ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಹೊತ್ತಿ ಉರಿದ ಯಾರ್ಡ್, ಗಾರ್ಮೆಂಟ್ಸ್ ಕಾರ್ಖಾನೆ

ಸೆಂಟ್ರಿಂಗ್ ಮರಗಳ ಯಾರ್ಡ್‌ನಲ್ಲಿ ಬೆಂಕಿ ಅವಘಡ; ₹ 2 ಕೋಟಿ ಮೌಲ್ಯದ ವಸ್ತುಗಳು ಭಸ್ಮ
Published 24 ಏಪ್ರಿಲ್ 2024, 22:41 IST
Last Updated 24 ಏಪ್ರಿಲ್ 2024, 22:41 IST
ಅಕ್ಷರ ಗಾತ್ರ

ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಬಳಿಯ ಸಿಂಗಸಂದ್ರದ ಕಂಟ್ರಿ ರಸ್ತೆಯಲ್ಲಿ ಮಂಗಳವಾರ ತಡರಾತ್ರಿ ಬೆಂಕಿ ಅವಘಡ ಸಂಭವಿಸಿದ್ದು, ಸೆಂಟ್ರಿಂಗ್ ಮರಗಳ ಯಾರ್ಡ್ ಹಾಗೂ ಗಾರ್ಮೆಂಟ್ಸ್ ಕಾರ್ಖಾನೆ ಬೆಂಕಿಯಿಂದ ಹೊತ್ತಿ ಉರಿಯಿತು. ಅವಘಡದಿಂದಾಗಿ ₹ 2 ಕೋಟಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ.

‘ಸೆಂಟ್ರಿಂಗ್ ಮರಗಳ ಯಾರ್ಡ್‌ನಲ್ಲಿ ಕಾಣಿಸಿಕೊಂಡ ಬೆಂಕಿ, ಕೆಲವೇ ನಿಮಿಷಗಳಲ್ಲಿ ಹೆಚ್ಚಾಗಿತ್ತು. ಸೆಂಟ್ರಿಂಗ್ ಮರಗಳಿಗೆ ಬೆಂಕಿ ತಗುಲಿದ್ದರಿಂದ, ಧಗ ಧಗ ಉರಿಯಲಾರಂಭಿಸಿತ್ತು. ಇದೇ ಜಾಗಕ್ಕೆ ಹೊಂದಿಕೊಂಡಿದ್ದ ಗ್ಯಾರೇಜ್‌ ಹಾಗೂ ಸಮೀಪದಲ್ಲಿದ್ದ ಗಾರ್ಮೆಂಟ್ಸ್ ಕಾರ್ಖಾನೆಗೂ ಬೆಂಕಿ ವ್ಯಾಪಿಸಿತ್ತು’ ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ಹೇಳಿದರು.

‘ಯಾರ್ಡ್‌ನಲ್ಲಿದ್ದ ಮರಗಳು ಸಂಪೂರ್ಣ ಸುಟ್ಟಿವೆ. ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿದ್ದ ಬಟ್ಟೆಗಳು, ಯಂತ್ರಗಳು ಹಾಗೂ ಗ್ಯಾರೇಜ್‌ನಲ್ಲಿದ್ದ ಎರಡು ಕಾರು, 45 ದ್ವಿಚಕ್ರ ವಾಹನಗಳು ಸುಟ್ಟು ಕರಕಲಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ’ ಎಂದು ತಿಳಿಸಿದರು.

ಎರಡು ಎಕರೆ ಜಾಗದಲ್ಲಿ ಯಾರ್ಡ್: ‘ಕಂಟ್ರಿ ರಸ್ತೆಯಲ್ಲಿರುವ ಎರಡು ಎಕರೆ ಜಾಗದಲ್ಲಿ ಸೆಂಟ್ರಿಂಗ್ ಮರಗಳನ್ನು ಸಂಗ್ರಹಿಸಿಡಲಾಗಿತ್ತು. ಈ ಯಾರ್ಡ್ ಪಕ್ಕದಲ್ಲಿದ್ದ ಗ್ಯಾರೇಜ್‌ನಲ್ಲಿ ಕಾರು ಹಾಗೂ ದ್ವಿಚಕ್ರ ವಾಹನಗಳನ್ನು ನಿಲ್ಲಿಸಲಾಗಿತ್ತು’ ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ಹೇಳಿದರು.

‘ಮಂಗಳವಾರ ತಡರಾತ್ರಿ 12.30 ಗಂಟೆ ಸುಮಾರಿಗೆ ಯಾರ್ಡ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ನಂತರ, ಪಕ್ಕದ ಗ್ಯಾರೇಜ್‌ ಹಾಗೂ ಗಾರ್ಮೆಂಟ್ಸ್ ಕಾರ್ಖಾನೆಗೂ ಬೆಂಕಿ ಹರಡಿತ್ತು. ದಟ್ಟ ಹೊಗೆಯೂ ಆವರಿಸಿತ್ತು. ಅದನ್ನು ನೋಡಿದ್ದ ಸ್ಥಳೀಯರು ಅಗ್ನಿಶಾಮಕ ದಳದ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದರು. ಸ್ಥಳಕ್ಕೆ ಹೋಗಿ, ಬುಧವಾರ ಬೆಳಿಗ್ಗೆವರೆಗೂ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಲಾಯಿತು. ಪೊಲೀಸರೂ ಸಹಕಾರ ನೀಡಿದರು’ ಎಂದು ತಿಳಿಸಿದರು.

‘ಬೆಂಕಿಯ ಪ್ರಮಾಣ ಹೆಚ್ಚಿತ್ತು. ಯಾರ್ಡ್‌, ಗ್ಯಾರೇಜ್ ಹಾಗೂ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿದ್ದ ಎಲ್ಲ ವಸ್ತುಗಳು ಸಂಪೂರ್ಣ ಸುಟ್ಟಿವೆ. ಯಾರ್ಡ್‌ನಿಂದ 100 ಮೀಟರ್ ದೂರದಲ್ಲಿ ಗಾರ್ಮೆಂಟ್ಸ್ ಕಾರ್ಖಾನೆ ಇದೆ. ಯಾರ್ಡ್‌ನಲ್ಲಿದ್ದ ಬೆಂಕಿಯ ಕಿಡಿಯಿಂದ ಕಾರ್ಖಾನೆಯಲ್ಲಿ ಬೆಂಕಿ ಹೊತ್ತಿಕೊಂಡಿತೆ ? ಅಥವಾ ಬೇರೆ ಏನಾದರೂ ಕಾರಣವಿದೆಯಾ ? ಎಂಬುದು ತನಿಖೆಯಿಂದ ತಿಳಿಯಬೇಕಿದೆ’ ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ಹೇಳಿದರು.

ಬೆಂಕಿ ಅವಘಡ ಸಂಬಂಧ ಬೇಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT