ಬೆಂಗಳೂರು: ನಗರದಲ್ಲಿ ಸದ್ಯ 3.36 ಕಿ.ಮೀ. ಮಾತ್ರ ಡಬಲ್ ಡೆಕರ್ ಇದ್ದು, ನಮ್ಮ ಮೆಟ್ರೊ ಮೂರನೇ ಹಂತ ಪೂರ್ಣ ಡಬಲ್ ಡೆಕರ್ ಆಗಲಿದೆ. ಇದರಿಂದ 44.65 ಕಿ.ಮೀ. ಸೇರ್ಪಡೆಗೊಳ್ಳಲಿದ್ದು, ಹೆಬ್ಬಾಳ, ಕಾಮಾಕ್ಯ ಜಂಕ್ಷನ್, ಜೆ.ಪಿ.ನಗರ ಮತ್ತಿತರ ಪ್ರಮುಖ ಜಂಕ್ಷನ್ಗಳಲ್ಲಿ ವಾಹನ ದಟ್ಟಣೆಯನ್ನು ಕಡಿಮೆ ಮಾಡಲಿದೆ.

ಮೂರನೇ ಹಂತದ (ಕಿತ್ತಳೆ ಮಾರ್ಗ) ಯೋಜನೆಯಲ್ಲಿ ಮೊದಲು ಡಬಲ್ ಡೆಕರ್ ಸೇರಿರಲಿಲ್ಲ. ಮುಂದೆ ನಗರದಲ್ಲಿ ಮೆಟ್ರೊ ಎತ್ತರಿಸಿದ ಮಾರ್ಗ ಎಲ್ಲೆಲ್ಲಿ ಬರುತ್ತದೋ ಅಲ್ಲೆಲ್ಲ ಡಬಲ್ ಡೆಕರ್ ನಿರ್ಮಿಸಬೇಕು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರು ಸೂಚಿಸಿದ್ದರಿಂದ ಕಿತ್ತಳೆ ಮಾರ್ಗದಲ್ಲಿ ಡಬಲ್ ಡೆಕರ್ ಸೇರ್ಪಡೆ ಮಾಡಲಾಗಿದೆ.

ಕಿತ್ತಳೆ ಮಾರ್ಗದ ಕಾರಿಡಾರ್ 1 ಕೆಂಪಾಪುರದಿಂದ ಹೆಬ್ಬಾಳ, ಪೀಣ್ಯ, ಸುಮನಹಳ್ಳಿ ಕ್ರಾಸ್, ಮೈಸೂರು ರಸ್ತೆ, ಕಾಮಾಕ್ಯ ಜಂಕ್ಷನ್ಗಳ ಮೂಲಕ ಜೆ.ಪಿ.ನಗರ 4ನೇ ಹಂತದವರೆಗೆ 32.15 ಕಿಲೋ ಮೀಟರ್ ಹಾಗೂ ಕಾರಿಡಾರ್–2 ಹೊಸಹಳ್ಳಿಯಿಂದ ಕಡಬಗೆರೆವರೆಗೆ 12.5 ಕಿ.ಮೀ. ನಿರ್ಮಾಣಗೊಳ್ಳಲಿದೆ. ಈ ಯೋಜನೆಗೆ ಕೇಂದ್ರ ಸರ್ಕಾರ ಒಪ್ಪಿಗೆಯನ್ನು ಕೂಡ ನೀಡಿದ್ದು ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗಿದೆ.

ಈ ಮೆಟ್ರೊ ಮಾರ್ಗದಲ್ಲಿ ಡಬಲ್ ಡೆಕರ್ ರಸ್ತೆ ನಿರ್ಮಿಸಲು ಪ್ರತಿ ಕಿ.ಮೀ.ಗೆ ₹ 120 ಕೋಟಿ ವೆಚ್ಚವಾಗಲಿದೆ. ಕೇಂದ್ರ ಸರ್ಕಾರವು ಮೆಟ್ರೊ ಯೋಜನೆಗಷ್ಟೇ ರಾಜ್ಯ ಸರ್ಕಾರದೊಂದಿಗೆ ವೆಚ್ಚ ಹಂಚಿಕೊಳ್ಳಲಿದೆ. ಡಬಲ್ ಡೆಕರ್ ರಸ್ತೆ ನಿರ್ಮಾಣ ವೆಚ್ಚವನ್ನು ಸಂಪೂರ್ಣವಾಗಿ ರಾಜ್ಯ ಸರ್ಕಾರ ಅಥವಾ ಬಿಬಿಎಂಪಿ ಭರಿಸಬೇಕಿದೆ.

‘ನೆಲ ಮಟ್ಟದಲ್ಲಿ ಈಗಿರುವ ರಸ್ತೆಗಳು ಹಾಗೆಯೇ ಮುಂದುವರಿಯುತ್ತವೆ. ಅದರ ಮೇಲೆ ಎತ್ತರಿಸಿದ ರಸ್ತೆ, ಅದಕ್ಕಿಂತ ಮೇಲೆ ಮೆಟ್ರೊ ಮಾರ್ಗ ನಿರ್ಮಾಣವಾಗಲಿದೆ. ಇದರಿಂದಾಗಿ ಡಬಲ್ ಡೆಕರ್ ರಸ್ತೆಯಲ್ಲಿ ಎಲ್ಲಿಯೂ ‘ಟ್ರಾಫಿಕ್ ಸಿಗ್ನಲ್’ಗಳು ಇರುವುದಿಲ್ಲ. ಹೋಗುವ ಮತ್ತು ಬರುವ ರಸ್ತೆಗಳು ಪ್ರತ್ಯೇಕವಾಗಿ ಇರುವುದರಿಂದ ಎಲ್ಲಿಯೂ ಮುಖಾಮುಖಿ ಆಗುವುದಿಲ್ಲ. ವೇಗವಾಗಿ ಸಾಗುವ ವಾಹನಗಳು ಯಾವುದೇ ತೊಡಕುಗಳಿಲ್ಲದೇ ಸಾಗಬಹುದು’ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

‘ಸರ್ವೀಸ್ ರಸ್ತೆಯಿಂದ ಡಬಲ್ ಡೆಕರ್ ರಸ್ತೆಗೆ ಹೋಗುವವರಿಗೆ ಹಾಗೂ ಸರ್ವೀಸ್ ರಸ್ತೆಗೆ ಇಳಿಯುವವರಿಗೆ ಅನುಕೂಲ ಆಗಲು ಕೆಲವೇ ಕಡೆಗಳಲ್ಲಿ ಎತ್ತರಿಸಿದ ಮಾರ್ಗಕ್ಕೆ ಸಂಪರ್ಕಗಳಿರುತ್ತವೆ. ಇದರಿಂದ ಸರ್ವೀಸ್ ರಸ್ತೆಯಲ್ಲಿ ಕೂಡ ದಟ್ಟಣೆ ಕಡಿಮೆಯಾಗಲಿದೆ. ವರ್ಷದಿಂದ ವರ್ಷಕ್ಕೆ ವಾಹನಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಡಬಲ್ ಡೆಕರ್ ರಸ್ತೆಗಳು ಅನಿವಾರ್ಯ’ ಎಂದು ತಿಳಿಸಿದರು.

ತಾಂತ್ರಿಕ ಒಪ್ಪಿಗೆ

‘ಕಿತ್ತಳೆ ಮಾರ್ಗದಲ್ಲಿ ಕೆಲವೇ ಜಂಕ್ಷನ್ಗಳಲ್ಲಿ ಡಬಲ್ ಡೆಕರ್ ನಿರ್ಮಿಸುವ ಬದಲು ಮಾರ್ಗಪೂರ್ತಿ ಡಬಲ್ ಡೆಕರ್ ರಸ್ತೆ ನಿರ್ಮಿಸುವಂತೆ ನಮಗೆ ನಿರ್ದೇಶನ ಬಂದಿದೆ. ಅದರಂತೆ ಯೋಜನೆ ರೂಪಿಸಲಾಗುತ್ತಿದೆ’ ಎಂದು ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ. ಮಹೇಶ್ವರ ರಾವ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ತಾಂತ್ರಿಕವಾಗಿ ರಾಜ್ಯ ಸರ್ಕಾರದ ಅನುಮೋದನೆ ಸಿಕ್ಕಿದೆ. ಸ್ಥಳೀಯಾಡಳಿತ ಇಲ್ಲವೇ ರಾಜ್ಯ ಸರ್ಕಾರ ಅನುದಾನ ಒದಗಿಸಲಿದೆ’ ಎಂದು ಅವರು ಮಾಹಿತಿ ನೀಡಿದರು. ಆರ್.ವಿ. ರಸ್ತೆ– ಬೊಮ್ಮಸಂದ್ರ ಮೆಟ್ರೊ ಮಾರ್ಗದಲ್ಲಿ ರಾಗಿಗುಡ್ಡ–ಕೇಂದ್ರ ರೇಷ್ಮೆ ಮಂಡಳಿ ಮಧ್ಯೆ 3.36 ಕಿ.ಮೀ. ಮಾತ್ರ ಡಬಲ್ ಡೆಕರ್ ರಸ್ತೆ ಇದೆ. ಅದರಲ್ಲಿ ರಾಗಿಗುಡ್ಡದಿಂದ ರೇಷ್ಮೆ ಮಂಡಳಿ ಕಡೆಗೆ ವಾಹನ ಸಂಚಾರಕ್ಕೆ ರಸ್ತೆ ತೆರೆದಿದೆ. ರೇಷ್ಮೆ ಮಂಡಳಿಯಿಂದ ರಾಗಿಗುಡ್ಡ ಕಡೆಗೆ ಕೆಲವೇ ತಿಂಗಳಲ್ಲಿ ಸಂಚಾರ ಆರಂಭವಾಗಲಿದೆ ಎಂದು ಹೇಳಿದರು.

ಅಂಕಿ ಅಂಶ

₹15,611 ಕೋಟಿ: ನಮ್ಮ ಮೆಟ್ರೊ 3ನೇ ಹಂತ ನಿರ್ಮಾಣ ಅಂದಾಜು ವೆಚ್ಚ

₹5,358 ಕೋಟಿ: ಡಬಲ್ ಡೆಕರ್ ರಸ್ತೆ ನಿರ್ಮಾಣದ ಅಂದಾಜು ವೆಚ್ಚ

₹120 ಕೋಟಿ: ಪ್ರತಿ ಕಿ.ಮೀ. ಡಬಲ್ ಡೆಕರ್ ರಸ್ತೆ ನಿರ್ಮಾಣಕ್ಕೆ ತಗಲುವ ವೆಚ್ಚ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.