ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ₹168 ಕೋಟಿ ಮೌಲ್ಯದ ಇ–ಬ್ಯಾಂಕ್ ಗ್ಯಾರಂಟಿ ನಕಲಿ

* ಸರ್ಕಾರದ ಕಾಮಗಾರಿ ಗುತ್ತಿಗೆ ಪಡೆಯಲು ಬಳಕೆ * ಎನ್‌ಇಎಸ್ಎಲ್‌ ಅಧಿಕಾರಿಗಳು ನೀಡಿದ್ದ ದೂರು
Published 26 ಮಾರ್ಚ್ 2024, 23:20 IST
Last Updated 26 ಮಾರ್ಚ್ 2024, 23:20 IST
ಅಕ್ಷರ ಗಾತ್ರ

ಬೆಂಗಳೂರು:  ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಕಾಮಗಾರಿ ಗಳನ್ನು ಗುತ್ತಿಗೆ ಪಡೆಯಲು ನಕಲಿ ಎಲೆಕ್ಟ್ರಾನಿಕ್‌ ಬ್ಯಾಂಕ್ ಗ್ಯಾರಂಟಿ (ಇ–ಬಿಜಿ) ನೀಡುತ್ತಿದ್ದ ಜಾಲ ಭೇದಿಸಿರುವ ಸಿಸಿಬಿ ಸೈಬರ್ ಕ್ರೈಂ ಪೊಲೀಸರು, ಲೆಕ್ಕ ಪರಿಶೋಧಕ (ಸಿಎ) ಆಶೀಷ್ ಸಕ್ಸೇನಾ ಅಲಿಯಾಸ್ ರಾಯ್ (45) ಎಂಬುವವರನ್ನು ಬಂಧಿಸಿದ್ದಾರೆ.

‘ಉತ್ತರ ಪ್ರದೇಶದ ಆಶೀಷ್, ದೇಶದ ವಿವಿಧ ಗುತ್ತಿಗೆದಾರರಿಗೆ ನಕಲಿ ಇ–ಬ್ಯಾಂಕ್ ಗ್ಯಾರಂಟಿ ಮಾಡಿಕೊಡುತ್ತಿದ್ದರು. ಅದೇ ಮಾಹಿತಿಯನ್ನು ಗುತ್ತಿಗೆದಾರರು, ನ್ಯಾಷನಲ್ ಇ-ಗವರ್ನೆನ್ಸ್ ಸರ್ವೀಸಸ್ ಲಿಮಿಟೆಡ್‌ (ಎನ್‌ಇಎಸ್ಎಲ್‌) ಜಾಲತಾಣದಲ್ಲಿ ಅಪ್‌ಲೋಡ್ ಮಾಡುತ್ತಿದ್ದರು’ ಎಂದು ಪೊಲೀಸ್ ಕಮಿಷನರ್ ಬಿ. ದಯಾನಂದ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಬ್ಯಾಂಕ್ ಗ್ಯಾರಂಟಿಗಳನ್ನು ಪರಿಶೀಲಿಸಿ ಪ್ರಮಾಣೀಕರಿಸುವ ಜವಾಬ್ದಾರಿ ಎನ್‌ಇಎಸ್‌ಎಲ್ ಅಧಿಕಾರಿಗಳ ಮೇಲಿದೆ. ಇತ್ತೀಚೆಗೆ ದೇಶದ 11 ಗುತ್ತಿಗೆದಾರರು ಅಪ್‌ಲೋಡ್ ಮಾಡಿದ್ದ ₹168.13 ಕೋಟಿ ಮೌಲ್ಯದ ಇ–ಬ್ಯಾಂಕ್ ಗ್ಯಾರಂಟಿಯನ್ನು ಅಧಿಕಾರಿಗಳು ಪರಿಶೀಲಿಸಿ ದ್ದರು. ಐಸಿಐಸಿಐ ಬ್ಯಾಂಕ್ ಹಾಗೂ ಸೌತ್ ಇಂಡಿಯಾ ಬ್ಯಾಂಕ್ ಹೆಸರಿನಲ್ಲಿದ್ದ ಇ–ಬ್ಯಾಂಕ್ ಗ್ಯಾರಂಟಿಗಳು ನಕಲಿ ಎಂಬುದು ಗೊತ್ತಾಗಿತ್ತು. ಗುತ್ತಿಗೆದಾರರ ಪಟ್ಟಿ ಸಮೇತ ಫೆಬ್ರುವರಿ 7ರಂದು ಸೈಬರ್ ಕ್ರೈಂ ಠಾಣೆಗೆ ಅಧಿಕಾರಿಗಳು ದೂರು ನೀಡಿದ್ದರು’ ಎಂದು ಹೇಳಿದರು.

ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧನ: ‘ನಕಲಿ ಇ–ಬ್ಯಾಂಕ್ ಗ್ಯಾರಂಟಿ ಜಾಲದ ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು. ಕುವೈತ್‌ನಲ್ಲಿದ್ದ ಆರೋಪಿ ಆಶೀಷ್ ಸಕ್ಸೇನಾ ಬಂಧನಕ್ಕೆ ಲುಕ್‌ ಔಟ್ ನೋಟಿಸ್‌ ಹೊರಡಿಸಲಾಗಿತ್ತು. ಅವರು, ಮಾರ್ಚ್ 13ರಂದು ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ವಲಸೆ ಅಧಿಕಾರಿಗಳ ಸಹಾಯದಿಂದ ಆರೋಪಿಯನ್ನು ಬಂಧಿಸಿ ನಗರಕ್ಕೆ ಕರೆತಲಾಗಿದೆ’ ಎಂದು ಬಿ. ದಯಾನಂದ್ ತಿಳಿಸಿದರು.

‘ಆರೋಪಿಯಿಂದ 2 ಲ್ಯಾಪ್‌ಟಾಪ್, 6 ಮೊಬೈಲ್, 1 ಪೆನ್‌ಡ್ರೈವ್, 10 ಬ್ಯಾಂಕ್‌ ಚೆಕ್‌ ಪುಸ್ತಕಗಳನ್ನು ಜಪ್ತಿ ಮಾಡಲಾಗಿದೆ. ಜಾಲದ ಇನ್ನೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ. ಇದೊಂದು ವ್ಯವಸ್ಥಿತ ಜಾಲವಾಗಿದ್ದು, ಈ ಬಗ್ಗೆ ಮತ್ತಷ್ಟು ಮಾಹಿತಿ ಸಂಗ್ರಹಿಸಲು ತನಿಖೆ ಮುಂದು ವರಿಸಲಾಗಿದೆ’ ಎಂದು ಹೇಳಿದರು.

ಲೆಕ್ಕ ಪರಿಶೋಧಕರ ಮೂಲಕ ಪರಿಚಯ: ‘ಆರೋಪಿ ಆಶೀಷ್, ದೇಶದ ವಿವಿಧ ಲೆಕ್ಕ ಪರಿಶೋಧಕರ ಜೊತೆ ಒಡನಾಟ ಹೊಂದಿದ್ದರು. ಅವರ ಮೂಲಕ ಗುತ್ತಿಗೆದಾರರನ್ನು ಪರಿಚಯ ಮಾಡಿಕೊಳ್ಳುತ್ತಿದ್ದರು.

ಸರ್ಕಾರದ ಕಾಮಗಾರಿ ಗುತ್ತಿಗೆ ಪಡೆಯಲು ಪ್ರಯತ್ನಿಸುತ್ತಿದ್ದ ಗುತ್ತಿಗೆ ದಾರರಿಗೆ, ‘ಯಾವುದೇ ದಾಖಲೆ ಹಾಗೂ ಮುಂಗಡ ಹಣವಿಲ್ಲದೇ ಇ–ಬ್ಯಾಂಕ್ ಗ್ಯಾರಂಟಿ ಕೊಡಿಸುವುದಾಗಿ ಆಮಿಷವೊಡ್ಡುತ್ತಿದ್ದರು. ₹ 25 ಲಕ್ಷದಿಂದ ₹ 50 ಲಕ್ಷ ಕಮಿಷನ್‌ ನೀಡುವಂತೆ ಬೇಡಿಕೆ ಇರಿಸುತ್ತಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಆರೋಪಿ ಮಾತು ನಂಬುತ್ತಿದ್ದ ಗುತ್ತಿಗೆದಾರರು, ವೈಯಕ್ತಿಕ ಮಾಹಿತಿ ಯನ್ನು ಆಶೀಷ್‌ಗೆ ಕಳುಹಿಸುತ್ತಿದ್ದರು. ಆರೋಪಿ ಸೃಷ್ಟಿಸಿಕೊಟ್ಟ ನಕಲಿ ಇ–ಬ್ಯಾಂಕ್ ಗ್ಯಾರಂಟಿ ದಾಖಲೆಗಳ ನೆರವಿನಿಂದ ಗುತ್ತಿಗೆದಾರರು ಎನ್‌ಇಎಸ್‌ಎಲ್ ಜಾಲತಾಣದಲ್ಲಿ ತಮ್ಮ ಹೆಸರಿನಲ್ಲಿ ಖಾತೆ ತೆರೆಯುತ್ತಿದ್ದರು. ಗ್ಯಾರಂಟಿ ಮಾಹಿತಿಯನ್ನೂ ಅಪ್‌ಲೋಡ್ ಮಾಡುತ್ತಿದ್ದರು’ ಎಂದು ಹೇಳಿದರು.

ಬ್ಯಾಂಕ್ ಅಧಿಕಾರಿಗಳು, ಸಿ.ಎ.ಗಳ ವಿಚಾರಣೆ: ‘ಪ್ರಕರಣದಲ್ಲಿ ಕೆಲ ಬ್ಯಾಂಕ್ ಅಧಿಕಾರಿಗಳು ಹಾಗೂ ಲೆಕ್ಕ ಪರಿಶೋಧಕರು (ಸಿ.ಎ) ಶಾಮೀಲಾಗಿ ರುವ ಮಾಹಿತಿ ಇದೆ. ಅವರನ್ನೂ ವಿಚಾರಣೆ ಮಾಡಲಾಗುವುದು’ ಎಂದು ಪೊಲೀಸರು ತಿಳಿಸಿದರು.

‘₹100 ಕೋಟಿ ಗ್ಯಾರಂಟಿ ನೀಡಿದ್ದ ಗುತ್ತಿಗೆದಾರ’

‘ಕೇಂದ್ರ ಸರ್ಕಾರದ ಕಾಮಗಾರಿಯೊಂದನ್ನು ಗುತ್ತಿಗೆ ಪಡೆಯಲು ಮುಂದಾಗಿದ್ದ ಕೇರಳದ ಗುತ್ತಿಗೆದಾರರೊಬ್ಬರು ಆರೋಪಿ ಆಶೀಷ್‌ ಅವರನ್ನು ಸಂಪರ್ಕಿಸಿದ್ದರು. ಅವರಿಗೆ ಕಮಿಷನ್ ನೀಡಿ ₹ 100 ಕೋಟಿ ಮೌಲ್ಯದ ಇ–ಬ್ಯಾಂಕ್ ಗ್ಯಾರಂಟಿ ಪಡೆದಿದ್ದರು. ಅದನ್ನೇ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದರು. ಇದೀಗ ಅವರಿಂದಲೂ ಹೇಳಿಕೆ ಪಡೆಯಲಾಗಿದೆ. ಆಶೀಷ್‌ ತಮ್ಮನ್ನು ವಂಚಿಸಿರುವುದಾಗಿ ಅವರು ಹೇಳಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಏನಿದು ಇ–ಬ್ಯಾಂಕ್ ಗ್ಯಾರಂಟಿ ?

‘ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯಾವುದೇ ಕಾಮಗಾರಿಗಳ ಗುತ್ತಿಗೆ ಪಡೆಯಬೇಕಾದರೆ ಗುತ್ತಿಗೆದಾರರು ಕಡ್ಡಾಯವಾಗಿ ಇ–ಬ್ಯಾಂಕ್ ಗ್ಯಾರಂಟಿ ನೀಡಬೇಕು. ದೇಶದ 22 ಬ್ಯಾಂಕ್‌ಗಳಲ್ಲಿ ಇ–ಬ್ಯಾಂಕ್‌ ಗ್ಯಾರಂಟಿ ಸೇವೆ ಲಭ್ಯವಿದೆ. ಗುತ್ತಿಗೆದಾರ ನಿಗದಿತ ಸಮಯಕ್ಕೆ ಕಾಮಗಾರಿ ಮುಗಿಸದಿದ್ದರೆ ಅಥವಾ ಕೆಲಸ ಪೂರ್ಣಗೊಳಿಸದಿದ್ದರೆ ಇ–ಬ್ಯಾಂಕ್ ಗ್ಯಾರಂಟಿ ಮೂಲಕ ಹಣ ಜಪ್ತಿ ಮಾಡಲು ಸರ್ಕಾರಕ್ಕೆ ಅವಕಾಶವಿರುತ್ತದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT