ಮಂಗಳವಾರ, ಸೆಪ್ಟೆಂಬರ್ 28, 2021
21 °C
ಏಳು ಜಂಕ್ಷನ್‌ಗಳನ್ನು ಸಿಗ್ನಲ್ ಮುಕ್ತ ಮಾಡುವ ಮೇಲ್ಸೇತುವೆ

ಅಲ್ಲೇ ನಿಂತ ಈಜಿಪುರ ಮೇಲ್ಸೇತುವೆ ಕಾಮಗಾರಿ

ವಿಜಯಕುಮಾರ್ ಎಸ್.ಕೆ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಅರ್ಧಕ್ಕೆ ನಿಂತ ಮೇಲ್ಸೇತುವೆ ಕಾಮಗಾರಿ, ರಸ್ತೆ ಮಧ್ಯದಲ್ಲಿ ದೃಷ್ಟಿ ಬೊಂಬೆಗಳಂತೆ ನಿಂತ ಪಿಲ್ಲರ್‌ಗಳು, ಸಂಚಾರ ದಟ್ಟಣೆ ಸೀಳಲು ವಾಹನ ಸವಾರರ ಹರಸಾಹಸ...

ಇದು ಕೋರಮಂಗಲದ 100 ಅಡಿ ಮುಖ್ಯ ರಸ್ತೆಯ ಸ್ಥಿತಿ. ಈಜಿಪುರ ವೃತ್ತದಿಂದ ಕೇಂದ್ರೀಯ ಸದನದ ತನಕ ಸುಮಾರು 2.5 ಕಿಲೋ ಮೀಟರ್ ಉದ್ದದ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ವರ್ಷಾನುಗಟ್ಟಲೆ ಮುಂದುವರಿಯುತ್ತಲೇ ಇಲ್ಲ. ಕೇಂದ್ರೀಯ ಸದನದಿಂದ ಆರಂಭವಾಗಿ ಈಜಿಪುರ ಸಿಗ್ನಲ್ ದಾಟುವ ಈ ಮೇಲ್ಸೇತುವೆ ಬಿಬಿಎಂಪಿ ನಿರ್ಮಿಸುತ್ತಿರುವ ಎರಡನೇ ಅತೀದೊಡ್ಡ ಸೇತುವೆ.

ಸೋನಿ ಸಿಗ್ನಲ್ ಬಳಿ ಐದಾರು ಕಂಬಗಳ ಮೇಲೆ ಮೊದಲೇ ರೂಪಿಸಿದ (ಪ್ರೀಕಾಸ್ಟ್‌ ಸೆಗ್ಮೆಂಟ್‌) ಹೊದಿಕೆಗಳನ್ನು  ಹೊದಿಸಲಾಗಿದೆ. ಉಳಿದ ಎಲ್ಲ ಕಂಬಗಳು ಮೇಲ್ಚಾವಣಿಗಾಗಿ ಕಾದು ನಿಂತಿವೆ. ಈಜಿಪುರ ಜಂಕ್ಷನ್, ಸೋನಿ ವರ್ಲ್ಡ್ ಜಂಕ್ಷನ್, ಕೇಂದ್ರೀಯ ಸದನ, ಕೋರಮಂಗಲ 8ನೇ ಮುಖ್ಯರಸ್ತೆ, ಕೋರಮಂಗಲ 60 ಅಡಿ ರಸ್ತೆಯ ವೃತ್ತ, 5ನೇ ಬ್ಲಾಕ್ 1–ಎ ಕ್ರಾಸ್ ಜಂಕ್ಷನ್, ಬಿಡಿಎ ಜಂಕ್ಷನ್‌ಗಳಲ್ಲಿ ಈಗ ಸಿಗ್ನಲ್ ದಾಟಲು ವಾಹನ ಸವಾರರು ಕಷ್ಟಪಡುತ್ತಿದ್ದಾರೆ. ಇದನ್ನು ತಪ್ಪಿಸಲು 2.5 ಕಿ.ಮೀ ಉದ್ದದ ಮೇಲ್ಸೇತುವೆ ನಿರ್ಮಾಣ ಯೋಜನೆಯನ್ನು ಬಿಬಿಎಂಪಿ ಆರಂಭಿಸಿತ್ತು.

ಕಾಮಗಾರಿಯ ಗುತ್ತಿಗೆಯನ್ನು ಸಿಂಪ್ಲೆಕ್ಸ್ ಇನ್‌ಫ್ರಾಸ್ಟ್ರಕ್ಷರ್‌ ಕಂಪನಿ ಪಡೆದಿದೆ. ಕಾರ್ಯಾದೇಶದ ಪ್ರಕಾರ 2017ರ ಮೇ 4ರಂದು ಆರಂಭವಾಗಿ 2019ರ ನವೆಂಬರ್ 4ಕ್ಕೇ ಕೆಲಸ ಪೂರ್ಣಗೊಳ್ಳಬೇಕಿತ್ತು. ಅಂದರೆ, ಸರಿ ಸುಮಾರು ಒಂದೂವರೆ ವರ್ಷದ ಹಿಂದೆಯೇ ಈ ಸೇತುವೆ ಸಂಚಾರಕ್ಕೆ ಮುಕ್ತವಾಗಬೇಕಿತ್ತು. ಆದರೆ, 2021ರ ಜುಲೈ ಮುಗಿದರೂ ಕಾಮಗಾರಿ ಸದ್ಯಕ್ಕೆ ಪೂರ್ಣಗೊಳ್ಳುವ ಯಾವ ಲಕ್ಷಣವೂ ಕಾಣಿಸುತ್ತಿಲ್ಲ.

ಕಾಂಗ್ರೆಸ್ ಸರ್ಕಾರ ಇದ್ದಾಗ ಆರಂಭವಾದ ಕಾಮಗಾರಿ ಸರ್ಕಾರ ಬದಲಾದ ಬಳಿಕ ಕುಂಟುತ್ತಾ ಸಾಗಿತು. ಈಗ ಸಂಪೂರ್ಣವಾಗಿ ಸ್ಥಗಿತಗೊಂಡು ವರ್ಷವೇ ಕಳೆದಿದೆ. ರಸ್ತೆ ಮಧ್ಯದಲ್ಲಿ ಕಂಬಗಳನ್ನು ನಿಲ್ಲಿಸಿ ಬಿಬಿಎಂಪಿ ಅಧಿಕಾರಿಗಳು ಮಾಯವಾಗಿದ್ದಾರೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಕಾಮಗಾರಿ ಸ್ಥಗಿತಗೊಂಡು ಸಾರ್ವಜನಿಕರಿಗೆ ಆಗಿರುವ ತೊಂದರೆ ಬಗ್ಗೆ ಕೋರಮಂಗಲದ ನಿವಾಸಿ ಆದಿನಾರಾಯಣ ಶೆಟ್ಟಿ ಎಂಬುವರು ಹೈಕೋರ್ಟ್‌ ಮೆಟ್ಟಿಲನ್ನೂ ಏರಿದ್ದಾರೆ. ಈ ಸಂಬಂಧ ಬಿಬಿಎಂಪಿಗೆ ಹೈಕೋರ್ಟ್ ನೋಟಿಸ್ ಕೂಡ ನೀಡಿದೆ.

ಗುತ್ತಿಗೆ ಪಡೆದಿರುವ ಕಂಪನಿ ಏಕಾಏಕಿ ಕೆಲಸ ನಿಲ್ಲಿಸಿತ್ತು. ಕಂಪನಿಯ ಅನ್ಯ ಸಮಸ್ಯೆಗಳು ಈ ಕಾಮಗಾರಿ ಮೇಲೆ ಪರಿಣಾಮ ಬೀರಿದ್ದವು. ಬಿಬಿಎಂಪಿ ಮತ್ತು ಕಂಪನಿಯ ಜಂಟಿ ಬ್ಯಾಂಕ್ ಖಾತೆಯನ್ನು ತೆರೆಯಲಾಗಿದೆ. ಬಿಡುಗಡೆಯಾದ ಹಣವನ್ನು ಇದೇ ಕೆಲಸಕ್ಕೆ ಉಪಯೋಗಿಸಬೇಕು ಎಂಬ ಷರತ್ತು ವಿಧಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳುತ್ತಾರೆ.

‘ರಾತ್ರಿ ವೇಳೆ ಕಾಮಗಾರಿ ನಿರ್ವಹಿಸಲಾಗುತ್ತಿದೆ. ಪೂರ್ಣಗೊಳ್ಳಲು ಇನ್ನೂ ಒಂದು ವರ್ಷ ಬೇಕು’ ಎಂದು ಬಿಬಿಎಂಪಿ ಮುಖ್ಯ ಎಂಜಿನಿಯರ್ (ಯೋಜನೆ) ಲೋಕೇಶ್ ತಿಳಿಸಿದರು.

ಕಾಮಗಾರಿ ಪುನರಾರಂಭವಾಗಿದೆ: ರಾಮಲಿಂಗಾ ರೆಡ್ಡಿ

ಗುತ್ತಿಗೆ ಪಡೆದಿರುವ ಕಂಪನಿಯ ಲೋಪದಿಂದ ಕೆಲಸ ಸ್ಥಗಿತಗೊಂಡಿತ್ತು. ಸಮಸ್ಯೆಯನ್ನು ಅಧಿಕಾರಿಗಳು ಈಗ ಸರಿಪಡಿಸಿದ್ದು, ಕಾಮಗಾರಿ ಪುನರಾರಂಭವಾಗಿದೆ ಎಂದು ಶಾಸಕ ರಾಮಲಿಂಗಾರೆಡ್ಡಿ ಹೇಳಿದರು.

‘ಸರ್ಕಾರ ಬದಲಾದ ಕಾರಣ ಕಾಮಗಾರಿ ಸ್ಥಗಿತಗೊಳಿಸಲಾಗಿದೆ ಎಂದು ಹೇಳಲಾಗದು. ಗುತ್ತಿಗೆ ಪಡೆದಿರುವ ಕಂಪನಿ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಈಗ ಜಂಟಿ ಖಾತೆ ತೆರೆದಿದ್ದು, ಕೆಲಸ ಚುರಕಾಗಿ ನಡೆಯಲಿದೆ. ಬೇರೆ ಸ್ಥಳದಲ್ಲಿ ಪ್ರೀಕಾಸ್ಟ್‌ಗಳನ್ನು ಸಿದ್ಧಪಡಿಸಿಕೊಂಡು ಇಲ್ಲಿ ಜೋಡಿಸಬೇಕಿದೆ. ಆ ಕೆಲಸ ಪ್ರಗತಿಯಲ್ಲಿದೆ’ ಎಂದರು.

ಅಂಕಿ–ಅಂಶ

ಯೋಜನಾ ವೆಚ್ಚ; ₹ 203.20 ಕೋಟಿ

ಮೇಲ್ಸೇತುವೆ ಉದ್ದ; 2.5 ಕಿ.ಮೀ

ನಿರ್ಮಾಣವಾಗಿರುವ ಕಂಬಗಳು; 66

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು