ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇ- ಆಸ್ತಿ: ಸ್ವತ್ತಿನ ದಾಖಲೆಗಳ ಡಿಜಿಟಲ್ ಖಾತರಿ

ಸ್ವತ್ತುಗಳ ಸಮಗ್ರ ದಾಖಲೆ ಆನ್‌ಲೈನ್‌ನಲ್ಲಿ ಅಳವಡಿಕೆ l 100 ವಾರ್ಡ್‌ಗಳಿಗೆ ವಿಸ್ತರಣೆಯತ್ತ ಬಿಬಿಎಂಪಿ ಹೆಜ್ಜೆ
Last Updated 11 ಏಪ್ರಿಲ್ 2021, 21:05 IST
ಅಕ್ಷರ ಗಾತ್ರ

ಬೆಂಗಳೂರು: ಜಗತ್ತಿನ ನಾನಾ ಸಮಸ್ಯೆಗಳಿಗೆ ಡಿಜಿಟಲ್‌ ರೂಪದಲ್ಲಿ ಪರಿಹಾರ ಒದಗಿಸುವ ನೂರಾರು ಕಂಪನಿಗಳ ನೆಲೆವೀಡು ಬೆಂಗಳೂರು. ದೇಶದ ತಂತ್ರಜ್ಞಾನ ಕ್ಷೇತ್ರದ ರಾಜಧಾನಿ ಎಂದೇ ಖ್ಯಾತವಾಗಿರುವ ಈ ನಗರದ ಆಸ್ತಿ ದಾಖಲೆಗಳ ಗೊಂದಲಗಳಿಗೆ ಮಾತ್ರ ಇದುವರೆಗೂ ಮುಕ್ತಿ ಸಿಕ್ಕಿರಲಿಲ್ಲ. ನಗರದ ಆಸ್ತಿ ದಾಖಲೆಗಳನ್ನು ಆನ್‌ಲೈನ್‌ ವೇದಿಕೆಯಲ್ಲಿ ಅಳವಡಿಸುವ ‘ಇ–ಆಸ್ತಿ’ ಕಾರ್ಯಕ್ರಮವನ್ನು ಜಾರಿಗೊಳಿಸುವತ್ತ ಬಿಬಿಎಂಪಿ ಹೆಜ್ಜೆ ಇಟ್ಟಿದೆ.

ಏನಿದು ಇ–ಆಸ್ತಿ?

ಆಸ್ತಿ ದಾಖಲೆಗಳನ್ನು ಡಿಜಿಟಲೀಕರಿಸಿ ಅವುಗಳನ್ನು ಆನ್‌ಲೈನ್‌ ವೇದಿಕೆಯಲ್ಲಿ (http://eaasthi.mrc.gov.in/) ಅಳವಡಿಸುವ ಸಲುವಾಗಿ ಇ–ಆಸ್ತಿ ತಂತ್ರಾಂಶವನ್ನು ಸರ್ಕಾರ ರೂಪಿಸಿದೆ. ಆಸ್ತಿ ದಾಖಲೆಗಳನ್ನು ಈ ತಂತ್ರಾಂಶದ ಮೂಲಕವೇ ನಿರ್ವಹಿಸುವ ಕಾರ್ಯಕ್ರಮವೇ ‘ಇ– ಆಸ್ತಿ’. ಇದು ಆಸ್ತಿ ದಾಖಲೆ ನಿರ್ವಹಣೆಯ ಹೆಚ್ಚಿನ ಪ್ರಕ್ರಿಯೆಗಳ್ನು ಸ್ವಯಂಚಾಲಿತಗೊಳಿಸಿ, ಮಾನವನ ಹಸ್ತಕ್ಷೇಪ ಕಡಿಮೆ ಮಾಡಲಿದೆ. ಪ್ರತಿಯೊಂದು ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಡಿಜಿ–ಲಾಕರ್‌ನಲ್ಲಿ ಭದ್ರವಾಗಿಡಲು ನೆರವಾಗುತ್ತದೆ. ದಾಖಲೆಗಳ ಫೋರ್ಜರಿ ಮಾಡುವುದು, ಒಂದೇ ಆಸ್ತಿಯನ್ನು ಏಕಕಾಲದಲ್ಲಿ ಒಬ್ಬರಿಗಿಂತ ಹೆಚ್ಚು ಮಂದಿಗೆ ಮಾರಾಟ ಮಾಡುವುದು, ಆಸ್ತಿ ವಿವರಗಳನ್ನು ಅಕ್ರಮವಾಗಿ ತಿದ್ದುವುದು ಮುಂತಾದ ಅನೇಕ ಸಮಸ್ಯೆಗಳಿಗೆ ಇತಿಶ್ರಿ ಹಾಡಬೇಕೆಂಬ ಉದ್ದೇಶದಿಂದ ರಾಜ್ಯ ಸರ್ಕಾರವು ನ್ಯಾಷನಲ್‌ ಇನ್ಫರ್ಮ್ಯಾಟಿಕ್ಸ್‌ ಸೆಂಟರ್‌ನ (ಎನ್‌ಐಸಿ) ಸಹಕಾರದಲ್ಲಿ ಇದನ್ನು ಜಾರಿಗೆ ತಂದಿದೆ.

ರಾಜ್ಯದ ಬೇರೆ ನಗರ ಹಾಗೂ ಪಟ್ಟಣಗಳಲ್ಲಿ ಇ–ಆಸ್ತಿ ಜಾರಿಯಾಗಿ ವರುಷಗಳೇ ಉರುಳಿವೆ. ಬಿಬಿಎಂಪಿ ವ್ಯಾಪ್ತಿಯಲ್ಲೂ ಈ ಎಲ್ಲ ಸೇವೆಗಳನ್ನು ಇ–ಆಸ್ತಿ ಮೂಲಕವೇ ನಿರ್ವಹಿಸುವಂತೆ ಸರ್ಕಾರ 2019ರ ಜೂನ್‌ 12ರಂದೇ ಆದೇಶ ಮಾಡಿತ್ತು. ಬೆಂಗಳೂರು ಮಹಾನಗರದ ಅವಶ್ಯಕತೆಗಳಿಗೆ ಅನುಗುಣವಾಗಿ ಈ ತಂತ್ರಾಂಶದಲ್ಲಿ ಕೆಲವೊಂದು ಮಾರ್ಪಾಡುಗಳನ್ನು ಮಾಡಬೇಕಾಗಿದ್ದರಿಂದ ಇಲ್ಲಿ ‘ಇ–ಆಸ್ತಿ’ ಜಾರಿ ತಡವಾಗಿದೆ. ಶಾಂತಿನಗರ ವಿಧಾನ ಸಭಾ ಕ್ಷೇತ್ರದ ಶಾಂತಲಾ ನಗರ, ನೀಲಸಂದ್ರ ಹಾಗೂ ಶಾಂತಿನಗರ ವಾರ್ಡ್‌ಗಳಲ್ಲಿ ಇದನ್ನು 2020ರ ನ.12ರಿಂದ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ. ಪ್ರಾರಂಭಿಕ ಹೆಜ್ಜೆಯಲ್ಲೇ ಸಿಕ್ಕಿರುವ ಯಶಸ್ಸು ಬಿಬಿಎಂಪಿ ಅಧಿಕಾರಿಗಳಲ್ಲಿ ಭರವಸೆಯನ್ನು ಮೂಡಿಸಿವೆ. ಹಾಗಾಗಿ ‘ಇ–ಆಸ್ತಿ’ ಕಾರ್ಯಕ್ರಮವನ್ನು ನಗರದ ಕೇಂದ್ರ ವಲಯದ 100 ವಾರ್ಡ್‌ಗಳಿಗೆ ವಿಸ್ತರಿಸಲು ಬಿಬಿಎಂಪಿ ಕ್ರಮ ಕೈಗೊಂಡಿದೆ. ಇಷ್ಟೂ ವಾರ್ಡ್‌ಗಳಲ್ಲಿ ಇನ್ನು ಆಸ್ತಿ ದಾಖಲೆಗಳ ನಿರ್ವಹಣೆ ಇ–ಆಸ್ತಿ ತಂತ್ರಾಂಶದ ಮೂಲಕವೇ ನಡೆಯಲಿದೆ.

ಆಸ್ತಿ ಖಾತೆಗಳ ನೋಂದಣಿ, ವರ್ಗಾವಣೆ, ವಿಭಜನೆ, ಒಂದುಗೂಡಿಸುವಿಕೆಗಳನ್ನು ಪ್ರಸ್ತುತ ಸಕಾಲ ಅಡಿ ಅರ್ಜಿ ಸ್ವೀಕರಿಸಿ ನಿರ್ವಹಿಸಲಾಗುತ್ತಿದೆ. ಖಾತಾ ಉದ್ಧೃತ (ಖಾತಾ ಎಕ್ಸ್‌ಟ್ರ್ಯಾಕ್ಟ್‌) ಹಾಗೂ ಖಾತಾ ದೃಢೀಕರಣಪತ್ರಗಳನ್ನು (ಖಾತಾ ಸರ್ಟಿಫಿಕೇಟ್‌) ಎನ್‌ಐಸಿ ಅಥವಾ ಸಂಬಂಧಪಟ್ಟ ಸಹಾಯಕ ಕಂದಾಯ ಅಧಿಕಾರಿ (ಎಆರ್‌ಒ) ಕಚೇರಿಗಳಲ್ಲಿ ಅರ್ಜಿ ಸಲ್ಲಿಸಿ ಪಡೆಯಲು ಅವಕಾಶವಿದೆ. ಇವುಗಳನ್ನು ಇನ್ನು ಇ–ಆಸ್ತಿ ಮೂಲಕ ನಿರ್ವಹಿಸಲಾಗುತ್ತದೆ. ಭೂಸ್ವಾಧೀನ, ಆಸ್ತಿಗಳ ಮಾರಾಟ, ಆನುವಂಶಿಕವಾಗಿ ಹಕ್ಕು ಹಸ್ತಾಂತರ, ಉಡುಗೊರೆ, ವಿಭಜನೆಗಳ ಮೂಲಕ ಆಸ್ತಿಗಳ ಹಕ್ಕು ವರ್ಗಾವಣೆಯ ಅರ್ಜಿಗಳನ್ನೂ ಇ ಆಸ್ತಿ ಮೂಲಕವೇ ನಿರ್ವಹಿಸಲಾಗುತ್ತದೆ. ಸಕ್ಷಮ ಪ್ರಾಧಿಕಾರದ ಅಧಿಕಾರಿಗಳ ಡಿಜಿಟಲ್‌ ಸಹಿ ಇರುವ ‘ನಮೂನೆ– ಎ’ ಅಥವಾ ‘ನಮೂನೆ ಬಿ’ ಅನ್ನು ಇ– ಆಸ್ತಿ ತಂತ್ರಾಂಶ ಮೂಲಕವೇ ಸೃಜಿಸಲಾಗುತ್ತದೆ. ಕೈಬರಹದ ಸಹಿ ಇರುವ ಹಕ್ಕು ವರ್ಗಾವಣೆ ಪತ್ರ ನೀಡುವಿಕೆ ಸಂಪೂರ್ಣ ಸ್ಥಗಿತಗೊಳ್ಳಲಿದೆ.

ಆಸ್ತಿಯ ಸ್ಥಳದ ವಿವರಗಳು ಜಿಐಎಸ್‌ (ಜಿಇಪಿಟಿಐಎಸ್‌) ಜೊತೆ ಜೋಡಿಸಲಾಗಿರುತ್ತದೆ. ಆಸ್ತಿಗೆ ಸಂಬಂಧಪಟ್ಟ ಹೊಣೆಗಾರಿಕೆಗಳ ವಿವರಗಳನ್ನೂ ಇದರಲ್ಲಿ ಸಂಯೋಜಿಸಬಹುದು. ಆಸ್ತಿ ಮಾಲೀಕ ತನ್ನ ಆಸ್ತಿ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ನೋಡಬಹುದು. ಅಗತ್ಯಬಿದ್ದಾಗ ಡಿಜಿಟಲ್‌ ಸಹಿ ಇರುವ ದಾಖಲೆಯನ್ನು ಸಂಬಂಧಪಟ್ಟ ಅಧಿಕಾರಿಯಿಂದ ಪಡೆದುಕೊಳ್ಳಬಹುದು. ಇದಕ್ಕೆ ತಗಲುವ ಶುಲ್ಕವನ್ನೂ ಆನ್‌ಲೈನ್‌ನಲ್ಲೇ ಪಾವತಿಸಬಹುದು. ಹಾಗಾಗಿ ಕಚೇರಿಗೆ ಅಲೆಯುವ ಪ್ರಮೇಯವೇ ಎದುರಾಗದು.

ಈ ಹಿಂದೆ ಸರ್ವೆ ವೇಳೆ ಬಿಟ್ಟು ಹೋದ ಅಥವಾ ಸರ್ವೆ ಬಳಿಕ ಸೇರ್ಪಡೆಗೊಂಡ ಆಸ್ತಿಗಳನ್ನೂ ಇ–ಆಸ್ತಿ ತಂತ್ರಾಂಶದಲ್ಲಿ ಅಳವಡಿಸಲು ಹಾಗೂ ಆಸ್ತಿ ಸ್ವರೂಪ, ಅಳತೆ ಮತ್ತು ಮಾಲೀಕತ್ವದ ವಿವರ ಬದಲಾವಣೆಗೂ ಅವಕಾಶ ನೀಡಲಾಗಿದೆ.

ಇ–ಆಸ್ತಿ ಕಾರ್ಯಕ್ರಮ ಆಸ್ತಿ ದಾಖಲೆಗಳ ಬಗ್ಗೆ ಭರವಸೆ ಹೆಚ್ಚಿಸಲಿದೆ. ರಿಯಲ್ ಎಸ್ಟೇಟ್‌ ವಹಿವಾಟುಗಳನ್ನು ಹೆಚ್ಚಿಸಲಿದೆ. ನಗರದ ಬ್ರ್ಯಾಂಡ್ ಮೌಲ್ಯ ಹೆಚ್ಚಳಕ್ಕೂ ದೀರ್ಘಾವಧಿಯಲ್ಲಿ ಇದು ಗಣನೀಯ ಕೊಡುಗೆ ನೀಡಲಿದೆ.

‘ವ್ಯಾಪಾರ ವಹಿವಾಟು ವೃದ್ಧಿಗೂ ಸಹಕಾರಿ’

‘ಇ– ಆಸ್ತಿ ಜಾರಿಯಾದ ಬಳಿಕ ಆಸ್ತಿ ದಾಖಲೆಗಳಿಗೆ ಸಂಬಂಧಿಸಿದ ಅಕ್ರಮಗಳಿಗೆ ಸಂಪೂರ್ಣ ಕಡಿವಾಣ ಬೀಳಲಿದೆ. ಬಾರ್‌ಕೋಡ್‌ ಇರುವ ಡಿಜಿಟಲ್‌ ಸಹಿ ಸೇರಿದಂತೆ ವಿವಿಧ ಭದ್ರತಾ ಕ್ರಮಗಳನ್ನು ಅಳವಡಿಸಿರುವುದರಿಂದ ಆಸ್ತಿ ದಾಖಲೆ ತಿರುಚಲು ಅವಕಾಶವೇ ಇಲ್ಲ. ಆಸ್ತಿಯ ಮಾಹಿತಿಗಳನ್ನು ಜನರು ಇ– ಆಸ್ತಿ ವೆಬ್‌ಸೈಟ್‌ನಲ್ಲೇ ನೋಡಬಹುದು. ವ್ಯಾಪಾರ ವಹಿವಾಟು ಹೆಚ್ಚಳಕ್ಕೂ ಇದು ಸಹಕಾರಿ. ಪ್ರಾಯೋಗಿಕ ಅನುಷ್ಠಾನದ ವೇಳೆ ಕಂಡುಬಂದ ಲೋಪಗಳನ್ನು ಸರಿಪಡಿಸಿಕೊಂಡು ಬಿಬಿಎಂಪಿಯ ಕೇಂದ್ರ ಪ್ರದೇಶದ 100 ವಾರ್ಡ್‌ಗಳಿಗೆ ಇದನ್ನು ವಿಸ್ತರಿಸಲು ಕ್ರಮಕೈಗೊಂಡಿದ್ದೇವೆ. ಮುಂದೆ ಹೊರ ವಲಯದ ವಾರ್ಡ್‌ಗಳಿಗೂ ವಿಸ್ತರಿಸಲಿದ್ದೇವೆ.

- ಗೌರವ್ ಗುಪ್ತ, ಬಿಬಿಎಂಪಿ ಮುಖ್ಯ ಆಯುಕ್ತ

***

‘ಮೂರು ವಾರ್ಡ್‌ಗಳಲ್ಲೂ ಉತ್ತಮ ಪ್ರತಿಕ್ರಿಯೆ’

ಇ–ಆಸ್ತಿ ಕಾರ್ಯಕ್ರಮವನ್ನು ಮೂರು ವಾರ್ಡ್‌ಗಳಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನ ಮಾಡಿದ್ದೇವೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದರ ಅನುಷ್ಠಾನದಲ್ಲಿ ಏನೇನು ಸಮಸ್ಯೆ ಎದುರಾಗಲಿದೆ ಎಂಬುದನ್ನು ಪರಿಶೀಲಿಸಿದ್ದೇವೆ. ಆಸ್ತಿ ದಾಖಲೆಗಳಿಗೆ ಸಂಬಂಧಿಸಿ ಎಆರ್‌ಒ ಕಚೇರಿಗೆ ಅಲೆಯುವ ಪ್ರಮೇಯ ಇರುವುದಿಲ್ಲ. ಸಾರ್ವಜನಿಕರಿಗೆ ಇದರಿಂದ ಭಾರಿ ಅನುಕೂಲಗಳಾಗಲಿವೆ

- ಬಸವರಾಜು ಎಸ್‌, ವಿಶೇಷ ಆಯುಕ್ತ (ಕಂದಾಯ)

***

‘ಇ–ಆಸ್ತಿ ಜಾರಿ ಬಳಿಕ ಭ್ರಷ್ಟಾಚಾರಕ್ಕೆ ಕಡಿವಾಣ’

ಆಸ್ತಿ ದಾಖಲೆ ತೆಗೆದುಕೊಳ್ಳಲು ಬಿಬಿಎಂಪಿ ಕಚೇರಿಗಳಿಗೆ ಕನಿಷ್ಠ ಎರಡು ಸಲ ಅಲೆಯಬೇಕಿದೆ. ಆಸ್ತಿ ದಾಖಲೆ ತಿರುಚುವ ಮೂಲಕ ಅನೇಕ ಅಕ್ರಮಗಳನ್ನು ನಡೆಸಲಾಗುತ್ತಿದೆ. ಇ–ಆಸ್ತಿ ಜಾರಿಗೆ ಬಂದ ಬಳಿಕ ಭ್ರಷ್ಟಾಚಾರಗಳಿಗೆ ಹಾಗೂ ಅಕ್ರಮಗಳಿಗೆ ಕಡಿವಾಣ ಬೀಳಲಿದೆ. ಆಸ್ತಿ ಮಾಲೀಕರು ಯಾವುದೇ ಸ್ಥಳದಿಂದ ಬೇಕಾದರೂ ಆಸ್ತಿ ದಾಖಲೆಗಳನ್ನು ಪಡೆಯಬಹುದು.

- ಡಿ.ಎಸ್‌.ರಾಜಶೇಖರ್‌, ಪ್ರಜಾ ವೇದಿಕೆ ಬೆಂಗಳೂರು

ಇ ಆಸ್ತಿ ತಂತ್ರಾಂಶ ಪ್ರಯೋಜನಗಳು

* ಇ– ಆಸ್ತಿ ತಂತ್ರಾಂಶವು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ‘ಕಾವೇರಿ’ ತಂತ್ರಾಂಶದ ಜೊತೆ ಸಂಯೋಜನೆಗೊಂಡಿದೆ. ಬಿಬಿಎಂಪಿಯಿಂದ ಪಡೆದ ಡಿಜಿಟಲ್‌ ಸಹಿ ಇರುವ ‘ನಮೂನೆ ಎ’ ಅಥವಾ ‘ನಮೂನೆ ಬಿ’ಯ ನೋಂದಣಿ ಪ್ರಕ್ರಿಯೆ ಪೂರ್ಣವಾದ ತಕ್ಷಣವೇ ಆಸ್ತಿ ಮಾಲೀಕತ್ವದ ಹಕ್ಕು ವರ್ಗಾವಣೆ ಪ್ರಕ್ರಿಯೆ ಜಾರಿಗೊಳಿಸಲು ಬಿಬಿಎಂಪಿಗೆ ಸ್ವಯಂಚಾಲಿತವಾಗಿ ಮಾಹಿತಿ ರವಾನೆಯಾಗುತ್ತದೆ.

* ನೋಂದಣಿ ಇಲಾಖೆಯಲ್ಲಿ ಹಕ್ಕು ವರ್ಗಾವಣೆಯಾದ ನಂತರ ಆ ಎಲ್ಲ ವಿವರಗಳು ಬಿಬಿಎಂಪಿಗೆ ವರ್ಗಾವಣೆಯಾಗುತ್ತವೆ. ಆದ್ದರಿಂದ ಆಸ್ತಿ ಮಾಲೀಕರು ಬಿಬಿಎಂಪಿಗೆ ಅರ್ಜಿ ಸಲ್ಲಿಸಿ ಖಾತಾ ವರ್ಗಾವಣೆ ಮಾಡಿಸಬೇಕಿಲ್ಲ.

* ಆಸ್ತಿ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಂಡ ಬಗ್ಗೆ ಮಾರಾಟಗಾರರು/ ಖರೀದಿದಾರರಿಗೆ ಎಸ್ಎಂಎಸ್‌/ ಇಮೇಲ್‌ ಮೂಲಕ ಮಾಹಿತಿ ರವಾನೆಯಾಗುತ್ತದೆ

* ಬಿಬಿಎಂಪಿಯು ದೃಢಪಡಿಸಿರುವ ಮಾಹಿತಿಯ ಆಧಾರದಲ್ಲಿ ನೋಂದಣಿ ಇಲಾಖೆಯಲ್ಲಿ ಹಕ್ಕು ವರ್ಗಾವಣೆ ಪ್ರಕ್ರಿಯೆ ಮುಂದುವರಿಸಬಹುದು

* ನಮೂನೆ–ಎ/ಬಿ ನಲ್ಲಿ ಸ್ವತ್ತಿನ ಮಾಲೀಕರ ಭಾವಚಿತ್ರ, ಚೆಕ್ಕುಬಂದಿ ವಿವರಗಳು ಇರುವುದರಿಂದ ಆಸ್ತಿ ಖರೀದಿದಾರರು ಮೋಸಹೋಗುವ ಸಾಧ್ಯತೆ ಕಡಿಮೆ

* ಯಾರಾದರೂ ನಕಲಿ ದಾಖಲೆ ಸೃಷ್ಟಿಸಿದರೂ ಆಸ್ತಿ ನಮೂನೆಗಳಲ್ಲಿ ಡಿಜಿಟಲ್‌ ಸಹಿಯ ಬಾರ್‌ಕೋಡ್‌ ಇರುವುದರಿಂದ ಈ ಅಕ್ರಮವನ್ನು ಸುಲಭವಾಗಿ ಪತ್ತೆಹಚ್ಚಬಹುದು

* ಎಲ್ಲ ನಮೂನೆಗಳನ್ನೂ ಇ–ಆಸ್ತಿ ವೆಬ್‌ಸೈಟ್‌ನಲ್ಲಿ (http://eaasthi.mrc.gov.in/) ಅಳವಡಿಸಿರುವುದರಿಂದ ಸಾರ್ವಜನಿಕರೂ ಅವುಗಳನ್ನು ಅಲ್ಲೇ ವೀಕ್ಷಿಸಬಹುದು. ಸ್ವತ್ತುಗಳ ಸಂಪೂರ್ಣ ವಿವರ ಪಡೆಯಬಹುದು

* ನಿಗದಿತ ಶುಲ್ಕ ಪಾವತಿಸಿ ನಮೂನೆಗಳನ್ನು ಪಡೆದು ಡಿಜಿಲಾಕರ್‌ನಲ್ಲಿ ಶೇಖರಿಸಿಟ್ಟುಕೊಳ್ಳಬಹುದು

* ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತ ಬಡಾವಣೆ ನಿರ್ಮಾಣಕ್ಕೆ ಕಡಿವಾಣ ಬೀಳಲಿದೆ

* ತೆರಿಗೆ ವಂಚನೆಯನ್ನು ನಿಯಂತ್ರಿಸಲೂ ಇದು ನೆರವಾಗುತ್ತದೆ

ತಂತ್ರಾಂಶದಲ್ಲಿ ದಾಖಲೆಗಳ ಅಳವಡಿಕೆ ಸವಾಲಿನ ಹಾದಿ

ರಾಜ್ಯದ ಇತರ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಮಹಾನಗರ ಪಾಲಿಕೆಗಳು ಇ–ಆಸ್ತಿ ಕಾರ್ಯಕ್ರಮವನ್ನು ಈಗಾಗಲೇ ಜಾರಿಗೊಳಿಸಿವೆ. ಆದರೆ, ಬೆಂಗಳೂರು ನಗರದ ಆಸ್ತಿಗಳ ಸ್ವರೂಪ ಇತರ ನಗರಗಳಿಗಿಂತ ವಿಭಿನ್ನ. ಇಲ್ಲಿ ಸಾವಿರಾರು ವಸತಿಗಳನ್ನು ಒಂದೇ ಕಟ್ಟಡದಲ್ಲಿ ಹೊಂದಿರುವ ಬೃಹತ್‌ ಅಪಾರ್ಟ್‌ಮೆಂಟ್ ಸಮುಚ್ಚಯಗಳೂ ಇವೆ. ಅಂತೆಯೆ ಕೊಳೆಗೇರಿಗಳಲ್ಲಿ ಓಣಿ ಓಣಿಗಳಲ್ಲಿ ಹುದುಗಿರುವ ಪುಟ್ಟ ಪೆಟ್ಟಿಗೆಯಂತಹ ವಸತಿಗಳೂ ಇವೆ. ನಗರದಲ್ಲಿರುವ 20 ಲಕ್ಷಕ್ಕೂ ಅಧಿಕ ಆಸ್ತಿಗಳನ್ನು ಡಿಜಿಟಲ್‌ ವೇದಿಕೆಯಲ್ಲಿ ಅಳವಡಿಸುವುದು ಸವಾಲಿನ ಕೆಲಸವೇ ಸರಿ.

ನಮೂನೆ ಎ/ಬಿಗಾಗಿ ನಾಗರಿಕರು ಅರ್ಜಿ ಸಲ್ಲಿಸಿದಾಗ ಬಿಬಿಎಂಪಿ ಕಂದಾಯ ಪರಿವೀಕ್ಷಕರು ಆಸ್ತಿ ಇರುವ ಸ್ಥಳಕ್ಕೆ ತೆರಳಿ ಅದರ ಸಂಪೂರ್ಣ ವಿವರ ಕಲೆಹಾಕುತ್ತಾರೆ. ಆಸ್ತಿಯ ಫೋಟೊವನ್ನೂ ತೆಗೆಯುತ್ತಾರೆ. ಅದನ್ನು ದತ್ತಾಂಶ ನಿರ್ವಹಣಾ ಸಿಬ್ಬಂದಿ (ಡಿಇಒ) ಇ–ಆಸ್ತಿ ಪೋರ್ಟಲ್‌ನಲ್ಲಿ ಅಳವಡಿಸುತ್ತಿದ್ದಾರೆ. ಮಾಲೀಕರ ಹೆಸರುಗಳು, ವಿಳಾಸ, ಅವರ ಭಾವಚಿತ್ರಗಳು, ಕಟ್ಟಡದ ಫೋಟೊ, ಅಳತೆ, ಮಹಡಿಗಳ ವಿವರ, ಚಕ್ಕುಬಂದಿ, ಇತರ ದಾಖಲೆಗಳು, ಭೂಬಳಕೆ ವಿಧಾನ ಇವೆಲ್ಲ ಮಾಹಿತಿಗಳನ್ನು ತಂತ್ರಾಂಶದಲ್ಲಿ ಅಳವಡಿಸುವುದಕ್ಕೆ ಗಂಟೆಗಟ್ಟಲೆ ಸಮಯ ತಗಲುತ್ತದೆ. ಶಾಂತಿನಗರ ಉಪವಿಭಾಗದ ಸಹಾಯಕ ಕಂದಾಯ ಅಧಿಕಾರಿ ಬಸವರಾಜು ಅವರ ತಂಡವು ಇದುವರೆಗೆ 304 ಆಸ್ತಿಗಳ ದಾಖಲೆಗಳನ್ನು ಇ– ಆಸ್ತಿ ತಂತ್ರಾಂಶದಲ್ಲಿ ಅಳವಡಿಸಿದೆ.

ಇನ್ನು ನಾಗರಿಕರೇ ಈ ಎಲ್ಲ ಮಾಹಿತಿ ಅಳವಡಿಸಿ, ಅವುಗಳನ್ನು ಬಿಬಿಎಂಪಿ ಅಧಿಕಾರಿಗಳು ಪರಿಶೀಲಿಸಿ ಅಖೈರುಗೊಳಿಸುವ ವಿಧಾನವನ್ನು ಅನುಸರಿಸಲು ಬಿಬಿಎಂಪಿ ಚಿಂತನೆ ನಡೆಸಿದೆ.

‘ಪ್ರಸ್ತುತ ಆಸ್ತಿ ದಾಖಲೆಯಲ್ಲಿ 18 ಕಾಲಂಗಳ ಮಾಹಿತಿಗಳು ಮಾತ್ರ ಇದ್ದವು. ಇ–ಆಸ್ತಿಯ ನಮೂನೆಯಲ್ಲಿ 42 ಕಾಲಂಗಳಲ್ಲಿ ವಿವರ ತುಂಬಿಸಬೇಕಿದೆ. ಈ ಮಾಹಿತಿಗಳನ್ನು ನಾಗರಿಕರೇ ಭರ್ತಿ ಮಾಡಲು ಅವಕಾಶ ಕಲ್ಪಿಸಲಿದ್ದೇವೆ. ಈ ಸಲುವಾಗಿ ನಾಗರಿಕರೇ ಮಾಹಿತಿ ತುಂಬಿಸುವ ಮಾದರಿಯನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ಯಾರಿಗೆ ಸ್ವತಃ ಈ ಮಾಹಿತಿ ತುಂಬಲು ಸಾಧ್ಯವಿಲ್ಲವೊ ಅವರು ಬೆಂಗಳೂರು ವನ್‌ ಕೇಂದ್ರಗಳಿಗೆ ತೆರಳಿ ಮಾಹಿತಿ ನೀಡುವ ಮೂಲಕ ಆಸ್ತಿ ಮಾಹಿತಿಯನ್ನು ಡಿಜಿಟಲ್‌ ಪೋರ್ಟಲ್‌ಗೆ ಅಪ್‌ಲೋಡ್‌ ಮಡಬಹುದು. ಇದಕ್ಕೆ ಮೂರು ತಿಂಗಳು ಕಾಲಾವಕಾಶ ನೀಡಲಿದ್ದೇವೆ’ ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಕಂದಾಯ) ಬಸವರಾಜು ಎಸ್‌. ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT