ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಖಾಸಗಿ ಆಸ್ಪತ್ರೆ: ಶುಲ್ಕ ಪ್ರದರ್ಶನ, ವಿಸ್ತೃತ ಬಿಲ್‌ ಕಡ್ಡಾಯ

Published 5 ಜೂನ್ 2024, 21:23 IST
Last Updated 5 ಜೂನ್ 2024, 21:23 IST
ಅಕ್ಷರ ಗಾತ್ರ

ಬೆಂಗಳೂರು: ಖಾಸಗಿ ವೈದ್ಯಕೀಯ ಸಂಸ್ಥೆಗಳು ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ಕಾಯ್ದೆ 2017ರ ಅನ್ವಯ ಚಿಕಿತ್ಸೆಗಳಿಗೆ ಸಂಬಂಧಿಸಿದಂತೆ ಕಡ್ಡಾಯವಾಗಿ ವಿಸ್ತೃತ ಬಿಲ್‌ ನೀಡಬೇಕು. ವಿವಿಧ ಶುಲ್ಕಗಳನ್ನು ಸಾರ್ವಜನಿಕ ಜಾಲತಾಣ, ಸೂಚನಾ ಫಲಕಗಳಲ್ಲಿ ಪ್ರಕಟಿಸಬೇಕು ಎಂದು ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ. 

ಕಾಯ್ದೆಯ ಪ್ರಕಾರ ರೋಗಿಗಳಿಗೆ ಮತ್ತು ಸಾರ್ವಜನಿಕರ ಮಾಹಿತಿಗಾಗಿ ಖಾಸಗಿ ವೈದ್ಯಕೀಯ ಸಂಸ್ಥೆಗಳು ಸಮಾಲೋಚನಾ ಶುಲ್ಕ, ತಪಾಸಣೆ, ವೈದ್ಯಕೀಯ ಚಿಕಿತ್ಸೆ, ಚಿಕಿತ್ಸಾ ವಿಧಾನ, ಆಸ್ಪತ್ರೆ ಶುಲ್ಕ, ಇತರ ಸೇವೆಗಳಿಗೆ ಸಂಬಂಧಿಸಿದ ಶುಲ್ಕ ಹಾಗೂ ವಿವರಗಳನ್ನು ಪ್ರಕಟಿಸಬೇಕು. ಈ ಮಾಹಿತಿಯನ್ನು ಸಾರ್ವಜನಿಕ ಜಾಲತಾಣ ಅಥವಾ ಸಂಸ್ಥೆಯ ಜಾಲತಾಣ, ಸಂಸ್ಥೆಯ ಸೂಚನಾ ಫಲಕದಲ್ಲಿ ಪ್ರದರ್ಶಿಸಬೇಕು. ಎಲ್ಲ ಸಮಯದಲ್ಲೂ ಸಂಸ್ಥೆಯಲ್ಲಿ ರೋಗಿಗಳಿಗೆ ಮತ್ತು ಸಾರ್ವಜನಿಕರಿಗೆ ಸಿದ್ಧ ರೂಪದಲ್ಲಿ ಲಭ್ಯವಾಗುವ ಪುಸ್ತಿಕೆಗಳ ಅಥವಾ ಕಿರು ಹೊತ್ತಿಗೆಗಳ ರೂಪದಲ್ಲಿ ಶುಲ್ಕಗಳ ವಿವರವನ್ನು ಮುದ್ರಿಸಿಡುವುದು ಕಡ್ಡಾಯ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಕೆಲವು ಖಾಸಗಿ ವೈದ್ಯಕೀಯ ಸಂಸ್ಥೆಗಳು ವಿಸ್ತೃತ ಬಿಲ್ಲನ್ನು ಒದಗಿಸದಿರುವುದು ಗಮನಕ್ಕೆ ಬಂದಿದೆ. ಕೆಲವು ಚಿಕಿತ್ಸೆಗಳಿಗೆ ಕ್ರೋಢೀಕೃತ ದರವನ್ನು ನಿಗದಿಪಡಿಸಿ, ಅಂತಹ ಕ್ರೋಢೀಕೃತ ದರವನ್ನು ಮಾತ್ರ ಬಿಲ್‌ನಲ್ಲಿ ನಮೂದಿಸಲಾಗುತ್ತಿದೆ. ಆದ್ದರಿಂದ, ಎಲ್ಲ ಖಾಸಗಿ ವೈದ್ಯಕೀಯ ಸಂಸ್ಥೆಗಳು ರೋಗಿಗೆ ಒದಗಿಸಿದ ಪ್ರತಿ ಕಾರ್ಯವಿಧಾನ, ಚಿಕಿತ್ಸೆ, ಸೇವೆಗಳಿಗೆ ವಿಸ್ತೃತ ಬಿಲ್ ಒದಗಿಸಬೇಕು. ಈ ರೀತಿ ಬಿಲ್ ಒದಗಿಸದಿದ್ದಲ್ಲಿ ಕಾನೂನಿನ ಅಡಿ ಸೂಕ್ತ ಕ್ರಮ ಜರುಗಿಸಲಾಗುವುದು ಎಚ್ಚರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT