ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಮೊದಲ ಸಂಚಾರ ಸಿಗ್ನಲ್‌ ಯಾವುದು ಬಲ್ಲಿರಾ?

58 ವರ್ಷಗಳ ಹಿಂದೆ ಎನ್‌.ಆರ್‌. ಚೌಕದಲ್ಲಿ ಅಳವಡಿಕೆ l ನೆನಪಿಗಾಗಿ ಹಳೆ ಸಿಗ್ನಲ್ ಉಳಿಸಿಕೊಳ್ಳಲಾಗಿದೆ
Last Updated 13 ನವೆಂಬರ್ 2021, 20:22 IST
ಅಕ್ಷರ ಗಾತ್ರ

ಬೆಂಗಳೂರು: ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ಮಹಾನಗರ ಈಗ ವಾಹನಗಳ ದಟ್ಟಣೆಗೂ ಪ್ರಸಿದ್ಧಿ. ಅಲ್ಲಲ್ಲಿ ಸಂಚಾರ ಸಿಗ್ನಲ್‌ಗಳನ್ನು ನಿರ್ಮಿಸಿದರೂ ದಟ್ಟಣೆ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಸಿಗ್ನಲ್‌ಗಳನ್ನು ಸ್ಥಾಪಿಸುವ ಮೂಲಕನಗರದಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸುವ ಪರಿಪಾಟ ಯಾವಾಗ ಆರಂಭವಾಯಿತು? ನಗರದ ಮೊದಲ ಸಂಚಾರ ಸಿಗ್ನಲ್‌ ಯಾವುದು ಎಂದು ಯಾರಾದರೂ ಬಲ್ಲಿರಾ?

ವಾಹನಗಳ ಸುಗಮ ಸಂಚಾರಕ್ಕೆ ನಗರದಲ್ಲಿ ‘ಸಿಗ್ನಲ್‌’ ಅಳವಡಿಸಬೇಕು ಎನ್ನುವ ಚಿಂತನೆ ಮೊದಲು ಮೊಳಕೆ ಯೊಡೆದಿದ್ದು 1963ರಲ್ಲಿ. ಎನ್‌.ಆರ್‌. ಚೌಕದಲ್ಲಿ ವಾಹನಗಳ ದಟ್ಟಣೆ ಆಗ ಹೆಚ್ಚಾಗತೊಡಗಿತ್ತು. ದಿನೇ ದಿನೇ ವಾಹನ ಸಂಚಾರ ದುಸ್ತರವಾಗತೊಡಗಿತ್ತು. ಅಂದಿನ ನಗರ ಪೊಲೀಸ್ ಕಮಿಷನರ್ ಸಿ.ಚಾಂಡಿ ಮತ್ತು ಸಂಚಾರ ಡಿಸಿಪಿಯಾಗಿದ್ದ ಬಿ.ಎನ್‌. ಗರುಡಾಚಾರ್ ಅವರ ಮುತುವರ್ಜಿಯಿಂದ ಎನ್. ಆರ್. ರಸ್ತೆಯಲ್ಲಿ ಮೊದಲ ಬಾರಿಗೆ ಸಂಚಾರ ಸಿಗ್ನಲ್ ಅಳವಡಿಸಲಾಯಿತು.

‘ಆಗ ವಾಹನಗಳು ವ್ಯವಸ್ಥಿತವಾಗಿ ಚಲಿಸುತ್ತಿರಲಿಲ್ಲ. ಅಡ್ಡಾದಿಡ್ಡಿಯಾಗಿ ಚಲಿಸುತ್ತಿದ್ದ ವಾಹನಗಳಿಂದ ಸಮಸ್ಯೆಗಳು ಎದುರಾಗುತ್ತಿದ್ದವು. ಅವುಗಳನ್ನು ನಿಯಂತ್ರಿಸುವುದು ಕಷ್ಟಸಾಧ್ಯವಾಗತೊಡಗಿತು. ಕಾರು, ಆಟೊ ಚಾಲಕರು ಸಹ ಈ ವಿಷಯವನ್ನು ಪೊಲೀಸ್‌ ಇಲಾಖೆ ಗಮನಕ್ಕೆ ತಂದಿದ್ದರು. ಆಗ ಸಿಗ್ನಲ್‌ ಅಳವಡಿಸಬೇಕು ಎನ್ನುವ ಯೋಜನೆ ರೂಪಿಸಲಾಯಿತು. ಎನ್‌.ಆರ್‌. ಚೌಕದಲ್ಲಿ ಅಳವಡಿಸಿದ ಸಿಗ್ನಲ್‌ ಬೆಂಗಳೂರು ನಗರದಲ್ಲೇ ಮೊದಲು. ಈ ಸಿಗ್ನಲ್‌ ಅಳವಡಿಸಿದ ಬಳಿಕ ವಾಹನಗಳ ಸಂಚಾರದಲ್ಲಿ ಭಾರಿ ಸುಧಾರಣೆಯಾಯಿತು’ ಎಂದು ಆಗ ಸಂಚಾರ ಡಿಸಿಪಿಯಾಗಿದ್ದ ಗರುಡಾಚಾರ್‌ ನೆನಪಿಸಿಕೊಂಡರು.

‘ಮೊದಲ ಬಾರಿ ಟ್ರಾಫಿಕ್ ಸಿಗ್ನಲ್ ಅಳವಡಿಸಲು ನನ್ನ ತಂದೆ ಮುಂಬೈಗೆ ತೆರಳಿ ಹಲವಾರು ಸಾಮಗ್ರಿಗಳನ್ನು ತಂದಿದ್ದು ನನಗೆ ಈಗಲೂ ನೆನಪಿದೆ. ವಾಹನಗಳ ಸಂಖ್ಯೆ ಹೆಚ್ಚಾದಂತೆ 2005ರಲ್ಲಿ ಸಮೀಪದಲ್ಲೇ ಮತ್ತೊಂದು ಸಿಗ್ನಲ್‌ ಅಳವಡಿಸಲಾಯಿತು. ಹಳೆಯ ಸಿಗ್ನಲ್‌ ಅನ್ನು ನೆನಪಿಗಾಗಿ ಉಳಿಸಿಕೊಳ್ಳುವ ಕಾರ್ಯವನ್ನು ಪೊಲೀಸ್‌ ಇಲಾಖೆ ಕೈಗೊಂಡಿರುವುದು ಶ್ಲಾಘನೀಯ. ಈಗಲೂ ಹಳೆಯ ಸಿಗ್ನಲ್‌ನ ಕಬ್ಬಿಣದ ಕಂಬವೊಂದನ್ನು ಪೊಲೀಸ್‌ ಠಾಣೆಯೊಂದರಲ್ಲಿ ಸಂಗ್ರಹಿಸಿಡಲಾಗಿದೆ’ ಎಂದು ಶಾಸಕ ಉದಯ ಬಿ.ಗರುಡಾಚಾರ್‌ ಮೆಲುಕು ಹಾಕಿದರು. ಉದಯ್‌ ಗರುಡಾಚಾರ್‌ ಅವರು ಪ್ರತಿನಿಧಿಸುವ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲೇ ಈ ಸಂಚಾರ ಸಿಗ್ನಲ್‌ ಇದೆ.

ಮೊದಲ ಸಂಚಾರ ಸಿಗ್ನಲ್‌ ಅಳವಡಿಸಿ ಈಗ 58 ವರ್ಷಗಳೇ ಉರುಳಿವೆ. ಆ ಬಳಿಕ ನಗರದಾದ್ಯಂತ ಸಾವಿರಾರು ಟ್ರಾಫಿಕ್‌ ಸಿಗ್ನಲ್‌ಗಳನ್ನು ಅಳವಡಿಸಲಾಗಿದೆ. ರಾಜಧಾನಿಯ ಪ್ರಥಮ ಟ್ರಾಫಿಕ್ ಸಿಗ್ನಲ್ ಬಳಸಲಾದ ಸವಿ ನೆನಪನ್ನು ಪೊಲೀಸ್ ಇಲಾಖೆ ಮಾರ್ಚ್‌ ತಿಂಗಳಲ್ಲಿ ಕಾರ್ಯಕ್ರಮ ಆಯೋಜಿಸುವ ಮೂಲಕ ಮೆಲುಕು ಹಾಕಿತ್ತು.

ಮಾಹಿತಿ ತಂತ್ರಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳ ಉದ್ಯಮಗಳ ಸ್ಥಾಪನೆಯಿಂದ ಈ ಮಹಾನಗರವು ವಿಸ್ತಾರವಾಗಿ ಬೆಳೆಯುತ್ತಿದೆ. ನಗರದ ಜನಸಂಖ್ಯೆ ಹಾಗೂ ವಿಸ್ತೀರ್ಣ ಬೆಳದಂತೆ ವಾಹನಗಳ ಸಂಖ್ಯೆಯೂ ಹೆಚ್ಚುತ್ತಿದೆ. ನಗರದಲ್ಲಿ ಈಗ ವಾಹನಗಳ ಸಂಖ್ಯೆ
1 ಕೋಟಿ ದಾಟಿದೆ. ಅದರಲ್ಲೂ ದ್ವಿಚಕ್ರ ವಾಹನಗಳ ಸಂಖ್ಯೆ 66 ಲಕ್ಷ ದಾಟಿದೆ. ಪ್ರತಿ ವರ್ಷ ಶೇ 10ರಿಂದ ಶೇ 20ರಷ್ಟು ಹೊಸ ವಾಹನಗಳು ಸೇರ್ಪಡೆಯಾಗುತ್ತಿವೆ. ವಾಹನಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಿದ್ದಂತೆಯೇ ಸಂಚಾರ ಸಮಸ್ಯೆ ಬೇರೆ ಬೇರೆ ಆಯಾಮ ಪಡೆದುಕೊಳ್ಳುತ್ತಿದೆ. ವಾಹನಗಳ ದಟ್ಟಣೆಯಿಂದ ವಾಹನಗಳ ವೇಗದ ಮಿತಿ ಈಗ ಗಂಟೆಗೆ 15 ಕಿ.ಮೀ.ಗೆ ಕುಸಿದಿದೆ ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT