ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್ ದರ ಏರಿಕೆ: ಕೈಗಾರಿಕಾ ಒಕ್ಕೂಟಗಳ ಅಸಮಾಧಾನ

Last Updated 5 ನವೆಂಬರ್ 2020, 19:03 IST
ಅಕ್ಷರ ಗಾತ್ರ

ಬೆಂಗಳೂರು: ವಿದ್ಯುತ್‌ ದರ ಏರಿಕೆ ಮಾಡಿರುವುದಕ್ಕೆ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ) ಹಾಗೂಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) ತೀವ್ರ ವಿರೋಧ ವ್ಯಕ್ತಪಡಿಸಿವೆ.

‘ಕೋವಿಡ್‌ನಿಂದ ಆರ್ಥಿಕ ಸಂಕಷ್ಟಕ್ಕೆ ಈಡಾದ ಎಲ್ಲ ಸಮುದಾಯಗಳಿಗೂ ಸರ್ಕಾರದ ಈ ನಿರ್ಧಾರದಿಂದ ಆಘಾತವಾಗಿದೆ. ಇದರಿಂದ ಕಬ್ಬಿಣ, ಉಕ್ಕಿನಿಂದ ತಯಾರಾಗುವಂತಹ ಕಚ್ಚಾ ವಸ್ತುಗಳ ಬೆಲೆಯೂ ಏರಿಕೆಯಾಗಲಿದೆ. ಈ ರೀತಿಯ ಕಚ್ಚಾವಸ್ತುಗಳನ್ನು ಕೈಗಾರಿಕೆಗಳೇ ಹೆಚ್ಚು ಬಳಸುವುದರಿಂದ ಸಹಜವಾಗಿ ಕೈಗಾರಿಕೆಗಳ ಮೇಲೆ ಹೊರೆ ಬೀಳಲಿದೆ’ ಎಂದು ಎಫ್‌ಕೆಸಿಸಿಐ ಅಧ್ಯಕ್ಷ ಪೆರಿಕಲ್ ಎಂ. ಸುಂದರ್‌ ಹೇಳಿದ್ದಾರೆ.

‘ಆರ್ಥಿಕ ಸಂಕಷ್ಟದಿಂದ ಈಗಾಗಲೇ ಶೇ 15ರಿಂದ ಶೇ 20ರಷ್ಟು ಕೈಗಾರಿಕೆಗಳು ಸ್ಥಗಿತಗೊಂಡಿವೆ. ಬಹಳಷ್ಟು ಜನರು ಕೆಲಸ ಕಳೆದುಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ವಿದ್ಯುತ್‌ ದರ ಏರಿಕೆಯನ್ನು ಸಂಸ್ಥೆಯು ತೀವ್ರವಾಗಿ ವಿರೋಧಿಸುತ್ತದೆ. ಅಲ್ಲದೆ, ಮುಂದಿನ 3 ವರ್ಷದವರೆಗೆ ವಿದ್ಯುತ್‌ ದರ ಏರಿಕೆ ಮಾಡಬಾರದು’ ಎಂದೂ ಅವರು ಒತ್ತಾಯಿಸಿದ್ದಾರೆ.

‘ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (ಎಂಎಸ್‌ಎಂಇ) ಭಾರಿ ಹೊರೆ ಬೀಳಲಿದೆ. ಕೋವಿಡ್‌ ಬಿಕ್ಕಟ್ಟಿನಿಂದ ಆರ್ಥಿಕವಾಗಿ ಸಾಕಷ್ಟು ಹಾನಿಗೊಳಗಾಗಿರುವ ಕೈಗಾರಿಕೆಗಳಿಗೆ ವಿದ್ಯುತ್‌ ದರ ಏರಿಕೆಯಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ’ ಎಂದು ಕಾಸಿಯಾ ಅಧ್ಯಕ್ಷ ಕೆ.ಬಿ. ಅರಸಪ್ಪ ಹೇಳಿದ್ದಾರೆ.

‘ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು (ಕೆಇಆರ್‌ಸಿ) ವಿದ್ಯುತ್‌ ದರವನ್ನು ಕೈಗಾರಿಕೆಗಳಿಗೆ ಪ್ರತಿ ಯುನಿಟ್‌ಗೆ 25 ಪೈಸೆ, ಮಾಸಿಕ ನಿಗದಿತ ಶುಲ್ಕವನ್ನು ₹10 ಹೆಚ್ಚಿಸಿರುವುದು ಆಘಾತ ತಂದಿದೆ’ ಎಂದು ಅವರು ಹೇಳಿದ್ದಾರೆ.

‘ಉದ್ಯಮಗಳ ಮೇಲಿನ ವಿದ್ಯುತ್‌ ದರ ಹೆಚ್ಚಿಸುವ ಬದಲು, ಕಡಿಮೆ ಮಾಡಬೇಕು ಎಂದು ನಾವು ಕೆಇಆರ್‌ಸಿಗೆ ಮನವಿ ಸಲ್ಲಿಸಿದ್ದೆವು. ಆದರೂ ದರ ಹೆಚ್ಚಿಸಲಾಗಿದೆ. ಈ ನಿರ್ಧಾರವನ್ನು ಸರ್ಕಾರ ಕೂಡಲೇ ಹಿಂತೆಗೆದುಕೊಳ್ಳಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

‘ಬೆಳಿಗ್ಗೆ 6ರಿಂದ 10ರವರೆಗೆ ಅಂದರೆ ದಟ್ಟಣೆ ಸಮಯದಲ್ಲಿ ವಿದ್ಯುತ್‌ ಬಳಕೆಗಾಗಿ ಉದ್ಯಮದ ಮೇಲೆ ವಿಧಿಸುತ್ತಿದ್ದ ಯುನಿಟ್‌ಗೆ ₹1 ದಂಡವನ್ನು ತೆಗೆದು ಹಾಕುವ ನಿರ್ಧಾರವನ್ನು ಕೆಇಆರ್‌ಸಿ ತೆಗೆದುಕೊಂಡಿದೆ. ಇದನ್ನು ನಾವು ಸ್ವಾಗತಿಸುತ್ತೇವೆ’ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT