ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರೈತ ಕರೆ ಕೇಂದ್ರಕ್ಕೆ ಎ.ಐ ಸ್ಪರ್ಶ

Published : 16 ಸೆಪ್ಟೆಂಬರ್ 2024, 21:18 IST
Last Updated : 16 ಸೆಪ್ಟೆಂಬರ್ 2024, 21:18 IST
ಫಾಲೋ ಮಾಡಿ
Comments

ಬೆಂಗಳೂರು: ರೈತರ ಕುಂದು ಕೊರತೆಗಳನ್ನು ಆಲಿಸಿ ಪರಿಹಾರ ನೀಡುವುದಕ್ಕಾಗಿ ಆರಂಭಿಸಿರುವ ‘ರೈತ ಕರೆ’ ಕೇಂದ್ರವನ್ನು ಯಾಂತ್ರಿಕ ಬುದ್ದಿಮತ್ತೆ (ಎಐ), ಮಷಿನ್‌ ಲರ್ನಿಂಗ್ ಲಾಂಗ್ವೇಜ್‌ನಂಥ ಆಧುನಿಕ ತಂತ್ರಜ್ಞಾನಗಳೊಂದಿಗೆ ಉನ್ನತೀಕರಿಸಲು ಕೃಷಿ ಇಲಾಖೆ ಸಿದ್ಧತೆ ನಡೆಸಿದೆ.

ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಈ ಕೇಂದ್ರದ ಮೂಲಕ ತ್ವರಿತ ಹಾಗೂ ಪರಿಣಾಮಕಾರಿ ಪರಿಹಾರ ಒದಗಿಸುವುದು ಇಲಾಖೆಯ ಆಶಯ.

ಇಲ್ಲಿನ ಕೃಷಿ ಆಯುಕ್ತಾಲಯದಲ್ಲಿರುವ ‘ರೈತ ಕರೆ ಕೇಂದ್ರ’ ನಿತ್ಯ 11 ತಾಸು(ಬೆಳಿಗ್ಗೆ 8 ರಿಂದ ಸಂಜೆ 7ರವರೆಗೆ) ಕಾರ್ಯನಿರ್ವಹಿಸುತ್ತಿದೆ. 12 ಸಿಬ್ಬಂದಿ ಇದ್ದಾರೆ. 14 ದೂರವಾಣಿ ಮೂಲಕ ಬರುವ ರೈತರ ಕರೆಗಳಿಗೆ ಉತ್ತರಿಸುತ್ತಿದ್ದಾರೆ. ರಾಜ್ಯದ ವಿವಿಧೆಡೆಯಿಂದ ನಿತ್ಯ 450 ಕರೆಗಳು ಬರುತ್ತಿವೆ. ಬೆಳೆ ವಿಮೆ ಪಾವತಿಯಾಗುವ ಸಂದರ್ಭದಲ್ಲಿ ಕರೆಗಳ ಸಂಖ್ಯೆ 600ರಿಂದ 700ರವರೆಗೂ ಏರಿಕೆಯಾಗುತ್ತದೆ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.

ಬೆಳೆ ಸಮೀಕ್ಷೆ, ಪಿಎಂ ಕಿಸಾನ್ ಯೋಜನೆ, ಬಿತ್ತನೆ, ಮಳೆ, ಹವಾಮಾನ, ರೋಗ–ಕೀಟ ಬಾಧೆ.. ಹೀಗೆ ವಿವಿಧ ವಿಭಾಗಗಳಿಗೆ ಸಂಬಂಧಿಸಿದ ಪ್ರಶ್ನೆಗಳು ಕೇಂದ್ರಕ್ಕೆ ಬರುತ್ತಿವೆ. ಸಿಬ್ಬಂದಿ ಬಹುತೇಕ ಪ್ರಶ್ನೆಗಳಿಗೆ ಉತ್ತರಿಸುವ ಜೊತೆಗೆ, ಅಗತ್ಯವಿದ್ದಾಗ, ತಜ್ಞರು, ಇಲಾಖೆ ಅಧಿಕಾರಿಗಳ ಸಂಪರ್ಕವನ್ನೂ ನೀಡುತ್ತಿದ್ದಾರೆ. 

ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ‘ರೈತ ಕರೆ’ ಕೇಂದ್ರದಲ್ಲಿ ಸುಧಾರಣೆ ತರುವ ಪ್ರಸ್ತಾವವಿದೆ. ರೈತರು ಯಾವ ಕ್ಷೇತ್ರದ ಬಗ್ಗೆ ಪ್ರಶ್ನೆ ಕೇಳುತ್ತಾರೋ, ಆ ವಿಭಾಗದ ತಜ್ಞರಿಗೆ ಸ್ವಯಂ ಚಾಲಿತವಾಗಿ ಸಂಪರ್ಕ ಕಲ್ಪಿಸಿ, ತಜ್ಞರಿಂದ ಮಾಹಿತಿ ಸಿಗುವಂತೆ ಮಾಡುವುದು ಈ ಯೋಜನೆಯ ಉದ್ದೇಶ. ಈ ಕುರಿತು ಕೃಷಿ ಇಲಾಖೆ ಅಧಿಕಾರಿಗಳು ವಿವಿಧ ಇಲಾಖೆಗಳ ಅಧಿಕಾರಿಗಳು, ವಿಷಯ ತಜ್ಞರು, ತಂತ್ರಜ್ಞಾನ ನಿಪುಣರ ಜತೆ ಸಮಾಲೋಚನೆ ನಡೆಸಿದ್ದಾರೆ.

ಈ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ಕೃಷಿ ಇಲಾಖೆ ನಿರ್ದೇಶಕ ಜಿ.ಟಿ. ಪುತ್ರ, ‘ಭೂಮಿ, ಫ್ರೂಟ್ ಐಡಿ ಪೋರ್ಟಲ್‌ನಂತಹ ಜಾಲತಾಣಗಳಿಂದ ದತ್ತಾಂಶಗಳು ಹಾಗೂ ಇ–ಸ್ಯಾಪ್‌ ನಂತಹ ತಂತ್ರಾಂಶಗಳನ್ನು ಬಳಸಿಕೊಂಡು, ಉನ್ನತ ತಂತ್ರಜ್ಞಾನಗಳ ನೆರವಿನೊಂದಿಗೆ ರೈತ ಕರೆ ಕೇಂದ್ರವನ್ನು ಉನ್ನತೀಕರಿಸುವ ಕೆಲಸ ನಡೆಯುತ್ತಿದೆ’ ಎಂದು ವಿವರಿಸಿದರು.

‘ಬಿತ್ತನೆ ಅವಧಿ, ಬೆಳೆ ವಿಮೆ, ಕಟಾವು.. ಹೀಗೆ ಹಲವು ಮಾಹಿತಿಗಳನ್ನು ಪಡೆದಿದ್ದೇನೆ. ಬಹಳ ಉಪಯುಕ್ತ ಸಹಾಯವಾಣಿ ಇದು. ಹೆಚ್ಚು ಪ್ರಚಾರ ಮಾಡಿ, ಮಹತ್ವ ತಿಳಿಸುವ ಜತೆಗೆ ಇನ್ನಷ್ಟು ರೈತ ಸ್ನೇಹಿಯಾಗಿಸಬೇಕು’ ಎನ್ನುತ್ತಾರೆ ಕುಷ್ಟಗಿ ತಾಲ್ಲೂಕಿನ ಟಕ್ಕಳಕಿಯ ರೈತ ಶಿವನಗೌಡ.

ವರ್ಷದ ಪೂರೈಸಿದ ಕೇಂದ್ರ ಕೃಷಿ ಇಲಾಖೆಯ ವಿವಿಧ ವಿಭಾಗಗಳಲ್ಲಿದ್ದ ಎಲ್ಲ ಸಹಾಯವಾಣಿ ಕೇಂದ್ರಗಳನ್ನು ಒಗ್ಗೂಡಿಸಿ (18004253553) ಏಕೀಕೃತ ಶುಲ್ಕ ರಹಿತ ದೂರವಾಣಿ ಸಂಖ್ಯೆಯನ್ನಾಗಿ ಪರಿವರ್ತಿಸಿ ‘ರೈತ ಕರೆ ಕೇಂದ್ರ’ ವನ್ನು ಕಳೆದ ವರ್ಷದ ಆಗಸ್ಟ್‌ನಲ್ಲಿ ಆರಂಭಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT