ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರು ಮರಗಳ ಬುಡಕ್ಕೆ ಮತ್ತೆ ಗರಗಸ ಇಟ್ಟರು

ಮಾನವ ಸರಪಣಿಯ ಶಾಂತಿಯುತ ಹೋರಾಟಕ್ಕೆ ಕರಗದ ಪಾಲಿಕೆ
Last Updated 21 ಮಾರ್ಚ್ 2021, 21:02 IST
ಅಕ್ಷರ ಗಾತ್ರ

ಬೆಂಗಳೂರು: ‘ತಂಪನ್ನೀಯುತ್ತಿರುವ ಮರಗಳನ್ನು ಅಭಿವೃದ್ಧಿ ಕಾಮಗಾರಿಗಾಗಿ ಕಡಿಯದಿರಿ’ ಎಂದು ಸ್ಥಳೀಯರು ಮಾನವ ಸರಪಣಿ ರಚಿಸುವ ಮೂಲಕ ಅಂಗಲಾಚಿದ್ದರು. ಚಿಣ್ಣರು, ಯುವಜನರು ಸೇರಿ ಅನೇಕರು ಎಚ್‌ಎಎಲ್‌ ಬಳಿ ಭಾನುವಾರ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲೇ ತಾಸುಗಟ್ಟಲೇ ಪ್ರತಿಭಟನೆ ನಡೆಸಿ ಮರಳಿದ್ದರು. ಅವರು ಮನೆಗೆ ಮರಳಿ ಇನ್ನೇನು ಉಪಾಹಾರ ಸೇವಿಸುವಷ್ಟರಲ್ಲಿ ಎಚ್‌ಎಎಲ್‌ ರಸ್ತೆಯ ಆರು ಮರಗಳ ಬುಡಗಳನ್ನು ಭಾಗಶಃ ಕತ್ತರಿಸಲಾಗಿದೆ.

ಸುದ್ದಿ ತಿಳಿದು ಮತ್ತೆ ಸ್ಥಳಕ್ಕೆ ಮರಳಿದ ಪ್ರತಿಭಟನಕಾರರು ವಿಶಾಲವಾಗಿ ಬೆಳೆದ ಮರಗಳ ಬುಡವನ್ನು ಗರಗಸ ಯಂತ್ರದಿಂದ ಕತ್ತರಿಸಿದ್ದನ್ನು ಕಂಡು ಅಕ್ಷರಶಃ ಮರುಗಿದರು. ಮರ ಕಡಿಯುತ್ತಿದ್ದವರನ್ನು ತರಾಟೆಗೆ ತೆಗೆದುಕೊಂಡರು.

‘ಮರ ಕಡಿಯುತ್ತಿರುವ ನೀವು, ನಿಮ್ಮ ಮಕ್ಕಳೂ ಇಲ್ಲೇ ಬದುಕಬೇಕಿಲ್ಲ. ಇಷ್ಟು ದೊಡ್ಡ ಮರಗಳನ್ನು ಕತ್ತರಿಸುತ್ತಿದ್ದೀರಲ್ವಾ ನಿಮಗೆ ಮನಸ್ಸಾದರೂ ಹೇಗೆ ಬರುತ್ತದೆ. ಬೆಂಗಳೂರಿನಲ್ಲಿ ಯಾರೂ ಉಸಿರಾಡಬಾರದು ಎಂದು ಬಯಸುತ್ತೀರಾ’ ಎಂದು ಮಹಿಳೆಯೊಬ್ಬರು ಪ್ರಶ್ನಿಸಿದರು.

‘ನಾವು ಕಾನೂನುಬದ್ಧವಾಗಿ ಎಲ್ಲ ಮಂಜೂರಾತಿ ಪಡೆದೇ ಮರವನ್ನು ಕತ್ತರಿಸುತ್ತಿದ್ದೇವೆ. ಅಭಿವೃದ್ಧಿ ಕಾಮಗಾರಿಗಾಗಿಯೇ ಮರಗಳನ್ನು ಕಡಿಯುತ್ತಿದ್ದೇವೆ. ಇದಕ್ಕೆ ಬದಲಿಯಾಗಿ ಸಸಿ ನೆಟ್ಟು ಬೆಳೆಸುತ್ತೇವೆ’ ಎಂದು ಗುತ್ತಿಗೆದಾರರ ಕಡೆಯವರು ತಿಳಿಸಿದರು.

‘ಕತ್ತರಿಸಿದ ಮರಗಳಿಗೆ ಪ್ರತಿಯಾಗಿ ಎಷ್ಟು ಮರಗಳನ್ನು ಬೆಳೆಸಲಾಗಿದೆ ತೋರಿಸಿ. ಇಲ್ಲಿ ಗ್ರೇಡ್‌ ಸಪರೇಟರ್‌ ಅನಿವಾರ್ಯವಾದರೆ ಎಚ್‌ಎಎಲ್‌ನಿಂದ ಜಾಗ ಪಡೆದು ಅಲ್ಲಿ ನಿರ್ಮಿಸಿ. ಯಾವುದೇ ಕಾರಣಕ್ಕೂ ಈ ಮರಗಳನ್ನು ಕಡಿಯಬೇಡಿ’ ಎಂದು ಸ್ಥಳೀಯರು ಪಟ್ಟು ಹಿಡಿದರು.

‘ಇನ್ನು ಮರಗಳನ್ನು ಕಡಿಯಲು ಸ್ಥಳೀಯರು ಅವಕಾಶ ನೀಡುವುದಿಲ್ಲ’ ಎಂಬುದನ್ನು ಅರಿತ ಗುತ್ತಿಗೆದಾರರು ಸ್ಥಳದಿಂದ ನಿರ್ಗಮಿಸಿದರು.

‘ಬುಡವನ್ನು ಭಾಗಶಃ ಕತ್ತರಿಸಲಾಗಿರುವ ಆರೂ ಮರಗಳು ಭಾರಿ ಗಾತ್ರದವು. ಅವುಗಳನ್ನು ಇನ್ನು ಉಳಿಸಿಕೊಳ್ಳಲು ಸಾಧ್ಯವೋ ಗೊತ್ತಿಲ್ಲ. ನಾವು ಬೀದಿಗಿಳಿದು ಅಂಗಲಾಚಿಕೊಂಡ ಬಳಿಕವೂ ಉದ್ದೇಶಪೂರ್ವಕವಾಗಿ ಇಂದೇ ಮರಗಳನ್ನು ಕತ್ತರಿಸಿದ್ದಾರೆ. ಹಸಿರನ್ನು ಉಳಿಸುವ ಬಗ್ಗೆ ಪಾಲಿಕೆಗೆ ಎಷ್ಟು ಕಾಳಜಿ ಇದೆ ಎಂಬುದು ನಮಗೆ ಈಗ ಮನವರಿಕೆಯಾಯಿತು’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಇಲ್ಲಿನ ಮರಗಳನ್ನು ಉಳಿಸುವ ಹೋರಾಟದಲ್ಲಿ ಸಕ್ರಿಯವಾಗಿರುವ ಸ್ವಾತಿ.

ಸುರಂಜನದಾಸ್‌ ಜಂಕ್ಷನ್‌ನಲ್ಲಿ ಗ್ರೇಡ್‌ ಸಪರೇಟರ್‌ ಕಾಮಗಾರಿಯನ್ನು ಬಿಬಿಎಂಪಿ ಕೈಗೆತ್ತಿಕೊಂಡಿದೆ. ₹ 45 ಕೋಟಿ ವೆಚ್ಚದ ಈ ಕಾಮಗಾರಿಗಾಗಿ ಒಟ್ಟು 48 ಮರಗಳನ್ನು ತೆರವುಗೊಳಿಸುವುದಕ್ಕೆ ಬಿಬಿಎಂಪಿ ತೀರ್ಮಾನಿಸಿತ್ತು. ಬಳಿಕ ಮಾರ್ಗದಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡು 16 ಮರಗಳನ್ನು ಕಡಿಯುವುದನ್ನು ತಪ್ಪಿಸಲು ಕ್ರಮ ಕೈಗೊಂಡಿತ್ತು. ಏಳು ಮರಗಳನ್ನು ಸ್ಥಳಾಂತರ ಮಾಡಿತ್ತು. ಅಂತಿಮವಾಗಿ ಭಾರಿ ಗಾತ್ರದ 25 ಮರಗಳನ್ನು ಕಡಿಯಲು ಮುಂದಾಗಿತ್ತು. ಕಳೆದ ಭಾನುವಾರ (ಮಾರ್ಚ್‌ 14) ಭಾರಿ ಗಾತ್ರದ ಎಂಟು ಮರಗಳನ್ನು ಕಡಿಯಲಾಗಿದೆ. ಕಳೆದ ಸೋಮವಾರ (ಮಾರ್ಚ್‌ 15) ದಿಢೀರ್‌ ಪ್ರತಿಭಟನೆ ನಡೆಸಿದ್ದ ಸ್ಥಳೀಯರು ಇನ್ನುಳಿದ ಮರಗಳನ್ನು ಕಡಿಯಬೇಡಿ ಎಂದು ಒತ್ತಾಯಿಸಿದ್ದರು.

‘ಸದಾ ನೆರಳಿನಿಂದ ಆವೃತವಾಗಿದ್ದ ಈ ಪ್ರದೇಶ ಈಗ ಬಿರುಬಿಸಿಲಿನಿಂದ ಕೂಡಿದೆ’ ಎಂದು ನೋವಿನಿಂದ ಹೇಳುತ್ತಾರೆ ಸ್ಥಳೀಯರು.

ಚಿಣ್ಣರಿಂದ ಅಪ್ಪಿಕೋ ಚಳವಳಿ

ಮಾನವ ಸರಪಣಿಯಲ್ಲಿ ಅನೇಕ ಚಿಣ್ಣರೂ ಭಾಗವಹಿಸಿದ್ದರು. ಮರವನ್ನು ಅಪ್ಪಿ ಹಿಡಿದ ಚಿಣ್ಣರು, ‘ಮರಗಳಿದ್ದರೆ ಮಾತ್ರ ನಾವು ಉಸಿರಾಡಲು ಸಾಧ್ಯ. ಮರಗಳನ್ನೇ ಕಳೆದುಕೊಂಡರೆ ನಮಗೆ ಬದುಕೇ ಇಲ್ಲ. ಈ ಮರಗಳನ್ನು ಬಹಳ ಪ್ರೀತಿಸುತ್ತೇವೆ. ದಯವಿಟ್ಟು ಇವುಗಳನ್ನು ಕಡಿಯಬೇಡಿ’ ಎಂದು ಕೋರಿದರು.

‘ಅಷ್ಟೂ ಮರಗಳನ್ನು ಕಡಿಯುತ್ತಿದ್ದರು’

‘ಗುತ್ತಿಗೆದಾರರ ಕಡೆಯವರು ಜೀಪ್‌, ನಾಲ್ಕು ಈಚರ್‌ ವಾಹನಗಳು, ಲಾರಿ, ಎರಡು ಕ್ರೇನ್‌ ಹಾಗೂ ಜೆಸಿಬಿಯೊಂದಿಗೆ ಸ್ಥಳಕ್ಕೆ ಬಂದಿದ್ದರು. ನಾವು ಬಲವಾದ ಪ್ರತಿಭಟನೆ ವ್ಯಕ್ತಪಡಿಸದಿದ್ದರೆ, ಅವರು ಕತ್ತರಿಸಲು ಗುರುತಿಸಿದ್ದ ಅಷ್ಟೂ ಮರಗಳನ್ನು ಇಂದೇ ಕಡಿಯುತ್ತಿದ್ದರು’ ಎಂದು ವಿನಾಯಕನಗರ ಅನ್ನಸಂದ್ರಪಾಳ್ಯದ ಸ್ವಸ್ತಿಕ್‌ ಮಣಿ ತಿಳಿಸಿದರು.

***

ಈಗಾಗಲೇ 15ಕ್ಕೂ ಅಧಿಕ ಮರಗಳನ್ನು ಸಾಯಿಸಿದ್ದಾರೆ. ಇಲ್ಲಿರುವ ಎರಡು ಭಾರಿ ಗಾತ್ರದ ಮರಗಳನ್ನಾದರೂ ಉಳಿಸಿಕೊಡಲಿ ಎಂಬುದು ನಮ್ಮ ಕಳಕಳಿ. ಆ ಮರಗಳು ವಿಶಾಲ ಜಾಗಕ್ಕೆ ನೆರಳು ನೀಡುತ್ತಿವೆ.

- ಸ್ವಸ್ತಿಕ್‌ ಮಣಿ, ಅನ್ನಸಂದ್ರಪಾಳ್ಯ ನಿವಾಸಿ

ಕಾಮಗಾರಿಯ ವಿನ್ಯಾಸದಲ್ಲಿ ಅಲ್ಪ ಸ್ವಲ್ಪ ಬದಲಾವಣೆ ಮಾಡಿ ಇಲ್ಲಿನ ಭಾರಿ ಗಾತ್ರದ ಮರಗಳನ್ನಾದರೂ ಉಳಿಸಲು ಸಾಧ್ಯವಿದೆಯೇ ಎಂಬ ಬಗ್ಗೆ ಮುಖ್ಯ ಎಂಜಿನಿಯರ್‌ ಜೊತೆ ಚರ್ಚಿಸುತ್ತೇನೆ.

- ರಂಗಸ್ವಾಮಿ, ಡಿಸಿಎಫ್‌, ಬಿಬಿಎಂಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT