ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಹೋರಾಟ ಇನ್ನೂ ಅಪೂರ್ಣ: ಯೋಗೇಂದ್ರ ಯಾದವ್

ಕನಿಷ್ಠ ಬೆಂಬಲ ಬೆಲೆಗೆ ಶಾಸನಬದ್ಧ ಮಾನ್ಯತೆ ನೀಡಲು ಆಗ್ರಹ
Last Updated 25 ನವೆಂಬರ್ 2021, 19:37 IST
ಅಕ್ಷರ ಗಾತ್ರ

ಬೆಂಗಳೂರು: ‘ಕೃಷಿ ಕಾಯ್ದೆಗಳ ಕುರಿತು ರೈತರು ನಡೆಸಿದ ಹೋರಾಟಕ್ಕೆ ಐತಿಹಾಸಿಕ ಜಯ ದೊರೆತಿದ್ದರೂ ಇನ್ನೂ ಅಪೂರ್ಣವಾಗಿದೆ’ ಎಂದು ರೈತ ಮುಖಂಡ ಯೋಗೇಂದ್ರ ಯಾದವ್ ಅಭಿಪ್ರಾಯಪಟ್ಟರು.

‘ದೆಹಲಿ ರೈತರ ಪ್ರತಿಭಟನೆ– ರೈತರ ಹೋರಾಟಕ್ಕೆ ಐತಿಹಾಸಿಕ ಜಯ: ಮುಂದೇನು?’ ಕುರಿತು ಗುರುವಾರ ಆಯೋಜಿಸಿದ್ದ ವೆಬಿನಾರ್‌ನಲ್ಲಿ ಮಾತನಾಡಿದ ಅವರು, ‘ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಲು ಶಾಸನ ರೂಪಿಸಬೇಕು ಮತ್ತು ವಿದ್ಯುತ್‌ ಮಸೂದೆ ವಾಪಸ್‌ ಪಡೆಯಬೇಕು. ಜತೆಗೆ, ಹೋರಾಟದ ಸಂದರ್ಭದಲ್ಲಿ ಹುತಾತ್ಮರಾದ ಕುಟುಂಬದ ಸದಸ್ಯರಿಗೆ ಪರಿಹಾರ ಮತ್ತು ಪುನರ್ವಸತಿ ದೊರೆಯಬೇಕು. ಈ ವಿಷಯಗಳನ್ನು ಮುಂದಿಟ್ಟುಕೊಂಡು ಹೋರಾಟವನ್ನು ಮುಂದುವರಿಸಬೇಕಾಗಿದೆ’ ಎಂದು ಹೇಳಿದರು.

‘ಕನಿಷ್ಠ ಬೆಂಬಲ ಬೆಲೆ ವಿಷಯದಲ್ಲಿ ಸರ್ಕಾರ ತಪ್ಪಿಸಿಕೊಳ್ಳಲು ಯತ್ನಿಸುತ್ತಿದೆ. ಪ್ರಧಾನಮಂತ್ರಿ ಅವರು ಈ ವಿಷಯವನ್ನು ಉದ್ದೇಶಪೂರ್ವಕವಾಗಿ ಮರೆಯುತ್ತಿದ್ದಾರೆ. ರೈತರೇ ಮತ್ತೆ ಮತ್ತೆ ಈ ವಿಷಯವನ್ನು ನೆನಪಿಸಬೇಕಾಗಿದೆ’ ಎಂದು ಹೇಳಿದರು.

‘ರೈತರ ಶಕ್ತಿ ಏನು ಎನ್ನುವುದು ತೋರಿಸಲು ಉತ್ತರ ಪ್ರದೇಶ ಪ್ರಯೋಗಾಲಯವಾಗಬೇಕು. ಈಗಾಗಲೇ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ರೈತರು ಪಾಠ ಕಲಿಸಿದ್ದಾರೆ. ಕನಿಷ್ಠ ಬೆಂಬಲ ಬೆಲೆ ವಿಷಯಕ್ಕೆ ಸರ್ಕಾರ ಒಪ್ಪಿಗೆ ಸೂಚಿಸದಿದ್ದರೆ, ನಾವು ಉತ್ತರ ಪ್ರದೇಶದ ಪ್ರತಿಯೊಂದು ಹಳ್ಳಿಗಳಿಗೆ ತೆರಳಿ ಜಾಗೃತಿ ಮೂಡಿಸಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕು’ ಎಂದು ಹೇಳಿದರು.

‘ಕೃಷಿ ಕಾಯ್ದೆಗಳ ವಿರುದ್ಧ ನಡೆದ ಹೋರಾಟದ ಮೂಲಕ ರೈತರು ಸ್ವಾಭಿಮಾನವನ್ನು ಮತ್ತೆ ಪಡೆದಿದ್ದಾರೆ ಮತ್ತು ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ನೇತೃತ್ವದಲ್ಲಿ ನಡೆಯುತ್ತಿದ್ದ ಹೋರಾಟದ ಸಂದರ್ಭದಲ್ಲಿ ರೈತರು ಈ ರೀತಿ ಒಗ್ಗಟ್ಟು ಪ್ರದರ್ಶಿಸುತ್ತಿದ್ದರು. ನಂತರ, ಈ ರೀತಿಯ ಹೋರಾಟ ನಡೆದ ಉದಾಹರಣೆ ಇಲ್ಲ’ ಎಂದು ವಿಶ್ಲೇಷಿಸಿದರು.

’ಜಾತಿ, ಧರ್ಮ, ಪ್ರಾದೇಶಿಕತೆ ಸೇರಿದಂತೆ ಎಲ್ಲವನ್ನೂ ಮೀರಿ ರೈತರು ಹೋರಾಟ ನಡೆಸಿದ್ದಾರೆ. ಪ್ರಸ್ತುತ ಸಂದರ್ಭದಲ್ಲಿ ಇದು ರೈತರ ಹೋರಾಟದ ಆರಂಭ ಎಂದೇ ಪರಿಗಣಿಸಬೇಕು. ಸಂಯುಕ್ತ ಕಿಸಾನ್‌ ಮೋರ್ಚಾ ಅಡಿಯಲ್ಲಿ ರೈತರು ಒಂದೇ ಸೂರಿನ ಅಡಿಯಲ್ಲಿ ಸೇರಿದ್ದಾರೆ. ರೈತರ ಜೀವನದ ಜತೆ ಆಟವಾಡುವ ಧೈರ್ಯ ತೋರಬಾರದು ಎನ್ನುವುದನ್ನು ಎಲ್ಲ ರಾಜಕೀಯ ಪಕ್ಷಗಳ ನಾಯಕರಿಗೆ ಈ ಹೋರಾಟ ಪಾಠ ಕಲಿಸಿದೆ’ ಎಂದು ಹೇಳಿದರು.

ರೈತ ನಾಯಕಿ ಕವಿತಾ ಕುರಗಂಟಿ, ಕರ್ನಾಟಕ ಜನಶಕ್ತಿ ಅಧ್ಯಕ್ಷ ನೂರ್‌ ಶ್ರೀಧರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT