ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೌಟ್‌ನಟ್: ಬಳಕೆ ಸಂಖ್ಯೆ ಹೆಚ್ಚಳ

ಕೊರೊನಾ ಪರಿಣಾಮ
Last Updated 16 ಮಾರ್ಚ್ 2020, 22:07 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ಸೋಂಕಿನ ಭೀತಿಯಿಂದ ಶಾಲಾ, ಕಾಲೇಜುಗಳು ಹಾಗೂ ಉದ್ಯಮ ಜಗತ್ತೇ ತಲ್ಲಣಗೊಂಡಿರುವಂತೆಯೇ, ವಿದ್ಯಾರ್ಥಿಗಳ ಸಂಶಯಗಳಿಗೆ ಉಚಿತವಾಗಿ ಪರಿಹಾರ ನೀಡುವ ‘ಡೌಟ್‌ನಟ್‌’ ಆನ್‌ಲೈನ್‌ ತಾಣಕ್ಕೆ ಪ್ರಶ್ನೆ ಕಳುಹಿಸುವವರ ಸಂಖ್ಯೆ ಶೇ 50ರಷ್ಟು ಅಧಿಕವಾಗಿದೆ.

ಡೌಟ್‌ನಟ್‌ಗೆ ದೇಶದಾದ್ಯಂತ 15 ಲಕ್ಷ ಬಳಕೆದಾರರಿದ್ದು, ಪ್ರತಿ ದಿನ 7 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರಶ್ನೆ ಕೇಳುತ್ತಿದ್ದಾರೆ. ಆನ್‌ಲೈನ್‌ ಟ್ಯುಟೋರಿಯಲ್‌ ವಿಡಿಯೊಗಳನ್ನು ನೋಡುವವರ ಸಂಖ್ಯೆ ಶೇ 36ರಷ್ಟು ಹಾಗೂ ವಿಡಿಯೊಗಳನ್ನು ನೋಡುವವರ ಸಂಖ್ಯೆ ಶೇ 44 ರಷ್ಟು ಹೆಚ್ಚಳವಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

‘ಬಿಹಾರದಲ್ಲಿ ಶೇ 129ರಷ್ಟು, ಉತ್ತರಾಖಂಡದಲ್ಲಿ ಶೇ 118ರಷ್ಟು ವೃದ್ಧಿ ದಾಖಲಾಗಿದೆ’ ಎಂದು ಸಂಸ್ಥೆಯ ಸಹ ಸಂಸ್ಥಾಪಕ ಆದಿತ್ಯ ಶಂಕರ್‌ ಹೇಳಿದ್ದಾರೆ.

‘ಕಾರ್ಮಿಕರಿಗೆ ವೇತನ ಪಾವತಿಸಿ’

ರಾಜ್ಯದಲ್ಲಿ ಕೊರೊನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ವಾಣಿಜ್ಯ ಚಟುವಟಿಕೆಗಳ ಮೇಲೆ
ರಾಜ್ಯ ಸರ್ಕಾರ ನಿರ್ಬಂಧ ಹೇರಿರುವುದು ಸ್ವಾಗತಾರ್ಹ. ಆದರೆ, ಈ ನಿರ್ಧಾರದಿಂದ ದುಡಿಮೆ ಕಳೆದುಕೊಂಡ ಕಾರ್ಮಿಕರಿಗೆ ವೇತನ ಪಾವತಿಸಲು ಸಂಬಂಧಪಟ್ಟ ಮಾಲೀಕರಿಗೆ ಸರ್ಕಾರ ಸೂಚಿಸಬೇಕು ಎಂದು ಎಐಟಿಯುಸಿ ಒತ್ತಾಯಿಸಿದೆ.

ಈ ಸಂಬಂಧ ಮುಖ್ಯಮಂತ್ರಿಯವರಿಗೆ ಪತ್ರ ಬರೆದಿರುವ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವಿಜಯಭಾಸ್ಕರ್, ‘ಮಾಲ್, ಪಬ್, ಚಿತ್ರಮಂದಿರದಂತಹ ಸ್ಥಳಗಳಲ್ಲಿ ದುಡಿಯುತ್ತಿರುವ ಕೆಲಸಗಾರರು ಬಹುತೇಕ ಗುತ್ತಿಗೆ ಕಾರ್ಮಿಕರು. ಇವರು ಮಾಸಿಕ ಸಂಬಳ ಕನಿಷ್ಠ ₹11 ಸಾವಿರ ಇದೆ. ಇಂತಹ ಕಾರ್ಮಿಕರಿಗೆ ಬಂದ್‌ ಕಾಲದ ದಿನಗಳ ವೇತನ ಪಾವತಿಸುವಂತೆ ಮಾಲೀಕರಿಗೆ ಆದೇಶಿಸಬೇಕು’ ಎಂದು ಅವರು ಹೇಳಿದ್ದಾರೆ.

ಹೈಕೋರ್ಟ್‌ ಭಣ ಭಣ...

ಕೊರೊನಾ ವೈರಸ್ ಸೋಂಕಿನ ಕಾರಣ ಸೋಮವಾರ ಹೈಕೋರ್ಟ್ ಪ್ರಧಾನ ಪೀಠದಲ್ಲಿ ವಕೀಲರು ಹಾಗೂ ಕಕ್ಷಿದಾರರ ಸಂಖ್ಯೆ ವಿರಳವಾಗಿತ್ತು. ಕಕ್ಷಿದಾರರಿಗೆ ಕೋರ್ಟ್ ಹಾಲ್‌ ಪ್ರವೇಶಿಸದಂತೆ ನಿರ್ಬಂಧ ವಿಧಿಸಲಾಗಿತ್ತು. ವಕೀಲರಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸಲಾಗಿತ್ತು.

ನ್ಯಾಯಪೀಠಗಳು ತುರ್ತು ಪ್ರಕರಣಗಳ ವಿಚಾರಣೆಗೆ ಆದ್ಯತೆ ನೀಡಿ, ಉಳಿದವುಗಳ ವಿಚಾರಣೆ ಮುಂದೂಡಿದವು. ವಕೀಲರು ತಮ್ಮ ಕೆಲಸ ಮುಗಿದ ಕೂಡಲೇ ಕೋರ್ಟ್‌ ಆವರಣದಿಂದ ಹೊರ ನಡೆದರು. ಅನಗತ್ಯ ಎಂದು ಕಂಡುಬಂದವರನ್ನೆಲ್ಲಾ ಹೊರ ಕಳುಹಿಸಲಾಯಿತು. ಕೆಲ ಸಿಬ್ಬಂದಿ ಹಾಗೂ ವಕೀಲರು ಮಾಸ್ಕ್ ಧರಿಸಿದ್ದರು.

ವೈರಸ್ ಸೋಂಕು ತಡೆಯುವ ಸಂಬಂಧದ ಸೂಚನಾ ಫಲಕಗಳನ್ನು ಹೈಕೋರ್ಟ್ ಆವರಣದ ಪ್ರಮುಖ ಸ್ಥಳಗಳಲ್ಲಿ ಪ್ರದರ್ಶಿಸಲಾಗಿತ್ತು. ಕೋರ್ಟ್ ಹಾಲ್‌ಗಳಲ್ಲಿ ಸ್ಯಾನಿಟೈಸರ್‌ಗಳನ್ನು ಇರಿಸಲಾಗಿತ್ತು. ಮುಖ್ಯ ನ್ಯಾಯಮೂರ್ತಿಗಳ ಕೋರ್ಟ್ ಹಾಲ್‌ ಒಂದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದ ಕಕ್ಷಿದಾರರು, ಸರ್ಕಾರಿ ಅಧಿಕಾರಿಗಳು ಹಾಗೂ ಹಾಜರಿದ್ದ ಕೆಲ ಸಾರ್ವಜನಿಕರನ್ನು ಹೊರ ಕಳುಹಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT