ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ದಸರಾ ಸಂಭ್ರಮ ಕಸಿದುಕೊಂಡ ಪ್ರವಾಹ

ನಲುಗಿದ ಹೊಸಕೆರೆಹಳ್ಳಿ l ಶಾಶ್ವತ ಪರಿಹಾರಕ್ಕೆ ಹೆಚ್ಚಿದ ಕೂಗು l 300ಕ್ಕೂ ಹೆಚ್ಚು ಮನೆಗಳಿಗೆ ಹಾನಿ l ಹಾಳಾದವು ಪೀಠೋಪಕರಣ, ಎಲೆಕ್ಟ್ರಾನಿಕ್ ವಸ್ತುಗಳು
Last Updated 24 ಅಕ್ಟೋಬರ್ 2020, 21:50 IST
ಅಕ್ಷರ ಗಾತ್ರ

ಬೆಂಗಳೂರು: ‘ದಸರಾ ಹಬ್ಬದ ಸಂಭ್ರಮದಲ್ಲಿರಬೇಕಾಗಿದ್ದ ನಾವು ನಿರಾಶ್ರಿತರಾಗಿದ್ದೇವೆ. ಪ್ರವಾಹ ನಮ್ಮ ಸಡಗರವನ್ನೆಲ್ಲ ಕಿತ್ತುಕೊಂಡಿದೆ’ ಹೊಸಕೆರೆಹಳ್ಳಿ ನಿವಾಸಿ ಸರಸ್ವತಿ ಅವರು ಪ್ರವಾಹದಿಂದ ಬಂದೊದಗಿದ ಪರಿಸ್ಥಿತಿಯನ್ನು ಬಿಚ್ಚಿಟ್ಟಿದ್ದು ಹೀಗೆ.

‘ಶುಕ್ರವಾರ ಸಂಜೆಯಿಂದಲೇ ನೀರು ಮನೆಯೊಳಗೆ ನುಗ್ಗಿತ್ತು. ಇಡೀ ಮನೆಯೇ ನೀರಿನಿಂದ ಆವರಿಸಿಕೊಂಡಿತ್ತು. ಎಷ್ಟೇ ಚೀರಾಡಿದರೂ ಕೂಗಾಡಿದರೂ ತಕ್ಷಣಕ್ಕೆ ಯಾರೊಬ್ಬರೂ ಸಹಾಯಕ್ಕೆ ಬರಲಿಲ್ಲ. ರಾತ್ರಿ ವೇಳೆ ನೀರು ತಾನಾಗಿಯೇ ಕಡಿಮೆ ಆಯಿತು. ಆದರೆ, ಈಗ ಮನೆ ಸ್ವಚ್ಛಗೊಳಿಸುವುದು ತಲೆನೋವಾಗಿದೆ’ ಎಂದು ಅವರು ಅಳಲು ತೋಡಿಕೊಂಡರು.

ಇದು ಕೇವಲ ಸರಸ್ವತಿ ಒಬ್ಬರ ಪರಿಸ್ಥಿತಿಯಲ್ಲ.ನಗರದ ದಕ್ಷಿಣ ಭಾಗದ ಪ್ರದೇಶಗಳಲ್ಲಿ ಶುಕ್ರವಾರ ಸುರಿದ ಭಾರಿ ಮಳೆಯಿಂದಾಗಿ ಹೊಸಕೆರೆಹಳ್ಳಿ ಹಾಗೂ ರಾಜರಾಜೇಶ್ವರಿನಗರದ ಕೆಲ ಪ್ರದೇಶಗಳು ಅಕ್ಷರಶಃ ನಲುಗಿ ಹೋಗಿವೆ. ರಾಜಕಾಲುವೆಗಳು ಉಕ್ಕಿ ಹರಿದು ಮನೆಗಳಿಗೆ ನೀರು ನುಗ್ಗಿದ್ದರಿಂದ 300ಕ್ಕೂ ಹೆಚ್ಚು ಕುಟುಂಬಗಳು ಇದೇ ಸಂಕಷ್ಟವನ್ನು ಎದುರಿಸುತ್ತಿವೆ.

ಶಾಶ್ವತ ಪರಿಹಾರಕ್ಕೆ ಒತ್ತಾಯ: 15 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಇಂಥ ಪ್ರವಾಹ ಸ್ಥಿತಿ ಎದುರಾಗಿದ್ದು, ಇದಕ್ಕೆ ಶಾಶ್ವತ ಪರಿಹಾರ ಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಈ ಪ್ರದೇಶದಲ್ಲಿ ಹಾದುಹೋಗಿರುವ ರಾಜಕಾಲುವೆಯಲ್ಲಿ ಅನೇಕ ಕಡೆ ಹೂಳು ತುಂಬಿಕೊಂಡಿದೆ. ಇದರಿಂದಾಗಿ ನೀರು ರಾಜಕಾಲುವೆಯಲ್ಲಿ ಸರಾಗವಾಗಿ ಹರಿದು ಹೋಗಲಿಲ್ಲ. ಇದುವೇ ಪ್ರವಾಹ ಸ್ಥಿತಿಗೆ ಪ್ರಮುಖ ಕಾರಣವೆಂದು ಸ್ಥಳೀಯರು ದೂರಿದರು.

ರಾಜಕಾಲುವೆಗೆ ಸೂಕ್ತ ತಡೆಗೋಡೆ ಇಲ್ಲ. ಅದರ ನಿರ್ಮಾಣ ಕೆಲಸ ನಡೆಯುತ್ತಿದ್ದು, ತಡೆಗೋಡೆಗೆ ಅವೈಜ್ಞಾನಿಕವಾಗಿ ಪಾಯ ತೂಡಲಾಗಿದೆ. ಇದೇ ರಾಜಕಾಲುವೆಯಲ್ಲಿ ಕಟ್ಟಡದ ತ್ಯಾಜ್ಯ ಹಾಗೂ ಇತರೆ ಕಸವನ್ನು ಎಸೆಯಲಾಗಿದೆ. ಹೀಗಾಗಿಯೇ ಮಳೆ ನೀರು ಕಾಲುವೆಯಲ್ಲಿ ಹರಿಯುವ ಬದಲು ಅಕ್ಕ–ಪಕ್ಕದ ಪ್ರದೇಶಗಳಿಗೆ ನುಗ್ಗಿದೆ.

‘ಜೋರು ಮಳೆ ಬಂದಾಗಲೂ ಇಷ್ಟು ಪ್ರಮಾಣದಲ್ಲಿ ನೀರು ಮನೆಗಳಿಗೆ ನುಗ್ಗುತ್ತಿರಲಿಲ್ಲ. ಆದರೆ, ತಡೆಗೋಡೆ ನಿರ್ಮಾಣ ಕಾಮಗಾರಿಯೇ ಅವೈಜ್ಞಾನಿಕವಾಗಿದೆ. ಜೊತೆಗೆ, ಮಳೆಗಾಲದಲ್ಲಿ ಕಾಮಗಾರಿ ಆರಂಭಿಸುವ ಅವಶ್ಯಕತೆ ಇರಲಿಲ್ಲ. ಬಿಬಿಎಂಪಿ ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯವೇ ಪ್ರವಾಹಕ್ಕೆ ಕಾರಣ’ ಎಂದು ಸ್ಥಳೀಯರು ದೂರಿದರು.

ನೀರಿನಲ್ಲೇ ತೇಲಿಹೋಗಿವೆ ವಾಹನಗಳು: ಜೋರಾಗಿ ಮಳೆ ಸುರಿಯುತ್ತಿದ್ದರಿಂದ ನಿವಾಸಿಗಳು ಮನೆಯೊಳಗೆ ಸೇರಿಕೊಂಡರು. ಅವರ ವಾಹನಗಳನ್ನು ಮನೆ ಎದುರು ಇದ್ದವು. ರಸ್ತೆಯಲ್ಲಿ ಹೊರಟಿದ್ದ ಸವಾರರು, ತಮ್ಮ ವಾಹನಗಳನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಮಳಿಗೆ ಹಾಗೂ ಕಟ್ಟಡಗಳಲ್ಲಿ ಆಶ್ರಯ ಪಡೆದಿದ್ದರು. ಸಂಜೆ 4 ಗಂಟೆ ಸುಮಾರಿಗೆ ರಸ್ತೆ ಮೇಲೆಯೇ ಹೊಳೆಯಂತೆ ನೀರು ಹರಿಯಲಾರಂಭಿಸಿತು. ಸಂಜೆ 6ರ ಸುಮಾರಿಗೆ ಪ್ರವಾಹ ಸ್ಥಿತಿ ನಿರ್ಮಾಣವಾಗಿತ್ತು. ವಾಹನಗಳು ನೀರಿನಲ್ಲಿ ತೇಲಿಕೊಂಡು ತಗ್ಗು ಪ್ರದೇಶಕ್ಕೆ ಹೋಗಿ ಸೇರಿಕೊಂಡಿವೆ.

ಕೆಲವು ನಿವಾಸಿಗಳು ಬಾಗಿಲು ತೆರೆಯುತ್ತಿದ್ದಂತೆ ನೀರು ಒಳಗೆ ನುಗ್ಗಿತು. 4ರಿಂದ 8 ಅಡಿಯಷ್ಟು ನೀರು ಮನೆಯೊಳಗೆ ಸೇರಿಕೊಂಡಿತ್ತು. ನೀರಿನ ಅಬ್ಬರ ಕಂಡು ಬಹುತೇಕ ನಿವಾಸಿಗಳ ಕಂಗಾಲಾದರು. ದತ್ತಾತ್ರೇಯ ದೇವಸ್ಥಾನದ ಪ್ರದೇಶ ನೀರಿನಿಂದ ಆವೃತ್ತಗೊಂಡಿದ್ದು, ಇಲ್ಲಿ 9 ಅಡಿಯಷ್ಟು ನೀರು ನಿಂತಿತ್ತು. ದಸರಾ ಹಬ್ಬದ ವಿಶೇಷ ಪೂಜೆಗಾಗಿ ಹಾಕಿದ್ದ ಪೆಂಡಾಲ್, ಕುರ್ಚಿಗಳು ಚಿಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ನೂರಕ್ಕೂ ಹೆಚ್ಚು ಮನೆಗಳಲ್ಲಿದ್ದ ಬಟ್ಟೆ, ದಿನಸಿ, ಟಿ.ವಿ, ಫ್ರಿಡ್ಜ್ ಸೇರಿ ಹಲವು ವಸ್ತುಗಳು ನೀರಿನಲ್ಲೇ ಮುಳುಗಿದ್ದವು. ತಡರಾತ್ರಿ ಮಳೆ ಕಡಿಮೆಯಾದ ಬಳಿಕವೇ ನೀರು ಸ್ವಲ್ಪ ಖಾಲಿ ಆಯಿತು.

ಈ ಪ್ರದೇಶಗಳಲ್ಲಿ ಶನಿವಾರ ಬೆಳಿಗ್ಗೆ ಎಲ್ಲೆಂದರಲ್ಲಿ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿ ಬಿದ್ದಿದ್ದ ವಾಹನಗಳು ಕಾಣಿಸುತ್ತಿದ್ದವು. ಮಾಲೀಕರು ಅವುಗಳನ್ನು ಗುರುತಿಸಿ ತೆಗೆದುಕೊಂಡು ಹೋದರು. ರಸ್ತೆ ಹಾಗೂ ಮನೆಗಳಲ್ಲಿ ನೀರಿನ ಅವಶೇಷ ಹಾಗೇ ಇತ್ತು. ನೀರಿನೊಂದಿಗೆ ಬಂದ ತ್ಯಾಜ್ಯ ಹಾಗೂ ಗಲೀಜು,ರಸ್ತೆ ಮತ್ತು ಮನೆಗಳಲ್ಲಿ ದುರ್ವಾಸನೆ ಬರುವಂತೆ ಮಾಡಿತ್ತು.

ಸ್ಥಳೀಯರೇ ರಾತ್ರಿಯೀಡಿ ನೀರು ಹೊರಹಾಕಿದರು. ಬೆಳಿಗ್ಗೆ ಬಂದಿದ್ದ ಬಿಬಿಎಂಪಿ ಸಿಬ್ಬಂದಿ, ರಸ್ತೆಯಲ್ಲಿದ್ದ ತ್ಯಾಜ್ಯ ತೆರವು ಮಾಡಿ ಸ್ವಚ್ಛಗೊಳಿಸಿದರು.

ತಿಂಡಿ, ಊಟ ವಿತರಣೆ

ಹೊಸಕೆರೆಹಳ್ಳಿ, ರಾಜರಾಜೇಶ್ವರಿ ನಗರದ ಕೆಲ ಪ್ರದೇಶಗಳ ನಿವಾಸಿಗಳಿಗೆ ತಿಂಡಿ ಹಾಗೂ ಊಟದ ಪೊಟ್ಟಣಗಳನ್ನು ವಿತರಿಸಲಾಯಿತು. ಬಿಬಿಎಂಪಿ ಸಿಬ್ಬಂದಿ ಹಾಗೂ ಕೆಲ ಸಂಘಟನೆಗಳ ಸದಸ್ಯರು, ಶುಕ್ರವಾರ ರಾತ್ರಿ ಹಾಗೂ ಶನಿವಾರ ಪೊಟ್ಟಣಗಳನ್ನು ನೀಡಿದರು. ಪೊಟ್ಟಣ ಸಿಗಲಿಲ್ಲವೆಂದು ಕೆಲವರು ಆಕ್ರೋಶವನ್ನೂ ವ್ಯಕ್ತಪಡಿಸಿದರು.

ರೋಗಗಳ ಭೀತಿ

ಹೊಸಕೆರೆಹಳ್ಳಿ ಹಾಗೂ ರಾಜರಾಜೇಶ್ವರಿ ನಗರದ ಕೆಲ ಭಾಗಗಳಲ್ಲಿ ನೀರು ನಿಂತುಕೊಂಡು ದುರ್ವಾಸನೆ ಬರುತ್ತಿದ್ದು, ರೋಗಗಳ ಭೀತಿ ಎದುರಾಗಿದೆ.

‘ನಗರದ ಕಸವೆಲ್ಲ ನೀರಿನ ಜೊತೆ ಮನೆಯೊಳಗೆ ಬಂದಿದೆ. ಹಾವುಗಳು, ಕೀಟಗಳನ್ನು ನೀರಿನಲ್ಲಿ ಕಂಡಿದ್ದೇವೆ. ಶನಿವಾರ ಎಲ್ಲವನ್ನೂ ಸ್ವಚ್ಛ ಮಾಡಲು ಆಗಿಲ್ಲ. ಶುದ್ಧ ಗಾಳಿಯೂ ಇಲ್ಲ. ರೋಗಗಳಿಗೆ ತುತ್ತಾಗುವ ಆತಂಕ ಇದೆ’ ಎಂದು ಸ್ಥಳೀಯರು ಹೇಳಿದರು.

ಕಟ್ಟಡದಲ್ಲಿ ಸಿಲುಕಿದ್ದವರಿಂದ ಚೀರಾಟ

‘ದತ್ತಾತ್ರೇಯ ದೇವಸ್ಥಾನದ ಹಿಂಭಾಗದ ಕಟ್ಟಡದಲ್ಲಿ ನಾನು ಹಾಗೂ ಸ್ನೇಹಿತರು ಇದ್ದೆವು. ಮಳೆ ಜೋರಾಗಿ ಬಂದು ಕಾಲುವೆ ನೀರು ಕಟ್ಟಡದ ನೆಲಮಹಡಿಯನ್ನು ಆವರಿಸಿತು. ನೀರು ನೋಡಿ ಗಾಬರಿಯಾಗಿ ಎಲ್ಲರೂ ಚೀರಾಡಲಾರಂಭಿಸಿದೆವು. ಮಳೆ ಸದ್ದಿನಲ್ಲಿ ನಮ್ಮ ಕೂಗು ಹೊರಗಿನವರಿಗೆ ಕೇಳಿಸಲಿಲ್ಲ.

ಕಟ್ಟಡದ ಮೇಲ್ಭಾಗದವರೆಗೂ ನೀರು ಬಂದು, ನಾವೆಲ್ಲರೂ ನೀರಿನಲ್ಲಿ ಮುಳುಗುವ ಭೀತಿ ಎದುರಾಯಿತು. ಅದೇ ಸಂದರ್ಭದಲ್ಲೇ ಬಿಬಿಎಂಪಿ ಸಹಾಯವಾಣಿಗೆ ಕರೆ ಮಾಡಿದೆ. ಕೆಲ ಗಂಟೆಗಳ ಬಳಿಕ ಸ್ಥಳಕ್ಕೆ ಬಂದಿದ್ದ ಸಿಬ್ಬಂದಿ, ಧೈರ್ಯ ತುಂಬಿದರು. ಆ ನಂತರ ನೀರು ಸಹ ಕಡಿಮೆಯಾಯಿತು. ಬಳಿಕವೇ ಕಟ್ಟಡದಿಂದ ಹೊರಬಂದು ನಿಟ್ಟುಸಿರು ಬಿಟ್ಟೆವು.

-ಸುಮಿತ್ರಾ,ದತ್ತಾತ್ರೇಯ ದೇವಸ್ಥಾನ ಬಳಿಯ ನಿವಾಸಿ

***

ಮನೆಯೊಳಗೆ ತೇಲಿಬಂತು ಬೈಕ್

ಮಧ್ಯಾಹ್ನ 4 ಗಂಟೆ ಸುಮಾರಿಗೆ ಬಾಗಿಲು ಅಲುಗಾಡಿದ ಶಬ್ಧ ಕೇಳಿಸಿತು. ಏನಾಯಿತೆಂದು ನೋಡಲು ಬಾಗಿಲು ತೆರೆಯುತ್ತಿದ್ದಂತೆ ನೀರು ರಭಸವಾಗಿ ಒಳಗೆ ಹೋಗಿತು. 6 ಅಡಿಯಷ್ಟು ನೀರು ಕ್ಷಣ ಮಾತ್ರದಲ್ಲಿ ಇಡೀ ಮನೆಯನ್ನು ಆವರಿಸಿತು.

ಇಬ್ಬರು ಮಕ್ಕಳು ಹಾಗೂ ಪತ್ನಿ ಮನೆಯಲ್ಲಿದ್ದರು. ಎಲ್ಲರೂ ಮೂರು ಗಂಟೆ ನೀರಿನಲ್ಲೇ ನಿಂತುಕೊಳ್ಳುವಂತಾಯಿತು. ಮನೆ ಎದುರು ನಿಲ್ಲಿಸಿದ್ದ ಬೈಕ್ ಸಹ, ನೀರಿನ ಜೊತೆಯಲ್ಲೇ ತೇಲಿಕೊಂಡು ಮನೆಯೊಳಗೆ ಬಂದಿತ್ತು.

ಮನೆ ಪೂರ್ತಿ ನೀರು ತುಂಬಿಕೊಂಡು ನಾವೆಲ್ಲರೂ ಮುಳುಗಿ ಸಾಯುತ್ತೇವೆಂದು ಅನಿಸತೊಡಗಿತು. ‘ಕಾಪಾಡಿ. ಕಾಪಾಡಿ..’ ಎಂದು ಕೂಗಿದೆವು. ಅಕ್ಕ–ಪಕ್ಕದ ಮನೆಯಲ್ಲೂ ನೀರು ತುಂಬಿಕೊಂಡಿದ್ದರಿಂದ ಅವರು ಚೀರಾಡುತ್ತಿದ್ದರು. ಹೀಗಾಗಿ, ಆ ಕ್ಷಣಕ್ಕೆ ಸಹಾಯ ಮಾಡಲು ಯಾರೂ ಬರಲಿಲ್ಲ. ನೀರು ಕಡಿಮೆಯಾದ ಬಳಿಕವೇ ನಿಟ್ಟುಸಿರು ಬಿಟ್ಟೆವು. ಅಲ್ಪ–ಸ್ವಲ್ಪ ನೀರನ್ನು ನಾವೇ ಹೊರಗೆ ಹಾಕಿದೆವು. ಆದರೆ, ದುರ್ವಾಸನೆ ಇನ್ನು ಹೋಗಿಲ್ಲ

-ರವಿ,ದತ್ತಾತ್ರೇಯ ನಗರ ನಿವಾಸಿ

***

ಮನೆ ಇದ್ದರೂ ನಾವು ನಿರಾಶ್ರಿತರು

ಇಂಥ ಪ್ರವಾಹವನ್ನು ಕನಸು ಮನಸಿನಲ್ಲೂ ನೆನೆಸಿರಲಿಲ್ಲ. ದೊಡ್ಡ ಮನೆಗಳಿದ್ದರೂ ನಾವೆಲ್ಲರೂ ಇಂದು ನಿರಾಶ್ರಿತರು. ಬೀದಿಗೆ ಬಂದು ಅವರಿವರು ಕೊಟ್ಟ ತಿನಿಸು ಹಾಗೂ ಊಟ ತಿನ್ನುತ್ತಿದ್ದೇವೆ. ನಮ್ಮ ಬಳಿ ಈಗ ₹ 10 ಸಹ ಇಲ್ಲ

-ಪ್ರಕಾಶ್,ದತ್ತಾತ್ರೇಯ ನಗರ ನಿವಾಸಿ

***

ಅಂಗವಿಕಲ ಮಗನನ್ನು ಎತ್ತಿಕೊಂಡು ನಿಂತಿದ್ದೆ

ನನಗೆ ಇಬ್ಬರು ಮಕ್ಕಳು. ಒಬ್ಬ ಅಂಗವಿಕಲ. ರಾಜರಾಜೇಶ್ವರಿನಗರದಲ್ಲಿರುವ ತಾಯಿ ಮನೆಯಲ್ಲಿ ಇದ್ದೆ. ಸಂಜೆ ಏಕಾಏಕಿ ನೀರು ಮನೆಯೊಳಗೆ ನುಗ್ಗಿತು. ಅಂಗವಿಕಲ ಮಗನನ್ನು ಎತ್ತಿಕೊಂಡು ಎರಡು ಗಂಟೆ ನಿಂತಿದ್ದೆ.

ಇನ್ನೊಬ್ಬ ಮಗ ಹಾಗೂ ನನ್ನ ತಾಯಿಯನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲು ಪರದಾಡಿದೆ. ಆರಂಭದಲ್ಲಿ ಯಾರೊಬ್ಬರೂ ಸ್ಥಳಕ್ಕೆ ಬರಲಿಲ್ಲ.

-ಸುಕನ್ಯಾ,ರಾಜರಾಜೇಶ್ವರಿನಗರ ನಿವಾಸಿ

***

ನೀರಿನಲ್ಲೇ ದಿನಸಿ: ₹ 3 ಲಕ್ಷದಷ್ಟು ನಷ್ಟ

ಗುರುದತ್ತ ಲೇಔಟ್‌ನಲ್ಲಿ ದಿನಸಿ ಅಂಗಡಿ ಇಟ್ಟುಕೊಂಡಿದ್ದೇನೆ. ಶುಕ್ರವಾರ ಸಂಜೆ ಇಡೀ ಅಂಗಡಿ ನೀರಿನಿಂದ ಆವೃತ್ತಗೊಂಡಿತ್ತು. ನೀರು ನುಗ್ಗಿದ್ದರಿಂದ ದಿನಸಿಯೆಲ್ಲ ಹಾಳಾಗಿದೆ. ₹ 3 ಲಕ್ಷದಷ್ಟು ನಷ್ಟ ಉಂಟಾಗಿದೆ.

-ರವಿ,ದಿನಸಿ ವ್ಯಾಪಾರಿ

***

​‘2 ತಾಸುಗಳಲ್ಲಿ 125 ಮಿ.ಮೀ ಮಳೆ’

‘ನಗರದ ದಕ್ಷಿಣ ಭಾಗದಲ್ಲಿ ಶುಕ್ರವಾರ ಕೇವಲ ಎರಡು–ಮೂರು ತಾಸುಗಳಲ್ಲಿ 120 ರಿಂದ 125 ಮಿ.ಮೀ ಮಳೆಯಾಗಿದೆ. ಹಾಗಾಗಿ ನೀರಿನ ಹರಿವಿನ ಮಟ್ಟ ಹೆಚ್ಚಾಗಿ ಈ ಪ್ರದೇಶದ ರಾಜಕಾಲುವೆ ಉಕ್ಕಿಹರಿದಿದೆ’ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದರು.

‘ಹೆಚ್ಚು ಸಮಸ್ಯೆ ಎದುರಾದ ಪ್ರದೇಶಗಳಲ್ಲಿ ಪಾಲಿಕೆ ಹಾಗೂ ಎನ್‌ಡಿಆರ್‌ಎಫ್ ತಂಡದಸಿಬ್ಬಂದಿ ರಾತ್ರಿಯೇ ಪರಿಹಾರ ಕಾರ್ಯ ಕೈಗೊಂಡಿದೆ. ಸಂತ್ರಸ್ತರಿಗೆ ರಾತ್ರಿ ಊಟ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಇನ್ನೆರಡು ದಿನ ಇದನ್ನು ಮುಂದುವರಿಸಲಾಗುತ್ತದೆ. ಪೌರಕಾರ್ಮಿಕರು, ಗ್ಯಾಂಗ್‌ಮನ್‌ಗಳು ರಸ್ತೆಯಲ್ಲಿ ತುಂಬಿರುವ ಹೂಳನ್ನು ತೆರವು ಮಾಡಿ ಸ್ವಚ್ಛಗೊಳಿಸಿ ಬ್ಲೀಚಿಂಗ್ ಪೌಡರ್ ಹಾಗೂ ಸೋಂಕುನಿವಾರಕ ಸಿಂಪಡಣೆ ಮಾಡಿದ್ದಾರೆ’ ಎಂದು ಮಾಹಿತಿ ನೀಡಿದರು.

ಹೊಸಕೆರೆಹಳ್ಳಿ ವಾರ್ಡ್‌ನ ರಾಜಕಾಲುವೆಗಳು 20 ವರ್ಷಗಳಷ್ಟು ಹಳೆಯವು. ಅವುಗಳನ್ನು ಬಲಪಡಿಸಲು ಕಾಂಕ್ರಿಟ್ ತಡೆಗೋಡೆ ನಿರ್ಮಿಸಲಾಗುತ್ತಿದೆ.ಸುತ್ತಲೂ ಇಳಿಜಾರು ಪ್ರದೇಶಗಳಿರುವುದರಿಂದ ಆಸುಪಾಸಿನ ಮಳೆ ನೀರೆಲ್ಲ ಇದೇ ಕಾಲುವೆಗೆ ಹರಿದು ಬರುತ್ತದೆ. ನಗರದ ದಕ್ಷಿಣ ಭಾಗದ ವ್ಯಾಪ್ತಿಯ ಬಹುತೇಕ ಮಳೆ ನೀರು ಇದೇ ರಾಜಕಾಲುವೆ ಮೂಲಕ ಹರಿದು ಹೋಗುತ್ತದೆ. ಮಳೆಯಿಂದಾಗಿ ರಾಜಕಾಲುವೆಯ ತಡೆಗೋಡೆ ಬಿದ್ದಿದ್ದು, ಅದನ್ನು ದುರಸ್ತಿಪಡಿಸುವ ಕಾಮಗಾರಿ ಪ್ರಗತಿಯಲ್ಲಿದೆ. ತಡೆಗೋಡೆಗೆ ಅಳವಡಿಸಿರುವ ಹಳೆಯ ಕಲ್ಲುಗಳನ್ನು ಸಂಪೂರ್ಣ ತೆರವುಗೊಳಿಸಿ ಅಲ್ಲಿ ಕಾಂಕ್ರಿಟ್ ತಡೆಗೋಡೆ ನಿರ್ಮಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT