ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಜಿ ಕಾರ್ಪೋರೇಟರ್ ಹತ್ಯೆ: ಸಂಬಂಧಿಯೇ ಆರೋಪಿ

24 ಗಂಟೆಯಲ್ಲಿ ಪ್ರಕರಣ ಭೇದಿಸಿದ ಪೊಲೀಸರು l ಇಬ್ಬರು ಆರೋಪಿಗಳ ಕಾಲಿಗೆ ಗುಂಡೇಟು
Last Updated 25 ಜೂನ್ 2021, 20:27 IST
ಅಕ್ಷರ ಗಾತ್ರ

ಬೆಂಗಳೂರು: ಛಲವಾದಿಪಾಳ್ಯ ವಾರ್ಡ್‌ನ ಮಾಜಿ ಕಾರ್ಪೋರೇಟರ್ ಆರ್. ರೇಖಾ ಕದಿರೇಶ್ (43) ಹತ್ಯೆ ಪ್ರಕರಣವನ್ನು 24 ಗಂಟೆಗಳಲ್ಲಿ ಭೇದಿಸಿರುವ ಪೊಲೀಸರು, ಇಬ್ಬರು ಪ್ರಮುಖ ಆರೋಪಿಗಳನ್ನು ಕಾಲಿಗೆ ಗುಂಡು ಹಾರಿಸಿ ಸೆರೆಹಿಡಿದಿದ್ದಾರೆ.

ಕೃತ್ಯದ ನಂತರ ತಲೆಮರೆಸಿಕೊಂಡಿದ್ದ ಆರೋಪಿಗಳಾದ ಪೀಟರ್‌ (46) ಹಾಗೂ ಸೂರ್ಯ (20) ಸುಂಕದಕಟ್ಟೆ ಸಮೀಪದ ಬಜಾಜ್ ಮೈದಾನದಲ್ಲಿ ಶುಕ್ರವಾರ ಬೆಳಿಗ್ಗೆ ಕಾಣಿಸಿಕೊಂಡಿದ್ದರು. ಬಂಧಿಸಲು ಹೋಗಿದ್ದ ಪೊಲೀಸರ ಮೇಲೆ ಡ್ರ್ಯಾಗರ್‌ನಿಂದ ಹಲ್ಲೆ ಮಾಡಿದ್ದರು. ಸಿಬ್ಬಂದಿ ಗಾಯಗೊಂಡಿದ್ದರು.

ಇನ್‌ಸ್ಪೆಕ್ಟರ್‌ಗಳಾದ ಸಿ.ಬಿ. ಶಿವಸ್ವಾಮಿ ಹಾಗೂ ಚಿದಾನಂದಮೂರ್ತಿ ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಗುಂಡೇಟಿನಿಂದ ಗಾಯಗೊಂಡಿರುವ ಆರೋಪಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳು ಸಿಬ್ಬಂದಿಯೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆರು ಮಂದಿ ಬಂಧನ: ‘ಫ್ಲವರ್‌ಗಾರ್ಡನ್‌ನಲ್ಲಿರುವ ಕಚೇರಿ ಎದುರೇ ರೇಖಾ ಅವರನ್ನು ಹತ್ಯೆ ಮಾಡಿ ಆರೋಪಿಗಳು ಪರಾರಿಯಾಗಿದ್ದರು. ಪೀಟರ್, ಸೂರ್ಯ ಸೇರಿ ಆರು ಮಂದಿಯನ್ನು ಸದ್ಯ ಬಂಧಿಸಲಾಗಿದೆ. ಮತ್ತಷ್ಟು ಮಂದಿ ಕೃತ್ಯದ ಸಂಚಿನಲ್ಲಿ ಭಾಗಿಯಾಗಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಆರೋಪಿ ಪೀಟರ್, ರೇಖಾ ಪತಿ ಕದಿರೇಶ್ ಅವರ ಅಂಗರಕ್ಷಕನಾಗಿದ್ದ. ಸೂರ್ಯ, ರೇಖಾ ಅವರ ಸಂಬಂಧಿ.’ ಎಂದೂ ತಿಳಿಸಿವೆ.

‘ಸಣ್ಣ ವಯಸ್ಸಿನಿಂದಲೇ ಅಪರಾಧ ಕೃತ್ಯದಲ್ಲಿ ಭಾಗಿಯಾಗುತ್ತಿದ್ದ ಸೂರ್ಯ, ಕದಿರೇಶ್ ಬಳಿ ಹಣ ಪಡೆಯುತ್ತಿದ್ದ. ಅವರ ಕೊಲೆ ನಂತರ ರೇಖಾ ಹಣ ಕೊಡುತ್ತಿರಲಿಲ್ಲ. ಕಾರ್ಪೋರೇಟರ್ ಹೆಸರು ಹೇಳಿಕೊಂಡು ಗುತ್ತಿಗೆ ಕೆಲಸ ಮಾಡಿಸುತ್ತಿದ್ದ ಪೀಟರ್, ಅದರಿಂದ ಹಣ ಸಂಪಾದಿಸಿ ಫ್ಲವರ್‌ ಗಾರ್ಡನ್‌ನಲ್ಲೇ ಬಹುಮಹಡಿ ಕಟ್ಟಡ ನಿರ್ಮಿಸುತ್ತಿದ್ದ. ತನ್ನ ಹೆಸರಿಗೆ ಧಕ್ಕೆ ತರುತ್ತಿದ್ದಾನೆಂಬುದು ಗೊತ್ತಾಗುತ್ತಿದ್ದಂತೆ ಆತನಿಗೆ ರೇಖಾ ಎಚ್ಚರಿಕೆ ನೀಡಿದ್ದರು. ಇಷ್ಟೆಲ್ಲ ಆದರೂ ಇಬ್ಬರೂ ಆರೋಪಿಗಳು ರೇಖಾ ಜೊತೆಯೇ ಓಡಾಡಿಕೊಂಡಿದ್ದರು’ ಎಂದೂ ಮೂಲಗಳು ಹೇಳಿವೆ.

‘ಕದಿರೇಶ್ ಕೊಲೆಯಾದ ನಂತರ ರೇಖಾ ತಮಗೆ ಹಣ ಕೊಡುತ್ತಿಲ್ಲ ಹಾಗೂ ಬೆಳೆಯಲು ಬಿಡುತ್ತಿಲ್ಲವೆಂಬ ಕೋಪ ಆರೋಪಿಗಳಿಗೆ ಇತ್ತು. ‘ಕದಿರೇಶ್ ನಿನ್ನ ಹೆಚ್ಚು ಇಷ್ಟಪಡುತ್ತಿದ್ದರು. ಕೇಳಿದಾಗಲೆಲ್ಲ ಹಣ ಕೊಡುತ್ತಿದ್ದರು. ಆದರೆ, ರೇಖಾ ನಿಮ್ಮ ಕುಟುಂಬದವರಿಗೆ ಮರ್ಯಾದೆ ಕೊಡುತ್ತಿಲ್ಲ. ಹಣವನ್ನೂ ನೀಡುತ್ತಿಲ್ಲ’ ಎಂದು ಸೂರ್ಯನನ್ನು ಪೀಟರ್ ಪ್ರಚೋದಿಸಿದ್ದ. ಉಳಿದ ಆರೋಪಿಗಳನ್ನು ಒಟ್ಟಿಗೆ ಸೇರಿಸಿಕೊಂಡು ಹತ್ಯೆಗೆ ಸಂಚು ರೂಪಿಸಿದ್ದ’ ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.

‘ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಕಸ್ಟಡಿಗೆ ಪಡೆಯಬೇಕಿದೆ. ಹೆಚ್ಚಿನ ವಿಚಾರಣೆಗೆ ಒಳಪಡಿಸಿದರೆ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ’ ಎಂದೂ ಮೂಲಗಳು ಹೇಳಿವೆ.

ಟಿ.ಆರ್‌. ಮಿಲ್‌ ಸ್ಮಶಾನದಲ್ಲಿ ಅಂತ್ಯಕ್ರಿಯೆ: ಕಿಮ್ಸ್ ಆಸ್ಪತ್ರೆಯಲ್ಲಿ ರೇಖಾ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಶುಕ್ರವಾರ ಬೆಳಿಗ್ಗೆ ಚಾಮರಾಜಪೇಟೆಯ ಟಿ.ಆರ್. ಮಿಲ್‌ ಸ್ಮಶಾನದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.

ವಾಹನ ಬದಲಿಸಿ ದಿಕ್ಕು ತಪ್ಪಿಸಲು ಯತ್ನ

ಕಚೇರಿ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ತಿರುಗಿಸಿಟ್ಟು ಆರೋಪಿಗಳು ಕೃತ್ಯ ಎಸಗಿದ್ದರು. ಆದರೆ, ಸ್ಥಳೀಯ ನಿವಾಸಿಗಳು ಕೃತ್ಯದ ದೃಶ್ಯಗಳನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ರೇಖಾಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದ ವ್ಯಕ್ತಿಯೊಬ್ಬರು, ಆರೋಪಿಗಳಾದ ಪೀಟರ್ ಹಾಗೂ ಸೂರ್ಯನೇ ಕೃತ್ಯ ಎಸಗಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದರು.

ಅದೇ ಸುಳಿವು ಆಧರಿಸಿ ಹೆಚ್ಚುವರಿ ಪೊಲೀಸ್ ಕಮಿಷನರ್ ಮುರುಗನ್ ಹಾಗೂ ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ ಮುಂದಾಳತ್ವದ ಪೊಲೀಸರ ಮೂರು ವಿಶೇಷ ತಂಡಗಳು ಆರೋಪಿಗಳ ಬೆನ್ನು ಬಿದ್ದಿದ್ದವು.

ಕೃತ್ಯದ ಸ್ಥಳದಿಂದ ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದ ಆರೋಪಿಗಳು, ಚಾಮರಾಜಪೇಟೆ ಸಮೀಪ ಆಟೊ ಹತ್ತಿದ್ದರು. ಎರಡು ಬಾರಿ ಆಟೊವನ್ನೂ ಬದಲಿಸಿದ್ದರು. ವಾಹನ ಬದಲಿಸಿದರೆ ಪೊಲೀಸರಿಗೆ ಸುಳಿವು ಸಿಗುವುದಿಲ್ಲವೆಂದು ಆರೋಪಿಗಳು ಅಂದುಕೊಂಡಿದ್ದರು.

ಪೀಟರ್, ಸೂರ್ಯನ ಸಹಚರರು ಹಾಗೂ ಕುಟುಂಬಸ್ಥರನ್ನು ವಿಚಾರಣೆ ನಡೆಸಿದ್ದ ಪೊಲೀಸರು, ‘ಆರೋಪಿಗಳು ತಮಿಳುನಾಡಿಗೆ ಪರಾರಿಯಾಗಲು ಸಿದ್ಧತೆ ಮಾಡಿಕೊಂಡಿದ್ದಾರೆ’ ಎಂಬ ಮಾಹಿತಿ ಪತ್ತೆ ಹಚ್ಚಿದ್ದರು.

ಶುಕ್ರವಾರ ಬೆಳಿಗ್ಗೆ ಸುಂಕದಕಟ್ಟೆ ಬಜಾಜ್ ಮೈದಾನದಲ್ಲಿ ಸೇರಿದ್ದ ಆರೋಪಿಗಳು, ಅಲ್ಲಿಯೇ ಮದ್ಯ ಕುಡಿದು ನಂತರ ತಮಿಳುನಾಡಿಗೆ ಹೊರಡಬೇಕಿತ್ತು. ಈ ಸಂಗತಿ ಗೊತ್ತಾಗುತ್ತಿದ್ದಂತೆ ಪೊಲೀಸರ ತಂಡ, ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.

‘ಆರೋಪಿ ಪೀಟರ್, ಮೂರು ಕೊಲೆ ಪ್ರಕರಣಗಳಲ್ಲಿ ಆರೋಪಿ. ಹಲ್ಲೆ ಹಾಗೂ ಎರಡು ಸುಲಿಗೆ ಯತ್ನ ಪ್ರಕರಣದಲ್ಲೂ ಈತ ಭಾಗಿಯಾಗಿದ್ದ. ಮತ್ತೊಬ್ಬ ಆರೋಪಿ ಸೂರ್ಯನ ವಿರುದ್ಧ ತಲಾ ಎರಡು ಕೊಲೆ ಹಾಗೂ ಕೊಲೆ ಯತ್ನ ಪ್ರಕರಣಗಳು ದಾಖಲಾಗಿವೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ಕೊಲೆಯಲ್ಲಿ ‘ಗಾಂಜಾ’ ವಾಸನೆ

‘ಛಲವಾದಿಪಾಳ್ಯ ಹಾಗೂ ಸುತ್ತಮುತ್ತ ಗಾಂಜಾ ಮಾರಾಟ ಜಾಲ ಜೋರಾಗಿದೆ. ಈ ಜಾಲದಲ್ಲಿ ಸೂರ್ಯ ಹಾಗೂ ಪೀಟರ್ ಸಹ ಕೆಲಸ ಮಾಡುತ್ತಿದ್ದರು. ಜಾಲದ ವಿರುದ್ಧ ರೇಖಾ ಇತ್ತೀಚೆಗಷ್ಟೇ ದೂರು ನೀಡಿದ್ದರು. ಇದು ಸಹ ಕೊಲೆಗೆ ಕಾರಣವೆಂಬ ಮಾಹಿತಿಯಿದೆ. ಈ ಆಯಾಮದಲ್ಲೂ ತನಿಖೆ ಮುಂದುವರಿದಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT