ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾಯತ್ತತೆ ದೊರೆತರೂ ಆರ್ಥಿಕ ಸಂಕಷ್ಟ

ಅತಂತ್ರ ಸ್ಥಿತಿಯಲ್ಲಿ ಯುವಿಸಿಇ ಸಂಸ್ಥೆ: ವೇತನಕ್ಕೆ ಸಿಬ್ಬಂದಿ ಪರದಾಟ
Last Updated 28 ಮಾರ್ಚ್ 2023, 19:57 IST
ಅಕ್ಷರ ಗಾತ್ರ

ಬೆಂಗಳೂರು: ಐಐಟಿ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಆಶಯ ಹೊಂದಿದ್ದ ವಿಶ್ವವಿದ್ಯಾಲಯವಿಶ್ವೇಶ್ವರಯ್ಯ ಎಂಜಿನಿಯರಿಂಗ್‌ ಕಾಲೇಜಿಗೆ (ಯುವಿಸಿಇ) ಈಗ ಆರ್ಥಿಕ ಸಂಕಷ್ಟ ಎದುರಾಗಿದೆ.

1964ರಿಂದ ಬೆಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿದ್ದ ಈ ಕಾಲೇಜಿಗೆ 2022ರ ಮಾರ್ಚ್‌ 25ರಿಂದ ಸ್ವಾಯತ್ತತೆ ನೀಡಿದ್ದರೂ, ರಾಜ್ಯ ಸರ್ಕಾರ ಅನುದಾನ ನೀಡಲು ಹಿಂದೇಟು ಹಾಕುತ್ತಿದೆ. ಇದರಿಂದ, ಕಾಲೇಜು ಅತಂತ್ರ ಸ್ಥಿತಿಗೆ ಸಿಲುಕಿದೆ.

ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮೀಣ ಪ್ರದೇಶದ ಬಡವರ್ಗದ ವಿದ್ಯಾರ್ಥಿಗಳೇ ಪ್ರವೇಶ ಪಡೆಯುವ ಈ ಕಾಲೇಜಿಗೆ ಅನುದಾನ ಒದಗಿಸದೆ ಸ್ವಯಂ ಹಣಕಾಸು ನಿರ್ವಹಣೆಯ ಸಂಸ್ಥೆಯನ್ನಾಗಿ ಮಾಡುವ ಯೋಜನೆ ಇದಾಗಿದೆ ಎಂದು ದೂರಲಾಗಿದೆ. ಸದ್ಯದ ಗೊಂದಲಗಳಿಂದಾಗಿ ಮಾರ್ಚ್‌ ತಿಂಗಳ ವೇತನವೂ ಪ್ರಾಧ್ಯಾಪಕರಿಗೆ ಮತ್ತು ಬೋಧಕೇತರ ಸಿಬ್ಬಂದಿಗೆ ದೊರೆಯುವುದು ಕಷ್ಟಸಾಧ್ಯವಾಗಿದೆ.

ಇದೇ ಮಾರ್ಚ್‌ 31ರ ನಂತರ ಬೆಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಯಿಂದ ಬೇರ್ಪಟ್ಟು ಯುವಿಸಿಇ ಸಂಪೂರ್ಣ ಪ್ರತ್ಯೇಕ ಸಂಸ್ಥೆಯಾಗಲಿದೆ. ಇದರಿಂದ, ಅತಿಥಿ ಉಪನ್ಯಾಸಕರು ಮತ್ತು ಹೊರಗುತ್ತಿಗೆ ಸಿಬ್ಬಂದಿಯ ವೇತನ ಮತ್ತು ದಿನನಿತ್ಯದ ವೆಚ್ಚಗಳನ್ನು ಭರಿಸುವುದು ಕಷ್ಟವಾಗಲಿದೆ. ಹೀಗಾಗಿ, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಹಿತದೃಷ್ಟಿಯಿಂದ 2024ರ ಮಾರ್ಚ್‌ 31ರವರೆಗೂ ಬೆಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲೇ ಉಳಿಸಿಕೊಳ್ಳುವಂತೆ ಯುವಿಸಿಇ ಪ್ರಾಧ್ಯಾಪಕರ ಸಂಘವು ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಕುಲಪತಿ ಅವರಿಗೆ ಪತ್ರ ಬರೆದು ಮನವಿ ಮಾಡಿತ್ತು.

ಸಂಸ್ಥೆಯಲ್ಲಿ 78 ಪ್ರಾಧ್ಯಾಪಕರು ಮತ್ತು 35 ಬೋಧಕೇತರ ಸಿಬ್ಬಂದಿ ಇದ್ದಾರೆ. ಇವರಲ್ಲಿ ಬಹುತೇಕ ಮಂದಿ ಸರಾಸರಿ 55 ವರ್ಷದವರಾಗಿದ್ದು, ನಿವೃತ್ತಿಯ ಸನಿಹದಲ್ಲಿದ್ದಾರೆ. ಇವರಿಗೆ ನಿವೃತ್ತಿ ನಂತರ ಸೌಲಭ್ಯಗಳನ್ನು ಒದಗಿಸಬೇಕಾಗುತ್ತದೆ. ಸರ್ಕಾರದ ಅನುದಾನ, ಹಳೆ ವಿದ್ಯಾರ್ಥಿಗಳ ಸಂಘ ಮತ್ತು ಉದ್ಯಮ ವಲಯದ ಕೊಡುಗೆಯಿಂದ ಹಣಕಾಸಿನ ಸ್ಥಿರತೆ ಸಾಧಿಸಲು ಯುವಿಸಿಇಗೆ ಕನಿಷ್ಠ ಇನ್ನೂ ಒಂದು ವರ್ಷ ಬೇಕಾಗುತ್ತದೆ ಎಂದು ಸಂಘವು ಪ್ರತಿಪಾದಿಸಿತ್ತು.

ಆದರೆ, ಬೆಂಗಳೂರು ವಿಶ್ವವಿದ್ಯಾಲಯವು ಹಣಕಾಸಿನ ಕೊರತೆ ಮತ್ತು ಸರ್ಕಾರದ ನೀತಿಗಳ ಕಾರಣ ನೀಡಿ, ಪ್ರಾಧ್ಯಾಪಕರ ಸಂಘದ ಕೋರಿಕೆಯನ್ನು ತಿರಸ್ಕರಿಸಿದೆ.

ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರಿಗೆ ಪತ್ರ ಬರೆದಿರುವ ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವರು, ‘ಯುವಿಸಿಇ ಅನ್ನು ಸ್ವಾಯತ್ತ ಸಂಸ್ಥೆಯಾಗಿ ಘೋಷಿಸಿರುವುದರಿಂದ ಇದೇ ಮಾರ್ಚ್‌ 31ರಿಂದಲೇ ವಿಶ್ವವಿದ್ಯಾಲಯದ ನಿಯಂತ್ರಣದಿಂದ ಮುಕ್ತವಾಗಲಿದೆ. ಹೀಗಾಗಿ, ಯುವಿಸಿಇ ಬೋಧಕ, ಬೋಧಕೇತರ ಸಿಬ್ಬಂದಿಗೆ ಮಾರ್ಚ್ ತಿಂಗಳ ವೇತನ ಪಾವತಿಸಲು ಅಗತ್ಯವಿರುವಷ್ಟು ಅನುದಾನವನ್ನು ಸರ್ಕಾರ ನೀಡಿಲ್ಲ. ಹೀಗಾಗಿ, ಮಾರ್ಚ್ ತಿಂಗಳ ವೇತನವನ್ನು ಬೆಂಗಳೂರು ವಿಶ್ವವಿದ್ಯಾಲಯದ ವತಿಯಿಂದ ಭರಿಸಲು ಸಾಧ್ಯವಿಲ್ಲ’ ಎಂದು ವಿವರಿಸಿದ್ದರು.

ಧಾರವಾಡದಲ್ಲಿ ಐಐಟಿ ಸ್ಥಾಪಿಸಲು ಸುಮಾರು ₹834 ಕೋಟಿ ಅನುದಾನ ಒದಗಿಸಲಾಗಿದೆ. ಜತೆಗೆ ಪ್ರತಿ ವರ್ಷ ₹200 ಕೋಟಿ ಅನುದಾನ ದೊರೆಯಲಿದೆ. ಆದರೆ, ಇಲ್ಲಿ ಅನುದಾನವನ್ನೇ ನೀಡುತ್ತಿಲ್ಲ. ಬೆಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿದ್ದರೆ ಉತ್ತಮವಾಗಿತ್ತು. 105 ವರ್ಷಗಳ ಸಂಸ್ಥೆಗೆ ಇಂತಹ ಸ್ಥಿತಿ ಬರಬಾರದಿತ್ತು ಎಂದು ಸಂಸ್ಥೆಯ ಹಳೆಯ ವಿದ್ಯಾರ್ಥಿಯೊಬ್ಬರು ಕಳವಳ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT