ಶುಕ್ರವಾರ, ಆಗಸ್ಟ್ 12, 2022
22 °C
ಕರ್ನಾಟಕ ರಂಗಭೂಮಿ ಡಿಪ್ಲೊಮಾ ಪದವೀಧರರ ವೇದಿಕೆ ಮನವಿ

‘ಶಾಲೆಗಳಲ್ಲಿ ರಂಗ ಶಿಕ್ಷಕರನ್ನು ನೇಮಿಸಿ: ರಂಗಭೂಮಿ ಡಿಪ್ಲೊಮಾ ಪದವೀಧರರ ವೇದಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸರ್ಕಾರಿ ಕಿರಿಯ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ರಂಗ ಶಿಕ್ಷಕರ ನೇಮಕಾತಿಗೆ ಕ್ರಮಕೈಗೊಳ್ಳಬೇಕು ಎಂದು ಕರ್ನಾಟಕ ರಂಗಭೂಮಿ ಡಿಪ್ಲೊಮಾ ಪದವೀಧರರ ವೇದಿಕೆಯು ಸರ್ಕಾರಕ್ಕೆ ಆಗ್ರಹಿಸಿದೆ.

ಈ ಬಗ್ಗೆ ವೇದಿಕೆಯು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರಿಗೆ ಪತ್ರ ಬರೆದಿದೆ. ಇದಕ್ಕೆ ಬಿ.ಎಸ್. ವಿದ್ಯಾರಣ್ಯ, ಶಶಿಧರ್ ಭಾರಿಘಾಟ್, ಡಿಂಗ್ರಿ ನರೇಶ್, ಪ್ರಭುರಾಜ್, ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹಾಗೂ ಬಿ.ವಿ. ರಾಜಾರಾಂ ಬೆಂಬಲ ವ್ಯಕ್ತಪಡಿಸಿದ್ದಾರೆ. 

‘ಈಗಾಗಲೇ ಸಾರ್ವಜನಿಕ ಶಿಕ್ಷಣ ಇಲಾಖೆಯ ಕಲಬುರ್ಗಿ ಹೆಚ್ಚುವರಿ ಆಯುಕ್ತರು ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕರು ಹಾಗೂ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಕರಡು ಅಧಿಸೂಚನೆಯನ್ನು ತಯಾರಿಸಿ, ಸಲ್ಲಿಸುವಂತೆ ವಿವಿಧ ಜಿಲ್ಲೆಗಳ ಉಪನಿರ್ದೇಶಕರಿಗೆ ಸೂಚಿಸಿದ್ದಾರೆ. ಇದರಲ್ಲಿ ಸಹ ಶಿಕ್ಷಕರು, ದೈಹಿಕ ಶಿಕ್ಷಕರು ಸಂಗೀತ ಶಿಕ್ಷಕರು, ಚಿತ್ರಕಲಾ ಶಿಕ್ಷಕರ ನೇಮಕಾತಿಯ ಪ್ರಸ್ತಾಪವಿದೆ. ರಂಗ ಶಿಕ್ಷಕರನ್ನು ಇದರಲ್ಲಿ ಸೇರಿಸಿಲ್ಲ’ ಎಂದು ವೇದಿಕೆ ತಿಳಿಸಿದೆ.

‘ಹೈದರಾಬಾದ್ ಕರ್ನಾಟಕ ಭಾಗದಲ್ಲಿ ರಂಗಭೂಮಿಯಲ್ಲಿ ಡಿಪ್ಲೊಮಾ ಪಡೆದ 250ಕ್ಕೂ ಅಧಿಕ ಕಲಾವಿದರಿದ್ದಾರೆ. ಈಗ ಸೃಷ್ಟಿಯಾಗಿರುವ ಸಂಗೀತ, ಚಿತ್ರಕಲಾ ಶಿಕ್ಷಕರ ಹುದ್ದೆಗಳ ಪೈಕಿ ಶೇ 30ರಷ್ಟಾದರೂ ಹುದ್ದೆಗಳನ್ನು ನಾಟಕ ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಅವಕಾಶ ಕಲ್ಪಿಸಿ, ಅಧಿಸೂಚನೆ ಹೊರಡಿಸಬೇಕು’ ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.

‘2008ರಲ್ಲಿ ರಂಗ ಶಿಕ್ಷಕರ 63 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆದಿತ್ತು. ಆಗ ಇಲಾಖೆಯು 43 ಮಂದಿಯನ್ನು ಮಾತ್ರ ನೇಮಕ ಮಾಡಿಕೊಂಡಿತ್ತು. ಬಳಿಕ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ. ರಂಗ ಶಿಕ್ಷಕರ ನೇಮಕಾತಿಯಾದ ಶಾಲೆಗಳ ಶೈಕ್ಷಣಿಕ ಗುಣಮಟ್ಟ , ವಿದ್ಯಾರ್ಥಿಗಳ ಹಾಜರಾತಿ ಹಾಗೂ ಶಾಲೆಯ ಬಗ್ಗೆ ಸಾರ್ವಜನಿಕರಲ್ಲಿನ ಗೌರವ ಹೆಚ್ಚಾಗಿದೆ. ಹೀಗಾಗಿ, ಪ್ರತಿ ಶಾಲೆಯಲ್ಲಿಯೂ ರಂಗ ಶಿಕ್ಷಕರ ಅಗತ್ಯವಿದೆ. ಈಗ ಹೊರಡಿಸಿರುವ ಅಧಿಸೂಚನೆಯನ್ನು ಪುನರ್ ಪರಿಶೀಲನೆ ನಡೆಸಿ, ಅದರಲ್ಲಿ ರಂಗ ಶಿಕ್ಷಕರನ್ನೂ ಸೇರಿಸಬೇಕು’ ಎಂದು ವೇದಿಕೆ ಒತ್ತಾಯಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು