ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದುಡಿದಿದ್ದು ಹೊಟ್ಟೆಗೆ ಸಾಲಲ್ಲ, ಖಾತೆಗೇನು ಮಾಡ್ಲಿ?’

ಫಾಸ್ಟ್ಯಾಗ್ ಸ್ಟಿಕ್ಕರ್ ಸ್ಕ್ಯಾನಿಂಗ್ ಸಮಸ್ಯೆಗಿಲ್ಲ ಪರಿಹಾರ: ಹೆದ್ದಾರಿ ಟೋಲ್‌ನಲ್ಲಿ ವಿಪರೀತ ದಟ್ಟಣೆ
Last Updated 17 ಫೆಬ್ರುವರಿ 2021, 9:00 IST
ಅಕ್ಷರ ಗಾತ್ರ

ಬೆಂಗಳೂರು: ‘ದಿನದ ದುಡಿಮೆ ನಂಬಿ ಬದುಕುವವರು ನಾವು. ದುಡಿದಿದ್ದು ಹೊಟ್ಟೆಗೆ ಸಾಲುತ್ತಿಲ್ಲ. ಬ್ಯಾಂಕ್‌ ಖಾತೆಯಲ್ಲಿ ಹಣ ಹೇಗೆ ನಿರ್ವಹಣೆ ಮಾಡುವುದು? ಹಣವಿಲ್ಲದಿದ್ದರೆ, ಫಾಸ್ಟ್ಯಾಗ್ ಸ್ಟಿಕ್ಕರ್ ಸ್ಕ್ಯಾನ್ ಆಗುವುದಿಲ್ಲ. ಅನಿವಾರ್ಯವಾಗಿ ನಗದು ಪಾವತಿಸಲೇ ಬೇಕು. ಇದೀಗ ದುಪ್ಪಟ್ಟು ಶುಲ್ಕ ಕೇಳುತ್ತಿದ್ದು, ನಮ್ಮಂಥ ಬಡವರು ಹೇಗೆ ಬದುಕುವುದು?’

ನಗರದ ಯಶವಂತಪುರದಿಂದ ನೆಲಮಂಗಲಕ್ಕೆ ದಿನಸಿ ಸಾಮಗ್ರಿಗಳನ್ನು ಸಾಗಿಸುತ್ತಿದ್ದ ಮ್ಯಾಕ್ಸಿಕ್ಯಾಬ್‌ ಚಾಲಕ ರಘು ಕೇಳಿದ ಪ್ರಶ್ನೆ ಇದು.

ಟೋಲ್‌ಗೇಟ್‌ಗಳಲ್ಲಿ ಫಾಸ್ಟ್ಯಾಗ್ ಬಳಕೆ ಕಡ್ಡಾಯ ಮಾಡಲಾಗಿದ್ದು, ಫಾಸ್ಟ್ಯಾಗ್‌ ಇಲ್ಲದವರಿಂದ ದುಪ್ಪಟ್ಟು ಶುಲ್ಕ ಸಂಗ್ರಹಿಸಲಾಗುತ್ತಿದೆ. ಇದಕ್ಕೆ ವಾಹನಗಳ ಮಾಲೀಕರು ಹಾಗೂ ಚಾಲಕರು ವಿರೋಧ ವ್ಯಕ್ತಪಡಿಸು ತ್ತಿದ್ದಾರೆ. ತುಮಕೂರು ರಸ್ತೆ ಹಾಗೂ ಎಲೆಕ್ಟ್ರಾನಿಕ್ ಸಿಟಿ ಬಳಿಯ ಟೋಲ್‌ಗೇಟ್‌ಗಳಲ್ಲಿ ದುಪ್ಪಟ್ಟು ಶುಲ್ಕದ ವಿಚಾರ ವಾಗಿ ಚಾಲಕರು–ಟೋಲ್ ಸಿಬ್ಬಂದಿ ನಡುವೆ ಮಂಗಳವಾರ ವಾಗ್ವಾದ ನಡೆಯಿತು.

ಟೋಲ್‌ ಎದುರೇ ವಾಹನಗಳನ್ನು ನಿಲ್ಲಿಸಿದ್ದ ಚಾಲಕರು, ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ‘ಕಡ್ಡಾಯ ಆದೇಶ ಮಾಡಿದ್ದು ಎನ್‌ಎಚ್‌ಎಐ. ನೀವು ಅವರನ್ನು ಕೇಳಿ. ನಾವು ಇಲ್ಲಿ ಕೆಲಸ ಮಾಡುತ್ತಿದ್ದೇವೆ’ ಎಂದು ಸಿಬ್ಬಂದಿ ಹೇಳಿದರು. ಮಾತಿಗೆ ಮಾತು ಬೆಳೆದು ಗಲಾಟೆಯೂ ನಡೆಯಿತು. ಬಸ್ ಹಾಗೂ ಇತರೆ ವಾಹನಗಳಲ್ಲಿದ್ದ ಪ್ರಯಾಣಿಕರು ಸ್ಥಳಕ್ಕೆ ಬಂದು ಪರಿಸ್ಥಿತಿ ತಿಳಿಗೊಳಿಸಿದರು.

ಕಿ.ಮೀ.ಗಟ್ಟಲೇ ದಟ್ಟಣೆ: ಸೋಮವಾರ ಮಧ್ಯರಾತ್ರಿಯಿಂದಲೇ ಫಾಸ್ಟ್ಯಾಗ್ ಕಡ್ಡಾಯವಾಗಿತ್ತು. ತುಮಕೂರು ರಸ್ತೆ ಟೋಲ್‌ನ ಒಂದು ಗೇಟ್‌ನಲ್ಲಿ ಮಾತ್ರ ನಗದು ಪಾವತಿಗೆ ಅವಕಾಶ ಕಲ್ಪಿಸ ಲಾಗಿತ್ತು. ಅದೇ ಗೇಟ್‌ ಎದುರೇ ಹೆಚ್ಚು ವಾಹನಗಳು ಸಾಲುಗಟ್ಟಿ ನಿಂತಿದ್ದವು.

ಕೌಂಟರ್ ಬಳಿಯೇ ಚಾಲಕರು ವಾಹನ ನಿಲ್ಲಿಸಿ ವಾಗ್ವಾದ ನಡೆಸಿದರು. ಹಿಂದಿನ ವಾಹನಗಳೆಲ್ಲವೂ ನಿಂತಲೇ ನಿಲ್ಲಬೇಕಾಯಿತು. ಇದರಿಂದಮಂಗಳವಾರ ಬೆಳಿಗ್ಗೆ ಹಾಗೂ ಸಂಜೆ ವಿಪರೀತ ದಟ್ಟಣೆ ಕಂಡುಬಂತು. ಕಿ.ಮೀ.ಗಟ್ಟಲೇ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಚಾಲಕರು ಹಾಗೂ ಪ್ರಯಾಣಿಕರು, ಕಾದು ಕಾದು ಸುಸ್ತಾದರು.

ತುಮಕೂರಿನ ಚಾಲಕ ಲೋಕೇಶ್, ‘ಚಾಲನೆ ನಂಬಿ ಬದುಕು ಕಟ್ಟಿಕೊಂಡಿದ್ದೇನೆ. ಹಳದಿ ಫಲಕದ ವಾಹನ ತೆಗೆದುಕೊಂಡಿದ್ದು, ಪ್ರತಿ ವರ್ಷವೂ ತೆರಿಗೆ ಪಾವತಿ ಮಾಡುತ್ತೇನೆ. ಫಾಸ್ಟ್ಯಾಗ್ ಸಹ ಹಾಕಿಸಿದ್ದೇನೆ. ಖಾತೆಯಲ್ಲಿ ಹಣವಿಲ್ಲ. ಹೀಗಾಗಿ, ಇಂದು ದುಪ್ಪಟ್ಟು ಹಣ ಪಾವತಿ ಮಾಡಿದ್ದೇನೆ’ ಎಂದರು.

‘ಖಾತೆಯಲ್ಲಿರುವ ಹಣವೆಲ್ಲ ವಾಹನದ ತಿಂಗಳ ಕಂತಿಗೆ ಹೋಗು ತ್ತದೆ. ತಿಂಗಳಲ್ಲಿ ಹತ್ತಾರು ಬಾರಿ ಬೆಂಗ ಳೂರಿಗೆ ಬಂದು ಹೋಗುತ್ತೇನೆ. ಹಲವು ಬಾರಿ ಸ್ಕ್ಯಾನಿಂಗ್ ಸಮಸ್ಯೆ ಉಂಟಾಗುತ್ತಿದ್ದು, ತಮ್ಮ ತಪ್ಪಿದರೂ ಟೋಲ್‌ ಸಿಬ್ಬಂದಿ ಶುಲ್ಕ ಪಾವತಿಸಲು ಹೇಳುತ್ತಾರೆ. ನಿತ್ಯವೂ ದುಪ್ಪಟ್ಟು ಹಣ ಪಾವತಿಸಿದರೆ, ಬದುಕುವುದು ಹೇಗೆ’ ಎಂದು ಪ್ರಶ್ನಿಸಿದರು.

ಚಾಲಕ ರಮೇಶ್, ‘ಇದು ದುಡ್ಡು ತಿನ್ನುವ ಸರ್ಕಾರ. ಜನರ ಹಿತಕ್ಕಿಂತ ಸರ್ಕಾರಕ್ಕೆ ದುಡ್ಡೇ ಮುಖ್ಯವಾಗಿದೆ. ಇಂಥ ಕೆಟ್ಟ ಸರ್ಕಾರ ನಮಗೆ ಬೇಡ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆಟೊ ಚಾಲಕ ಶಬ್ಬೀರ್, ‘ಹೆದ್ದಾರಿ ಯಲ್ಲಿ ಆಟೊ ಸಂಚರಿಸಬಾರದೆಂಬ ನಿಯಮವಿದ್ದರೂ ಹಣದ ಆಸೆಗಾಗಿ ಸಿಬ್ಬಂದಿ ನಮ್ಮನ್ನು ಒಳಗೆ ಬಿಡುತ್ತಿದ್ದಾರೆ. ನಮ್ಮಿಂದ ಅಕ್ರಮವಾಗಿ ಇಷ್ಟುದಿನ ಟೋಲ್ ಸಂಗ್ರಹಿಸಿದ್ದಾರೆ. ಇದೀಗ ದುಪ್ಪಟ್ಟು ಶುಲ್ಕವೆಂದರೆ ಎಲ್ಲಿಂದತರುವುದು. ಇದೊಂದು ದೊಡ್ಡ ಮಾಫಿಯಾ’ ಎಂದು ದೂರಿದರು.

ಚಾಲಕ ವಿಜಯ್, ‘ನೆಲಮಂಗಲಕ್ಕೆ ಬಾಡಿಗೆ ಹೋಗಲು ₹ 300 ಪಡೆದಿ ದ್ದೇನೆ. ಟೋಲ್‌ನಲ್ಲಿ ಎರಡು ಟ್ರಿಪ್‌ಗೆ ₹80 ಕೊಟ್ಟಿದ್ದೇನೆ. ಉಳಿದಿದ್ದರಲ್ಲಿ ಡೀಸೆಲ್ ಹಾಕಿಸಬೇಕು. ಕೈಲಿ ಉಳಿ ಯುವುದು ಅಲ್ಪಮಾತ್ರ. ಹೀಗಾದರೆ, ಚಾಲಕರು ಹೇಗೆ ಬದುಕುವುದು. ಸರ್ಕಾರ, ಬಡವರ ಹೊಟ್ಟೆ ಮೇಲೆ ಹೊಡೆಯಬಾರದು’ ಎಂದು ಅಳಲು ತೋಡಿಕೊಂಡರು.

ಹೆಚ್ಚುವರಿ ಸಿಬ್ಬಂದಿ ನಿಯೋಜನೆ
ಪ್ರತಿ ಟೋಲ್‌ನಲ್ಲೂ ಮಂಗಳವಾರ ಹೆಚ್ಚುವರಿ ಸಿಬ್ಬಂದಿಯನ್ನು ದುಪ್ಪಟ್ಟು ಶುಲ್ಕ ಸಂಗ್ರಹಕ್ಕೆ ನಿಯೋಜಿಸಿದ್ದು ಕಂಡುಬಂತು.

‘ಎನ್‌ಎಚ್ಎಐ ಆದೇಶದಂತೆ ಶುಲ್ಕ ಸಂಗ್ರಹ ಮಾಡುತ್ತಿದ್ದು, ಎಲ್ಲವೂ ಪಾರದರ್ಶಕವಾಗಿದೆ. ಎಲ್ಲ ದತ್ತಾಂಶವೂ ಕಂಪ್ಯೂಟರ್‌ನಲ್ಲಿ ಸಂಗ್ರಹವಾಗುತ್ತದೆ. ಚಾಲಕರು ಗಲಾಟೆ ಮಾಡುತ್ತಾರೆ ಎಂಬುದು ಗೊತ್ತಾಗಿಯೇ ಹೆಚ್ಚಿನ ಸಿಬ್ಬಂದಿ ನಿಯೋಜನೆ ಮಾಡಿದ್ದೇನೆ. ಇಷ್ಟಾದರೂ ಕೆಲವರು, ಸಿಬ್ಬಂದಿಯನ್ನು ಬೆದರಿಸಿ ಟೋಲ್‌ನಿಂದ ತಪ್ಪಿಸಿಕೊಂಡು ಹೋಗಿದ್ದಾರೆ’ ಎಂದು ಟೋಲ್‌ಗೇಟ್ಸಿಬ್ಬಂದಿಯೊಬ್ಬರು ಹೇಳಿದರು.

‘ಇದೊಂದು ದೊಡ್ಡ ವ್ಯವಹಾರ’
ಕಾರಿನ ಮಾಲೀಕ ಪ್ರಕಾಶ್, ‘ವರ್ಷದಲ್ಲಿ ಒಮ್ಮೆ ಮಾತ್ರ ಹೆದ್ದಾರಿ ಬಳಸು ತ್ತೇನೆ. ಹೀಗಾಗಿ, ಫಾಸ್ಟ್ಯಾಗ್ ಮಾಡಿಸಿಲ್ಲ. ಇದೀಗ ದುಪ್ಪಟ್ಟು ಶುಲ್ಕ ಪಡೆಯುತ್ತಿರುವುದು ಖಂಡನೀಯ’ ಎಂದರು.

‘ಟೋಲ್‌ ಎಂಬುದೇ ದೊಡ್ಡ ವ್ಯವಹಾರವಾಗಿದೆ. ನಾವು ತುಂಬಿದ ತೆರಿಗೆಯಿಂದ ನಿರ್ಮಿಸಿದ ರಸ್ತೆಗಳು ಎಲ್ಲಿವೆ ಎಂಬುದನ್ನು ಹುಡು ಕುವಂತಾಗಿದೆ. ನಾವು ಮತ ಹಾಕಿದ್ದು ಯಾರಿಗೆ? ಈಗ ದುಪ್ಪಟ್ಟು ಹಣ ಕೊಡುತ್ತಿರುವುದು ಯಾರಿಗೆ? ಎಂಬುದೇ ತಿಳಿಯುತ್ತಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT