ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಬದುಕು ರಕ್ಷಿಸಲು ಹೋರಾಟ: ರಂಗಕರ್ಮಿ ಪ್ರಸನ್ನ

Last Updated 17 ಡಿಸೆಂಬರ್ 2020, 19:31 IST
ಅಕ್ಷರ ಗಾತ್ರ

ಬೆಂಗಳೂರು: ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟ ಬೆಂಬಲಿಸಿ ನಗರದ ಮೌರ್ಯ ವೃತ್ತದಲ್ಲಿ ಕೃಷಿ ಕೂಲಿ ಕಾರ್ಮಿಕರು, ರೈತ ಮುಖಂಡರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಗುರುವಾರ ಎರಡನೇ ದಿನಕ್ಕೆ ಕಾಲಿಟ್ಟಿತು.

ಧರಣಿ ಉದ್ಘಾಟಿಸಿ ಮಾತನಾಡಿದ ಹಿರಿಯ ರಂಗಕರ್ಮಿ ಪ್ರಸನ್ನ, ‘ದೆಹಲಿಯಲ್ಲಿ ನಡೆಯುತ್ತಿರುವ ರೈತರ ಮಹಾ ಪ್ರತಿಭಟನೆ, ದೇಶವನ್ನು ಮುನ್ನಡೆಸುವ ಮಹತ್ವದ ಹೋರಾಟ. ಇದು ಶ್ರಮ ಸಂಸ್ಕೃತಿಯ ಗ್ರಾಮೀಣ ಬದುಕಿನ ರಕ್ಷಣೆಗಾಗಿ ನಡೆಯುತ್ತಿರುವ ಹೋರಾಟ’ ಎಂದು ಬಣ್ಣಿಸಿದರು.

‘ಇಂದು ನಮ್ಮನ್ನು ಆಳುತ್ತಿರುವವರದು ಕಾರ್ಪೊರೇಟ್ ಸಂಸ್ಕೃತಿ ಪರ ಧೋರಣೆಯಾಗಿದೆ. ಈ ಕಾರಣಕ್ಕಾಗಿ ನಗರಗಳು, ಮಹಾನಗರಗಳು ಬೃಹತ್ ತಿಪ್ಪೆಗುಂಡಿಗಳಾಗಿವೆ. ಸರ್ಕಾರಗಳ ಹೊಸ ಕೃಷಿ ಕಾಯ್ದೆಗಳು ಈ ತಿಪ್ಪೆಗುಂಡಿಗಳನ್ನು ಮತ್ತಷ್ಟು ಬೆಳೆಸುವ ದುರುದ್ದೇಶ ಹೊಂದಿದೆ’ ಎಂದು ಟೀಕಿಸಿದರು.

‘ರೈತರು, ಕರಕುಶಲ ಕರ್ಮಿಗಳು, ಕೃಷಿ ಕೂಲಿಕಾರರು ಯಾವುದೇ ಅಂಜಿಕೆ, ಆತಂಕ, ಕೀಳರಿಮೆ ಇಟ್ಟುಕೊಳ್ಳದೇ ಹೋರಾಟ ಮುಂದುವರಿಸಬೇಕು’ ಎಂದರು.

ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ನಿತ್ಯಾನಂದಸ್ವಾಮಿ, ‘ಕೇಂದ್ರ ಮತ್ತು ರಾಜ್ಯ ಸರ್ಕಾರ ತಂದಿರುವ ಕೃಷಿ ಕಾಯ್ದೆಗಳು ಕೂಲಿಕಾರರನ್ನು ನಿರುದ್ಯೋಗಿಯಾಗಿಸಿ ಹಸಿವಿಗೆ ತಳ್ಳುವ ಕಾನೂನುಗಳಾಗಿವೆ. ಈಗಾಗಲೇ 25 ರೈತ ಹೋರಾಟಗಾರರು ಚಳಿ ಮತ್ತಿತರ ಕಾರಣದಿಂದ ನಿಧನರಾಗಿದ್ದರೂ ನರೇಂದ್ರ ಮೋದಿ ನೇತೃತ್ವದ ಸರ್ಕಾರ ರೈತರೊಂದಿಗೆ ಮಾತುಕತೆಗೆ ಮುಂದಾಗುತ್ತಿಲ್ಲ’ ಎಂದು ದೂರಿದರು.

ರೈತ ಮತ್ತು ಕಾರ್ಮಿಕ ಮುಖಂಡರಾದ ಚಂದ್ರಪ್ಪ ಹೊಸಕೇರ, ಎಂ. ಪುಟ್ಟಮಾದು, ಯು. ಬಸವರಾಜು, ಟಿ.ಯಶವಂತ, ಜಿ.ಎಂ. ವೀರ ಸಂಗಯ್ಯ, ಜಿ.ಟಿ ರಾಮಸ್ವಾಮಿ, ಶಿವಪ್ರಕಾಶ್,ಕುರುಬೂರು ಶಾಂತಕುಮಾರ್ ಇತರರು ಭಾಗವಹಿಸಿದ್ದರು.

ಹೋರಾಟದಲ್ಲಿ ಹುತಾತ್ಮರಾದ ರೈತರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT