ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುತ್ತಿಗೆದಾರರಿಂದ ನಕಲಿ ಸಹಿ: ಪ್ರಕರಣ ದಾಖಲು

Last Updated 19 ಅಕ್ಟೋಬರ್ 2022, 21:05 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ಪಶ್ಚಿಮ ವಲಯ ಕಾಟನ್‌ಪೇಟೆ ವಾರ್ಡ್‌ನ ಘನತ್ಯಾಜ್ಯ ನಿರ್ವಹಣೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಸಹಿಯನ್ನು ನಕಲಿ ಮಾಡಿರುವ ಸಾರ್ವಜನಿಕ ಶೌಚಾಲಯದ ಗುತ್ತಿಗೆದಾರರಾದ ಶ್ರೀನಿವಾಸ ಹಾಗೂ ಅವರ ಸೋದರ ವಡಿವೇಲು ಮೇಲೆ ಕ್ರಿಮಿನಲ್‌ ಪ್ರಕರಣ ದಾಖಲಾಗಿದೆ.

ಪಶ್ಚಿಮ ವಲಯದ ಕಾಟನ್ ಪೇಟೆ ವಾರ್ಡ್ 120ರಲ್ಲಿ ಬೆಂಗಳೂರು ಒನ್ ಪಕ್ಕದ ಸಾರ್ವಜನಿಕ ಮೂತ್ರಾಲಯ ಮತ್ತು ಶೌಚಾಲಯದ ಸ್ವಚ್ಛತಾ ಕೆಲಸವನ್ನು ಶ್ರೀನಿವಾಸ ಗುತ್ತಿಗೆ ಆಧಾರದ ಮೇಲೆ ನಿರ್ವಹಿಸುತ್ತಿದ್ದರು. ಶ್ರೀನಿವಾಸ ಹಾಗೂ ಸಹೋದರ ವಡಿವೇಲು ಅವರು ಗಾಂಧಿನಗರ ವಿಭಾಗದ ಘನತ್ಯಾಜ್ಯ ವಿಭಾಗದಲ್ಲಿ ಈ ಹಿಂದೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಆಗಿದ್ದ ಇದೀಗ ರಾಣೆಬೆನ್ನೂರು ನಗರಸಭೆಯ ಪೌರಾಯುಕ್ತ ಉದಯ್ ಕುಮಾರ್ ಬಿ. ತಳವಾರ್ ಅವರ ಸಹಿಯನ್ನು ಫೋರ್ಜರಿ ಮಾಡಿದ್ದಾರೆ ಎಂದು ಪಶ್ಚಿಮ ವಲಯ ಜಂಟಿ ಆಯುಕ್ತರು ಸೆ.16ರಂದು ಉಪ್ಪಾರಪೇಟೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಶ್ರೀನಿವಾಸ್‌ ಹಾಗೂ ವಡಿವೇಲು ಅವರು 2020ರ ಜುಲೈನಿಂದ ಡಿಸೆಂಬರ್‌ವರೆಗೆ ಬಿಲ್‌ ಸಲ್ಲಿಸುವ ಸಂದರ್ಭದಲ್ಲಿ ಹಾಜರಾತಿ ಪುಸ್ತಕಕ್ಕೆ ಎಇಇ ಅವರ ಸಹಿಯನ್ನು ಫೋರ್ಜರಿ ಮಾಡಿದ್ದಾರೆ ಎಂಬುದು ಬೆಳಕಿಗೆ ಬಂದಿದೆ. ಈ ಬಗ್ಗೆ ಉದಯ್‌ಕುಮಾರ್‌ ಅವರನ್ನು ಸಹಿ ದೃಢೀಕರಣಕ್ಕೆ ಮಾಹಿತಿ ಕೇಳಲಾಗಿದೆ. ಅವರು ಸಹಿ ತಮ್ಮದಲ್ಲ, ನಕಲು ಮಾಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಿ ಎಂದು ಹೇಳಿದ್ದಾರೆ. ಇದರಂತೆ ಜಂಟಿ ಆಯುಕ್ತರು ಕ್ರಿಮಿನಲ್‌ ಪ್ರಕರಣ ದಾಖಲಿಸಲು ಪಶ್ಚಿಮ ವಲಯದ ಘನತ್ಯಾಜ್ಯ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಸ್ವಪ್ನ ಹಾಗೂ ಅಧೀಕ್ಷಕ ಎಂಜಿನಿಯರ್‌ ಸ್ವಯಂಪ್ರಭ ಅವರಿಗೆ 2021ರ ಅ.10ರಂದು ಸೂಚಿಸಿದ್ದಾರೆ. ಅವರು ತಡೆ ಮಾಡಿದ್ದು, ಅವರಿಗೆ ಮತ್ತೆ ಆ.3ರಂದು ನೋಟಿಸ್‌ ಜಾರಿ ಮಾಡಲಾಗಿದೆ. ನಂತರ ಕ್ರಿಮಿನಲ್‌ ಪ್ರಕರಣ ದಾಖಲಾಗಿದೆ ಎಂದು ಬಿಬಿಎಂಪಿ ಪ್ರಕಟಣೆ ತಿಳಿಸಿದೆ.

‘ನಕಲಿ ಸಹಿ ಮಾಡಿರುವ ಪ್ರಕರಣದಂತೆ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಅವರಿಗೆ ಸೂಚಿಸಲಾಗಿತ್ತು. ಅವರು ಸ್ವಲ್ಪ ತಡ ಮಾಡಿದ್ದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ’ ಎಂದು ಪಶ್ಚಿಮ ವಲಯದ ಜಂಟಿ ಆಯುಕ್ತ ಯೋಗೇಶ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT