ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಾಬಸ್ ಪೇಟೆ: ಕುಡಿಯುವ ನೀರಿನ ಘಟಕ ಸ್ಥಗಿತ

Published 12 ಜನವರಿ 2024, 21:04 IST
Last Updated 12 ಜನವರಿ 2024, 21:04 IST
ಅಕ್ಷರ ಗಾತ್ರ

ದಾಬಸ್ ಪೇಟೆ: ನೆಲಮಂಗಲ ತಾಲ್ಲೂಕು ನರಸೀಪುರ ಗ್ರಾಮ ಪಂಚಾಯಿತಿ ಹಾಲೇನಹಳ್ಳಿ ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತಗೊಂಡಿದೆ. 

‘ಮಾರುತಿ ಸುಜುಕಿ’ ಕಂಪನಿಯು ಕೆಲ ವರ್ಷಗಳ ಹಿಂದೆ ಈ ಘಟಕವನ್ನು ನಿರ್ಮಾಣ ಮಾಡಿದ್ದು, ‘ವಾಟರ್ ಲೈಫ್ ಇಂಡಿಯಾ ಕಂಪನಿ’ ನಿರ್ವಹಣೆ ಮಾಡುತ್ತಿತ್ತು. ಘಟಕ ಕಾರ್ಯ ನಿರ್ವಹಿಸಲು ಬಳಸಿಕೊಂಡಿರುವ ವಿದ್ಯುತ್ ಬಿಲ್ ಪಾವತಿ ಮಾಡದೇ ಇರುವುದರಿಂದ ಬೆಸ್ಕಾಂ ಇಲಾಖೆ ಘಟಕಕ್ಕೆ ವಿದ್ಯುತ್ ಸಂಪರ್ಕ ಕಡಿತ ಮಾಡಿದೆ. 

ಗ್ರಾಮದ ನೂರಕ್ಕೂ ಹೆಚ್ಚು ಕುಟುಂಬಗಳು ಹಾಗೂ ಅಕ್ಕಪಕ್ಕದ ಜಾಜೂರು, ಲಕ್ಷ್ಮೀಪುರ, ಸಾಲಹಟ್ಟಿ, ಪಾಂಡವಪುರ ಗ್ರಾಮಗಳ ಜನರು ಕುಡಿಯುವ ನೀರಿಗೆ ಇದೇ ಘಟಕವನ್ನು ಅವಲಂಬಿಸಿದ್ದರು. ಘಟಕದ ಬಾಗಿಲು ಹಾಕಿರುವುದರಿಂದ ಅನಿವಾರ್ಯವಾಗಿ ದೂರದ ಊರುಗಳಿಗೆ ಹೋಗಿ ನೀರು ತರಬೇಕಿದೆ. 

‘ಘಟಕ ಸ್ಥಗಿತಗೊಂಡು ನಾಲ್ಕು ತಿಂಗಳು ಕಳೆದು ಹೋಗಿರುವುದರಿಂದ ನಾವು ಕುಡಿಯುವ ನೀರಿಗಾಗಿ ದ್ವಿಚಕ್ರ ವಾಹನಗಳಲ್ಲಿ ದೂರದ ಊರುಗಳಿಗೆ ಹೋಗಿ ನೀರು ತರುತ್ತಿದ್ದೇವೆ. ಇದರಿಂದ ಸಮಯ, ಇಂಧನ ವ್ಯಯವಾಗುತ್ತಿದೆ’ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದರು.

ಘಟಕ ಆರಂಭವಾಗಿನಿಂದಲೂ ಆಗಾಗ ವಿದ್ಯುತ್ ಪಾವತಿ ಮಾಡದೆ ಸ್ಥಗಿತಗೊಳ್ಳುತ್ತಲೇ ಇದೆ. ಈ ಘಟಕವನ್ನು ಸಮರ್ಪಕವಾಗಿ ನಿರ್ವಹಿಸದೆ ಹೋದರೆ, ವಿದ್ಯುತ್ ಬಾಕಿ ಎಲ್ಲ ಪಾವತಿಸಿ ಸ್ಥಳೀಯ ಪಂಚಾಯಿತಿ ಆಡಳಿತಕ್ಕೆ ನೀಡಲಿ’ ಎಂದರು ಗ್ರಾಮದ ಪವನ್.

ಘಟಕದ ನಿರ್ವಹಣೆ ಖಾಸಗಿಯವರು ನಿರ್ವಹಿಸುತ್ತಿದ್ದು, ತಮಗೆ ಬರುವುದಿಲ್ಲ ಎಂದು ಪಂಚಾಯಿತಿಯವರು ಹೇಳುತ್ತಿದ್ದಾರೆ. ಅವರು ಬಂದು ಏನಾಗಿದೆ ಎಂದು ನೋಡುತ್ತಿಲ್ಲ ಎಂದು ಸ್ಥಳೀಯ ಗೃಹಿಣಿ ವನಿತಾ ತಿಳಿಸಿದರು.

‘ಘಟಕ ಸ್ಥಗಿತಗೊಂಡಿರುವುದು ಕೆಲವು ದಿನಗಳ ಹಿಂದೆ ನನ್ನ ಗಮನಕ್ಕೆ ಬಂದಿತ್ತು. ನಿರ್ವಹಣೆ ಮಾಡುವ ಶಿವಕುಮಾರ್‌ ಗಮನಕ್ಕೆ ತಂದಿದ್ದೆ. ಎರಡು ಮೂರು ದಿನಗಳಲ್ಲಿ ಸರಿ ಮಾಡುವುದಾಗಿ ತಿಳಿಸಿದ್ದರು. ಇದುವರೆಗೆ ಬಂದು ಸಮಸ್ಯೆ ಬಗೆಹರಿಸಿಲ್ಲ. ವಿದ್ಯುತ್ ಬಾಕಿ ಪಾವತಿಸಿ ಪಂಚಾಯಿತಿ ವಶಕ್ಕೆ ನೀಡಿದರೆ ನಾವೇ ನಿರ್ವಹಿಸುತ್ತೇವೆ’ ಎಂದು ನರಸೀಪುರ ಪಂಚಾಯಿತಿ ಅಧ್ಯಕ್ಷ ರಾಮಾಂಜನೇಯ ಮಾಹಿತಿ ನೀಡಿದರು.

ಘಟಕ ನಿರ್ವಹಣೆ ಮಾಡುವವರು, ಅದರಿಂದ ಲಾಭ ಪಡೆದುಕೊಂಡಿದ್ದಾರೆ. ಸಕಾಲಕ್ಕೆ ವಿದ್ಯುತ್ ಬಿಲ್ ಪಾವತಿ ಮಾಡಿದ್ದರೆ, ಘಟಕ ಬಂದ್ ಆಗುವ ಸಂಭವವೇ ಇರುತ್ತಿರಲಿಲ್ಲ ಎಂದು ಹಾಲೇನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ತರನಂ ಬಾನು ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT