ಗುರುವಾರ , ಜೂನ್ 30, 2022
27 °C
ಪದವಿಪೂರ್ವ ಕಾಲೇಜುಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಹೆಸರಿನಲ್ಲಿ ದುಬಾರಿ ಶುಲ್ಕ

‘ಇಂಟಿಗ್ರೇಟೆಡ್‌ ಕೋಚಿಂಗ್‌’ ದಂಧೆಗೆ ಇಲ್ಲ ಕಡಿವಾಣ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪದವಿಪೂರ್ವ ಕಾಲೇಜುಗಳಲ್ಲಿ 'ಇಂಟಿಗ್ರೇಟೆಡ್‌ ಕೋಚಿಂಗ್‌' ಪದ್ಧತಿ ಜಾರಿಗೊಳಿಸುವ ಮೂಲಕ ವಿದ್ಯಾರ್ಥಿಗಳಿಂದ ದುಬಾರಿ ಶುಲ್ಕ ಪಡೆಯಲಾಗುತ್ತಿದೆ.

ಇಂಟೆಗ್ರೇಟೆಡ್‌ ಕೋಚಿಂಗ್‌ಗೆ ಅವಕಾಶ ಇಲ್ಲ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ನಿಯಮಾವಳಿ ರೂಪಿಸಿದೆ. ಆದರೆ, ಈ ನಿಯಮಕ್ಕೆ ಕವಡೆ ಕಾಸಿನ ಕಿಮ್ಮತ್ತು ಇಲ್ಲದಂತಾಗಿದೆ.

ವಿದ್ಯಾರ್ಥಿಗಳಿಗೆ ಹೊರೆಯಾಗುತ್ತಿರುವುದರಿಂದ ರಾಜ್ಯ ಸರ್ಕಾರವು ನಿಗದಿಪಡಿಸಿದ ಪಠ್ಯಕ್ರಮವನ್ನು ಮಾತ್ರ ಕಾಲೇಜುಗಳಲ್ಲಿ ಬೋಧಿಸಬೇಕು ಮತ್ತು ಸರ್ಕಾರ ನಿಗದಿಪಡಿಸಿದ ನಿಯಮಗಳನ್ನು ಉಲ್ಲಂಘಿಸಿದರೆ ಮಾನ್ಯತೆಯನ್ನು ರದ್ದುಪಡಿಸಬೇಕಾಗುತ್ತದೆ ಎನ್ನುವ ಎಚ್ಚರಿಕೆಯನ್ನು ಇಲಾಖೆ ನೀಡಿದೆ. ಈ ಬಗ್ಗೆ ಇಲಾಖೆಯು ಹೊರಡಿಸಿರುವ ವಿದ್ಯಾರ್ಥಿಗಳ ದಾಖಲಾತಿ ಮಾರ್ಗಸೂಚಿಯಲ್ಲಿಯೂ ಸ್ಪಷ್ಟವಾಗಿ ವಿವರ ನೀಡಿದೆ. ಆದರೆ, ಇಲಾಖೆಯು ಯಾವುದೇ ರೀತಿಯ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ.

ಪಠ್ಯದ ಜತೆ ನೀಟ್‌, ಜೆಇಇ ಮತ್ತು ಸಿಇಟಿಗೆ ತರಬೇತಿ ನೀಡುವ ‘ಇಂಟೆಗ್ರೇಟೆಡ್‌ ಕೋಚಿಂಗ್‌’ ವ್ಯವಸ್ಥೆಯನ್ನು ಬಹುತೇಕ ಖಾಸಗಿ ಕಾಲೇಜುಗಳಲ್ಲಿ ಅಳವಡಿಸಿಕೊಳ್ಳಲಾಗಿದೆ. ಕೆಲವು ಕಾಲೇಜುಗಳು ಈ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಸಂಸ್ಥೆಗಳ ಜತೆ ಒಪ್ಪಂದ ಮಾಡಿಕೊಂಡಿವೆ.  ಈ ಸಂಸ್ಥೆಗಳ ಬೋಧಕರು ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಾರೆ. ಇತ್ತೀಚೆಗೆ ಕೆಲವು ಕಾಲೇಜುಗಳಲ್ಲಿ ಯುಪಿಎಸ್‌ಸಿ ಪರೀಕ್ಷೆಗಳಿಗೆ ತರಬೇತಿ ನೀಡುವುದಾಗಿ ವಿದ್ಯಾರ್ಥಿಗಳ ಮನವೊಲಿಸಿ ಹಣ ಕೀಳುತ್ತಾರೆ ಎನ್ನುವ ಆರೋಪಗಳಿವೆ.

‘ಇಂಟೆಗ್ರೇಟೆಡ್‌ ಕೋಚಿಂಗ್‌ ಇರುವ ಕಾಲೇಜುಗಳಲ್ಲಿ ವರ್ಷಕ್ಕೆ ₹1.25 ಲಕ್ಷದಿಂದ ₹3 ಲಕ್ಷದವರೆಗೆ ವಿದ್ಯಾರ್ಥಿಗಳಿಂದ ವಸೂಲಿ ಮಾಡಲಾಗುತ್ತದೆ. ಇದು ವಿವಿಧ ಪರೀಕ್ಷೆಗಳ ಅನುಸಾರ ಪ್ಯಾಕೇಜ್‌ ರೂಪದಲ್ಲಿ ಶುಲ್ಕ ಪಡೆಯಲಾಗುತ್ತದೆ' ಎಂದು ಖಾಸಗಿ ಕಾಲೇಜಿನ ಪ್ರಾಂಶುಪಾಲರೊಬ್ಬರು ತಿಳಿಸಿದರು.

ಕಾಲೇಜುಗಳು ಈ ವ್ಯವಸ್ಥೆಗಾಗಿ ಅಳವಡಿಸಲು ತಮ್ಮದೇ ಆದ ವೇಳಾಪಟ್ಟಿಯನ್ನು ರೂಪಿಸಿಕೊಂಡಿವೆ. ಬಹುತೇಕ ಕಾಲೇಜುಗಳಲ್ಲಿ ಬೆಳಿಗ್ಗೆ 7ಗಂಟೆಯಿಂದ ಪಾಠಪ್ರವಚನಗಳು ಆರಂಭವಾಗುತ್ತವೆ. ಕೆಲವು ಕಾಲೇಜುಗಳಲ್ಲಿ ಸಂಜೆ ವೇಳೆಯಲ್ಲಿ ಹೆಚ್ಚುವರಿಯಾಗಿ ಎರಡರಿಂದ ಮೂರು ಗಂಟೆಗಳ ಕಾಲ ತರಗತಿಗಳನ್ನು ನಡೆಸಲಾಗುತ್ತದೆ.

‘ಸರ್ಕಾರಿ ಕಾಲೇಜುಗಳಲ್ಲಿ ಮಾತ್ರ ಈ ರೀತಿಯ ವ್ಯವಸ್ಥೆ ಇಲ್ಲ. ಸರ್ಕಾರಿ ನಿಯಮಗಳಂತೆ ಅತಿ ಕಡಿಮೆ ಶುಲ್ಕ ಪಡೆಯಲಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಯ ಬಗ್ಗೆ ಈಗಿರುವ ಅಧ್ಯಾಪಕರೇ ಪಠ್ಯಗಳ ಜತೆ, ಜತೆಗೆ ಬೋಧಿಸುತ್ತಾರೆ. ಆದರೆ, ಸರ್ಕಾರಿ ಕಾಲೇಜುಗಳಲ್ಲಿ ಅಧ್ಯಾಪಕರ ಕೊರತೆಯನ್ನು ನೀಗಿಸಬೇಕು. ಉತ್ತಮ ಅಧ್ಯಾಪಕರನ್ನು ನೇಮಿಸಿದರೆ ಉತ್ತಮ ಫಲಿತಾಂಶವೂ ದೊರೆಯುತ್ತದೆ. ಸರ್ಕಾರ ಈ ನಿಟ್ಟಿನಲ್ಲಿ ಚಿಂತನೆ ನಡೆಸಬೇಕು’ ಎಂದು ಸರ್ಕಾರಿ ಕಾಲೇಜಿನ ಪ್ರಾಂಶುಪಾಲರೊಬ್ಬರು ಹೇಳುತ್ತಾರೆ.

‘ಕೆಲವು ಪಿ.ಯು ಕಾಲೇಜುಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ಇದರಿಂದ, ಮಕ್ಕಳಿಗೆ ಹೊರೆಯಾಗುತ್ತಿದೆ. ಬೆಳಿಗ್ಗೆಯಿಂದ ಸಂಜೆಯವರೆಗೂ ಕಾಲೇಜುಗಳಲ್ಲಿ ಇರಬೇಕು. ಶಿಕ್ಷಣ ಇಲಾಖೆ ಈ ಬಗ್ಗೆ ಕ್ರಮಕೈಗೊಳ್ಳಬೇಕು’ ಎಂದು ಪೋಷಕರೊಬ್ಬರು ಹೇಳುತ್ತಾರೆ.

ಇಲಾಖೆ ಮಾರ್ಗಸೂಚಿಗಳು
* ಪದವಿಪೂರ್ವ ಕಾಲೇಜುಗಳಲ್ಲಿ ಸಿಇಟಿ, ಎಐಇಇಇ, ಇಂಟೆಗ್ರೆಟೆಡ್‌ ಕೋರ್ಸ್‌, ಬ್ರಿಡ್ಜ್‌ ಕೋರ್ಸ್‌ ಇತ್ಯಾದಿ ಹೆಸರಿನಲ್ಲಿ ಕಾನೂನು ಬಾಹಿರವಾಗಿ ನಿಗದಿಪಡಿಸಿದ ಶುಲ್ಕಕ್ಕಿಂತ ಹೆಚ್ಚು ಪಡೆದು, ಇತರೆ ಸಂಘ ಸಂಸ್ಥೆಗಳು ಅಥವಾ ಇತರೆ ಸಂಪನ್ಮೂಲ ವ್ಯಕ್ತಿಗಳೊಂದಿಗೆ ಸೇರಿ ಬೋಧನೆ ಮಾಡುವುದು ಕಂಡು ಬಂದಲ್ಲಿ ಅಂತಹ ಕಾಲೇಜುಗಳ ಮಾನ್ಯತೆ ರದ್ದುಪಡಿಸಲಾಗುವುದು. ಜತೆಗೆ, ಈ ಸಂಸ್ಥೆಗಳ ಪ್ರಾಂಶುಪಾಲರ ಮತ್ತು ಆಡಳಿತ ಮಂಡಳಿಯ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು.

* ನಿಗದಿಪಡಿಸಿದ ಪಠ್ಯಕ್ರಮವನ್ನು ಹೊರತುಪಡಿಸಿ ಇತರೆ ಯಾವುದೇ ಪಠ್ಯಕ್ರಮ ಅಥವಾ ಪಠ್ಯಕ್ರಮವನ್ನು ಬೋಧಿಸುವುದು ಕಾನೂನುಬಾಹಿರ. ಅಂತಹ ಸಂಸ್ಥೆಗಳ ಪ್ರಾಂಶುಪಾಲರು ಮತ್ತು ಆಡಳಿತ ಮಂಡಳಿಯ ಮೇಲೆ ನಿಯಮಾನುಸಾರ ಕಾನೂನು ಕ್ರಮ ಜರುಗಿಸಲಾಗುವುದು.

* ಪದವಿಪೂರ್ವ ಕಾಲೇಜುಗಳು ಯಾವುದೇ ಬೇರೆ ಸಂಸ್ಥೆ ಅಥವಾ ಬೇರೆ ಆಡಳಿತ ಮಂಡಳಿ ಅಥವಾ ಕೋಚಿಂಗ್‌ ನೀಡುವ ಸಂಸ್ಥೆಗಳೊಂದಿಗೆ ಪರಸ್ಪರ ವಿನಿಯಮದೊಂದಿಗೆ ಆ ಸಂಸ್ಥೆಯ ಹೆಸರನ್ನು ತಮ್ಮ ಕಾಲೇಜಿನ ಜತೆ ಬಳಕೆ ಮಾಡಿ ಯಾವುದೇ ರೀತಿ ಶೈಕ್ಷಣಿಕ ಚಟುವಟಿಕೆ ನಡೆಸತಕ್ಕದ್ದಲ್ಲ.

* ಪದವಿಪೂರ್ವ ಶಿಕ್ಷಣ ಇಲಾಖೆಯು ಮುದ್ರಿಸಿರುವ ಪಠ್ಯಪುಸ್ತಕವನ್ನು ಹೊರತುಪಡಿಸಿ, ಯಾವುದೇ ಇತರೆ ಪುಸ್ತಕಗಳನ್ನು ಬೋಧಿಸಲು ಅವಕಾಶ ಇಲ್ಲ. ಬೇರೆ ಪಠ್ಯ ವಸ್ತುವನ್ನು ಖರೀದಿಸಲು ವಿದ್ಯಾರ್ಥಿಗಳಿಗೆ ಅಥವಾ ಪೋಷಕರಿಗೆ ಒತ್ತಡ ಹೇರುವುದು ಕಾನೂನುಬಾಹಿರ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು