ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಇ– ಪ್ರಾಫಿಟ್ ಶ್ಯೂರ್’ ಸಂಸ್ಥಾಪಕ ಬಂಧನ

* ಆರ್ಥಿಕ ಸಲಹೆ ನೆಪದಲ್ಲಿ ವಂಚನೆ * ಮೂರು ಠಾಣೆಗಳಲ್ಲಿ ದಾಖಲಾಗಿದ್ದ ಎಫ್‌ಐಆರ್
Last Updated 29 ನವೆಂಬರ್ 2021, 19:31 IST
ಅಕ್ಷರ ಗಾತ್ರ

ಬೆಂಗಳೂರು: ಆರ್ಥಿಕ ಸಲಹೆ ನೀಡುವ ನೆಪದಲ್ಲಿ ಸಾರ್ವಜನಿಕರನ್ನು ಪರಿಚಯಿಸಿಕೊಂಡು ವಿವಿಧ ಶುಲ್ಕದ ರೂಪದಲ್ಲಿ ಹಣ ಸಂಗ್ರಹಿಸಿ ವಂಚಿಸಿದ್ದ ಆರೋಪದಡಿ ‘ಇ– ಪ್ರಾಫಿಟ್ ಶ್ಯೂರ್’ ಜಾಲತಾಣದ ಸಂಸ್ಥಾಪಕ ಸಿ.ಎಸ್.ನಿಶ್ಚಿತ್ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ಸ್ಟೇಕ್ ಮ್ಯಾನೇಜ್‌ಮೆಂಟ್ ಸಲ್ಯೂಷನ್ಸ್’ ಕಂಪನಿಯ ಪಾಲುದಾರನಾಗಿದ್ದ ನಿಶ್ಚಿತ್, ಅದೇ ಕಂಪನಿಯಡಿ ಜಾಲತಾಣ ಅಭಿವೃದ್ಧಿಪಡಿಸಿದ್ದ. ಸಾಮಾಜಿಕ ಮಾಧ್ಯಮ ಹಾಗೂ ಜಾಲತಾಣದ ಮೂಲಕ ಜನರನ್ನು ಸಂಪರ್ಕಿಸಿ ವಂಚಿಸುತ್ತಿದ್ದ. ಆತ ಹಾಗೂ ಇತರರ ವಿರುದ್ಧ ನಗರದ ಠಾಣೆಗಳಲ್ಲಿ ಮೂರು ಹಾಗೂ ಕೇರಳದಲ್ಲಿ ಒಂದು ಪ್ರಕರಣ ದಾಖಲಾಗಿತ್ತು’ ಎಂದು ಸಿಸಿಬಿ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ವಿಮೆ ಮಾಡಿಸಲು ಇಚ್ಛಿಸುವ ಗ್ರಾಹಕರ ಮಾಹಿತಿ ನೀಡುವುದಾಗಿ ಹೇಳಿದ್ದ ಆರೋಪಿಗಳು, ಎಲ್‌ಐಸಿ ಏಜೆಂಟರೊಬ್ಬರಿಂದ ₹ 14 ಲಕ್ಷ ಪಡೆದಿದ್ದರು. ನಿಗದಿತ ದಿನದಂದು ಮಾಹಿತಿ ನೀಡಿರಲಿಲ್ಲ. ಹಣವನ್ನೂ ಮರಳಿಸಿರಲಿಲ್ಲ. ನೊಂದ ಏಜೆಂಟ್, ಬೆಂಗಳೂರು ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ನಿಶ್ಚಿತ್ ತಲೆಮರೆಸಿಕೊಂಡಿದ್ದರು. ಇತ್ತೀಚೆಗೆ ಸಿಕ್ಕ ಸುಳಿವು ಆಧರಿಸಿ ಆತನನ್ನು ಸೆರೆ ಹಿಡಿಯಲಾಗಿದೆ’ ಎಂದೂ ತಿಳಿಸಿದರು.

ಕರೆ ಮಾಡಲೆಂದು ಉದ್ಯೋಗಿಗಳ ನೇಮಕ: ‘ರಿಯಲ್‌ ಎಸ್ಟೇಟ್, ತೆರಿಗೆ ಯೋಜನೆ, ಆರ್ಥಿಕ ಯೋಜನೆ, ಸಾಲ, ಹಣಕಾಸಿನ ನಿರ್ವಹಣೆ ಹಾಗೂ ಆಸಕ್ತ ಗ್ರಾಹಕರ ಮಾಹಿತಿ ಹಂಚಿಕೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಸಲಹೆ ನೀಡುವುದಾಗಿ ಆರೋಪಿಗಳು ಹೇಳುತ್ತಿದ್ದರು. ಅದನ್ನು ನಂಬಿ ಸಾವಿರಾರು ಮಂದಿ ಆರೋಪಿಗಳನ್ನು ಸಂಪರ್ಕಿಸಿದ್ದರು’ ಎಂದೂ ಅಧಿಕಾರಿ ಹೇಳಿದರು.

‘ತಮ್ಮನ್ನು ಸಂಪರ್ಕಿಸುವ ಜನರಿಗೆ ನಿತ್ಯವೂ ಕರೆ ಮಾಡಿ ಮಾತುಕತೆ ನಡೆಸುವುದಕ್ಕಾಗಿ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಜನರ ವೈಯಕ್ತಿಕ ವಿವರ ಪಡೆಯುತ್ತಿದ್ದ ಆರೋಪಿಗಳು, ಅದನ್ನು ನಿಶ್ಚಿತ್‌ಗೆ ನೀಡುತ್ತಿದ್ದರು. ಆರ್ಥಿಕವಾಗಿ ಸದೃಢವಾದ ವ್ಯಕ್ತಿಗಳ ಜೊತೆ ಮಾತನಾಡುತ್ತಿದ್ದ ಆರೋಪಿ, ಲಾಭದ ಆಮಿಷವೊಡ್ಡಿ ಹೂಡಿಕೆ ಹೆಸರಿನಲ್ಲಿ ಹಣ ಪಡೆಯುತ್ತಿದ್ದ’ ಎಂದೂ ತಿಳಿಸಿದರು.

ವಿಮೆಗೆ ಗ್ರಾಹಕರ ಮಾಹಿತಿ ಮಾರಾಟ: ‘ವಿಮೆ ಮಾಡಿಸಲು ಸಿದ್ಧವಿರುವವರ ಗ್ರಾಹಕರ ಪಟ್ಟಿ ತನ್ನ ಬಳಿ ಇರುವುದಾಗಿ ಹೇಳುತ್ತಿದ್ದ ಆರೋಪಿ, ಏಜೆಂಟರನ್ನು ಸಂಪರ್ಕಿಸುತ್ತಿದ್ದ. ಪಟ್ಟಿ ನೀಡುವುದಾಗಿ ಹೇಳಿ ಲಕ್ಷಾಂತರ ರೂಪಾಯಿ ಹಣ ಪಡೆಯುತ್ತಿದ್ದ. ನಂತರ ಯಾವುದೇ ಪಟ್ಟಿ ನೀಡದೇ ವಂಚಿಸುತ್ತಿದ್ದ’ ಎಂದೂ ಸಿಸಿಬಿ ಪೊಲೀಸ್ ಅಧಿಕಾರಿ ವಿವರಿಸಿದರು.

‘ಕೃತ್ಯಕ್ಕೆಂದೇ ಆರೋಪಿಗಳು, ನಕಲಿ ಇ–ಮೇಲ್ ಐಡಿ ಸೃಷ್ಟಿಸಿದ್ದ ಸಂಗತಿ ತನಿಖೆಯಿಂದ ಗೊತ್ತಾಗಿದೆ. ಮತ್ತಷ್ಟು ಮಂದಿ ಕೃತ್ಯದಲ್ಲಿ ಭಾಗಿಯಾಗಿರುವ ಮಾಹಿತಿ ಇದ್ದು, ತನಿಖೆ ಮುಂದುವರಿದಿದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT