ಶುಕ್ರವಾರ, ಆಗಸ್ಟ್ 12, 2022
21 °C
* ಡ್ರಗ್ಸ್ ಜಾಲ; ಮತ್ತಿಬ್ಬರ ಬಂಧನ * ನಟಿಯರು ಸಿಸಿಬಿ ಕಸ್ಟಡಿಗೆ

‘ಕುಖ್ಯಾತ ಪೆಡ್ಲರ್’ ಆದ ಟೆಕಿ ಪ್ರತೀಕ್ !

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಡ್ರಗ್ಸ್ ಜಾಲದ ತನಿಖೆಯನ್ನು ಸಿಸಿಬಿ ಪೊಲೀಸರು ಚುರುಕುಗೊಳಿಸಿದ್ದು, ಜಾಲದಲ್ಲಿ ಭಾಗಿಯಾಗಿದ್ದ ಆರೋಪದಡಿ ಮತ್ತೆ ಇಬ್ಬರನ್ನು ಶುಕ್ರವಾರ ಬಂಧಿಸಿದ್ದಾರೆ.

ಮಂಗಳೂರಿನ ಪ್ರತೀಕ್ ಶೆಟ್ಟಿ ಹಾಗೂ ಹರಿಯಾಣದ ಆದಿತ್ಯ ಅಗರವಾಲ್ ಬಂಧಿತರು. 

‘ಎಂಜಿನಿಯರಿಂಗ್ ಪದವೀಧರ ಪ್ರತೀಕ್, 2017ರಲ್ಲಿ ನಗರದ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ (ಟೆಕಿ) ಆಗಿದ್ದ. ತಿಂಗಳಿಗೆ ₹ 1 ಲಕ್ಷ ಸಂಬಳ ಪಡೆಯುತ್ತಿದ್ದ’ ಎಂದು ಸಿಸಿಬಿಯ ಅಧಿಕಾರಿಯೊಬ್ಬರು ಹೇಳಿದರು.

‘ಕೈಯಲ್ಲಿ ಹಣ ಬರುತ್ತಿದ್ದಂತೆ ಮಾದಕ ವಸ್ತು ಸೇವಿಸಲಾರಂಭಿಸಿದ್ದ ಆತ, ಹಲವು ಪಾರ್ಟಿಗಳಲ್ಲಿ ಪಾಲ್ಗೊಳ್ಳುತ್ತಿದ್ದ. ನೈಜೀರಿಯಾ ಪ್ರಜೆಗಳ ಜೊತೆ ಸ್ನೇಹ ಬೆಳೆಸಿ ಡ್ರಗ್ಸ್ ದಂಧೆ ಬಗ್ಗೆ ತಿಳಿದುಕೊಂಡಿದ್ದ. ಕೆಲ ವರ್ಷಗಳಲ್ಲೇ ಕುಖ್ಯಾತ ಪೆಡ್ಲರ್ ಆಗಿ ಬೆಳೆದ. ಎಂಡಿಎಂಎ, ಎಲ್‌ಎಸ್‌ಡಿ, ಕೊಕೇನ್‌ ಸೇರಿ ಹಲವು ಡ್ರಗ್ಸ್‌ಗಳನ್ನು ಉಪ ಪೆಡ್ಲರ್ ಹಾಗೂ ಗ್ರಾಹಕರಿಗೆ ಪೂರೈಸುತ್ತಿದ್ದ’ ಎಂದೂ ಅವರು ವಿವರಿಸಿದರು.

‘ಬಾಣಸವಾಡಿ ಠಾಣೆ ವ್ಯಾಪ್ತಿಯಲ್ಲಿ 2018ರಲ್ಲಿ ಡ್ರಗ್ಸ್ ಪ್ರಕರಣದಲ್ಲಿ ಪ್ರತೀಕ್‌ ಶೆಟ್ಟಿಯನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಜಾಮೀನು ಮೇಲೆ ಹೊರಬಂದಿದ್ದ ಆತ, ಪುನಃ ಕೃತ್ಯ ಮುಂದುವರಿಸಿದ್ದ. ಶ್ರೀಮಂತರು, ತಾರೆಯರು, ಉದ್ಯಮಿಗಳಿಗೆ ಡ್ರಗ್ಸ್ ಪೂರೈಸುತ್ತಿದ್ದ' ಎಂದೂ ಹೇಳಿದರು.

'ಪ್ರತೀಕ್‌ಗೆ, ಇನ್ನೊಬ್ಬ ಆರೋಪಿ ಬಿ.ಕೆ. ರವಿಶಂಕರ್ ಪರಿಚಯವಾಗಿತ್ತು. ಬಳಿಕವೇ ನಟಿಯರು ಹಾಗೂ ಇತರೆ ಆರೋಪಿಗಳು ಮುಖಾಮುಖಿಯಾಗಿದ್ದರು. ಎಲ್ಲರೂ ಒಳಸಂಚು ರೂಪಿಸಿ ಪಾರ್ಟಿ ಆಯೋಜಿಸುತ್ತಿದ್ದರು. ಡ್ರಗ್ಸ್ ಮೂಲಕ ಪ್ರತೀಕ್ ಅಕ್ರಮ ಆಸ್ತಿ ಗಳಿಸಿದ್ದು, ಆ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ’ ಎಂದೂ ಅಧಿಕಾರಿ ವಿವರಿಸಿದರು.

‘ಇನ್ನೊಬ್ಬ ಆರೋಪಿ ಆದಿತ್ಯ, ದೆಹಲಿಯ ವಿರೇನ್ ಖನ್ನಾನ ಸಹಚರ. ಆತನೂ ಹಲವು ವರ್ಷಗಳಿಂದ ಜಾಲದಲ್ಲಿ ಗುರುತಿಸಿಕೊಂಡಿದ್ದ’ ಎಂದೂ ವಿವರಿಸಿದರು.

ನಟಿಯರು ಕಸ್ಟಡಿಗೆ, ಸಂಬರಗಿಗೆ ನೋಟಿಸ್; ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಸೇರಿ 6 ಆರೋಪಿಗಳನ್ನು ವಿಚಾರಣೆಗಾಗಿ ಮತ್ತೆ ಪೊಲೀಸರ ಕಸ್ಟಡಿಗೆ ನೀಡಲಾಗಿದೆ. ಇದರ ಬೆನ್ನಲ್ಲೇ ಸಿಸಿಬಿ ಪೊಲೀಸರು, ಮಾಹಿತಿ ಸಂಗ್ರಹಕ್ಕಾಗಿ ವಕೀಲ ಪ್ರಶಾಂತ್ ಸಂಬರಗಿ ಅವರಿಗೆ ನೋಟಿಸ್ ನೀಡಿದ್ದಾರೆ. ಶನಿವಾರ ಬೆಳಿಗ್ಗೆ ಕಚೇರಿಗೆ ಬರುವಂತೆ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು