ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ಆತಂಕ ಮೂಡಿಸಿದ್ದ ಚಿರತೆಗೆ ಗುಂಡು: ಸಾವು

Published 1 ನವೆಂಬರ್ 2023, 9:59 IST
Last Updated 1 ನವೆಂಬರ್ 2023, 9:59 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಹೊರವಲಯದ ಜನರಿಗೆ ನಾಲ್ಕು ದಿನಗಳಿಂದ ಆತಂಕ ಹುಟ್ಟಿಸಿ, ವೈದ್ಯರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ದಾಳಿ ನಡೆಸಿದ್ದ ಚಿರತೆಯನ್ನು ಅರಣ್ಯಾಧಿಕಾರಿಗಳು ಬುಧವಾರ ಗುಂಡು ಹಾರಿಸಿ ಕೊಂದಿದ್ದಾರೆ.

ಹೊಸೂರು ರಸ್ತೆ ಕೂಡ್ಲುಗೇಟ್ ಬಳಿ ಕಾಣಿಸಿಕೊಂಡಿದ್ದ ಚಿರತೆಯನ್ನು ಪತ್ತೆಹಚ್ಚಲು ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು. ಕೃಷ್ಣಾರೆಡ್ಡಿ ಕೈಗಾರಿಕಾ ಪ್ರದೇಶದಲ್ಲಿ ಬುಧವಾರ ಬೆಳಿಗ್ಗೆ ಮತ್ತೆ ಕಾಣಿಸಿಕೊಂಡಿತ್ತು. ಜೀವಂತವಾಗಿ ಸೆರೆಹಿಡಿಯಲು ನಡೆಸಿದ ಕಾರ್ಯಾಚರಣೆಯಲ್ಲಿ ಅರಣ್ಯ ಸಿಬ್ಬಂದಿ ಹಾಗೂ ವೈದ್ಯರ ಮೇಲೆ ದಾಳಿ ನಡೆಸಿತ್ತು. ಮಧ್ಯಾಹ್ನ 2.30ರಿಂದ 2.45ರ ಅವಧಿಯಲ್ಲಿ ಸೆರೆಗೆ ಸಿಲುಕದೆ ದಾಳಿ ಮಾಡಲು ಮುಂದಾದಾಗ ಸಿಬ್ಬಂದಿ ಗುಂಡು ಹಾರಿಸಿದ್ದಾರೆ.

‘ವ್ಯಕ್ತಿಯ ಸ್ವಯಂ ರಕ್ಷಣೆಗಾಗಿ ವನ್ಯಪ್ರಾಣಿಯನ್ನು ಗಾಯಗೊಳಿಸುವುದು ಅಥವಾ ಕೊಲ್ಲುವುದು ವನ್ಯಜೀವಿ ಸಂರಕ್ಷಣೆ ಕಾಯ್ದೆ ಸೆಕ್ಷನ್‌ 11ರಂತೆ ಅಪರಾಧವಲ್ಲ. ಚಿರತೆಯನ್ನು ಕೊಲ್ಲಲು ಬುಧವಾರ ಮಧ್ಯಾಹ್ನ ಮೌಖಿಕ ಆದೇಶವನ್ನು ನೀಡಲಾಗಿತ್ತು’ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಸುಭಾಷ್‌ ಕೆ. ಮಳ್ಖೇಡ ತಿಳಿಸಿದರು.

‘ಜನನಿಬಿಡ ಪ್ರದೇಶದಲ್ಲಿ ಚಿರತೆ ಇತ್ತು. ಅದನ್ನು ಶಾಂತಗೊಳಿಸಿ, ಹಿಡಿಯುವುದು ಸಾಧ್ಯವಾಗಿರಲಿಲ್ಲ. ಅದು ಓಡಿಹೋಗುವಾಗ ಗಾಯಗೊಳ್ಳುವ ಜೊತೆಗೆ ಜನರನ್ನೂ ಗಾಯಗೊಳಿಸುವ ಸಾಧ್ಯತೆ ಇದ್ದುದ್ದರಿಂದ, ಜನರ ಹಿತಾಸಕ್ತಿಯಿಂದ ಗುಂಡು ಹಾರಿಸುವ ಆದೇಶವನ್ನು ನೀಡಲಾಯಿತು. ನಾಲ್ಕು ದಿನಗಳಿಂದ ಚಿರತೆಯನ್ನು ರಕ್ಷಿಸಲು ನಾವು ನಡೆಸಿದ ಪ್ರಯತ್ನಗಳೆಲ್ಲ ವಿಫಲವಾಗಿದ್ದಕ್ಕೆ ಬೇಸರವಿದೆ’ ಎಂದರು.

‘ಚಿರತೆ ಮಂಗಳವಾರ ಕಟ್ಟಡದ ಒಳಗೆ ಇತ್ತು. ಬುಧವಾರ ಬೆಳಿಗ್ಗೆ ಅದನ್ನು ಹಿಡಿಯಲು ಪ್ರಯತ್ನಿಸಿದಾಗ ನಮ್ಮ ಅರಣ್ಯ ಸಿಬ್ಬಂದಿ ಮೇಲೆ ದಾಳಿ ನಡೆಸಿತು. ಅದು ತನ್ನ ಜೀವವನ್ನು ಉಳಿಸಿಕೊಳ್ಳಲು ಅತ್ಯಂತ ಆಕ್ರಮಣಕಾರಿ ಸ್ಥಿತಿಯನ್ನು ತಲುಪಿತ್ತು’ ಎಂದು ಮಾಹಿತಿ ನೀಡಿದರು.

‘ಅರಣ್ಯ ಸಿಬ್ಬಂದಿ ಡಬಲ್ ಬ್ಯಾರಲ್ ಗನ್‌ನಿಂದ ಗುಂಡು ಹಾರಿಸಿದ್ದು, ಚಿರತೆ ಸ್ಥಳದಲ್ಲೇ ಮೃತಪಟ್ಟಿದೆ’ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಎಸ್.ಲಿಂಗರಾಜ ಪ್ರತಿಕ್ರಿಯೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT