ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈದಿಗಳಿಗೆ ಟೂತ್‌ಪೇಸ್ಟ್, ಪ್ಯಾಂಟ್‌ ಸ್ಟಿಕರ್‌ನಲ್ಲಿ ಡ್ರಗ್ಸ್ ಸರಬರಾಜು

Last Updated 28 ಅಕ್ಟೋಬರ್ 2022, 21:15 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಸಿಬ್ಬಂದಿ ಕಣ್ತಪ್ಪಿಸಿ ಕೈದಿಗಳಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಆರೋಪದಡಿ ಐವರನ್ನು ಪೊಲೀಸರು ಬಂಧಿಸಿದ್ದಾರೆ.

‘ಕುರುಬರಹಳ್ಳಿ ಜೆ.ಸಿ.ನಗರದ ಪಿ.ರುದ್ರೇಶ್, ಮುನಿಸ್ವಾಮಿಯಪ್ಪ ಲೇಔಟ್‌ನ ಪಿ. ಪ್ರಶಾಂತ್, ಎಸ್‌. ಉಮಾಶಂಕರ್, ಮಂಜುನಾಥ್ ನಗರದ ವಿಜಯ್ ಹಾಗೂ ಸುಜಾತಾ ಬಂಧಿತರು. ಇವರೆಲ್ಲ, ಟೂತ್‌ಪೇಸ್ಟ್ ಟ್ಯೂಬ್ ಹಾಗೂ ಪ್ಯಾಂಟ್‌ ಸ್ಟಿಕರ್‌ಗಳಲ್ಲಿ ಡ್ರಗ್ಸ್ ಬಚ್ಚಿಟ್ಟು ಕೈದಿಗಳಿಗೆ ನೀಡಲು ಬಂದಿದ್ದರು. ಪ್ರವೇಶ ದ್ವಾರದಲ್ಲಿ ಪರಿಶೀಲನೆ ನಡೆಸಿದಾಗ ಸಿಕ್ಕಿಬಿದ್ದರು’ ಎಂದು ಜೈಲಿನ ಮೂಲಗಳು ಹೇಳಿವೆ.

‘ಡ್ರಗ್ಸ್ ಸಮೇತ ಆರೋಪಿಗಳನ್ನು ವಶಕ್ಕೆ ಪಡೆದು ಪರಪ್ಪನ ಅಗ್ರಹಾರ ಠಾಣೆ ಪೊಲೀಸರಿಗೆ ಒಪ್ಪಿಸಲಾಗಿದೆ. ಐವರನ್ನೂ ಬಂಧಿಸಿರುವ ಪೊಲೀಸರು, ಡ್ರಗ್ಸ್ ಎಲ್ಲಿಂದ ತಂದಿದ್ದರೆಂಬುದನ್ನು ತಿಳಿಯಲು ತನಿಖೆ ಮುಂದುವರಿಸಿದ್ದಾರೆ‘ ಎಂದು ಮೂಲಗಳು ತಿಳಿಸಿವೆ.

ಡಾಬರ್‌ ರೆಡ್‌ ಟ್ಯೂಬ್‌ನಲ್ಲಿ ಹಶೀಷ್: ‘ಜೈಲಿನಲ್ಲಿರುವ ವಿಚಾರಣಾಧೀನ ಕೈದಿ ಎನ್‌. ಕಿರಣ್ ಅಲಿಯಾಸ್ ಕರಿಯನನ್ನು ಮಾತನಾಡಿಸಲೆಂದು ಅ. 20ರಂದು ಆರೋಪಿ ರುದ್ರೇಶ್ ಬಂದಿದ್ದ. ಮಾತುಕತೆ ವೇಳೆಯೇ ಕೈದಿಯ ಕೈಗೆ ಡಾಬರ್‌ ರೆಡ್ ಟೂತ್‌ ಪೇಸ್ಟ್‌ ಟ್ಯೂಬ್ ನೀಡಿದ್ದ’ ಎಂದು ಜೈಲಿನ ಮೂಲಗಳು ಹೇಳಿವೆ.

‘ಕರ್ತವ್ಯದಲ್ಲಿದ್ದ ಸಿಬ್ಬಂದಿಗೆ ಅನುಮಾನ ಬಂದಿತ್ತು. ಪೇಸ್ಟ್‌ ಟ್ಯೂಬ್ ಮುರಿದು ನೋಡಿದಾಗ, 50 ಗ್ರಾಂ ಹಶೀಷ್ ಡ್ರಗ್ಸ್ ಪತ್ತೆಯಾಯಿತು’ ಎಂದು ಮೂಲಗಳು ತಿಳಿಸಿವೆ.

‘ಇನ್ನೊಬ್ಬ ವಿಚಾರಣಾಧೀನ ಕೈದಿ ಶ್ರೀನಿವಾಸ್ ಅಲಿಯಾಸ್ ಚಿಕ್ಕಕಾಟುನನ್ನು ನೋಡಲು ಆರೋಪಿಗಳಾದ ಪಿ. ಪ್ರಶಾಂತ್ ಹಾಗೂ ಎಸ್‌. ಉಮಾಶಂಕರ್ ಅ. 20ರಂದು ಮಧ್ಯಾಹ್ನ ಜೈಲಿಗೆ ಬಂದಿದ್ದರು. ಅವರು ಸಹ ಕೈದಿಗೆ 2 ಬೆಡ್‌ ಶಿಟ್ ಹಾಗೂ ಡಾಬರ್ ರೆಡ್ ಟೂಥ್‌ ಪೇಸ್ಟ್‌ ಟ್ಯೂಬ್ ನೀಡಿದ್ದರು. ಈ ಟ್ಯೂಬ್‌ನಲ್ಲೂ 40 ಗ್ರಾಂ ಹಶೀಷ್‌ ಸಿಕ್ಕಿತು’ ಎಂದು ಜೈಲಿನ ಮೂಲಗಳು ಹೇಳಿವೆ.

ಪ್ಯಾಂಟ್‌ ಸ್ಟಿಕರ್‌ನಲ್ಲಿ ಡ್ರಗ್ಸ್: ‘ವಿಚಾರಣಾಧೀನ ಕೈದಿ ನವೀನ್‌ಕುಮಾರ್‌ನನ್ನು ನೋಡಲು ಅ. 25ರಂದು ಸಂಜೆ ವಿಜಯ ಹಾಗೂ ಸುಜಾತಾ ಬಂದಿದ್ದರು. ಸಿಬ್ಬಂದಿ ಕಣ್ತಪ್ಪಿಸಿ ಕೈದಿಗೆ ಪ್ಯಾಂಟ್ ನೀಡಿದ್ದರು. ಅದನ್ನು ನೋಡಿದ್ದ ಸಿಬ್ಬಂದಿ, ಪರಿಶೀಲನೆ ನಡೆಸಿದ್ದರು. ಪ್ಯಾಂಟ್‌ನ ಹಿಂಬದಿಯಲ್ಲಿದ್ದ ಸ್ಟಿಕರ್ ಒಳಗಿನ ಚಿಕ್ಕ ಪಾಕೆಟ್‌ನಲ್ಲಿ 5 ಗ್ರಾಂ ಎಂಡಿಎಂಎ ಡ್ರಗ್ಸ್ ಪತ್ತೆಯಾಯಿತು’ ಎಂದು ಜೈಲಿನ ಮೂಲಗಳು ತಿಳಿಸಿವೆ.

ಪೊಲೀಸರು, ‘ಡ್ರಗ್ಸ್ ಸಾಗಣೆ ಹಾಗೂ ಮಾರಾಟ ಆರೋಪದಡಿ ಕೈದಿಗಳ ಸಮೇತ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಜಪ್ತಿ ಮಾಡಿರುವ ಡ್ರಗ್ಸ್ ಮೌಲ್ಯದ ಲಕ್ಷಕ್ಕೂ ಹೆಚ್ಚಿದೆ’ ಎಂದರು.

ಡ್ರಗ್ಸ್‌ ಮಾರಾಟ: ವಿದ್ಯಾರ್ಥಿ ಜಾಮೀನು ಅರ್ಜಿ ತಿರಸ್ಕೃತ

ಬೆಂಗಳೂರು: ವಿದ್ಯಾರ್ಥಿಗಳಿಗೆ ಡ್ರಗ್ಸ್ (ಮಾದಕ ವಸ್ತು) ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಕೇರಳದ 24 ವರ್ಷದ ವಿದ್ಯಾರ್ಥಿಗೆ ಹೈಕೋರ್ಟ್‌ ಜಾಮೀನು ನಿರಾಕರಿಸಿದೆ.

ಜಾಮೀನು ಕೋರಿ ತಿರುವನಂತಪುರಂನ ಶ್ರೀಜಿತ್ ಎಂಬುವವರು ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಯನ್ನು ನ್ಯಾಯಮೂರ್ತಿ ರಾಜೇಂದ್ರ ಬದಾಮಿಕರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿ ಆದೇಶಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಪೀಠ, ‘ಅರ್ಜಿದಾರನ ಬಳಿ ದೊರೆತ ಮಾದಕ ವಸ್ತು ಪ್ರಮಾಣ ಕಡಿಮೆ ಎಂಬುದು ಸತ್ಯ. ಆದರೆ, ಪ್ರಕರಣದ ಮತ್ತೊಬ್ಬ ಆರೋಪಿಯ ಬಳಿ 50 ಗ್ರಾಂ ಎಂಡಿಎಂಎ ದೊರೆತಿದೆ. ಅದು ವಾಣಿಜ್ಯ ಬಳಕೆಯ ಪ್ರಮಾಣವನ್ನು ಮೀರಿದ್ದಾಗಿದೆ. ಅರ್ಜಿದಾರನ ಮೇಲಿನ ಆರೋಪಗಳಿಗೆ ಇನ್ನೂ 20 ವರ್ಷದವರೆಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲು ಅವಕಾಶವಿದೆ. ಹಾಗಾಗಿ, ಇದು ಜಾಮೀನು ನೀಡಲು ಅರ್ಹವಾದ ಪ್ರಕರಣವಲ್ಲ’ ಎಂದು ತಿಳಿಸಿ ಅರ್ಜಿ ವಜಾಗೊಳಿಸಿದೆ.

ನಗರದ ತಮ್ಮೇನಹಳ್ಳಿ ಸಬ್ ವೇ ಬಳಿ 2022ರ ಜೂನ್‌ 29ರಂದು ಮಾದಕ ವಸ್ತು ಮಾರಾಟ ಮಾಡುತ್ತಿದ್ದ ವೇಳೆ ಅರ್ಜಿದಾರ ಹಾಗೂ ಮತ್ತೊಬ್ಬ ವ್ಯಕ್ತಿಯನ್ನು ಮಾದನಾಯಕನ ಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT