ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಕಾಯ್ದೆ: ಟೂಲ್‌ಕಿಟ್‌ ಪಕ್ಷಗಳ ಪಿತೂರಿ: ಸಿ.ಟಿ. ರವಿ

Last Updated 21 ಜೂನ್ 2021, 22:23 IST
ಅಕ್ಷರ ಗಾತ್ರ

ಬೆಂಗಳೂರು: ‘ರೈತರ ಹಿತಕ್ಕಾಗಿ ರೂಪಿಸಿದ ಕೃಷಿ ಕಾಯ್ದೆಗಳ ಬಗ್ಗೆ ಮಿತ್ರನನ್ನು ಶತ್ರುವಾಗಿ ಬಿಂಬಿಸುವ ಟೂಲ್‌ಕಿಟ್‌ ಪಕ್ಷಗಳು ಅನುಮಾನದ ಬೀಜ ಬಿತ್ತಿವೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

ಬಿಜೆಪಿ ರೈತ ಮೋರ್ಚಾದ ಪದಾಧಿಕಾರಿಗಳ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಕೃಷಿಕರನ್ನು ಸ್ವಾವಲಂಬಿಗಳಾಗಿಸುವ ಆತ್ಮ ನಿರ್ಭರ ಕೃಷಿ ನೀತಿಯನ್ನು ಜಾರಿಗೊಳಿಸಲಾಗಿದೆ. ರೈತರ ಕಲ್ಯಾಣವೇ ನಮ್ಮ ಗುರಿ’ ಎಂದರು.

ಕೃಷಿಕನನ್ನು ಸಂಕಷ್ಟದಿಂದ ಪಾರಿ ಮಾಡಲು ಬಿಜೆಪಿ ಸರ್ಕಾರ ಐತಿಹಾಸಿಕ ನಿರ್ಧಾರ ಮಾಡಿದೆ. ಬ್ಲೇಡ್‌ ತಯಾರಿಸುವವನು ತನ್ನ ಉತ್ಪನ್ನದ ಗರಿಷ್ಠ ಮಾರಾಟ ದರ ನಿರ್ಧರಿಸುತ್ತಾನೆ. ಆದರೆ, ಹೆಂಡತಿ ಮಕ್ಕಳೊಂದಿಗೆ ದುಡಿದ ರೈತರು ಯಾವ ಬೆಳೆಗೂ ಎಂಆರ್‌ಪಿ ನಿಗದಿ ಮಾಡುವ ಪರಿಸ್ಥಿತಿಯಲ್ಲಿ ಇಲ್ಲ ಎಂದು ಅವರು ಹೇಳಿದರು.

ರೈತರ ಬೆಳೆಗೆ ಬೆಲೆ ಖಾತರಿಪಡಿಸುವ ಗುತ್ತಿಗೆ ಕೃಷಿ ವಿರುದ್ಧವೂ ಅಪ ಪ್ರಚಾರ ನಡೆದಿದೆ. ರೈತ ಸ್ವಾವಲಂಬಿ ಆಗಬಾರದು ಎಂಬ ಪ್ರಯತ್ನ ಷಡ್ಯಂತ್ರ ಇದರ ಹಿಂದಿದೆ. ರೈತರ ಚಳವಳಿ ಹೆಸರಲ್ಲಿ ಅರಾಜಕತೆ ಸೃಷ್ಟಿಸುವ ಪ್ರಯತ್ನ ನಡೆಯಿತು ಎಂದು ಅವರು ದೂರಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಪ್ರಧಾನಕಾರ್ಯದರ್ಶಿ ಎನ್‌.ರವಿಕುಮಾರ್‌, ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಇದ್ದರು.

‘ಪೊಲೀಸರಿಂದಲೇ ಪಾದಚಾರಿ ಮಾರ್ಗದಲ್ಲಿ ವಾಹನ ನಿಲುಗಡೆ ತಪ್ಪಬೇಕು’

ಬೆಂಗಳೂರು: ‘ಪೊಲೀಸ್ ಠಾಣೆಗಳ ಮುಂಭಾಗದ ಪಾದಚಾರಿ ಮಾರ್ಗಗಳು ವಾಹನ ನಿಲುಗಡೆಯಿಂದ ಮುಕ್ತ ಆಗಿರುವ ಬಗ್ಗೆ ಪೊಲೀಸರು ಖಚಿತಪಡಿಸಿಕೊಳ್ಳಬೇಕು’ ಎಂದು ಹೈಕೋರ್ಟ್‌ ಹೇಳಿದೆ. ರಾಜ್ಯ ಸರ್ಕಾರ ಜೂ.15ರಂದು ಹೊರಡಿಸಿದ ಸುತ್ತೋಲೆ ಪರಿಶೀಲನೆ ವೇಳೆ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ಈ ಅಭಿಪ್ರಾಯಪಟ್ಟಿತು.

ಪಾದಚಾರಿ ಮಾರ್ಗ ಅತಿಕ್ರಮಣ ಮಾಡಿ ವಾಹನ ನಿಲುಗಡೆ ಮಾಡುವವರ ವಿರುದ್ಧ ಕ್ರಿಮಿನಲ್ ಕಾನೂನು ಜಾರಿಗೆ ತರುವಂತೆ ಸರ್ಕಾರಕ್ಕೆ ಪೀಠ ಈ ಹಿಂದೆ ನಿರ್ದೇಶನ ನೀಡಿತ್ತು. ನಿಯಮ ಉಲ್ಲಂಘಿಸುವವರ ವಿರುದ್ಧ ದಂಡ ವಿಧಿಸುವಂತೆ ನಿರ್ದೇಶನ ನೀಡಿ ಸರ್ಕಾರ ಸುತ್ತೋಲೆ ಹೊರಡಿಸಿತ್ತು. ಇನ್ನೂ ಉತ್ತಮವಾದ ನಿಯಮ ರೂಪಿಸುವಂತೆ ತಿಳಿಸಿದ ಪೀಠ, ವಿಚಾರಣೆಯನ್ನು ಜು.1ಕ್ಕೆ ಮುಂದೂಡಿತು.

‘ಅಶೋಕನಗರ ಪೊಲೀಸ್ ಠಾಣೆ ಹೊರಗೆ ದ್ವಿಚಕ್ರ ವಾಹನಗಳನ್ನು ಯಾವಾಗಲೂ ನಿಲ್ಲಿಸಲಾಗಿರುತ್ತದೆ. ಜಯನಗರ ಠಾಣೆಯ ಹೊರಗೆ ಇದೇ ರೀತಿ ವಾಹನ ನಿಲುಗಡೆ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ಸಲ್ಲಿಕೆಯಾಗಿದೆ’ ಎಂದು ಮುಖ್ಯ ನ್ಯಾಯಮೂರ್ತಿ ಮೌಖಿಕವಾಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT