ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಕ್ರೀದ್: ಕುರಿ ಬಲು ದುಬಾರಿ

Last Updated 9 ಜುಲೈ 2022, 19:24 IST
ಅಕ್ಷರ ಗಾತ್ರ

ಬೆಂಗಳೂರು: ಬಕ್ರೀದ್ ಹಬ್ಬದ ಹಿಂದಿನ ದಿನ ಚಾಮರಾಜಪೇಟೆ ಮತ್ತು ಜಯಮಹಲ್ ರಸ್ತೆಯಲ್ಲಿ ಮೇಕೆ ಮತ್ತು ಕುರಿಗಳ ವ್ಯಾಪಾರ ಬಲು ಜೋರಾಗಿ ನಡೆಯಿತು. ಹೈಬ್ರೀಡ್ ತಳಿಯ ಮೇಕೆಗಳು ₹60 ಸಾವಿರ ತನಕ ಮಾರಾಟವಾದವು.

ಚಾಮರಾಜಪೇಟೆ ಈದ್ಗಾ ಮೈದಾನದ ಸುತ್ತಮುತ್ತಲ ರಸ್ತೆಗಳಲ್ಲಿ ಕುರಿಗಳ ಸಂತೆ ಬೀಡು ಬಿಟ್ಟಿತ್ತು. ಈದ್ಗಾ ಮೈದಾನದಲ್ಲೇ ಇದ್ದ ಸಂತೆಯನ್ನು ಭಾನುವಾರ ಸಾಮೂಹಿಕ ಪ್ರಾರ್ಥನೆಗೆ ಸ್ವಚ್ಛಗೊಳಿಸಲು ಸಂತೆಯನ್ನು ಹೊರಕ್ಕೆ ಹಾಕಲಾಗಿತ್ತು.

ಐದು–ಹತ್ತು ಕುರಿಗಳನ್ನು ಹಿಡಿದು ನಿಂತಿದ್ದ ವ್ಯಾಪಾರಿಗಳು ಮತ್ತು ರೈತರಿಗೆ ಬಾರಿ ಬೇಡಿಕೆ ಸೃಷ್ಟಿಯಾಗಿತ್ತು. ರೈತರಿಂದ ಬೆಳಿಗ್ಗೆಯೇ ಕುರಿಗಳನ್ನು ಖರೀದಿಸಿ ಹೆಚ್ಚಿನ ಮೊತ್ತಕ್ಕೆ ಮಾರಾಟ ಮಾಡುವ ವ್ಯಾಪಾರಿಗಳೂ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು.

ಬಂಡೂರು ಕುರಿ, ಅಮೀನಗಡದ ಟಗರುಗಳಿಗೆ ಹೆಚ್ಚಿನ ಬೇಡಿಕೆ ಇತ್ತು. ಅದೇ ರೀತಿ ಕುರಿಗಳ ದರವೂ ದುಬಾರಿಯಾಗಿತ್ತು. ಸಣ್ಣ ಸಣ್ಣ ಟಗರುಗಳಿಗೂ ₹15 ಸಾವಿರಕ್ಕೂ ಹೆಚ್ಚಿನ ದರ ನಿಗದಿ ಮಾಡಿಕೊಂಡು ವ್ಯಾಪಾರಿಗಳು ಕುಳಿತಿದ್ದರು.

ವ್ಯಾಪಾರಿಗಳ ಜತೆಗೆ ದಲ್ಲಾಳಿಗಳೂ ಸಂತೆಯಲ್ಲಿ ಬೀಡು ಬಿಟ್ಟಿದ್ದರು. ಕುರಿ ಖರೀದಿಗೆ ಬರುವ ಜನರನ್ನು ಹಿಡಿದು ಕಡಿಮೆ ಬೆಲೆಗೆ ಕೊಡಿಸುವುದಾಗಿ ಹೇಳಿ ಮಧ್ಯಸ್ಥಿಕೆ ವಹಿಸಿ ಚಾಲಾಕಿತನದಿಂದ ವ್ಯಾಪಾರ ಕುದುರಿಸುತ್ತಿದ್ದರು. ಬಂಡವಾಳ ಹಾಕದೆ ಮಾತಿನಲ್ಲೇ ಜನರನ್ನು ಮರುಳು ಮಾಡಿ ವ್ಯಾಪಾರ ಮುಗಿಸಿ ಒಂದು ಕುರಿಗೆ ಇಂತಿಷ್ಟು ಕಮಿಷನ್ ಪಡೆದುಕೊಂಡು ಮತ್ತೊಬ್ಬ ಗಿರಾಕಿಯತ್ತ ಮುಖ ಮಾಡುವುದು ಸಾಮಾನ್ಯವಾಗಿತ್ತು.

ಜಯಮಹಲ್ ರಸ್ತೆಯಲ್ಲೂ ಕುರಿ ಮತ್ತು ಮೇಕೆಗಳ ವ್ಯಾಪಾರ ಭರಾಟೆಯಿಂದ ಸಾಗಿತ್ತು. ರಸ್ತೆಯ ಉದ್ದಕ್ಕೂ ವ್ಯಾಪಾರ ವಹಿವಾಟು ನಡೆಯಿತು. ಸಣ್ಣ ಕುರಿಗಳಿಗೂ ಕನಿಷ್ಠ ₹12 ಸಾವಿರ ದರ ಇತ್ತು. ಹಬ್ಬದ ಹಿಂದಿನ ದಿನ ಆಗಿರುವುದರಿಂದ ಬೇರೆ ಮಾರ್ಗವಿಲ್ಲದೆ ಜನ ಕುರಿಗಳನ್ನು ಖರೀದಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT