ಬೆಂಗಳೂರು | ಧೈರ್ಯವೇ ಸರ್ವತ್ರ ಸಾಧನ-ಬೇಂದ್ರೆ ಕೃಷ್ಣಪ್ಪ

‘ಕೋವಿಡ್ ಬಂದು ಆಸ್ಪತ್ರೆಗೆ ದಾಖಲಾದ ಮೊದಲ ಒಂದೆರಡು ದಿನ ಸ್ವಲ್ಪ ಆತಂಕಗೊಂಡಿದ್ದು ನಿಜ. ಆದರೆ, ಎಲ್ಲವೂ ಸರಿಯಾಗಲಿದೆ ಎಂದು ಧೈರ್ಯ ತಂದುಕೊಂಡೆ. ಹಿರಿಯರು ಹೇಳಿದಂತೆ, ‘ಧೈರ್ಯಂ ಸರ್ವತ್ರ ಸಾಧನಂ’. ಈಗ ಗುಣಮುಖನಾಗಿ ಆರಾಮಾಗಿ ಮನೆಯಲ್ಲಿದ್ದೇನೆ’ ಎನ್ನುತ್ತಾರೆ ಸಾಹಿತಿ ಜಿ.ಕೃಷ್ಣಪ್ಪ (ಬೇಂದ್ರೆ ಕೃಷ್ಣಪ್ಪ).
72 ವರ್ಷದ ಅವರಿಗೆ ಹೃದಯ ಶಸ್ತ್ರಚಿಕಿತ್ಸೆ ಆಗಿದೆ. ಮಧುಮೇಹವೂ ಇದೆ. ಕೋವಿಡ್‌ಗೆ ತುತ್ತಾಗಿ ಒಂದು ವಾರ ಆಸ್ಪತ್ರೆಯಲ್ಲಿದ್ದ ಅವರು, ಈಗ ಗುಣಮುಖರಾಗಿ, ಮೊದಲಿಗಿಂತ ಹೆಚ್ಚು ಲವಲವಿಕೆಯಿಂದ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದಾರೆ.
‘ನಾನು ರಚಿಸಿರುವ ಕುವೆಂಪು ಹನುಮದ್ದರ್ಶನ ಕೃತಿ ಜುಲೈ 12ರಂದು ಆನ್‌ಲೈನ್‌ನಲ್ಲಿ ಬಿಡುಗಡೆಯಾಯಿತು. ಈ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಸುವ ವೇಳೆ ಹೊರಗೆ ಓಡಾಡಿದ ಸಂದರ್ಭದಲ್ಲಿ ಸೋಂಕು ತಗುಲಿರಬಹುದು. ಹೊರಗೆ ಓಡಾಡದೇ ಇದ್ದಿದ್ದರೆ ನಾನು ಸುರಕ್ಷಿತವಾಗಿರುತ್ತಿದ್ದೆ ಎನಿಸುತ್ತದೆ’ ಎಂದು ಅವರು ಹೇಳಿದರು.
‘12ರ ನಂತರ ದೇಹದಲ್ಲಿ ಸುಸ್ತು ಕಾಣಿಸಿಕೊಳ್ಳತೊಡಗಿತು. ಆಹಾರ ರುಚಿಸುತ್ತಿರಲಿಲ್ಲ. ನನ್ನ ಮಗನಿಗೂ ಜ್ವರ ಬಂದಿತ್ತು. 21ರಂದು ಸ್ಪರ್ಶ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿದ್ದೆವು. 22ರ ಸಂಜೆ 7.30ಕ್ಕೆ ಬಿಬಿಎಂಪಿಯಿಂದ ಒಂದು ಮೆಸೇಜ್ ಬಂದಿತು. ರಾತ್ರಿ 10.30ರ ವೇಳೆಗೆ ಆಗಲೇ ಮನೆಯ ಹತ್ತಿರ ಆಂಬುಲೆನ್ಸ್ ಬಂದಿತು. ಸರ್ಜಾಪುರ ರಸ್ತೆಯ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ನಾನು ಮತ್ತು ಮಗ ದಾಖಲಾದೆವು’ ಎಂದು ಅವರು ಹೇಳಿದರು.
‘ಪ್ರಾರಂಭದಲ್ಲಿ ಆತಂಕವಾಯಿತು. ಆದರೆ, ಆಸ್ಪತ್ರೆಯಲ್ಲಿ ವೈದ್ಯರು ತುಂಬಾ ಚೆನ್ನಾಗಿ ನೋಡಿಕೊಂಡರು. ಸಮಯಕ್ಕೆ ಸರಿಯಾಗಿ ಔಷಧಿ, ಆಹಾರ ನೀಡುತ್ತಿದ್ದರು. ಮಗನ ಕಂಪನಿ ಆರೋಗ್ಯ ವಿಮೆ ಇದ್ದುದರಿಂದ ದುಡ್ಡಿನ ಚಿಂತೆಯೂ ಹೆಚ್ಚು ಕಾಡಲಿಲ್ಲ. ವಿಮೆ ಮೊತ್ತ ಕಡಿದು, ₹40 ಸಾವಿರವನ್ನು ನಾವು ಪಾವತಿಸಬೇಕಾಯಿತು. ಈಗ ಇಬ್ಬರೂ ಹೋಂ ಕ್ವಾರಂಟೈನ್‌ನಲ್ಲಿದ್ದೇವೆ’ ಎಂದು ಹೇಳಿದರು.
‘ವಯಸ್ಸಾದವರು ಮನೆಯಲ್ಲಿ ಹೆಂಡತಿ, ಮಕ್ಕಳು ಅಥವಾ ಸೊಸೆಯಂದಿರ ಮಾತು ಕೇಳಬೇಕು. ಅನಾವಶ್ಯಕವಾಗಿ ಹೊರಗೆ ಓಡಾಡಬಾರದು. ಸೋಂಕು ತಗುಲಲು ನಮ್ಮ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯವೇ ಕಾರಣವಾಗಿರುತ್ತದೆ’ ಎಂದೂ ಅವರು ಹೇಳಿದರು.
‘ನಿಮ್ಮ ತನುವ ಸಂತೈಸಿಕೊಳ್ಳಿ, ನಿಮ್ಮ ಮನವ ಸಂತೈಸಿಕೊಳ್ಳಿ ಎಂಬ ಬಸವಣ್ಣನವರ ಮಾತನ್ನು ಈಗ ಎಲ್ಲರೂ ಪಾಲಿಸಬೇಕು’ ಎಂದೂ ಕೃಷ್ಣಪ್ಪ ಸಲಹೆ ನೀಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.