ಗುರುವಾರ , ಜುಲೈ 29, 2021
25 °C

ಮಾಜಿ ಕಾರ್ಪೋರೇಟರ್ ಬಿಜೆಪಿಯ ರೇಖಾ ಕದಿರೇಶ್ ಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani Photo

ಬೆಂಗಳೂರು: ನಗರದ ಛಲವಾದಿಪಾಳ್ಯ ವಾರ್ಡ್‌ನ ಮಾಜಿ ಕಾರ್ಪೋರೇಟರ್ ಬಿಜೆಪಿಯ ಆರ್. ರೇಖಾ ಕದಿರೇಶ್ ಅವರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹೊಡೆದು ಗುರುವಾರ ಬೆಳಿಗ್ಗೆ ಹತ್ಯೆ ಮಾಡಿದ್ದಾರೆ.

ರೇಖಾ ಪತಿ ಕದಿರೇಶ್ ಅವರನ್ನೂ 2018ರ ಫೆಬ್ರುವರಿ 7ರಂದು ಕೊಲೆ ಮಾಡಲಾಗಿತ್ತು. ಇದೀಗ ರೇಖಾ ಹತ್ಯೆಯಾಗಿದ್ದು, ಈ ಬಗ್ಗೆ ಕಾಟನ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಪೊಲೀಸರ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ.

‘ವಾರ್ಡ್ ವ್ಯಾಪ್ತಿಯ ಫ್ಲವರ್ ಗಾರ್ಡನ್‌ನಲ್ಲಿ ವಾಸವಿದ್ದ ರೇಖಾ, ಮನೆ ಬಳಿ ಕಚೇರಿ ಹೊಂದಿದ್ದರು. ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದವರಿಗೆ ಆಹಾರ ಪೊಟ್ಟಣ ವಿತರಿಸಲು ಬೆಂಬಲಿಗರ ಜೊತೆ
ಕಚೇರಿಗೆ ಬಂದಿದ್ದರು. ಪೊಟ್ಟಣ ವಿತರಿಸುವ ಸಂದರ್ಭದಲ್ಲಿ ಸ್ಥಳಕ್ಕೆ ಬಂದಿದ್ದ ಆರೋಪಿ, ಮಾತನಾಡಬೇಕೆಂದು ಹೇಳಿ ರೇಖಾ ಅವರನ್ನು ಕಚೇರಿಯಿಂದ ಹೊರಗೆ ಕರೆದುಕೊಂಡು ಬಂದಿದ್ದ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಕಚೇರಿ ಎದುರು ನಿಂತಿರುವಾಗಲೇ ದ್ವಿಚಕ್ರ ವಾಹನದಲ್ಲಿ ಬಂದಿದ್ದ ಆರೋಪಿಗಳು, ರೇಖಾ ಮೇಲೆ ಏಕಾಏಕಿ ಮಾರಕಾಸ್ತ್ರ ಬೀಸಿದ್ದರು. ಗಾಯಗೊಂಡು ಚೀರಾಡುತ್ತಲೇ ರೇಖಾ ಸ್ಥಳದಿಂದ ತಪ್ಪಿಸಿಕೊಳ್ಳಲು ಮುಂದಾಗಿದ್ದರು. ಅವರನ್ನು ಬೆನ್ನಟ್ಟಿದ್ದ ಮೂವರೂ ಆರೋಪಿಗಳು, ಪುನಃ ಮಾರಕಾಸ್ತ್ರಗಳಿಂದ ಹೊಡೆದಿದ್ದರು. ಕೆಳಗೆ ಬಿದ್ದ ರೇಖಾ ಅವರ ಕತ್ತು ಕೊಯ್ದು ಪರಾರಿಯಾದರು’ ಎಂದೂ ಮೂಲಗಳು ತಿಳಿಸಿವೆ.

‘ರಕ್ತದ ಮಡುವಿನಲ್ಲಿ ಬಿದ್ದು ನರಳುತ್ತಿದ್ದ ರೇಖಾ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ಆದರೆ, ಮಾರ್ಗಮಧ್ಯೆ ಅವರು ಮೃತಪಟ್ಟರು’ ಎಂದೂ ಪೊಲೀಸ್ ಮೂಲಗಳು ಹೇಳಿವೆ.

ಪರಿಚಯಸ್ಥರಿಂದಲೇ ಕೃತ್ಯ: ‘ಕೃತ್ಯದ ಬಳಿಕ ಆರೋಪಿಗಳು, ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದಾರೆ. ರೇಖಾ ಅವರಿಗೆ ಪರಿಚಯವಿರುವವರೇ ಕೃತ್ಯ ಎಸಗಿರುವ ಮಾಹಿತಿ ಇದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಕದಿರೇಶ್ ಬಳಿ ಅಂಗರಕ್ಷಕನಾಗಿದ್ದ ಪೀಟರ್, ಆತನ ಸ್ನೇಹಿತ ಸ್ಟೀಫನ್ ಹಾಗೂ ರೌಡಿ ಸೂರ್ಯ ಎಂಬುವರು ಹತ್ಯೆಯಲ್ಲಿ ಭಾಗಿಯಾಗಿರುವ ಅನುಮಾನವಿದೆ. ಕೃತ್ಯ ನಡೆಯುವುದಕ್ಕೂ ಮುನ್ನ ಪೀಟರ್ ಸ್ಥಳದಲ್ಲೇ ಇದ್ದ. ಹತ್ಯೆ ಬಳಿಕ ಆತನೂ ಪರಾರಿಯಾಗಿದ್ದಾನೆ. ಕಚೇರಿ ಎದುರಿನಲ್ಲೇ ಆತ, ಬಹುಮಹಡಿ ಕಟ್ಟಡ ನಿರ್ಮಿಸುತ್ತಿದ್ದ. ಆತ ರೇಖಾ ಅವರನ್ನು ಕಚೇರಿಯಿಂದ ಹೊರಗೆ ಕರೆದುಕೊಂಡು ಬಂದಿದ್ದನೆಂಬ ಮಾಹಿತಿ ಇದೆ’ ಎಂದೂ ಮೂಲಗಳು ಹೇಳಿವೆ.

‘ಹಳೇ ವೈಷಮ್ಯ, ಹಣಕಾಸಿ ವ್ಯವಹಾರ ಹಾಗೂ ವಾರ್ಡ್‌ನಲ್ಲಿ ಹೆಸರು ಮಾಡಲು ಆರೋಪಿಗಳು ಕೃತ್ಯ ಎಸಗಿರುವ ಸಾಧ್ಯತೆ ಇದೆ. ಮೂರು ಆಯಾಮಗಳಲ್ಲಿ ಪ್ರತ್ಯೇಕ ತಂಡಗಳು ತನಿಖೆ ಚುರುಕುಗೊಳಿಸಿವೆ. ಆರೋಪಿಗಳ ಜೊತೆ ಒಡನಾಟ ಹೊಂದಿದ್ದ ಸಹಚರರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಆದರೆ, ಆರೋಪಿಗಳು ಇದುವರೆಗೂ ಪೊಲೀಸರಿಗೆ ಸಿಕ್ಕಿಬಿದ್ದಿಲ್ಲ’ ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು