ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಡ್ರೀಮ್ ಕ್ಯಾಚರ್’ ಕಚೇರಿಗೆ ಬೀಗ ಹಾಕಿ ಪರಾರಿ

ಎಂಬಿಬಿಎಸ್ ಸೀಟು ಕೊಡಿಸುವ ಆಮಿಷವೊಡ್ಡಿ ವಂಚನೆ
Last Updated 17 ಏಪ್ರಿಲ್ 2022, 16:02 IST
ಅಕ್ಷರ ಗಾತ್ರ

ಬೆಂಗಳೂರು: ‘ಎಂಬಿಬಿಎಸ್ ಸೀಟು ಕೊಡಿಸುವುದಾಗಿ ಹೇಳಿ ವಿದ್ಯಾರ್ಥಿಗಳ ಪೋಷಕರಿಂದ ಹಣ ಪಡೆದಿದ್ದರು’ ಎನ್ನಲಾದ ‘ಡ್ರೀಮ್ ಕ್ಯಾಚರ್’ ಕಂಪನಿ ಸಂಸ್ಥಾಪಕರು, ತಮ್ಮ ಕಚೇರಿಗೆ ಏಕಾಏಕಿ ಬೀಗ ಹಾಕಿ ಪರಾರಿಯಾಗಿದ್ದಾರೆ. ಕಂಪನಿಗೆ ಹಣ ನೀಡಿ ವಂಚನೆಗೀಡಾಗಿರುವ ಪೋಷಕರು, ಬೆಳ್ಳಂದೂರು ಠಾಣೆ ಮೆಟ್ಟಿಲೇರಿದ್ದಾರೆ.

‘ಮಗಳಿಗೆ ಎಂಬಿಬಿಎಸ್ ಸೀಟು ಕೊಡಿಸುವುದಾಗಿ ಹೇಳಿದ್ದ ಡ್ರೀಮ್ ಕ್ಯಾಚರ್ ಕಂಪನಿಯವರು ₹ 16.39 ಲಕ್ಷ ಪಡೆದು ವಂಚಿಸಿದ್ದಾರೆ’ ಎಂದು ಆರೋಪಿಸಿ ಮನೋಜ್ ಎಂಬುವರು ದೂರು ನೀಡಿದ್ದಾರೆ. ಕಂಪನಿಯ ವಿವೇಕ್ ಕುಮಾರ್, ಅಮಿತ್ ಕುಮಾರ್ ಹಾಗೂ ರಾಜೀವ್‌ ಕುಮಾರ್ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಸರ್ಜಾಪುರ ರಸ್ತೆಯ ಅಂಬಲಿಪುರದಲ್ಲಿ ಡ್ರೀಮ್ ಕ್ಯಾಚರ್ ಕಂಪನಿ ಕಚೇರಿ ತೆರೆಯಲಾಗಿತ್ತು. ಮಾರ್ಚ್ 24ರಂದು ಮನೋಜ್‌ ಅವರಿಗೆ ಕರೆ ಮಾಡಿದ್ದ ಆರೋಪಿಗಳು, ‘ತುಮಕೂರಿನ ಶ್ರೀದೇವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಕಾಲೇಜಿನಲ್ಲಿ ಎಂಬಿಬಿಎಸ್ ಸೀಟು ಖಾಲಿ ಇದೆ. ನಿಮ್ಮ ಮಗಳಿಗೆ ಸೀಟು ಕೊಡಿಸುತ್ತೇವೆ. ಕೆಲ ಶುಲ್ಕ ಪಾವತಿಸಬೇಕು’ ಎಂದಿದ್ದರು. ಅದನ್ನು ನಂಬಿದ್ದ ಮನೋಜ್, ಹಂತ ಹಂತವಾಗಿ ₹ 16.39 ಲಕ್ಷ ಪಾವತಿ ಮಾಡಿದ್ದರು’ ಎಂದೂ ಮೂಲಗಳು ತಿಳಿಸಿವೆ.

‘ಏಪ್ರಿಲ್ 10ರಂದು ಮನೋಜ್‌ ಅವರಿಗೆ ಪುನಃ ಕರೆ ಮಾಡಿದ್ದ ಆರೋಪಿಗಳು, ತುಮಕೂರಿನ ಕಾಲೇಜಿಗೆ ಬಂದು ಪ್ರವೇಶ ಪಡೆಯುವಂತೆ ಹೇಳಿದ್ದರು. ಅದನ್ನೂ ನಂಬಿದ್ದ ಮನೋಜ್, ಮಗಳ ಜೊತೆ ಕಾಲೇಜಿಗೆ ಹೋದಾಗ ಆರೋಪಿಗಳು ಸಿಕ್ಕಿರಲಿಲ್ಲ. ಮೊಬೈಲ್ ಸಹ ಸ್ವಿಚ್ಡ್‌ ಆಫ್‌ ಆಗಿತ್ತು. ಅನುಮಾನಗೊಂಡ ಅವರು ಕಂಪನಿ ಕಚೇರಿಗೆ ಬಂದಿದ್ದರು. ಅಷ್ಟರಲ್ಲೇ ಆರೋಪಿಗಳು, ಕಚೇರಿಗೆ ಬೀಗ ಹಾಕಿಕೊಂಡು ಪರಾರಿಯಾಗಿದ್ದರು’ ಎಂದೂ ಪೊಲೀಸ್ ಮೂಲಗಳು ಹೇಳಿವೆ.

‘ಮನೋಜ್‌ ರೀತಿಯಲ್ಲೇ ಆರೋಪಿಗಳು ಹಲವರಿಂದ ಹಣ ಪಡೆದು ವಂಚಿಸಿರುವ ಮಾಹಿತಿ ಇದೆ. ಆರೋಪಿಗಳ ಪತ್ತೆಗಾಗಿ ತನಿಖೆ ಮುಂದುವರಿದಿದೆ’ ಎಂದೂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT