ಬುಧವಾರ, ಸೆಪ್ಟೆಂಬರ್ 22, 2021
24 °C

ಜಾತ್ರೆ, ಜಾಥಾಕ್ಕೆ ಅವಕಾಶ ನೀಡುವುದಿಲ್ಲ- ಬಿಬಿಎಂಪಿ ಮುಖ್ಯ ಆಯುಕ್ತ ಸ್ಪಷ್ಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಹಿಂದೂಗಳ ಹಬ್ಬವಿರಲಿ ಅಥವಾ ಮುಸ್ಲೀಮರ ಹಬ್ಬವಿರಲಿ, ಕೋವಿಡ್‌ ಹರಡುತ್ತಿರುವ ಸಂದರ್ಭದಲ್ಲಿ ಅದರ ಆಚರಣೆ ಸೀಮಿತವಾಗಿ ನಡೆಯಬೇಕು. ಗಣೇಶ ಚತುರ್ಥಿಯಾಗಲೀ, ಮೊಹರಂ ಆಗಲೀ ಅಥವಾ ಬೇರೆ ಯಾವುದೇ ಹಬ್ಬವಿರಲಿ; ಅದರ ಪ್ರಯುಕ್ತ ಧಾರ್ಮಿಕ ಸಭೆ–ಸಮಾರಂಭ ಹಮ್ಮಿಕೊಳ್ಳುವಂತಿಲ್ಲ. ಜಾತ್ರೆ ಹಾಗೂ ಜಾಥಾ ನಡೆಸುವಂತಿಲ್ಲ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ಸ್ಪಷ್ಟಪಡಿಸಿದರು.

‘ಹಬ್ಬಗಳ ಆಚರಣೆ ಕುರಿತು ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯನ್ನು ಎಲ್ಲರೂ ಪಾಲಿಸಬೇಕು. ಅವುಗಳ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಬಿಬಿಎಂಪಿ ಸನ್ನದ್ಧವಾಗಿದೆ’ ಎಂದು ಅವರು ಸುದ್ದಿಗಾರರಿಗೆ ಬುಧವಾರ ತಿಳಿಸಿದರು.

‘ಜನ ಮಾಸ್ಕ್‌ ಧರಿಸದೇ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡಿದರೆ ಸೋಂಕು ಹರಡುವ ಅಪಾಯ ಹೆಚ್ಚು. ಕೋವಿಡ್ ಮುಂಜಾಗ್ರತಾ ಕ್ರಮಗಳ ಅನುಷ್ಠಾನಕ್ಕೆ ಮಾರ್ಷಲ್‌ಗಳು, ಗೃಹರಕ್ಷಕ ದಳದ ಸಿಬ್ಬಂದಿಯನ್ನು ಒಳಗೊಂಡ 54 ತಂಡಗಳನ್ನು ರಚಿಸಿದ್ದೇವೆ. ಪೌರರಕ್ಷಣಾ ದಳದ ಸ್ವಯಂಸೇವಕರನ್ನೂ ಈ ಉದ್ದೇಶಕ್ಕೆ ಬಳಸಿಕೊಳ್ಳಲಿದ್ದೇವೆ. ಮಾರುಕಟ್ಟೆಗಳಲ್ಲಿ ಹೆಚ್ಚಿನ ಜನ ಸೇರುತ್ತಾರೆ. ಹಾಗಾಗಿ ಅಲ್ಲಿ ಇಂತಹ ತಂಡಗಳನ್ನು ಆದ್ಯತೆ ಮೇರೆಗೆ ನಿಯೋಜಿಸುತ್ತೇವೆ. ಅವಶ್ಯಕತೆ ಇರುವಲ್ಲಿ ಕೋವಿಡ್‌ ನಿಯಂತ್ರಣದ ನಿರ್ಬಂಧಗಳನ್ನು ಇನ್ನಷ್ಟು ಕಠಿಣಗೊಳಿಸಲಿದ್ದೇವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಕೋವಿಡ್ ಮೂರನೇ ಅಲೆ ಎದುರಿಸಲು ಬಿಬಿಎಂಪಿಯ ತಜ್ಞರ ಸಮಿತಿ ಹಾಗೂ ಮಕ್ಕಳ ತಜ್ಞರ ಸಮಿತಿ ಜೊತೆ ಸಮಾಲೋಚಿಸಿ ಕ್ರಮ ಕೈಗೊಳ್ಳುತ್ತಿದ್ದೇವೆ. ಆಸ್ಪತ್ರೆಗಳನ್ನು ಸಜ್ಜಾಗಿ ಇಟ್ಟಿದ್ದೇವೆ. ಕೋವಿಡ್‌ ಪೀಡಿತ ಮಕ್ಕಳ ಆರೈಕೆಗೂ ವ್ಯವಸ್ಥೆ ಕಲ್ಪಿಸಿದ್ದೇವೆ. ಸಾರ್ವಜನಿಕರ ಆರೋಗ್ಯ ಮಾಹಿತಿ ಸಂಗ್ರಹಿಸಲು ಮನೆ ಮನೆ ಸರ್ವೆ ನಡೆಸುತ್ತಿದ್ದೇವೆ. ಕೊರೊನಾ ವೈರಾಣು ವಿರುದ್ಧ ಸೆಣಸಲು ಜನರ ದೇಹದಲ್ಲಿ ಎಷ್ಟರ ಮಟ್ಟಿಗೆ ಪ್ರತಿಕಾಯಗಳು ನಿರ್ಮಾಣವಾಗಿವೆ ಎಂಬುದನ್ನು ತಿಳಿಯಲು ಸೆರೊ ಸಮೀಕ್ಷೆ ಆರಂಭಿಸಿದ್ದೇವೆ. ಜೊತೆಗೆ, ಬಿಬಿಎಂಪಿ ಹಂತದಲ್ಲೂ ಪ್ರಾಯೋಗಿಕವಾಗಿ ಜೀನೋಮ್‌ ಸೀಕ್ವೆನ್ಸಿಂಗ್‌ ನಡೆಸಲು ಕ್ರಮ ಕೈಗೊಂಡಿದ್ದೇವೆ’ ಎಂದು ವಿವರಿಸಿದರು.

‘ಲಸಿಕೆ ಪಡೆಯಲು ಹಿಂಜರಿಕೆ ಬೇಡ’

‘ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್‌ ಲಸಿಕೆ ವಿತರಣೆಗೆ ಸಮಸ್ಯೆ ಇಲ್ಲ. ಈಗಾಗಲೇ ಶೇ 70ಕ್ಕೂ ಹೆಚ್ಚು ಮಂದಿ ಲಸಿಕೆಯ ಮೊದಲ ಡೋಸ್‌ ಪಡೆದಿದ್ದಾರೆ. ಆದರೂ ಕೆಲವರು ಲಸಿಕೆ ಪಡೆಯಲು ಹಿಂಜರಿಕೆ ಹೊಂದಿದ್ದಾರೆ. ಎಲ್ಲರೂ ಧೈರ್ಯದಿಂದ ಲಸಿಕೆ ಪಡೆದುಕೊಳ್ಳಬೇಕು’ ಎಂದು ಗೌರವ್‌ ಗುಪ್ತ ಹೇಳಿದರು.‌

‘ಬಿಬಿಎಂಪಿಗೆ ಲಸಿಕೆ ಪೂರೈಕೆ ಪ್ರಮಾಣ ಹೆಚ್ಚು ಮಾಡುವಂತೆ ಸರ್ಕಾರವನ್ನು ಒತ್ತಾಯ ಮಾಡಿದ್ದೇವೆ. ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಪೂರೈಕೆ ಆಗುವ ವಿಶ್ವಾಸವಿದೆ. ಪ್ರತಿ ವಾರ್ಡ್‌ನಲ್ಲಿ ಕನಿಷ್ಠಪಕ್ಷ ಒಂದು ಕಡೆ ಲಸಿಕೆ ನೀಡಲು ವ್ಯವಸ್ಥೆ ಮಾಡಿದ್ದೇವೆ’ ಎಂದರು.

‘ಶಾಲಾ ಶಿಕ್ಷಕರಿಗೆ ಲಸಿಕೆ ಕಡ್ಡಾಯ’

‘ಶಾಲಾ ಕಾಲೇಜುಗಳು ಇದೇ 23ರಿಂದ ಆರಂಭವಾಗಲಿವೆ. ಈ ಸಂದರ್ಭದಲ್ಲಿ ಕಾಲೇಜು ವಿದ್ಯಾರ್ಥಿಗಳು ಲಸಿಕೆ ಪಡೆದಿರಬೇಕು. ಶಾಲೆಯ ವಿದ್ಯಾರ್ಥಿಗಳ ವಯಸ್ಸು 18 ವರ್ಷಕ್ಕಿಂತ ಕಡಿಮೆ ಇರುವುದರಿಂದ ಅವರು ಲಸಿಕೆ ಪಡೆಯಲು ಸಾಧ್ಯವಾಗುವುದಿಲ್ಲ. ಹಾಗಾಗಿ ಶಾಲೆಗಳ ಶಿಕ್ಷಕರು, ಇತರ ಸಿಬ್ಬಂದಿ ಹಾಗೂ ವಾಹನ ಚಾಲಕರೆಲ್ಲರೂ ಕೋವಿಡ್‌ ಲಸಿಕೆ ಪಡೆಯುವುದು ಹಾಗೂ ಮಾಸ್ಕ್‌ ಧರಿಸುವುದು ಕಡ್ಡಾಯ. ಶಾಲಾ ಕಾಲೇಜು ಕಟ್ಟಡಗಳಿಗೆ ಸೋಂಕು ನಿವಾರಕ ದ್ರಾವಣವನ್ನೂ ಸಿಂಪಡಿಸಲಿದ್ದೇವೆ’ ಎಂದು ಗೌರವ್ ಗುಪ್ತ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು