ಸೋಮವಾರ, 2 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ರಗ್ಸ್ ಅಮಲು: ಪೊಲೀಸರಿಗೆ ಒದ್ದ ಯುವತಿ

Published 9 ಸೆಪ್ಟೆಂಬರ್ 2023, 19:46 IST
Last Updated 9 ಸೆಪ್ಟೆಂಬರ್ 2023, 19:46 IST
ಅಕ್ಷರ ಗಾತ್ರ

ಬೆಂಗಳೂರು: ಡ್ರಗ್ಸ್ ವ್ಯಸನಿಯಾದ ಯುವತಿಯೊಬ್ಬರು ಮಹಿಳಾ ಪೊಲೀಸರಿಗೆ ಒದ್ದು ರಂಪಾಟ ಮಾಡಿದ್ದು, ಇದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ನಗರದ ಠಾಣೆಯೊಂದರಲ್ಲಿ ಚಿತ್ರೀಕರಿಸಲಾಗಿರುವ ವಿಡಿಯೊವನ್ನು ಹಲವರು ತಮ್ಮ ಫೇಸ್‌ಬುಕ್‌ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ‘ನಗರದಲ್ಲಿ ಯುವಜನತೆ, ಡ್ರಗ್ಸ್ ವ್ಯಸನಿಗಳಾಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು’ ಎಂದು ಆಗ್ರಹಿಸಿದ್ದಾರೆ.

‘ಗಾಂಜಾ ಹಾಗೂ ಸಿಂಥೆಟಿಕ್ ಡ್ರಗ್ಸ್ ಎಲ್ಲೆಂದರಲ್ಲಿ ಸಿಗುತ್ತಿದೆ. ಮಾರಾಟವೂ ಹೆಚ್ಚಾಗಿದೆ. ಡ್ರಗ್ಸ್ ಸಾಗಣೆ ಹಾಗೂ ಮಾರಾಟಗಾರರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಜನರು ಒತ್ತಾಯಿಸಿದ್ದಾರೆ.

ವಿಡಿಯೊದಲ್ಲಿ ಏನಿದೆ: ‘ಕಾಲೇಜೊಂದರಲ್ಲಿ ಓದುತ್ತಿರುವ ಯುವತಿ, ಪೋಷಕರ ಜೊತೆ ವಾಸವಿದ್ದಾರೆ. ಕೆಲ ತಿಂಗಳಿನಿಂದ ಯುವತಿ, ಡ್ರಗ್ಸ್ ಸೇವನೆ ಮಾಡುತ್ತಿದ್ದರು. ಡ್ರಗ್ಸ್ ವ್ಯಸನಿಯಾಗಿ ಬದಲಾಗಿದ್ದರು. ಡ್ರಗ್ಸ್ ಖರೀದಿಸಲು ಹಣ ನೀಡುವಂತೆ ಪೋಷಕರನ್ನು ಒತ್ತಾಯಿಸುತ್ತಿದ್ದರು. ಪೋಷಕರು, ಹಣ ನೀಡುವುದನ್ನು ನಿಲ್ಲಿಸಿದ್ದರು. ಇದರ ನಡುವೆಯೇ ಯುವತಿ ವಿಚಿತ್ರವಾಗಿ ವರ್ತಿಸುತ್ತಿದ್ದು, ಪೋಷಕರ ಮೇಲೂ ಹಲ್ಲೆ ಮಾಡುತ್ತಿದ್ದರು’ ಎಂದು ಗೊತ್ತಾಗಿದೆ.

ಮಗಳ ಪರಿಸ್ಥಿತಿ ಕಂಡು ಹೆದರಿದ್ದ ಪೋಷಕರು, ಠಾಣೆಗೆ ಮಾಹಿತಿ ನೀಡಿದ್ದರು. ಮನೆಗೆ ಹೋಗಿದ್ದ ಮಹಿಳಾ ಸಿಬ್ಬಂದಿ, ಜೀಪಿನಲ್ಲಿ ಯುವತಿಯನ್ನು ಠಾಣೆಗೆ ಕರೆತಂದಿದ್ದರು. ಈ ವೇಳೆಯೂ ಯುವತಿ ವಿಚಿತ್ರವಾಗಿ ವರ್ತಿಸಿ ರಂಪಾಟ ಮಾಡಿದ್ದರು. ಅವರನ್ನು ಹಿಡಿದುಕೊಂಡಿದ್ದ ಸಿಬ್ಬಂದಿ, ಕುರ್ಚಿ ಮೇಲೆ ಕೂರಿಸಿದ್ದರು. ಈ ವೇಳೆ ಮತ್ತಷ್ಟು ಆಕ್ರೋಶಗೊಂಡಿದ್ದ ಯುವತಿ, ಪೊಲೀಸರಿಗೆ ಒದ್ದಿದ್ದಾರೆ. ಇದರಿಂದ ಸಿಟ್ಟಾದ ಕೆಲ ಸಿಬ್ಬಂದಿ, ಯುವತಿ ಕಪಾಳಕ್ಕೆ ಹೊಡೆದಿದ್ದಾರೆ. ಈ ದೃಶ್ಯ ವಿಡಿಯೊದಲ್ಲಿದೆ.

ಸಿಬ್ಬಂದಿ, ಯುವತಿಯನ್ನು ಹಿಡಿದುಕೊಂಡು ಆಸ್ಪತ್ರೆಗೆ ದಾಖಲಿಸಿದ್ದಾರೆಂದು ತಿಳಿದುಬಂದಿದೆ. ಆದರೆ, ಯಾವ ಠಾಣೆಯಲ್ಲಿ ಈ ಘಟನೆ ನಡೆದಿದೆ ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT