ಬೆಂಗಳೂರು: ಅಭಿವೃದ್ಧಿಯ ಕಾರ್ಯಗಳ ಜೊತೆಗೆ ಅರಣ್ಯ, ನೀರಿನ ಸಂರಕ್ಷಣೆಯೂ ಮುಖ್ಯ ಎಂದು ರಾಜ್ಯಪಾಲ ಥಾವರಚಂದ್ ಗೆಹಲೋತ್ ಹೇಳಿದರು.
‘ಹವಾಮಾನ ಬದಲಾವಣೆಯತ್ತ ನಾವು ಗಮನಹರಿಸಬೇಕಿದ್ದು, ಅರಣ್ಯ ಇದ್ದರೆ ಉಸಿರಾಡಲು ಗಾಳಿ ಇರುತ್ತದೆ, ನೀರಿದ್ದರೆ ನಾಳೆಯ ಜೀವನ ಇರುತ್ತದೆ. ಹೀಗಾಗಿ ಅವುಗಳನ್ನು ರಕ್ಷಿಸಿದರೆ ಅವುಗಳಿಂದ ನಮಗೇ ಹೆಚ್ಚಿನ ಲಾಭವಾಗುತ್ತದೆ’ ಎಂದರು.
ಬೆಂಗಳೂರು ಮ್ಯಾನೇಜ್‌ಮೆಂಟ್ ಅಸೋಸಿಯೇಷನ್ (ಬಿಎಂಎ) ಗುರುವಾರ ಆಯೋಜಿಸಿದ್ದ ‘ವಿಷನ್ 2030– ಕರ್ನಾಟಕ’ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
‘ಜ್ಞಾನ, ವಿಜ್ಞಾನ ಕ್ಷೇತ್ರದಲ್ಲಿ ರಾಜ್ಯ ಮುಂದಿದ್ದು, ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಅಗ್ರಗಣ್ಯವಾಗಿದೆ. ಜವಳಿ ಕ್ಷೇತ್ರದಲ್ಲಿ ರಾಜ್ಯ ಅತ್ಯಂತ ವೇಗವಾಗಿ ಮುಂದುವರಿಯುತ್ತಿದೆ. ರೇಷ್ಮೆ ಉದ್ಯಮದಲ್ಲಿ ದೇಶದಲ್ಲಿ ಮೊದಲ ಸ್ಥಾನದಲ್ಲಿದೆ’ ಎಂದರು.
ಸ್ಟಾರ್ಟ್ ಅಪ್‌ಗಳಲ್ಲಿ ರಾಜ್ಯ ಅಗ್ರಸ್ಥಾನದಲ್ಲಿದ್ದು, ವೆಂಚರ್ಸ್, ಪಬ್ಲಿಕ್ ಈಕ್ವಿಟಿ ಕ್ಷೇತ್ರಗಳಲ್ಲೂ ದೇಶದಲ್ಲಿ ಅಗ್ರಸ್ಥಾನದಲ್ಲಿದೆ. ಮೊಬೈಲ್, ಎಲೆಕ್ಟ್ರಾನಿಕ್ಸ್, ಡಿಸೈನ್, ಸ್ಮಾರ್ಟ್ ಇನ್‌ಫ್ರಾಸ್ಟ್ರಕ್ಚರ್, ಸ್ಮಾರ್ಟ್ ಟ್ರಾಫಿಕ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅಭಿವೃದ್ಧಿಗೆ ಹೆಚ್ಚಿನ ಅವಕಾಶವಿದೆ. ಈ ನಿಟ್ಟಿನಲ್ಲಿ ರಾಜ್ಯ ಹೆಚ್ಚಿನ ಕಾರ್ಯಯೋಜನೆ ರೂಪಿಸಬೇಕಿದೆ ಎಂದು ಹೇಳಿದರು.
ಮೇಕ್ ಇಂಡಿಯಾ, ಡಿಜಿಟಲ್ ಇಂಡಿಯಾ, ಆತ್ಮನಿರ್ಭರ್ ಭಾರತ್ ಮೂಲಕ ದೇಶವನ್ನು ಸಶಕ್ತಗೊಳಿಸುವ ಕಾರ್ಯಗಳಾಗುತ್ತಿವೆ. ಇದರಲ್ಲಿ ಕರ್ನಾಟಕ ಪ್ರಮುಖ ಪಾತ್ರವನ್ನು ವಹಿಸಿದೆ. ಕೌಶಲ ವಿಕಸನ ಯೋಜನೆಗೆ ಹೆಚ್ಚಿನ ಒತ್ತು ನೀಡಿ ಅದನ್ನು ಅನುಷ್ಠಾನಗೊಳಿಸಬೇಕಿದೆ. ಇದರಿಂದ ನವ ಭಾರತದ ಜೊತೆಗೆ ನವ ಕರ್ನಾಟಕವೂ ಉದಯವಾಗಲಿದೆ ಎಂದರು.
‘ನಗರ ಪ್ರದೇಶಗಳ ಜೊತೆಗೆ ದೂರದ ಹಳ್ಳಿಗಳಲ್ಲೂ ಅಭಿವೃದ್ಧಿ ಕಾರ್ಯಗಳಾಗಬೇಕು. ಖಾಸಗಿ ವಲಯ ಬೆಳೆದರೆ ನಮ್ಮ ಆರ್ಥಿಕತೆಯೂ ಬೆಳೆಯುತ್ತದೆ. ಸುಸ್ಥಿರ ಅಭಿವೃದ್ಧಿ ಅತಿ ಮುಖ್ಯವಾಗಿದ್ದು, ಇದ್ದಕ್ಕಾಗಿ ವಿಷನ್–2030 ಮಾರ್ಗೋಪಾಯಗಳ ಯೋಜನೆ ರೂಪಿಸಲಾಗಿದೆ’ ಎಂದು ಅಭಿವೃದ್ಧಿ ಆಯುಕ್ತರಾದ ಶಾಲಿನಿ ರಜನೀಶ್ ತಿಳಿಸಿದರು.
‘ಉದ್ಯೋಗ ಕ್ಷೇತ್ರದಲ್ಲಿ ಶೇ 24ರಷ್ಟು ಮಹಿಳೆಯರು ಮಾತ್ರ ಇದ್ದಾರೆ. ಈ ಪ್ರಮಾಣವನ್ನು ಹೆಚ್ಚಿಸಬೇಕು. ಇದರಿಂದ ಆರ್ಥಿಕತೆ ವೃದ್ಧಿಯಾಗುತ್ತದೆ. ಉತ್ತಮವಾದ ಸಾಮಾಜಿಕ ಪರಿಸರ ಸೃಷ್ಟಿಸಿ, ಗುಣಮಟ್ಟದ ಶಿಕ್ಷಣ ನೀಡಬೇಕು. ಬೆಂಗಳೂರಿನ ಹೊರಗೂ ಕೈಗಾರಿಕೆ ಚಟುವಟಿಕೆಗಳು ಹೆಚ್ಚಾಗಬೇಕು’ ಎಂದು ರಾಜ್ಯ ಪರಿವರ್ತನಾ ಸಂಸ್ಥೆ ಉಪಾಧ್ಯಕ್ಷ ಎಂ. ರಾಜೀವ್ ಗೌಡ ಹೇಳಿದರು.
‘ರಾಜ್ಯ ಒಂದು ಟ್ರಿಲಿಯನ್ ಆರ್ಥಿಕತೆಯತ್ತ ದಾಪುಗಾಲಿಡಲು ಕೆಲವೊಂದು ಅಂಶಗಳನ್ನು ಪರಿಗಣಿಸಬೇಕಿದೆ. ದಕ್ಷಿಣ ಹಾಗೂ ಉತ್ತರ ಕರ್ನಾಟಕದ ನಡುವಿನ ಅಭಿವೃದ್ಧಿ ಅಸಮಾನತೆಯನ್ನು ತೊಡೆದು ಹಾಕಬೇಕು. ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ತಲುಪಬೇಕು. ಸಾಮಾಜಿಕ ಸೂಚ್ಯಂಕದಲ್ಲಿ ನಗರ ಹಾಗೂ ಗ್ರಾಮೀಣಗಳ ನಡುವೆ ವ್ಯತ್ಯಾಸ ಇರಬಾರದು’ ಎಂದು ನಿವೃತ್ತ ಐಎಎಸ್ ಅಧಿಕಾರಿ ಕೆ. ಜಯರಾಜ್ ಸಲಹೆ ನೀಡಿದರು.
ಬಿಎಂಎ ಅಧ್ಯಕ್ಷ ಕೆ.ಎಸ್. ನಾರಾಯಣಸ್ವಾಮಿ, ಎಫ್‌ಐಸಿಸಿಐ ಕರ್ನಾಟಕ ಕೌನ್ಸಿಲ್ ಅಧ್ಯಕ್ಷ ಕೆ. ಉಲ್ಲಾಸ್ ಕಾಮತ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.