ಸೋಮವಾರ, ಜನವರಿ 27, 2020
27 °C

ಪಿಂಚಣಿಗಾಗಿ ನೌಕರರ ಉಪವಾಸ ಸತ್ಯಾಗ್ರಹ 10ರಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ರಾಜ್ಯದ ಅನುದಾನಿತ ಶಾಲಾ ಕಾಲೇಜುಗಳ ನೌಕರರಿಗೆ ಪಿಂಚಣಿ ಸೌಲಭ್ಯ ನೀಡುವಂತೆ ಒತ್ತಾಯಿಸಿ ಇದೇ 10ರಿಂದ ಸ್ವಾತಂತ್ರ್ಯ ಉದ್ಯಾನದಲ್ಲಿ ಅಹೋರಾತ್ರಿ ಉಪವಾಸ ಸತ್ಯಾಗ್ರಹ ಮಾಡಲಿದ್ದೇವೆ’ ಎಂದು ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ಎಸ್‌.ಉಮೇಶ್‌ ತಿಳಿಸಿದರು.‌

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ ಅನುದಾನಿತ ಶಾಲಾ ಕಾಲೇಜುಗಳಲ್ಲಿ 2006ರ ನಂತರ ನೇಮಕ ಹೊಂದಿದ ಯಾವ ನೌಕರರಿಗೂ ಹಳೆಯ ನಿಶ್ಚಿತ ಪಿಂಚಣಿ (ಒಪಿಎಸ್‌) ಅಥವಾ ವಂತಿಗೆ ಆಧರಿತ ನೂತನ ಪಿಂಚಣಿ ಯೋಜನೆ (ಎನ್‌ಪಿಎಸ್‌) ಸೌಲಭ್ಯಗಳಿಲ್ಲ. ಬೇರೆ ರಾಜ್ಯಗಳಲ್ಲಿ ಸರ್ಕಾರಿ ಹಾಗೂ ಅನುದಾನಿತ ನೌಕರರ ಈ ರೀತಿಯ ತಾರತಮ್ಯ ಇಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಈ ಬಗ್ಗೆ ಹಲವು ಬಾರಿ ಸರ್ಕಾರಕ್ಕೆ ಮನವಿ ಮಾಡಿದರೂ, ಹುಸಿ ಭರವಸೆ ಮತ್ರ ಸಿಕ್ಕಿದೆ. ನಮಗೆ ಅನ್ಯಾಯವಾಗುತ್ತಲೇ ಬಂದಿದೆ. ಸರ್ಕಾರದ ಈ ಹಠಮಾರಿ ಧೋರಣೆಗೆ ಬೇಸತ್ತು ಅಹೋರಾತ್ರಿ ಧರಣಿಗೆ ಮುಂದಾಗಿದ್ದೇವೆ’ ಎಂದರು. 

‘ಬಿ.ಎಸ್‌.ಯಡಿಯೂರಪ್ಪ ಅವರು ಹಿಂದೆ ವಿರೋಧ ಪಕ್ಷದ ನಾಯಕರಾಗಿದ್ದಾಗ ಪಿಂಚಣಿ ಪ್ರತಿಯೊಬ್ಬ ನೌಕರನ ಹಕ್ಕು ಎಂದು ದನಿ ಎತ್ತಿದ್ದರು. ಈಗ ಅವರೇ ಮುಖ್ಯಮಂತ್ರಿಯಾಗಿದ್ದಾರೆ. ಪಿಂಚಣಿ ವಂಚಿತರ ಬೇಡಿಕೆಯನ್ನು ಅವರು ಈಡೇರಿಸಬೇಕು’ ಎಂದು ಮನವಿ ಮಾಡಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು