ಶುಕ್ರವಾರ, ಸೆಪ್ಟೆಂಬರ್ 17, 2021
30 °C
‘ಅಜಂತ ಟ್ರಿನಿಟಿ ಇನ್’ನ ಇಬ್ಬರು ಕೆಲಸಗಾರರಿಗೆ ಗಾಯ

ಹೋಟೆಲ್‌ನಲ್ಲಿ ಬೆಂಕಿ ಅವಘಢ: ‘ಅಜಂತ ಟ್ರಿನಿಟಿ ಇನ್’ನ ಇಬ್ಬರು ಕೆಲಸಗಾರರಿಗೆ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದ ಟ್ರಿನಿಟಿ ವೃತ್ತದಲ್ಲಿರುವ ‘ಅಜಂತ ಟ್ರಿನಿಟಿ ಇನ್’ ಹೋಟೆಲ್‌ನಲ್ಲಿ ಸೋಮವಾರ ರಾತ್ರಿ ಬೆಂಕಿ ಅವಘಡ ಸಂಭವಿಸಿದ್ದು, ಇಬ್ಬರು ಕೆಲಸಗಾರರು ಗಾಯಗೊಂಡಿದ್ದಾರೆ. ಆಟೊ ಹಾಗೂ ಬೊಲೆರೊ ಜೀಪು ಭಾಗಶಃ ಸುಟ್ಟಿವೆ.

ಮೂರು ಅಂತಸ್ತುಗಳ ಹಳೇ ಕಟ್ಟಡದಲ್ಲಿ ಹೋಟೆಲ್ ಇದ್ದು, ಇದರಲ್ಲಿ 96 ಕೊಠಡಿಗಳಿವೆ. ನೆಲಮಹಡಿಯಲ್ಲಿ ವಾಣಿಜ್ಯ ಮಳಿಗೆಗಳನ್ನು ತೆರೆಯಲಾಗಿದೆ. ಇದೇ ಸ್ಥಳದಲ್ಲಿ ವಾಹನಗಳ  ಪಾರ್ಕಿಂಗ್ ಜಾಗವಿದ್ದು, ಅಲ್ಲಿಯೇ ಜೀಪು ಹಾಗೂ ಆಟೊ ನಿಲ್ಲಿಸಲಾಗಿತ್ತು.

‘ಸೋಮವಾರ ರಾತ್ರಿ 10.30ರ ಸುಮಾರಿಗೆ ನೆಲಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಬೊಲೆರೊ ಜೀಪು ಹಾಗೂ ಆಟೊಗೆ ಬೆಂಕಿ ಹೊತ್ತಿಕೊಂ ಡಿತ್ತು. ಕೆಲ ನಿಮಿಷಗಳಲ್ಲಿ ಮೊದಲ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡು, ಎರಡನೇ ಹಾಗೂ ಮೂರನೇ ಮಹಡಿ ಗಳಲ್ಲಿ ಹೊಗೆ ಆವರಿಸಿತ್ತು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು.

‘ಸ್ಥಳಕ್ಕೆ ಬಂದ ದಕ್ಷಿಣ ಅಗ್ನಿಶಾಮಕ ಠಾಣೆ ಸಿಬ್ಬಂದಿ, ಎರಡು ಗಂಟೆ ಕಾರ್ಯಾ ಚರಣೆ ನಡೆಸಿ ಬೆಂಕಿ ನಂದಿಸಿದರು. ಗಾಯಗೊಂಡಿದ್ದ ಇಬ್ಬರನ್ನು ಆಂಬುಲೆನ್ಸ್‌ನಲ್ಲಿ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಐವರನ್ನು ರಕ್ಷಿಸಲಾಯಿತು’ ಎಂದೂ ತಿಳಿಸಿದರು.

ಎರಡು ಕೊಠಡಿ ಮಾತ್ರ ಬುಕ್ಕಿಂಗ್:ಹಳೇ ಕಟ್ಟಡವಾಗಿದ್ದರಿಂದ ಹೆಚ್ಚು ಗ್ರಾಹಕರು ಹೋಟೆಲ್‌ಗೆ ಬರುತ್ತಿರಲಿಲ್ಲ. ಸೋಮವಾರ ಎರಡು ಕೊಠಡಿಗಳನ್ನು ಮಾತ್ರ  ಕಾಯ್ದಿರಿಸಲಾಗಿತ್ತು. ಕೆಲಸಗಾರರು ಸೇರಿ ಏಳು ಮಂದಿ ಹೋಟೆಲ್‌ನಲ್ಲಿ ಸಿಲುಕಿಕೊಂಡಿದ್ದರು.

‘ದಟ್ಟ ಹೊಗೆ ಹಬ್ಬಿದ್ದರಿಂದ ಉಸಿರಾ ಡಲು ಸಾಧ್ಯವಾಗಿರಲಿಲ್ಲ. ಇಬ್ಬರು ಕೆಲಸಗಾರರು, ಕಿಟಕಿ ಗಾಜು ಒಡೆಯಲು ಯತ್ನಿಸಿ ಗಾಯಗೊಂಡಿದ್ದರು. ಅಭಿಷೇಕ್, ದಿನೇಶ್, ಸತ್ಯಪ್ರಕಾಶ್, ಮಹೇಂದ್ರ ಸೇರಿದಂತೆ ಏಳು ಮಂದಿಯನ್ನು ರಕ್ಷಿಸಲಾಗಿದ್ದು, ಅವರೆಲ್ಲರೂ ಸುರಕ್ಷಿತವಾಗಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ನೆಲಮಹಡಿ, ಮೊದಲ ಹಾಗೂ ಎರಡನೇ ಮಹಡಿಯಲ್ಲಿದ್ದ ಪೀಠೋಪಕರಣಗಳು ಸಂಪೂರ್ಣ ಸುಟ್ಟಿವೆ. ಲಕ್ಷಾಂತರ ರೂಪಾಯಿ ಹಾನಿಯಾಗಿದೆ. ಮಾಲೀಕರಿಂದ ಮಾಹಿತಿ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ವಿದ್ಯುತ್ ಶಾರ್ಟ್‌ ಸರ್ಕೀಟ್‌ನಿಂದಾಗಿ, ಬೊಲೆರೊ ಜೀಪಿನಲ್ಲಿ ಮೊದಲಿಗೆ ಬೆಂಕಿ ಕಾಣಿಸಿಕೊಂಡಿರುವ ಶಂಕೆ ಇದೆ’ ಎಂದೂ ತಿಳಿಸಿವೆ.

‘ತನಿಖೆಯಿಂದ ನಿಖರ ಕಾರಣ’

‘ಬೆಂಕಿ ಅವಘಡದ ಮಾಹಿತಿ ಬರುತ್ತಿದ್ದಂತೆಯೇ ಸ್ಥಳಕ್ಕೆ ಹೋಗಿ ಕಾರ್ಯಾಚರಣೆ ನಡೆಸಿದೆವು. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಬೆಂಕಿ ಹೊತ್ತಿಕೊಳ್ಳಲು ಕಾರಣವೇನು ಎಂಬುದು ತನಿಖೆಯಿಂದ ತಿಳಿಯಬೇಕಿದೆ’ ಎಂದು ಅಗ್ನಿಶಾಮಕ ದಳದ ಜಿಲ್ಲಾ ಅಧಿಕಾರಿ (ಬೆಂಗಳೂರು ದಕ್ಷಿಣ) ಕೆ. ಹೇಮಂತ್ ಕುಮಾರ್ ‘ಪ್ರಜಾವಾಣಿ’ಗೆ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು