ಶನಿವಾರ, ಮಾರ್ಚ್ 28, 2020
19 °C

ಹಾರೆಯಲ್ಲಿ ವಿದ್ಯುತ್ ಹರಿದು ಕಾರ್ಮಿಕ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಳ್ಳಂದೂರು ಠಾಣೆ ವ್ಯಾಪ್ತಿಯಲ್ಲಿ ಶೌಚ ಗುಂಡಿ ಅಗೆಯುತ್ತಿದ್ದ ವೇಳೆ ಹಾರೆಯಲ್ಲಿ ವಿದ್ಯುತ್ ಹರಿದು ಕಾರ್ಮಿಕ ಅಬುರಾಮ್ (22) ಎಂಬುವರು ಮೃತಪಟ್ಟಿದ್ದಾರೆ.

‘ಕೈಗೊಂಡ್ರಹಳ್ಳಿ ನಿವಾಸಿ ಅಬುರಾಮ್, ಸ್ನೇಹಿತ ಪ್ರಸನ್ನ ಜೊತೆ ಚಾಂದ್ ಪಾಷಾ ಎಂಬುವರ ಮನೆಯ ಶೌಚ ಗುಂಡಿ ಅಗೆಯಲು ಹೋಗಿದ್ದ ವೇಳೆ ಈ ಅವಘಡ ನಡೆದಿದೆ’ ಎಂದು ಪೊಲೀಸರು ಹೇಳಿದರು.

‘ಮನೆ ಮಾಲೀಕ ಚಾಂದ್ ಪಾಷಾ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರಲಿಲ್ಲ. ಗುಂಡಿ ಅಗೆಯುವಾಗ ಹಾರೆಯಲ್ಲಿ ವಿದ್ಯುತ್ ಹರಿದು ಅಬುರಾಮ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಿರ್ಲಕ್ಷ್ಯ ವಹಿಸಿದ್ದ ಆರೋಪದಡಿ ಚಾಂದ್ ಪಾಷಾ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ತಿಳಿಸಿದರು. 

ಸ್ಕ್ರೂಡ್ರೈವರ್‌ನಿಂದ ಇರಿದು ಕೊಲೆಗೆ ಯತ್ನ

ಬೆಂಗಳೂರು: ಬಂಡೇಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ನಾಜಿಯಾ (32) ಎಂಬುವರನ್ನು ಕೈ ಕಾಲು ಕಟ್ಟಿಹಾಕಿ ಸ್ಕ್ರೂಡ್ರೈವರ್‌ನಿಂದ ಇರಿದು ಕೊಲೆಗೆ ಯತ್ನಿಸಲಾಗಿದ್ದು, ಈ ಸಂಬಂಧ ಅವರ ಪತಿ ಸಲೀಂ (35) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

‘ಕೆಲ ವರ್ಷಗಳ ಹಿಂದೆ ನಾಜಿಯಾ ಹಾಗೂ ಸಲೀಂ ಮದುವೆ ಆಗಿತ್ತು. ದಂಪತಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಘಟನೆ ಸಂಬಂಧ ಮನೆಯ ಮಾಲೀಕರೇ ದೂರು ನೀಡಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಪತ್ನಿ ಬೇರೊಬ್ಬನ ಜೊತೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದಾಳೆಂದು ಶಂಕೆ ವ್ಯಕ್ತಪಡಿಸಿದ್ದ ಸಲೀಂ ಮನೆಯಲ್ಲಿ ಜಗಳ ಮಾಡಲಾರಂಭಿಸಿದ್ದ. ಇದೇ 23ರಂದು ರಾತ್ರಿ ಪತ್ನಿಯ ಕೈ–ಕಾಲು ಕಟ್ಟಿ ಹಾಕಿ ಸ್ಕ್ರೂಡ್ರೈವರ್‌ನಿಂದ ದೇಹಕ್ಕೆ ಇರಿಯುತ್ತಿದ್ದ. ಗಾಯವಾಗಿ ಮಹಿಳೆಯ ದೇಹದಿಂದ ರಕ್ತ ಸೋರುತ್ತಿತ್ತು’

‘ಕೂಗಾಟ ಕೇಳಿ ಮನೆಗೆ ಹೋಗಿದ್ದ ಮಾಲೀಕರು, ನಾಜಿಯಾ ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ, ಠಾಣೆಗೆ ಬಂದು ದೂರು ನೀಡಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಪೊಲೀಸರು ವಿವರಿಸಿದರು.

ಗುಂಡು ಹಾರಿಸಿ ಯುವತಿ ಹತ್ಯೆ ಯತ್ನ

ಬೆಂಗಳೂರು: ನಾಡಪಿಸ್ತೂಲ್‌ನಿಂದ ಗುಂಡು ಹಾರಿಸಿ 25 ವರ್ಷದ ಯುವತಿಯ ಹತ್ಯೆಗೆ ಯತ್ನಿಸಿದ ಘಟನೆ ಮಾರತ್‌ಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯ ಮಂಜುನಾಥ ಬಡಾವಣೆಯ ಮುನ್ನೇನ ಕೊಳಾಲದಲ್ಲಿ ಮಂಗಳವಾರ ಸಂಜೆ ನಡೆದಿದೆ.

ಒಡಿಶಾದ ಯುವತಿ ನಿಮ್ಹಾನ್ಸ್‌ನಲ್ಲಿ ಕೆಲಸ ಮಾಡುತ್ತಿದ್ದು, ಎರಡು ವರ್ಷಗಳಿಂದ ನಗರದಲ್ಲಿದ್ದಾರೆ. ಇವರು ತಂಗಿರುವ ‘ಪೇಯಿಂಗ್‌ ಗೆಸ್ಟ್‌’ (ಪಿ.ಜಿ) ಮುಂಭಾಗದಲ್ಲೇ ಸಂಜೆ 6 ಗಂಟೆಗೆ ಈ ಘಟನೆ ನಡೆದಿದ್ದು, ಆರೋಪಿ ‍ಪರಾರಿಯಾಗಿದ್ದಾನೆ.

7.65ಎಂ.ಎಂ ನಾಡ ಪಿಸ್ತೂಲ್‌ನಿಂದ ಒಂದು ಸುತ್ತು ಗುಂಡು ಹಾರಿಸಲಾಗಿದೆ. ತೀವ್ರವಾಗಿ ಗಾಯಗೊಂಡಿರುವ ಯುವತಿಯನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದೇಹದಿಂದ ಗುಂಡು ಹೊರತೆಗೆಯಲು ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

ಆರೋಪಿ ಹಾಗೂ ಯುವತಿ ಪರಸ್ಪರ ಪರಿಚಯವಿದ್ದು, ಪ್ರೇಮ ಪ್ರಕರಣ ಘಟನೆಗೆ ಕಾರಣವಿರಬಹುದು ಎಂದು ಶಂಕಿಸಲಾಗಿದೆ. ಯುವತಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ. ಹೀಗಾಗಿ ಹೆಚ್ಚಿನ ವಿವರ ಲಭ್ಯವಾಗಿಲ್ಲ. ‍ಆರೋಪಿ ಬಂಧನಕ್ಕಾಗಿ ಎರಡು ತಂಡಗಳನ್ನು ರಚಿಸಲಾಗಿದೆ ಎಂದು ವೈಟ್‌ಫೀಲ್ಡ್‌ ವಿಭಾಗದ ಡಿಸಿಪಿ ಅನುಚೇತ್‌ ತಿಳಿಸಿದ್ದಾರೆ.

ಅತ್ತೆಯ ಹತ್ಯೆ: ಸೊಸೆ, ಪ್ರಿಯಕರ ಬಂಧನ

ಬೆಂಗಳೂರು: ಫೆ.18ರಂದು ಬ್ಯಾಟರಾಯನಪುರದಲ್ಲಿ ನಡೆದ ರಾಜಮ್ಮ (60) ಎಂಬವರ ಕೊಲೆ ಪ್ರಕರಣವನ್ನು ಭೇದಿಸಿರುವ ಪೊಲೀಸರು, ರಾಜಮ್ಮ ಅವರ ಸೊಸೆ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಿದ್ದಾರೆ.

ಅನೈತಿಕ ಸಂಬಂಧ ಗಂಡನಿಗೆ ತಿಳಿಸಬಹುದು ಎಂದು ಭೀತಿಯಿಂದ ರಾಜಮ್ಮ ಅವರನ್ನು ಸೊಸೆ ಸೌಂದರ್ಯಾ ಮತ್ತು ಆಕೆಯ ಪ್ರಿಯಕರ ನವೀನ ಅಲಿಯಾಸ್ ಜಡೇಸ್ವಾಮಿ ಕೊಲೆ ಮಾಡಿದ್ದರು ಎಂದು ತನಿಖೆಯಲ್ಲಿ ಬಯಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ಬ್ಯಾಟರಾಯನಪುರ ಒಂದನೇ ಮುಖ್ಯರಸ್ತೆಯಲ್ಲಿರುವ ಮನೆಯಲ್ಲಿ ರಾಜಮ್ಮ ಅವರನ್ನು ಎಲೆ ಅಡಿಕೆ ಕುಟ್ಟುವ ಕಬ್ಬಿಣದ ರಾಡ್‌ನಿಂದ ಹೊಡೆದು ಕೊಲೆ ಮಾಡಲಾಗಿತ್ತು. ಮನೆಗೆ ನುಗ್ಗಿದ ಅಪರಿಚಿತ ವ್ಯಕ್ತಿ ಕೊಲೆ ಮಾಡಿ ಪರಾರಿಯಾಗಿದ್ದ ಎಂದು ಪತಿ ಕುಮಾರ್‌ಗೆ ಸೌಂದರ್ಯಾ ಕಥೆ ಕಟ್ಟಿ
ಹೇಳಿದ್ದಳು. ಇದನ್ನು ನಂಬಿದ್ದ ಕುಮಾರ್, ಆಕೆಯ ಹೇಳಿಕೆಯಂತೆ ದೂರು ನೀಡಿದ್ದರು.

‘ಸೌಂದರ್ಯಾಳನ್ನು ವಿಚಾರಣೆ ನಡೆಸಿದಾಗ ಗೊಂದಲದ ಹೇಳಿಕೆ ನೀಡಿದ್ದಳು. ತೀವ್ರವಾಗಿ ವಿಚಾರಣೆ ನಡೆಸಿದಾಗ ಬಾಯಿಬಿಟ್ಟಿದ್ದಾಳೆ’ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದರು.

ಅಪಘಾತ: ಸಾವು

ಕೊಟ್ಟಿಗೆಹಾರ: ಬಾಳೂರು ಹೋಬಳಿಯ ಜಾವಳಿ ಸಮೀಪದ ಕೆಳಗೂರಿನಲ್ಲಿ ಆಮ್ನಿ ಕಾರು ಮತ್ತು ಸ್ಕೂಟರ್‌ ನಡುವೆ ಸಂಭವಿಸಿದ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಮೃತಪಟ್ಟಿದ್ದಾರೆ.

ಬೆಂಗಳೂರಿನ ರಾಜಾಜಿನಗರದ ದಿನಕರ (28) ಮೃತರು. ಸ್ಕೂಟರ್‌ ಸಹಸವಾರ ಬೆಂಗಳೂರಿನ ಬಾಣವಾಡಿಯ ಗಂಗರಾಜು (31) ತೀವ್ರ ಗಾಯಗೊಂಡಿದ್ದು, ಮೂಡಿಗೆರೆ ಸರ್ಕಾರಿ ಅಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಬೆಂಗಳೂರಿಗೆ ಕರೆದ್ಯೊಯಲಾಗಿದೆ.

ಯುವಕರು ಬೆಂಗಳೂರಿನಲ್ಲಿ ಅಮೆಜಾನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಬಾಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬ್ಯೂಟಿ ಪಾರ್ಲರ್‌ನಲ್ಲಿ ಕಳವು!

ಬೆಂಗಳೂರು: ಟಿ.ಸಿ ಪಾಳ್ಯದ ಗ್ರೀನ್ಸ್‌ ಟೀನ್ಸ್‌ ಪಾರ್ಲರ್‌ಗೆ ಸೌಂದರ್ಯ ವರ್ಧನೆಗಾಗಿ ಬಂದಿದ್ದ ಮಹಿಳೆಯೊಬ್ಬರ 206 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ಕಳವು ಮಾಡಲಾಗಿದೆ ಎಂದು ಆರೋಪಿಸಿ ಕೆ.ಆರ್‌. ‍ಪುರ ಪೊಲೀಸರಿಗೆ ದೂರು ನೀಡಲಾಗಿದೆ.

ಆಶಾರಾಣಿ ಎಂಬುವವರು ನೀಡಿರುವ ದೂರಿನಲ್ಲಿ, ‘ಕಿತ್ತಗನೂರು ಆಂಧ್ರ ಬ್ಯಾಂಕ್‌ನ ಲಾಕರ್‌ನಲ್ಲಿ ಇಡಲಾಗಿದ್ದ ₹ 6 ಲಕ್ಷ ಮೌಲ್ಯದ ಆಭರಣಗಳನ್ನು ಇದೇ 20ರಂದು ಬಿಡಿಸಿಕೊಂಡು ಗ್ರೀನ್‌ ಟೀನ್ಸ್‌ ಪಾರ್ಲರ್‌ಗೆ ಸೌಂದರ್ಯ ವರ್ಧನೆಗಾಗಿ ಹೋಗಿದ್ದೆ. ಹರಿಣಿ ಎಂಬುವರು ಫೇಶಿಯಲ್‌ ಮಾಡಿದ ಬಳಿಕ ಕೂದಲಿಗೆ ಬಣ್ಣ ಹಚ್ಚಲು ಬೇರೊಂದು ಸ್ಥಳಕ್ಕೆ ಕರೆದೊಯ್ದರು’ ಎಂದು ತಿಳಿಸಿದ್ದಾರೆ. 

‘ಆ ಸಮಯದಲ್ಲಿ ತಾವು ತಂದಿದ್ದ ಬ್ಯಾಗ್‌ನಲ್ಲಿ ಚಿನ್ನ ಹಾಗೂ ಹಣ ಇಟ್ಟಿರುವುದಾಗಿ ತಿಳಿಸಿದ್ದೆ. ಈ ಮಧ್ಯೆ ಪದ್ಮಾ ಮತ್ತು ಯಶೋಧಾ ಅವರು ಫೇಶಿಯಲ್‌ ಮಾಡಿದ ಜಾಗವನ್ನು ಕ್ಲೀನ್‌ ಮಾಡಲು ಹೋಗಿದ್ದರು. 30 ನಿಮಿಷಗಳ ತರುವಾಯ ನೋಡಿದಾಗ ಆಭರಣವಿದ್ದ ಪೆಟ್ಟಿಗೆ ನಾಪತ್ತೆಯಾಗಿತ್ತು. ಈ ಬಗ್ಗೆ ವಿಚಾರಿಸಿದಾಗ ಪಾರ್ಲರ್‌ ವ್ಯವಸ್ಥಾಪಕಿ, ಹರಿಣಿ, ಪದ್ಮಾ ಮತ್ತು ಯಶೋಧಾ ಉತ್ತರಿಸಲಿಲ್ಲ’ ಎಂದಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)