವಕಾಶ ಸೃಷ್ಟಿಯಾಗಲಿದೆ ನೀವೇ ಊಹಿಸಿ’ ಎಂದು ಹರಿವು ಕ್ರಿಯೇಷನ್ಸ್‌ನ ರತೀಶ್‌ ರತ್ನಾಕರ ತಿಳಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು