ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

KSRTC ‘ವಿದ್ಯಾಚೇತನ’ಕ್ಕೆ ಅರ್ಜಿಗಳ ಮಹಾಪೂರ!

ವಿದ್ಯಾರ್ಥಿ ವೇತನ ಹೆಚ್ಚಳ, ಆನ್‌ಲೈನ್‌ ಅರ್ಜಿ ಸಲ್ಲಿಸುವ ವಿಧಾನಗಳ ಪರಿಣಾಮ
Published 4 ನವೆಂಬರ್ 2023, 21:06 IST
Last Updated 5 ನವೆಂಬರ್ 2023, 9:25 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ನೌಕರರ ಮಕ್ಕಳ ವಿದ್ಯಾಭ್ಯಾಸ ಪ್ರೋತ್ಸಾಹಿಸಲು ವಿದ್ಯಾಚೇತನ ಯೋಜನೆಯಡಿ ನೀಡುವ ಮೊತ್ತ ನಾಲ್ಕೈದು ಪಟ್ಟು ಏರಿಕೆಯಾಗಿರುವುದು ಮತ್ತು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಿರುವುದರಿಂದ ಫಲಾನುಭವಿಗಳಲ್ಲಿ ಹುರುಪು ತುಂಬಿದೆ. ಪರಿಣಾಮವಾಗಿ ಪ್ರತಿ ವರ್ಷ ನೂರರ ಗಡಿ ಮುಟ್ಟದ ಅರ್ಜಿಗಳ ಸಂಖ್ಯೆ, ಈ ವರ್ಷ 4 ಸಾವಿರದ ಹತ್ತಿರ ತಲುಪಿದೆ.

ವರ್ಷಕ್ಕೆ ₹2 ಲಕ್ಷದಿಂದ ₹3 ಲಕ್ಷವರೆಗೆ ವಿದ್ಯಾರ್ಥಿವೇತನ ನೀಡಲಾಗುತ್ತಿತ್ತು. ಈ ವರ್ಷ ಇಲ್ಲಿವರೆಗೆ ₹ 1.02 ಕೋಟಿ ನೀಡಲಾಗಿದೆ. ಮಾತ್ರವಲ್ಲ, ಇನ್ನೂ ಬಹಳಷ್ಟು ಅರ್ಜಿಗಳು ಬಾಕಿ ಉಳಿದಿವೆ. ಈ ಅಂಶಗಳು ‘ವಿದ್ಯಾಚೇತನ’ದಲ್ಲಿ ಉಂಟಾಗಿರುವ ಭಾರಿ ಬದಲಾವಣೆಗೆ ಸಾಕ್ಷಿಯಾಗಿವೆ.

ಪ್ರತಿ ವರ್ಷ ಒಟ್ಟು ಅರ್ಜಿಗಳ ಸಂಖ್ಯೆ 70–80 ಇರುತ್ತಿದ್ದರೆ ಈ ಬಾರಿ ಉನ್ನತ ಶಿಕ್ಷಣದ ವಿದ್ಯಾರ್ಥಿಗಳೇ 72 ಮಂದಿ ಇದ್ದಾರೆ. ಎಂಬಿಬಿಎಸ್‌– 55, ಐಐಟಿ – 3, ಪಿ.ಎಚ್‌ಡಿ – 3, ವಿದೇಶದಲ್ಲಿ ವ್ಯಾಸಂಗ ಮಾಡುತ್ತಿರುವ ನಾಲ್ವರು ಸೇರಿದಂತೆ ಒಟ್ಟು 3,979 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ.

ಐಟಿಐ, ಜೆಒಸಿ, ಬಿಇ, ಬಿವಿಎಸ್‌ಸಿ, ಬಿಎಚ್‌ಎಸ್‌ಸಿ, ಬಿಎಸ್‌ಸಿ ಸೇರಿದಂತೆ ವಿವಿಧ ಪದವಿ ವಿದ್ಯಭ್ಯಾಸ ಮಾಡುವವರಿಗೆ ₹ 900, ಡಿಪ್ಲೊಮಾ ಓದುವವರಿಗೆ ₹880 ವಿದ್ಯಾರ್ಥಿ ವೇತನ ನೀಡಲಾಗುತ್ತಿತ್ತು. ಈ ವರ್ಷ ₹5,000ಕ್ಕೆ ಏರಿಸಲಾಗಿದೆ. ವೈದ್ಯಕೀಯ ಪದವಿಯ ನಾಲ್ಕೂವರೆ ವರ್ಷಕ್ಕೆ ನೀಡಲಾಗುತ್ತಿದ್ದ ₹ 10,350 ಮೊತ್ತವನ್ನು ₹ 33,750ಕ್ಕೆ ಏರಿಸಲಾಗಿದೆ. 2 ವರ್ಷದ ಉನ್ನತ ಪದವಿಗೆ ನೀಡುತ್ತಿದ್ದ ₹ 3,500 ಮೊತ್ತವನ್ನು ದುಪ್ಪಟ್ಟು ಮಾಡಲಾಗಿದೆ. 3 ವರ್ಷದ ಉನ್ನತ ಪದವಿಗೆ ನೀಡುತ್ತಿದ್ದ ₹ 5,400 ಮೊತ್ತವನ್ನು ₹ 21,000ಕ್ಕೆ ಏರಿಸಲಾಗಿದೆ. ಈ ಬದಲಾವಣೆಗಳು ಫಲಾನುಭವಿಗಳನ್ನು ಆಸಕ್ತಿಯಿಂದ ಅರ್ಜಿ ಸಲ್ಲಿಸುವಂತೆ ಮಾಡಿವೆ.

‘ನನ್ನ ಮಗ ವಿನೋದ್‌ ಕುಮಾರ್‌ ಬೆಂಗಳೂರಿನಲ್ಲಿ ಬಿ.ಟೆಕ್‌ ಮಾಡಿದ್ದ. ಗೇಟ್‌ ಎಕ್ಸಾಂ ಉತ್ತೀರ್ಣನಾಗಿ ಈಗ ಪಶ್ಚಿಮ ಬಂಗಾಳದ ಖರಗ್‌ಪುರ ಐಐಟಿಯಲ್ಲಿ ಎಂ.ಟೆಕ್‌ ಮಾಡುತ್ತಿದ್ದಾನೆ. ಮೊತ್ತ ಕಡಿಮೆ ಹಾಗೂ ಅರ್ಜಿ ಸಲ್ಲಿಸಲು ಕಚೇರಿಗೆ ಹೋಗಬೇಕಾಗಿತ್ತು ಎಂಬ ಕಾರಣಕ್ಕೆ ಇಲ್ಲಿವರೆಗೆ ವಿದ್ಯಾರ್ಥಿವೇತನಕ್ಕೆ ಒಮ್ಮೆಯೂ ಅರ್ಜಿ ಸಲ್ಲಿಸಿರಲಿಲ್ಲ. ಈಗ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಅವಕಾಶವಿರುವುದರಿಂದ ಓಡಾಟ ತಪ್ಪಿದೆ. ಹಾಗಾಗಿ ಇದೇ ಮೊದಲ ಬಾರಿಗೆ ಅರ್ಜಿ ಸಲ್ಲಿಸಿದ್ದೆ. ಸರ್ಕಾರ ₹ 7,000 ನೀಡಿದೆ. ಸರ್ಕಾರಿ  ಸೀಟು ಸಿಕ್ಕಿದೆ. ಉಳಿದ ಖರ್ಚಿಗೆ ವಿದ್ಯಾರ್ಥಿವೇತನ ಉಪಯೋಗವಾಯಿತು’ ಎಂದು ಕೆಎಸ್‌ಆರ್‌ಟಿಸಿ ತುಮಕೂರು ವಿಭಾಗದ ಸಹಾಯಕ ಸಂಚಾರ ಅಧೀಕ್ಷಕ ಮಾಶಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.

‘ನನ್ನ ಮಗಳು ಮೈತ್ರಿ ಸಿ.ಆರ್‌. ನಾಲ್ಕು ವರ್ಷಗಳ ಹಿಂದೆ ಪಿಯುಸಿ ಓದುತ್ತಿದ್ದಾಗ  ಒಮ್ಮೆ ಅರ್ಜಿ ಸಲ್ಲಿಸಿದ್ದೆ. ಒಂದೇ ಬಾರಿಗೆ ಸುಸ್ತಾಗಿ ಮತ್ತೆ ಅರ್ಜಿ ಹಾಕಿರಲಿಲ್ಲ. ಈಗ ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಎಂಬಿಬಿಎಸ್‌ (ಎರಡನೇ ವರ್ಷ) ಓದುತ್ತಿದ್ದಾಳೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದರೆ ವರ್ಷಕ್ಕೆ ₹7,500 ವಿದ್ಯಾರ್ಥಿವೇತನ ಸಿಗುತ್ತದೆ ಎಂದು ಗೊತ್ತಾಗಿ ಅರ್ಜಿ ಸಲ್ಲಿಸಿದಳು. ವಿದ್ಯಾರ್ಥಿವೇತನ ಕೈಸೇರಿತು. ವಸತಿ ನಿಲಯದ ಖರ್ಚಿಗೆ ಆಯಿತು. ಸರ್ಕಾರ ವಿದ್ಯಾರ್ಥಿವೇತನ ಹೆಚ್ಚಿಸಿರುವುದು ಬಹಳ ಮಂದಿಗೆ ಅನುಕೂಲವಾಗಿದೆ’ ಎಂದು ಕೆಎಸ್‌ಆರ್‌ಟಿಸಿ ಚಿಕ್ಕಮಗಳೂರು ವಿಭಾಗದಲ್ಲಿ ಚಾಲಕರಾಗಿರುವ ಎಚ್‌.ಎಸ್‌. ರಂಗನಾಥ್‌ ತಿಳಿಸಿದರು.

ಅಂಕದ ಮಿತಿ ತೆಗೆಯಲಾಗಿದೆ

KSRTC ವಿದ್ಯಾಚೇತನಕ್ಕೆ ಸುಮಾರು ₹ 3 ಲಕ್ಷ ಬಜೆಟ್‌ ಇಡುತ್ತಿದ್ದರು. ಆ ಹಣಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು ಶೇ 80 ರಿಂದ ಶೇ 90 ಅಂಕ ಗಳಿಸಿರಬೇಕು ಎಂದೆಲ್ಲ ಷರತ್ತುಗಳನ್ನು ವಿಧಿಸಲಾಗುತ್ತಿತ್ತು. ಈ ಮಿತಿಗಳನ್ನೆಲ್ಲ ತೆಗೆದು ಸಾರಿಗೆ ನಿಗಮದಲ್ಲಿ ದುಡಿಯುವ ಎಲ್ಲರ ಮಕ್ಕಳ ಕಲಿಕೆಗೂ ಪ್ರೋತ್ಸಾಹ ನೀಡಲು ನಿರ್ಧರಿಸಿದೆವು. ವಿದ್ಯಾರ್ಥಿ ವೇತನದ ಮೊತ್ತವನ್ನು ಹೆಚ್ಚಿಸಿದೆವು. ಅದರ ಪರಿಣಾಮ ಅರ್ಜಿಗಳ ಸಂಖ್ಯೆ ಹೆಚ್ಚಳವಾಗಿದೆ.

–ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ

ಅಂಕಿ ಅಂಶ

80: ವಿದ್ಯಾಚೇತನಕ್ಕೆ ಪ್ರತಿ ವರ್ಷ ಬರುತ್ತಿದ್ದ ಸರಾಸರಿ ಅರ್ಜಿ

3,979: ಈ ವರ್ಷ ಸಲ್ಲಿಕೆಯಾಗಿರುವ ಅರ್ಜಿ

2,069: ಈ ವರ್ಷ ಇಲ್ಲಿವರೆಗೆ ವಿದ್ಯಾರ್ಥಿವೇತನ ಪಡೆದ ವಿದ್ಯಾರ್ಥಿಗಳು

₹ 1.02 ಕೋಟಿ: ಈ ವರ್ಷ ವಿತರಣೆಯಾಗಿರುವ ಮೊತ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT