ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಗ್ರಾಮೀಣ–ನಗರದ ಅರಣ್ಯ ಪ್ರದೇಶಗಳಲ್ಲಿ ಒತ್ತುವರಿ ತೆರವು

190 ಎಕರೆ ಅರಣ್ಯ ಭೂಮಿ ವಶಕ್ಕೆ
Last Updated 18 ಸೆಪ್ಟೆಂಬರ್ 2020, 15:51 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ನಗರದ ಹೊರವಲಯ ಮತ್ತು ಗ್ರಾಮಾಂತರ ಭಾಗದಲ್ಲಿ ಮೀಸಲು ಅರಣ್ಯದ 191 ಎಕರೆ ಒತ್ತುವರಿಯನ್ನು ಅರಣ್ಯ ಇಲಾಖೆ ತೆರವುಗೊಳಿಸಿದೆ.

’ಎರಡೂವರೆ ತಿಂಗಳಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇಷ್ಟು ಭೂಮಿ ವಶಕ್ಕೆ ಪಡೆಯಲಾಗಿದೆ. ತೆರವು ಕಾರ್ಯಾಚರಣೆ ಮುಂದುವರಿಯಲಿದೆ’ ಎಂದು ಬೆಂಗಳೂರು ಗ್ರಾಮಾಂತರ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್‌) ಆಂಥೋನಿ ಮರಿಯಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಮೀಸಲು ಅರಣ್ಯಪ್ರದೇಶವಾಗಿದ್ದರೂ ಅಲ್ಲಿ ಬಡಾವಣೆಗಳು ತಲೆ ಎತ್ತಿದ್ದವು. ಅಪಾರ್ಟ್‌ಮೆಂಟ್‌ ಸಮುಚ್ಚಯಗಳು ನಿರ್ಮಾಣವಾಗಿದ್ದವು. ಇವುಗಳಿಗೆ ನೀರು–ವಿದ್ಯುತ್‌ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ನೀಡಲಾಗಿತ್ತು. ಉಳಿದ ಪ್ರದೇಶದಲ್ಲಿ ರಾಗಿ ಸೇರಿದಂತೆ ಹಲವು ಬೆಳೆಗಳನ್ನು ಬೆಳೆಯಲಾಗಿತ್ತು. ಈಗ ಅರಣ್ಯ ಇಲಾಖೆ ಈ ಒತ್ತುವರಿಯನ್ನು ತೆರವುಗೊಳಿಸಿದೆ.

‘ನಗರದಲ್ಲಿ ಕೆಲವು ಕಡೆ ಒಂದು ಎಕರೆಗೆ ₹3 ಕೋಟಿಯಿಂದ ₹5 ಕೋಟಿಯವರೆಗೆ ಇದೆ. ಇಂತಹ ಅಮೂಲ್ಯ ಪ್ರದೇಶವನ್ನು ಒತ್ತುವರಿ ಮಾಡಿಕೊಳ್ಳಲಾಗಿತ್ತು. ತೆರವು ಮಾಡುವ ಸಂದರ್ಭದಲ್ಲಿ ರಾಜಕೀಯ ಒತ್ತಡಗಳೂ ಬಂದವು. ಆದರೆ, ಕಾನೂನು ಪ್ರಕಾರವಾಗಿ, ನ್ಯಾಯಾಲಯದ ನಿರ್ದೇಶನದಂತೆ ಕಾರ್ಯಾಚರಣೆ ನಡೆಸಿದ್ದರಿಂದ ಹೆಚ್ಚು ತೊಂದರೆ ಎದುರಾಗಲಿಲ್ಲ’ ಎಂದು ಅವರು ಹೇಳಿದರು.

‘ಭೂತನಹಳ್ಳಿ ಅರಣ್ಯ ಪ್ರದೇಶದಲ್ಲಿಯೇ ಸುಮಾರು 100 ಕೋಟಿ ಮೌಲ್ಯದ ಭೂಮಿಯನ್ನು ವಶಪಡಿಸಿಕೊಂಡಿದ್ದೇವೆ. ಈ ಪ್ರದೇಶದಲ್ಲಿ ‘ಆತಿಥ್ಯ’ ಎನ್ನುವ ಬಡಾವಣೆಯನ್ನೇ ನಿರ್ಮಿಸಲಾಗಿತ್ತು. ನೀರು, ವಿದ್ಯುತ್, ರಸ್ತೆ ಸೌಲಭ್ಯ ಸೇರಿದಂತೆ ಎಲ್ಲ ವ್ಯವಸ್ಥೆ ಮಾಡಲಾಗಿತ್ತು’ ಎಂದು ಅವರು ಹೇಳಿದರು.

ಪ್ರಕರಣ ಕೋರ್ಟ್‌ನಲ್ಲಿದ್ದಾಗ ಲೇಔಟ್‌:‘ಭೂತನಹಳ್ಳಿ ಅರಣ್ಯಪ್ರದೇಶ ಒತ್ತುವರಿ ತೆರವು ಮಾಡಿಕೊಂಡಿದ್ದರ ಬಗ್ಗೆ 2006ರಲ್ಲಿಯೇ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿತ್ತು. 2013ರವರೆಗೆ ವಿಚಾರಣೆ ನಡೆಯಿತು. ಈ ಅವಧಿಯಲ್ಲಿಯೇ ಬಡಾವಣೆ ನಿರ್ಮಾಣ ಮಾಡಲಾಗಿದೆ. ಒತ್ತುವರಿ ತೆರವು ಮಾಡಲು ಹೋದಾಗ ಕೆಲವರು ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತಂದಿದ್ದರು. ಈಗ ತೆರವು ಕಾರ್ಯಾಚರಣೆ ಕೈಗೆತ್ತಿಕೊಳ್ಳಲು ನ್ಯಾಯಾಲಯ ಅನುಮತಿ ನೀಡಿತ್ತು’ ಎಂದು ಆಂಥೋನಿ ತಿಳಿಸಿದರು.

‘ಹೊಸಕೋಟೆ ಅರಣ್ಯಪ್ರದೇಶದಲ್ಲಿ ಕೆಲವರು ರಾಗಿ ಬೆಳೆದಿದ್ದರು. ಮನೆಗಳನ್ನೂ ಕಟ್ಟಿಕೊಂಡಿದ್ದರು. ಅವುಗಳನ್ನೆಲ್ಲ ತೆರವುಗೊಳಿಸಲಾಗಿದೆ. ಮನೆ ಕಟ್ಟಿಕೊಂಡಿರುವುದು ಅರಣ್ಯ ಪ್ರದೇಶ ಎಂದು ಸ್ಥಳೀಯರಿಗೆ ಮನವರಿಕೆ ಮಾಡಿಕೊಡಲಾಯಿತು’ ಎಂದರು.

ವಶಪಡಿಸಿಕೊಳ್ಳಲಾಗಿರುವ ಪ್ರದೇಶಗಳಲ್ಲಿ ಅರಣ್ಯ ಇಲಾಖೆಯು ಸಸಿಗಳನ್ನು ನೆಡುವ ಪ್ರಕ್ರಿಯೆ ಪ್ರಾರಂಭಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT