ಶುಕ್ರವಾರ, ಜೂನ್ 5, 2020
27 °C

ಕೊರೊನಾ ತಡೆಯಲು ಫೇಸ್‌ಶೀಲ್ಡ್‌ ರಕ್ಷಣಾ ಕವಚ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೊರೊನಾ ಪೀಡಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ಸೋಂಕಿನಿಂದ ರಕ್ಷಣೆ ಪಡೆಯಲು ‘ಫೇಸ್‌ಶೀಲ್ಡ್‌’ ಎಂಬ ರಕ್ಷಣಾ ಕವಚವನ್ನು ದಯಾನಂದ್ ಸಾಗರ್‌ ವಿಶ್ವವಿದ್ಯಾಲಯದ (ಡಿಎಸ್‌ಯು) ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ವಿನ್ಯಾಸಗೊಳಿಸಿದ್ದಾರೆ.

ಕೋವಿಡ್‌–19 ವೈರಾಣು ಕಣ್ಣು, ಮೂಗು ಮತ್ತು ಬಾಯಿ ಪ್ರವೇಶಿಸದಂತೆ ತಡೆಯುವ ಸಾಮರ್ಥ್ಯ ಹೊಂದಿದೆ. ಸೋಂಕು ತಡೆಯಲು ಉಪಯೋಗಿಸುತ್ತಿರುವ ಮಾಸ್ಕ್‌ಗಿಂತಲೂ ಫೇಸ್‌ಶೀಲ್ಡ್‌ ಹೆಚ್ಚು ಸುರಕ್ಷಿತವಾಗಿದೆ. ಉಸಿರಾಡಲು ಕಷ್ಟವಾಗುವುದಿಲ್ಲ ಎನ್ನುತ್ತಾರೆ ವಿನ್ಯಾಸಕರು.

ವೈದ್ಯಕೀಯ ಸಿಬ್ಬಂದಿ ಮಾತ್ರವಲ್ಲ ಜನಸಾಮಾನ್ಯರು ಕೂಡ ಮಾಸ್ಕ್‌ ಬದಲು ಕೊರೊನಾ ಸೋಂಕಿನಿಂದ ರಕ್ಷಿಸಿಕೊಳ್ಳಲು ಈ ಫೇಸ್‌ಶೀಲ್ಡ್‌ ಬಳಸಬಹುದು. ಈಗಾಗಲೇ ಮಾರ್ಚ್‌ 28ರಂದು ಪ್ರಯೋಗಾಲಯದಿಂದ ಮೊದಲ ಉತ್ಪನ್ನ ಹೊರಬಂದಿದ್ದು, ಪ್ರಾಯೋಗಿಕವಾಗಿ ಉಪಯೋಗಿಸಲಾಗುತ್ತಿದೆ.  

ಡಿಎಸ್‌ಯುನ ಇನೊವೇಶನ್‌ ಲ್ಯಾಬ್‌ನಲ್ಲಿ ಆಟೊಡೆಸ್ಕ್‌ ಡಿಸೈನ್‌ ಮತ್ತು ಇನೊವೇಶನ್‌ ಸೆಂಟರ್‌ ತಜ್ಞರು ಇದನ್ನು ಅಭಿವೃದ್ಧಿಪಡಿಸಿದ್ದಾರೆ. ಈಗಾಗಲೇ ಫೇಸ್‌ಶೀಲ್ಡ್‌ 3ಡಿ ಮುದ್ರಣ ಮಾದರಿಯನ್ನು ಮೌಲ್ಯಮಾಪನಕ್ಕಾಗಿ ವೈದ್ಯರಿಗೆ ನೀಡಲಾಗಿದೆ. ಅವರ ಸಲಹೆ, ಸೂಚನೆ ಆಧರಿಸಿ ಸೂಕ್ತ ಮಾರ್ಪಾಡು ಮಾಡಲು ತಂಡ ನಿರ್ಧರಿಸಿದೆ.

‘ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಅನುಮೋದನೆಗಾಗಿ ಕಾಯುತ್ತಿದ್ದು, ಅನುಮೋದನೆ ದೊರೆತರೆ ಸಾಮೂಹಿಕ ಉತ್ಪಾದನೆಗೆ ತಂತ್ರಜ್ಞಾನ ಹಂಚಿಕೊಳ್ಳಲಾಗುವುದು’ ಎಂದು ಆಟೊಡೆಸ್ಕ್ ವಿನ್ಯಾಸ ಮತ್ತು ಇನೊವೇಶನ್ ಕೇಂದ್ರದ ವ್ಯವಸ್ಥಾಪಕ ವಿನಾಯಕ ಕೆ. ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಕೊರೊನಾ ತಡೆಯಲು ಜನಸಾಮಾನ್ಯರ ಕೈಗೆಟಕುವ ದರದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡುವ ಯೋಚನೆ ಕೂಡ ಇದೆ ಎಂದರು.

ಡಿಎಸ್‌ಯು ಏರೊಸ್ಪೇಸ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಡಾ. ಸೂರ್ಯನಾರಾಯಣ ಹಾಗೂ ಆಟೊಮೊಬೈಲ್ ಎಂಜಿನಿಯರಿಂಗ್ ವಿದ್ಯಾರ್ಥಿ ಅಜೇಯ್‌ ಪಿ. ಈ ಸಾಧನದ ಅಭಿವೃದ್ಧಿಯಲ್ಲಿ ಕೈಜೋಡಿಸಿದ್ದಾರೆ.

ಡಿಟ್ಯಾಚೆಬಲ್‌ ಆಗಿದ್ದು, ಬಳಸುವುದು ಸುಲಭ

ಫ್ಯೂಸ್ಟ್ ಡಿಪಾಸಿಷನ್‌ ಮಾಡೆಲಿಂಗ್‌ (ಎಫ್‌ಡಿಎಂ) ಎಂಬ 3ಡಿ ತಂತ್ರಜ್ಞಾನದ ನೆರವಿನಿಂದ ಥರ್ಮೋಪ್ಲಾಸ್ಟಿಕ್‌ ಮತ್ತು ಪಾಲಿಲ್ಯಾಕ್ಟಿಕ್‌ ಆ್ಯಸಿಡ್‌ (ಪಿಎಲ್‌ಎ) ರಾಸಾಯನಿಕ ವಸ್ತುಗಳನ್ನು ಬಳಸಿ ಫೇಸ್‌ಶೀಲ್ಡ್‌ ಫೈಬರ್‌ ಗಾಜು ಮತ್ತು ಹೆಡ್‌ಗೇರ್‌ ತಯಾರಿಸಲಾಗಿದೆ.  

ಇದು ಸಂಪೂರ್ಣ ಡಿಟ್ಯಾಚೆಬಲ್‌ ಆಗಿದ್ದು, ಬಳಕೆಯ ನಂತರ ಹೆಡ್‌ಗೇರ್‌ಗೆ ಅಳವಡಿಸಬಹುದಾದ ಪಾರದರ್ಶಕ ಫೈಬರ್‌ ಗಾಜುಗಳನ್ನು ಸುಲಭವಾಗಿ ಬದಲಾಯಿಸಬಹುದು.

ಗಲಭೆ ನಿಯಂತ್ರಿಸುವಾಗ ಪೊಲೀಸರು ಕಲ್ಲೇಟು ಮತ್ತು ಅಶ್ರುವಾಯುವಿನಿಂದ ಮುಖವನ್ನು ರಕ್ಷಿಸಿಕೊಳ್ಳಲು ಹೆಲ್ಮೆಟ್‌ ಜೊತೆ ಬಳಸುವ ಪಾರದರ್ಶಕ ಗಾಜಿನಂತೆಯೇ ಇದು ಕಾಣುತ್ತದೆ. 

ಮುಂದೆಲೆಗೆ ಸುಲಭವಾಗಿ ಸಿಕ್ಕಿಸಿಕೊಳ್ಳಬಹುದಾದ (ಹೇರ್‌ಬ್ಯಾಂಡ್) ಹೆಡ್‌ಗೇರ್‌ಗೆ ಪಾರದರ್ಶಕ ಮತ್ತು ಹಗುರವಾದ ಫೈಬರ್ ಗಾಜು ಅಳವಡಿಸಲಾಗಿದೆ. ಈ ಗಾಜುಗಳನ್ನು ಬೇಕಾದಾಗ ಬದಲಾಯಿಸಬಹುದು. ಇದನ್ನು ಬಳಸುವುದು ಕೂಡ ಅತ್ಯಂತ ಸರಳ ಮತ್ತು ಸುಲಭ.

***

ಕೊರೊನಾ ಪೀಡಿತರಿಗೆ ಚಿಕಿತ್ಸೆ ನೀಡುವ ವೇಳೆ ಸೋಂಕು ತಗುಲುವ ಅಪಾಯ ಎದುರಿಸುವ ವೈದ್ಯಕೀಯ ಸಿಬ್ಬಂದಿಗಾಗಿ ಈ ಸಾಧನ ತಯಾರಿಸಲಾಗಿದೆ.

- ವಿನಾಯಕ ಕೆ., ಡಿಎಸ್‌ಯು

***

ಸೋಂಕು ಹರಡುವುದನ್ನು ನಿಯಂತ್ರಿಸಲು ಸಾಧ್ಯವಿರುವ ಎಲ್ಲ ಪರಿಹಾರ ಮಾರ್ಗಗಳನ್ನು ಕಂಡುಕೊಳ್ಳಬೇಕಿದೆ. ಆ ನಿಟ್ಟಿನಲ್ಲಿ ಈ ಫೇಸ್‌ಶೀಲ್ಡ್‌ ಅಭಿವೃದ್ಧಿಪಡಿಸಲಾಗಿದೆ.

- ಡಾ. ಸೂರ್ಯನಾರಾಯಣ, ಡಿಎಸ್‌ಯು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು