ಶುಕ್ರವಾರ, ಸೆಪ್ಟೆಂಬರ್ 24, 2021
24 °C
ಕಳೆದ ವಾರವಷ್ಟೇ 141 ಎಕರೆ ವಶಕ್ಕೆ ಪಡೆದಿದ್ದ ನಗರ ಜಿಲ್ಲಾಡಳಿತ * ಮತ್ತೆ ₹ 73 ಕೋಟಿ ಮೌಲ್ಯದ ಸ್ವತ್ತು ವಶ

29 ಕೆರೆಗಳ 47 ಎಕರೆ ಒತ್ತುವರಿ ತೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೆರೆ ಜಾಗ, ಗೋಮಾಳ, ಗುಂಡುತೋಪುಗಳ ಒತ್ತುವರಿ ವಿರುದ್ಧ ಬೆಂಗಳೂರು ನಗರ ಜಿಲ್ಲಾಡಳಿತ ಭರ್ಜರಿ ಕಾರ್ಯಾಚರಣೆ ಆರಂಭಿಸಿದೆ. ಶನಿವಾರ ಒಂದೇ ದಿನ ಒಟ್ಟು 47 ಎಕರೆ 3 ಗುಂಟೆ ಜಾಗವನ್ನು ಸ್ವಾಧೀನ ಮಾಡಿಕೊಂಡಿದೆ. ಇವುಗಳ ಮೌಲ್ಯ ₹73.46 ಕೋಟಿ ಎಂದು ಅಂದಾಜಿಸಲಾಗಿದೆ.

ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬೆಂಗಳೂರು ಪೂರ್ವ, ಆನೇಕಲ್ ಮತ್ತು ಯಲಹಂಕ ತಾಲ್ಲೂಕುಗಳಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಒತ್ತುವರಿ ಮಾಡಿ ನಿರ್ಮಿಸಿಕೊಂಡಿದ್ದ ಕಟ್ಟಡಗಳನ್ನು ಜೆಸಿಬಿ ಮೂಲಕ ನೆಲಸಮ ಮಾಡಲಾಗಿದೆ. ಬೆಳಿಗ್ಗೆಯಿಂದಲೇ ಕಾರ್ಯಾಚರಣೆ ಆರಂಭವಾಗಿದ್ದು, ರಾತ್ರಿ ತನಕವೂ ಮುಂದುವರಿದಿತ್ತು.

ಸರ್ಕಾರಿ ಜಾಗದಲ್ಲಿ ನಿರ್ಮಿಸಿರುವ ಕಟ್ಟಡಗಳು ಚೆನ್ನಾಗಿದ್ದರೆ ಅವುಗಳನ್ನು ವಶಕ್ಕೆ ಪಡೆದು ಉಳಿಸಿಕೊಳ್ಳಲಾಗಿದೆ. ಸಾರ್ವಜನಿಕ ಉದ್ದೇಶದ ಕೆಲಸಗಳಿಗೆ ಅವುಗಳನ್ನು ಬಳಸಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾಡಳಿತದ ಅಧಿಕಾರಿಗಳು ವಿವರಿಸಿದರು.

ಕಳೆದ ಶನಿವಾರ ನಡೆಸಿದ ಕಾರ್ಯಾಚರಣೆಯಲ್ಲಿ 58 ಕೆರೆಗಳಲ್ಲಿ ಒತ್ತುವರಿಯಾಗಿದ್ದ 141 ಎಕರೆ ಜಾಗದಲ್ಲಿದ್ದ ಕಟ್ಟಡ ತೆರವುಗೊಳಿಸಿ ವಶಕ್ಕೆ ಪಡೆಯಲಾಗಿತ್ತು. ಈ ಶನಿವಾರ ಮತ್ತೆ ನಡೆಸಿರುವ ಕಾರ್ಯಾಚರಣೆಯಲ್ಲಿ 29 ಕೆರೆಗಳ ಒತ್ತುವರಿ ತೆರವು ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಆನೇಕಲ್ ತಾಲ್ಲೂಕಿನಲ್ಲಿ 10 ಕೆರೆಗಳಲ್ಲಿ ಒತ್ತುವರಿಯಾಗಿದ್ದ 15 ಎಕರೆ 23 ಗುಂಟೆ ಜಾಗವನ್ನು ವಶಕ್ಕೆ ಪಡೆಯಲಾಗಿದೆ. ಬೆಂಗಳೂರು ಪೂರ್ವ ತಾಲ್ಲೂಕಿನ 8 ಕೆರೆಗಳಲ್ಲಿ ಒತ್ತುವರಿಯಾಗಿದ್ದ 7 ಎಕರೆ 24 ಗುಂಟೆ ತೆರವುಗೊಳಿಸಲಾಗಿದೆ.

ಯಲಹಂಕ ತಾಲ್ಲೂಕಿನ 5 ಕೆರೆಯಲ್ಲಿ 13 ಎಕರೆ 10 ಗುಂಟೆ ಜಾಗದಲ್ಲಿದ್ದ ಕಟ್ಟಡ ತೆರವುಗೊಳಿಸಿ ವಶಕ್ಕೆ ಪಡೆಯಲಾಗಿದೆ. ದಕ್ಷಿಣ ತಾಲ್ಲೂಕಿನ 4 ಕೆರೆಗಳ 5 ಎಕರೆ 9 ಗುಂಟೆ, ಉತ್ತರ ತಾಲ್ಲೂಕಿನ 2 ಕೆರೆಯಲ್ಲಿ ಒತ್ತುವರಿಯಾಗಿದ್ದ 5 ಎಕರೆ 7 ಗುಂಟೆ ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.‌

ತೆರವು ಕಾರ್ಯಾಚರಣೆ ಸಂದರ್ಭದಲ್ಲಿ ಮನೆ, ಡೇರೆ ಸೂರುಗಳನ್ನು ಕಳೆದುಕೊಂಡವರು ಅಧಿಕಾರಿಗಳ ಜತೆ ಮಾತಿನ ಚಕಮಕಿಗೆ ಮುಂದಾದರು. ಪೊಲೀಸ್ ಭದ್ರತೆಯ ನಡುವೆ ಕಾರ್ಯಾಚರಣೆಯನ್ನು ಅಧಿಕಾರಿಗಳು ಮುಂದುವರಿಸಿದ್ದಾರೆ.

ಜಾಗ ಕಳೆದುಕೊಂಡ ನಿವೃತ್ತ ಎಂಜಿನಿಯರ್:  ಲೋಕೋಪಯೋಗಿ ಇಲಾಖೆಯ ನಿವೃತ್ತ ಕಾರ್ಯಪಾಲಕ ಎಂಜಿನಿಯರ್ ಒಬ್ಬರು ಒತ್ತುವರಿ ಮಾಡಿಕೊಂಡಿದ್ದ ಕೋಟ್ಯಾಂತರ ರೂಪಾಯಿ ಮೌಲ್ಯದ 14 ಎಕರೆ 8 ಗುಂಟೆ ಜಾಗ ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎಲೆಕ್ಟ್ರಾನಿಕ್ ಸಿಟಿ ಪ್ರದೇಶದ ಹುಲಿಮಂಗಲ ಗ್ರಾಮ ವ್ಯಾಪ್ತಿಯ ಗೋಮಾಳವನ್ನು ಅವರು ಒತ್ತುವರಿ ಮಾಡಿಕೊಂಡಿದ್ದರು. ವಾಣಿಜ್ಯ ಕಟ್ಟಡಗಳನ್ನು ಆ ಜಾಗದಲ್ಲಿ ನಿರ್ಮಿಸಿದ್ದರು.  ಉಪವಿಭಾಗಾಧಿಕಾರಿ ಎಂ.ಜಿ. ಶಿವಣ್ಣ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಎಲ್ಲವನ್ನೂ ತೆರವುಗೊಳಿಸಲಾಯಿತು ಎಂದು ತಹಶೀಲ್ದಾರ್ ಪಿ. ದಿನೇಶ್ ತಿಳಿಸಿದರು.

‘ಈ ಜಾಗವನ್ನು ನಾನು ಖರೀದಿ ಮಾಡಿದ್ದೇನೆಯೇ ಹೊರತು ಒತ್ತುವರಿ ಮಾಡಿಲ್ಲ’ ಎಂದು ನಿವೃತ್ತ ಎಂಜನಿಯರ್ ಹಫೀಜ್ ಅಲವತ್ತುಕೊಂಡರು.

ಇನ್ನೂ ಮುಂದುವರಿಯಲಿದೆ ಕಾರ್ಯಾಚರಣೆ‌: ಜಿಲ್ಲಾಧಿಕಾರಿ

‘ಸರ್ಕಾರಿ ಗೋಮಾಳ, ತೋಪುಗಳು ಮತ್ತು ಕೆರೆಗಳನ್ನು ಸಾಕಷ್ಟು ಒತ್ತುವರಿ ಮಾಡಲಾಗಿದೆ. ಕೆರೆಗಳ ಸರ್ವೆ ನಡೆಸಬೇಕು ಎಂಬ ಹೈಕೋರ್ಟ್ ಆದೇಶದ ಹೊರತಾಗಿ ಎಲ್ಲಾ ರೀತಿಯ ಸರ್ಕಾರಿ ಜಾಗವನ್ನೂ ವಶಕ್ಕೆ ಪಡೆಯಲಾಗುತ್ತಿದೆ. ಕಾರ್ಯಚರಣೆ ಪ್ರತಿ ವಾರವೂ ಮುಂದುವರಿಯಲಿದೆ’ ಎಂದು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಹೇಳಿದರು.

‘ಬೆಂಗಳೂರಿನಲ್ಲಿ 837 ಕೆರೆಗಳಿದ್ದು, ಬಹುತೇಕ ಕಡೆ ಒತ್ತುವರಿಯಾಗಿದೆ. ಮುಂದಿನ ಪೀಳಿಗೆಗೆ ಸರ್ಕಾರಿ ಜಾಗ ಉಳಿಸಬೇಕು ಎಂಬ ಉದ್ದೇಶದಿಂದ ಈ ಕಾರ್ಯಾಚರಣೆ ನಡೆಸಲಾಗುತ್ತಿದೆ. ಕಾಚರಕನಹಳ್ಳಿಯಲ್ಲಿ ಶೆಲ್ ಪೆಟ್ರೋಲ್ ಬಂಕ್ ಕೂಡ ತೆರವುಗೊಳಿಸಲಾಗುತ್ತಿದೆ’ ಎಂದು ‘ಪ್ರಜಾವಾಣಿ’ಗೆ ವಿವರಿಸಿದರು.

‘ಈ ರೀತಿಯ ಕಾರ್ಯಾಚರಣೆಯನ್ನು ಒಮ್ಮೆ ನಡೆಸಿದರೆ ಒತ್ತುವರಿ ಮಾಡಿಕೊಳ್ಳುವವರಲ್ಲಿ ಭಯ ಹುಟ್ಟುತ್ತದೆ. ಅನಧಿಕೃತವಾಗಿ ಕಟ್ಟಡ ನಿರ್ಮಿಸಿಕೊಂಡರೆ ಒಂದಲ್ಲ ಒಂದು ದಿನ ಸರ್ಕಾರ ಮತ್ತೆ ವಶಕ್ಕೆ ಪಡೆಯಲಿದೆ ಎಂಬುದು ಒತ್ತುವರಿದಾರರಿಗೆ ಗೊತ್ತಾಗಬೇಕಿದೆ’ ಎಂದರು.

ಪ್ರಭಾವ ಬಳಿಸಿ ಉಳಿಸಿಕೊಳ್ಳುವ ವಿಫಲ ಯತ್ನ

ಬಲಿಷ್ಠರೇ ಹೆಚ್ಚಿನದಾಗಿ ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡಿದ್ದು, ಪ್ರಭಾವ ಬಳಿಸಿ ಉಳಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ, ಅಧಿಕಾರಿಗಳು ಫೋನ್ ಸ್ವಿಚ್‌ ಆಫ್ ಅಥವಾ ಏರೋಪ್ಲೇನ್ ಮೋಡ್‌ನಲ್ಲಿ ಇರಿಸಿಕೊಂಡು ಕಾರ್ಯಾಚರಣೆ ನಡೆಸುತ್ತಿದ್ದಾರೆ.

‘ಪ್ರಭಾವಿಗಳ ಶ್ರೀರಕ್ಷೆ ಇದೆ ಎಂದುಕೊಂಡು ಒತ್ತುವರಿ ಮಾಡಿದವರು ಈಗ ತೊಂದರೆಗೆ ಸಿಲುಕಿದ್ದು, ರಾಜಕಾರಣಿಗಳಿಗೆ ದುಂಬಾಲು ಬಿದ್ದು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಒಂದೆರಡು ದಿನ ಅವಕಾಶ ನೀಡಿದರೆ ನ್ಯಾಯಾಲಯದಿಂದ ತಡೆಯಾಜ್ಞೆ ತರುತ್ತೇವೆ ಎಂದು ಕೇಳಿಕೊಳ್ಳುತ್ತಿದ್ದಾರೆ. ಅದ್ಯಾವುದಕ್ಕೂ ಅವಕಾಶ ನೀಡದೆ ತೆರವುಗೊಳಿಸಲಾಗುತ್ತಿದೆ’ ಎಂದು ಅಧಿಕಾರಿಯೊಬ್ಬರು ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು